Sowjanya Case | ಸೌಜನ್ಯ ನ್ಯಾಯಕ್ಕೆ ಆಗ್ರಹಿಸಿ ಸಭೆಗೆ ನಿರ್ಬಂಧ: ಶೇಷಾದ್ರಿಪುರಂ ಪೊಲೀಸರಿಂದ ನೋಟಿಸ್

ಸಭೆಯಲ್ಲಿ 40-50 ಜನರು ಭಾಗವಹಿಸಲಿದ್ದಾರೆ ಎಂಬ ಮಾಹಿತಿ ಪೊಲೀಸರಿಗೆ ಲಭಿಸಿತ್ತು. ಆದರೆ ಸಾರ್ವಜನಿಕ ಶಾಂತಿ ಕದಡುವ ನೆಪವೊಡ್ಡಿ ಈ ಸಭೆಗೆ ಪೊಲೀಸರು ನಿರ್ಬಂಧ ವಿಧಿಸಿದ್ದಾರೆ.;

Update: 2025-03-18 08:26 GMT

ಸೌಜನ್ಯ ನ್ಯಾಯಕ್ಕೆ ಆಗ್ರಹಿಸಿ ಹೋರಾಟಕ್ಕೆ ಪೊಲೀಸರು ನಿರ್ಬಂಧ ವಿಧಿಸಿದ್ದಾರೆ. 

ಕಾನೂನು ಪಾಲನೆ ಮತ್ತು ಸಾರ್ವಜನಿಕ ಶಾಂತಿಯನ್ನು ಕಾಪಾಡುವ ನಿಟ್ಟಿನಲ್ಲಿ 'ಸೌಜನ್ಯ ನ್ಯಾಯಕ್ಕೆ ಆಗ್ರಹಿಸಿ, ಬೆಂಗಳೂರಿನಲ್ಲಿ ಆಯೋಜಿಸಿರುವ ʼಸಾಹಿತಿ ಚಿಂತಕರ ಹೋರಾಟದ ದಿಕ್ಕೂಚಿ ಸಭೆʼಗೆ ಶೇಷಾದ್ರಿಪುರಂ ಪೊಲೀಸರು ನಿರ್ಬಂಧ ವಿಧಿಸಿದ್ದಾರೆ. 

ಮಾರ್ಚ್‌ 18ರಂದು ಬೆಂಗಳೂರಿನ ಎಐಟಿಯುಸಿ ಸಭಾಂಗಣದಲ್ಲಿ ಈ ಸಭೆಯನ್ನು ನಡೆಸಲು ಯೋಜನೆ ಮಾಡಲಾಗಿತ್ತು. ನವೀನ್ ಶೀನಿವಾಸ (ಸಾರಿಗೆ ನೌಕರರ ಹಿತ ರಕ್ಷಣಾ ವೇದಿಕೆ), ಭೈರಪ್ಪ ಹರೀಶ್ ಕುಮಾರ್ (ಕರ್ನಾಟಕ ರಣಧೀರ ಪಡೆ) ಹಾಗೂ ಮೈತ್ರಿ (ವಕೀಲರು) ಅವರ ನೇತೃತ್ವದಲ್ಲಿ ಈ ಸಭೆಯನ್ನು ಆಯೋಜಿಸಲಾಗಿತ್ತು. ಸಭೆಯಲ್ಲಿ 40-50 ಜನರು ಭಾಗವಹಿಸಲಿದ್ದಾರೆ ಎಂಬ ಮಾಹಿತಿ ಪೊಲೀಸರಿಗೆ ಲಭಿಸಿತ್ತು. ಆದರೆ ಸಾರ್ವಜನಿಕ ಶಾಂತಿ ಕದಡುವ ಸಾಧ್ಯತೆ ಇದೆ ಎಂಬ ಕಾರಣವೊಡ್ಡಿ ಈ ಸಭೆಗೆ ಪೊಲೀಸರು ನಿರ್ಭಂಧ ವಿಧಿಸಿದ್ದಾರೆ. 

ಸಭೆಯ ಉದ್ದೇಶವೇನು?

ಸಮಾಜದಲ್ಲಿ ಸಂವಿಧಾನ ವಿರೋಧಿ ಚಟುವಟಿಕೆಗಳು ಹೆಚ್ಚಾಗುತ್ತಿರುವ ಕುರಿತು ಚರ್ಚೆ ನಡೆಸಲು ಹಾಗೂ ಸೌಜನ್ಯ ಪ್ರಕರಣದ ನ್ಯಾಯಕ್ಕಾಗಿ ಕಾನೂನು ಹೋರಾಟದ ರೂಪುರೇಷೆಯನ್ನು ನಿರ್ಧರಿಸಲು ಈ ಸಭೆ ಆಯೋಜಿಸಲಾಗಿತ್ತು. ಸಭೆಯಲ್ಲಿ ಸೌಜನ್ಯ ಮೇಲೆ ನಡೆದ ಅಮಾನವೀಯ ಹಲ್ಲೆ, ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ನ್ಯಾಯಕ್ಕಾಗಿ ಆಗ್ರಹಿಸಲಾಗಬೇಕೆಂದು ನಿರ್ಧರಿಸಲಾಗಿತ್ತು.

 

ಪೋಲೀಸ್ ನೋಟಿಸ್

ಕರ್ನಾಟಕ ಘನ ಉಚ್ಚ ನ್ಯಾಯಾಲಯದ ರಿಟ್ ಸಂಖ್ಯೆ 19382/23 (ದಿನಾಂಕ: 04.07.2024) ಮತ್ತು 20.01.2025ರ ಆದೇಶದಂತೆ ಈ ರೀತಿಯ ಸಭೆಗೆ ಅನುಮತಿ ನೀಡಲು ಸಾಧ್ಯವಿಲ್ಲ. ಒಂದು ವೇಳೆ ಕಾನೂನು ಉಲ್ಲಂಘನೆ ಮಾಡಿ ಪ್ರತಿಭಟನೆ ನಡೆಸಿದರೆ, ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುತ್ತದೆ ಎಂದು ಶೇಷಾದ್ರಿಪುರಂ ಪೊಲೀಸರು ಆಯೋಜಕರಿಗೆ ಎಚ್ಚರಿಕೆ ನೀಡಿದ್ದಾರೆ. 

Tags:    

Similar News