ಮೈಸೂರು ಗಲಭೆ | ಎಂಟು ಮಂದಿ ಆರೋಪಿಗಳನ್ನು ಬಂಧಿಸಿದ ಪೊಲೀಸರು
ಮೊಬೈಲ್ ಟವರ್ ಲೊಕೇಶನ್ ಆಧಾರದಲ್ಲಿ ಪೊಲೀಸರು ಮನೆ ಮನೆಗೆ ತೆರಳಿದ್ದರು. ಆದರೆ ಪೊಲೀಸರು ಅರೆಸ್ಟ್ ಮಾಡುತ್ತಾರೆಂಬ ಭೀತಿಯಲ್ಲೇ ಆರೋಪಿಗಳು ಮನೆ ಬಿಟ್ಟು ಓಡಿಹೋಗಿದ್ದಾರೆ.;
ಮೈಸೂರಿನ ನಗರದ ಉದಯಗಿರಿ ಪೊಲೀಸ್ ಠಾಣೆಯ ಮೇಲೆ ನಡೆದ ಕಲ್ಲುತೂರಾಟ ಪ್ರಕರಣಕ್ಕೆ ಸಂಬಂಧಿಸಿದಂತೆ 8 ಮಂದಿ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.
ಮೈಸೂರಿನ ಶಾಂತಿನಗರದ ಸುಹೇಲ್@ಸೈಯದ್ ಸುಹೇಲ್, ರಹೀಲ್ ಪಾಷಾ, ಅಯಾನ್, ಸತ್ಯನಗರದ ನಿವಾಸಿ ಏಜಾಜ್, ಮೈಸೂರಿನ ಗೌಸಿಯಾನಗರದ ನಿವಾಸಿ ಸೈಯದ್ ಸಾದಿಕ್, ರಾಜೀವ್ ನಗರದ ಸಾದಿಕ್ ಪಾಷಾ ಅಲಿಯಾಸ್ ಸಾದಿಕ್, ಅರ್ಬಾಜ್ ಷರೀಫ್, ಶೋಹೆಬ್ ಪಾಷಾ ಬಂಧಿತ ಆರೋಪಿಗಳು. ಮತ್ತಷ್ಟು ಆರೋಪಿಗಳ ಸೆರೆಗೆ ಸಿಸಿಬಿ ಪೊಲೀಸರು ಬಲೆ ಬೀಸಿದ್ದಾರೆ.
ಮೊಬೈಲ್ ಟವರ್ ಲೊಕೇಶನ್ ಆಧಾರದಲ್ಲಿ ಪೊಲೀಸರು ಮನೆ ಮನೆಗೆ ತೆರಳಿದ್ದರು. ಆದರೆ ಪೊಲೀಸರು ಅರೆಸ್ಟ್ ಮಾಡುತ್ತಾರೆಂಬ ಭೀತಿಯಲ್ಲೇ ಆರೋಪಿಗಳು ಮನೆ ಬಿಟ್ಟು ಓಡಿಹೋಗಿದ್ದಾರೆ. ಮೊಬೈಲ್ ಮನೆಯಲ್ಲೇ ಇಟ್ಟು ಊರು ಬಿಟ್ಟಿದ್ದಾರೆ. ಸದ್ಯ ಮೈಸೂರಿನ ಸಿಸಿಬಿ ಪೊಲೀಸರು ಪ್ರಕರಣ ಕೈಗೆತ್ತಿಕೊಂಡಿದ್ದಾರೆ. ಉದಯಗಿರಿ ಠಾಣೆ ರಸ್ತೆಯಲ್ಲಿನ 10ಕ್ಕೂ ಹೆಚ್ಚು ಸಿಸಿ ಕ್ಯಾಮರಾ ಡಿವಿಆರ್ ವಶಕ್ಕೆ ಪಡೆದು ಪರಿಶೀಲನೆ ಮಾಡಿದ್ದಾರೆ.
ಏನದು ಘಟನೆ?
ಮುಸ್ಲಿಂ ಸಮುದಾಯದ ಬಗ್ಗೆ ವ್ಯಕ್ತಿವೋರ್ವ ಸಾಮಾಜಿಕ ಜಾಲತಾಣದಲ್ಲಿ ಅವಹೇಳನಕಾರಿ ಪೋಸ್ಟ್ ಹಾಕಿದ್ದಾನೆ ಎಂಬ ಕಾರಣಕ್ಕಾಗಿ ಮೈಸೂರಿನ ಉದಯಗಿರಿ ಪೊಲೀಸ್ ಠಾಣೆ ಎದುರು ಪ್ರತಿಭಟನೆ ನಡೆಸುತ್ತಿದ್ದ ವೇಳೆ ಕಲ್ಲು ತೂರಾಟ ನಡೆಸಿದ ಘಟನೆ ಸೋಮವಾರ ರಾತ್ರಿ ನಡೆದಿದೆ.
ದೆಹಲಿಯಲ್ಲಿ ಬಿಜೆಪಿ ಗೆಲುವು ಸಾಧಿಸಿದ ಹಿನ್ನೆಲೆಯಲ್ಲಿ ವ್ಯಕ್ತಿಯೊಬ್ಬ ರಾಹುಲ್ ಗಾಂಧಿ, ಅಖಿಲೇಶ್ ಯಾದವ್ ಮತ್ತು ಅರವಿಂದ ಕೇಜಿವಾಲ್ ಅವರ ಭಾವಚಿತ್ರವನ್ನು ಹಾಕಿ ಅದರ ಮೇಲೆ ಪ್ರವಾದಿ ಮುಹಮ್ಮದ್ ಪೈಗಂಬರ್ ಅವರ ಕುರಿತ ಸಾಲುಗಳನ್ನು ಉಲ್ಲೇಖ ಮಾಡಿದ್ದ. ಇದರ ಜೊತೆಗೆ ಮಹಾತ್ಮಾಗಾಂಧಿ ಮತ್ತು ರಾಹುಲ್ ಗಾಂಧಿ ಇಬ್ಬರ ಕುರಿತ ಅವಹೇಳನಕಾರಿ ವೀಡಿಯೋ ಪೋಸ್ಟ್ ಮಾಡಿದ್ದ ಎಂದು ಆರೋಪಿಸಲಾಗಿದೆ.
ಈ ಪೋಸ್ಟ್ ವೈರಲ್ ಆಗುತ್ತಿದ್ದಂತೆಯೇ ಮುಸ್ಲಿಂ ಸಮುದಾಯದ ಪ್ರಮುಖರು ಸಾವಿರಾರು ಸಂಖ್ಯೆಯಲ್ಲಿ ಸೇರಿ ಪ್ರತಿಭಟಿಸಿದ್ದರು. ಆತನ ವಿರುದ್ಧ ಧಿಕ್ಕಾರದ ಘೋಷಣೆ ಕೂಗಿ ಕೂಡಲೇ ಆತನನ್ನು ಬಂಧಿಸಬೇಕು ಎಂದು ಪಟ್ಟು ಹಿಡಿದಿದ್ದರು. ಇದಲ್ಲದೆ ಶಾಂತಿನಗರ, ಮಹದೇವಪುರ ರಸ್ತೆ ಬಂದ್ ಮಾಡಿದ್ದರು. ಮಧ್ಯರಾತ್ರಿಯಾದರೂ ಸನ್ನಿವೇಶ ನಿಯಂತ್ರಣಕ್ಕೆ ಬಂದಿರಲಿಲ್ಲ. ಈ ನಡುವೆ ಕೆಲವರು ಕಲ್ಲು ತೂರಾಟ ನಡೆಸಿದಾಗ ಪ್ರತಿಭಟನಾನಿರತರನ್ನು ಚದುರಿಸಲು ಪೊಲೀಸರು ಲಘು ಲಾಠಿ ಪ್ರಹಾರ ನಡೆಸಿ ಅಶ್ರುವಾಯು ಸಿಡಿಸಿದ್ದರು. ಪ್ರಕರಣಕ್ಕೆ ಸಂಬಂಧಿಸಿದಂತೆ ಅವಹೇಳನಕಾರಿ ಪೋಸ್ಟ್ ಮಾಡಿದ್ದ ವ್ಯಕ್ತಿಯನ್ನು ಪೊಲೀಸರು ಬಂಧಿಸಿದ್ದಾರೆ.