Karnataka Budget 2025 | ಸಿದ್ದರಾಮಯ್ಯ ಬಜೆಟ್‌ ಮೇಲೆ ದೊಡ್ಡ ನಿರೀಕ್ಷೆ ಏನಿಲ್ಲ: ಎಚ್.ಡಿ.ಕುಮಾರಸ್ವಾಮಿ

ಗ್ಯಾರಂಟಿ ಯೋಜನೆಗಳಿಗೆ ಪರಿಶಿಷ್ಟ ಜಾತಿ ಮತ್ತು ಪರಿಶೀಷ್ಟ ಪಂಗಡಗಳ ಅನುದಾನ ಬಳಕೆ ಮಾಡುವುದರಲ್ಲಿ ತಪ್ಪಿಲ್ಲ ಎಂದು ಕಾಂಗ್ರೆಸ್‌ ಸಚಿವರು ಹೇಳಿಕೆ ನೀಡುತ್ತಿದ್ದಾರೆ.;

Update: 2025-03-03 10:25 GMT

ಹೆಚ್‌ ಡಿ ಕುಮಾರಸ್ವಾಮಿ 

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಪ್ರಸಕ್ತ ಸಾಲಿನ ಬಜೆಟ್ ಮೇಲೆ ದೊಡ್ಡ ಮಟ್ಟದ ನಿರೀಕ್ಷೆಯನ್ನಿಟ್ಟುಕೊಂಡಿಲ್ಲ ಎಂದು ಕೇಂದ್ರ ಬೃಹತ್ ಕೈಗಾರಿಕೆ ಮತ್ತು ಉಕ್ಕು ಸಚಿವ ಎಚ್.ಡಿ.ಕುಮಾರಸ್ವಾಮಿ ಹೇಳಿದರು.

ಮಂತ್ರಾಲಯದಲ್ಲಿ ಮಾತನಾಡಿದ ಅವರು, ರಾಜ್ಯ ಸರ್ಕಾರವು ಹೀಗೆ ಹೋಗುತ್ತಿರುವ ಮಾರ್ಗ ನೋಡಿದರೇ ಅವರ ಬಜೆಟ್‌ ಮೇಲೆ ದೊಡ್ಡ ಮಟ್ಟದ ನಿರೀಕ್ಷೆಯಿಲ್ಲ, ಗ್ಯಾರಂಟಿ ಹೆಸರಿನಲ್ಲಿ ಜನರ ಮೇಲೆ ಮತ್ತೆ 1 ಇಲ್ಲವೇ ಒಂದೂವರೆ ಲಕ್ಷ ಕೋಟಿ ಸಾಲ ಆಗದೇ ಇರಲಿ ಎಂದು ಬಯಸುವುದಾಗಿ ತಿಳಿಸಿದರು.

ಗ್ಯಾರಂಟಿ ಯೋಜನೆಗಳಿಗೆ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಅನುದಾನ ಬಳಕೆ ಮಾಡುವುದರಲ್ಲಿ ತಪ್ಪಿಲ್ಲ ಎಂದು ಕಾಂಗ್ರೆಸ್‌ ಸಚಿವರು ಹೇಳಿಕೆ ನೀಡುತ್ತಿದ್ದಾರೆ. ಇಂತವರು ಎಸ್ಸಿ-ಎಸ್ಟಿ ನಿಯಮಗಳನ್ನು ಮಾಡಿ ಕಾನೂನುಗಳನ್ನು ಯಾಕೆ ಜಾರಿಗೆ ತಂದರು ? ಈ ಸಮುದಾಯಗಳಿಗೆ ನಿಗದಿಯಾಗಿರುವ ಹಣ ಖರ್ಚು ಮಾಡದೇ ನಿರ್ಲಕ್ಷ್ಯ ವಹಿಸುವವರ ವಿರುದ್ಧ ಕ್ರಮ ತೆಗೆದುಕೊಳ್ಳಬೇಕು, ಜೈಲಿಗೆ ಕಳುಹಿಸಬೇಕು ಎಂಬ ಕಾನೂನುಗಳನ್ನು ತಂದವರೇ ಗ್ಯಾರಂಟಿಗಳಿಗೆ ಆ ಹಣ ಬಳಸಿದರೇ ಆ ಕಾನೂನುಗಳನ್ನು ಇಟ್ಟುಕೊಂಡಾದರು ಏನು ಮಾಡುತ್ತೀರಿ? ಎಂದು ಪ್ರಶ್ನಿಸಿದರು.

ಗ್ಯಾರೆಂಟಿ ಯೋಜನೆಗಳೇ ಬೇರೆ, ಎಸ್ಸಿ-ಎಸ್ಟಿ ಸಮುದಾಯಗಳ ಆರ್ಥಿಕ ಶಕ್ತಿಯನ್ನು ವೃದ್ಧಿಗೊಳಿಸುವ ಉದ್ದೇಶದಡಿ ರೂಪಿಸಿರುವ ಯೋಜನೆಗಳಿಗೆ ಮೀಸಲಿಟ್ಟ ಹಣವನ್ನು ಗ್ಯಾರಂಟಿ ಸ್ಕೀಮ್‌ಗಳಿಗೆ ಬಳಸಿ ಅವುಗಳನ್ನು ಸ್ಥಗಿತಗೊಳಿಸಿದರೇ ಅಂತಿಮವಾಗಿ ಉಪಯೋಗ ಏನು ಆಗುತ್ತದೆ. ಸರ್ಕಾರದ ಈ ರೀತಿಯ ಬೇಜವಾಬ್ದಾರಿತನ ಹಾಗೂ ಆ ನಾಯಕನ ಲಘುವಾದ ಮಾತುಗಳಿಗೆ ಸೂಕ್ತ ಸಮಯದಲ್ಲಿ ಜನರೇ ತೀರ್ಮಾನ ಮಾಡುತ್ತಾರೆ ಎಂದರು.

Tags:    

Similar News