ನಿಫಾ ಸೋಂಕಿತ ಕಡಬದ ಟಿಟ್ಟೋ ಥಾಮಸ್‌ಗೆ ಕೇರಳದ ಕಾಳಜಿ ಹಾಗೆ, ಕರಾವಳಿ ಆಸ್ಪತ್ರೆಗಳಲ್ಲಿ ಹೇಗೆ?

ʼದಿ ಫೆಡರಲ್‌ ಕರ್ನಾಟಕʼ ಈ ವಿಷಯದ ಜಾಡು ಹಿಡಿದಾಗ ಅನೇಕ ಕಹಿ ಪ್ರಸಂಗಗಳು ತೆರೆದುಕೊಂಡವು. ಖಾಸಗಿ ಆಸ್ಪತ್ರೆಗಳಲ್ಲಿ ಕೆಲಸ ಮಾಡುವ ನರ್ಸ್‌ಗಳು ಇಂಥ ತೀವ್ರ ಪರಿಣಾಮದ ಸೋಂಕಿಗೆ ಒಳಗಾದಾಗ, ಆಸ್ಪತ್ರೆಯ ಆಡಳಿತ ಅವರನ್ನು ನಿರ್ದಾಕ್ಷಿಣ್ಯವಾಗಿ ಮನೆಗೆ ಕಳುಹಿಸಿದ, ಸರ್ಕಾರಿ ಆಸ್ಪತ್ರೆಯ ದಾರಿ ತೋರಿಸಿದ ಪ್ರಕರಣಗಳು ನಡೆದಿವೆ.

Update: 2024-07-30 08:29 GMT

ನಿಫಾ ಸೋಂಕು ತಗುಲಿದ ಕಡಬದ ಟಿಟ್ಟೋ ಥಾಮಸ್‌ ಅವರ ಚಿಕಿತ್ಸಾ ವೆಚ್ಚವನ್ನು ಅವರು ಕೆಲಸ ಮಾಡುತ್ತಿದ್ದ ಕೇರಳದ ಕ್ಯಾಲಿಕಟ್‌ನ ಇಕ್ರಾ ಇಂಟರ್‌ನ್ಯಾಷನಲ್‌ ಹಾಸ್ಪಿಟಲ್ ಆ್ಯಂಡ್ ರಿಸರ್ಚ್ ಸೆಂಟರ್‌ ಭರಿಸಿದೆ. ಆದರೆ, ಕರ್ನಾಟಕದಲ್ಲಿ ಅದೇ ಸ್ಥಿತಿ ಇದೆಯೇ?

ʼದಿ ಫೆಡರಲ್‌ ಕರ್ನಾಟಕʼ ಈ ವಿಷಯದ ಜಾಡು ಹಿಡಿದಾಗ ಅನೇಕ ಕಹಿ ಪ್ರಸಂಗಗಳು ತೆರೆದುಕೊಂಡವು. ಖಾಸಗಿ ಆಸ್ಪತ್ರೆಗಳಲ್ಲಿ ಕೆಲಸ ಮಾಡುವ ನರ್ಸ್‌ಗಳು ಇಂಥ ತೀವ್ರ ಪರಿಣಾಮದ ಸೋಂಕಿಗೆ ಒಳಗಾದಾಗ, ಆಸ್ಪತ್ರೆಯ ಆಡಳಿತ ಅವರನ್ನು ನಿರ್ದಾಕ್ಷಿಣ್ಯವಾಗಿ ಮನೆಗೆ ಕಳುಹಿಸಿದ, ಸರ್ಕಾರಿ ಆಸ್ಪತ್ರೆಯ ದಾರಿ ತೋರಿಸಿದ ಪ್ರಕರಣಗಳು ನಡೆದಿವೆ.

ಉಡಪಿ ಜಿಲ್ಲೆ ಕಾರ್ಕಳ ತಾಲ್ಲೂಕಿನ ಅಜೆಕಾರಿನ ನರ್ಸ್‌ ಒಬ್ಬರು ಎಚ್‌1ಎನ್‌1 ಸೋಂಕಿಗೆ ತುತ್ತಾದರು. ಅವರು ಕೆಲಸ ನಿರ್ವಹಿಸುತ್ತಿದ್ದ ಉಡುಪಿ ಸಮೀಪದ ಪ್ರತಿಷ್ಠಿತ ಆಸ್ಪತ್ರೆಯಲ್ಲಿ ಎಚ್‌1ಎನ್‌1 ಸೋಂಕಿತ ವ್ಯಕ್ತಿಯ ಆರೈಕೆ ಮಾಡುತ್ತಿದ್ದಾಗ ಈ ಸೋಂಕು ಅವರಿಗೂ ತಗುಲಿತ್ತು. ಸೋಂಕು ತಗುಲಿದ್ದೇ ತಡ, ಆ ಆಸ್ಪತ್ರೆಯವರು ʼಒಂದೋ ಆಸ್ಪತ್ರೆಯ ನಿಗದಿತ ಶುಲ್ಕ ಕಟ್ಟಿ ದಾಖಲಾಗಿ ಚಿಕಿತ್ಸೆ ಪಡೆಯಬಹುದು. ಅಥವಾ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯಬಹುದುʼ ಎಂದು ʼದಾರಿʼ ತೋರಿಸಿದರು. ಇದೇ ಆಸ್ಪತ್ರೆಯ ಇವರ ಹಲವಾರು ಸಹೋದ್ಯೋಗಿಗಳಿಗೆ ಇದೇ ʼದಾರಿʼ ಗತಿಯಾಗಿತ್ತು.

ಆ ನರ್ಸ್‌ ಸೋಂಕು ಪೀಡಿತರಾಗಿ ಮನೆಗೆ ಬಂದಾಗ ಅದು ಮನೆ ಮಂದಿಗೆಲ್ಲಾ ಹರಡಿತು. ಒಂದಿಷ್ಟು ಸರ್ಕಾರಿ ಅಧಿಕಾರಿಗಳು ಮನೆಗೆ ಬಂದು ತಪಾಸಣೆ ನಡೆಸಿದರು. ಸೋಂಕಿನ ಮೂಲ ತಿಳಿದಾಗ ಅವರೂ ಅಸಹಾಯಕರಾಗಿ ವಾಪಸಾದರು. ಕೆಲಕಾಲದ ಚಿಕಿತ್ಸೆಯ ಬಳಿಕ ಈ ನರ್ಸ್‌ ಹಾಗೂ ಕುಟುಂಬದವರು ಗುಣಮುಖರಾದರು. ಆದರೂ ಅವರ ರೋಗ ಪ್ರತಿರೋಧ ಶಕ್ತಿ ಗಣನೀಯವಾಗಿ ಕುಗ್ಗಿತು.

ಇಂಥ ಅನೇಕ ಪ್ರಕರಣಗಳು ಖಾಸಗಿ ಆಸ್ಪತ್ರೆಗಳಲ್ಲಿ ನಡೆಯುತ್ತಲೇ ಇವೆ. ಇದರ ವಿರುದ್ಧ ನರ್ಸ್‌ಗಳು ಧ್ವನಿ ಎತ್ತಲಾರದವರಾಗಿದ್ದಾರೆ.

ಅಡಕತ್ತರಿಯಲ್ಲಿ ಚಿಕಿತ್ಸಾ ವೆಚ್ಚ

ನರ್ಸ್‌ಗಳು ತಮ್ಮ ವೇತನದ ಆಧಾರದಲ್ಲಿ ಅತ್ತ ಇಎಸ್‌ಐ ಸೌಲಭ್ಯದಿಂದಲೂ ವಂಚಿತರಾಗಿರುತ್ತಾರೆ. ಉದಾಹರಣೆಗೆ ಮಾಸಿಕ ವೇತನ 21 ಸಾವಿರ ದಾಟಿದ್ದರೆ ಅಂಥವರು ಕಾರ್ಮಿಕ ವಿಮಾ ಯೋಜನೆಯ ವ್ಯಾಪ್ತಿಗೆ ಬರುವುದಿಲ್ಲ. ಏನಿದ್ದರೂ ವೈಯಕ್ತಿಕ ಆರೋಗ್ಯ ವಿಮೆ ಸ್ವಲ್ಪಮಟ್ಟಿಗೆ ನೆರವಾಗುತ್ತದೆ. ಬಹುತೇಕ ಖಾಸಗಿ ಆಸ್ಪತ್ರೆಗಳು ದಾದಿಯರನ್ನು ಗುತ್ತಿಗೆ ಆಧಾರದಲ್ಲಿ ನೇಮಕ ಮಾಡಿಕೊಳ್ಳುವುದರಿಂದ ಆಸ್ಪತ್ರೆಯ ಆಡಳಿತ ಮಂಡಳಿಗಳು ತುಂಬಾ ಕಾಳಜಿ ವಹಿಸುವುದೂ ಇಲ್ಲ.

ಹಾಗೆ ನೋಡಿದರೆ ಸರ್ಕಾರಿ ಆಸ್ಪತ್ರೆಗಳಲ್ಲಿ ಈ ಸೌಲಭ್ಯ ಪರವಾಗಿಲ್ಲ ಅನ್ನುತ್ತಾರೆ ಇಲ್ಲಿನ ನರ್ಸಿಂಗ್‌ ಸಿಬ್ಬಂದಿ. ಸರ್ಕಾರಿ ಆಸ್ಪತ್ರೆಯಲ್ಲಿ ಇಂಥ ಪ್ರಕರಣಗಳು ಕಂಡು ಬಂದಾಗ ಸಾಮಾನ್ಯವಾಗಿ ಆಸ್ಪತ್ರೆಯ ಆಡಳಿತ ವ್ಯವಸ್ಥೆಯೇ ಕಾಳಜಿ ವಹಿಸುತ್ತದೆ. ವೆಚ್ಚ ಕೈಮೀರುವ ಸಾಧ್ಯತೆ ಕಂಡುಬಂದಾಗ ಸರ್ಕಾರದ ಮಟ್ಟದಲ್ಲಿಯೂ ಅದಕ್ಕೆ ಪರಿಹಾರ ಕ್ರಮಗಳಿವೆ. ಇದೇ ನಿಯಮ ಗುತ್ತಿಗೆ ಆಧಾರದ ಸಿಬ್ಬಂದಿಗೂ ಅನ್ವಯಿಸುತ್ತದೆ. ಒಟ್ಟಿನಲ್ಲಿ ವೆಚ್ಚ, ರೋಗಿಯನ್ನು ದಾಖಲಿಸಿದರೆ ಉಂಟಾಗಬಹುದಾದ ತೊಂದರೆ (ರಿಸ್ಕ್‌) ಇವುಗಳನ್ನು ಮೀರಿಯೂ ಮಾನವೀಯ ದೃಷ್ಟಿಯಿಂದ ನೋಡಿಕೊಳ್ಳುವುದೇ ಆದ್ಯತೆಯಾಗಬೇಕು ಎಂಬುದು ನರ್ಸಿಂಗ್‌ ವಲಯದ ಅಭಿಮತ.

ಹಾಗೆಂದು ಕರ್ನಾಟಕದ ಖಾಸಗಿ ಆಸ್ಪತ್ರೆಗಳು ತಮ್ಮ ನರ್ಸಿಂಗ್‌ ಸಿಬ್ಬಂದಿಯನ್ನು ಪೂರ್ಣ ಕಡೆಗಣಿಸಿವೆ ಎಂದಲ್ಲ. ತಮ್ಮ ಸಿಬ್ಬಂದಿಗೆ ಅಪಘಾತ ಉಂಟಾದಾಗ, ಸೇವಾವಧಿಯಲ್ಲಿ ತೀವ್ರತರನಾದ ಆರೋಗ್ಯ ಸಮಸ್ಯೆ ಉಂಟಾದಾಗ, ರೋಗಿಗಳ ಕಡೆಯವರು ಅಥವಾ ಬಾಹ್ಯ ಶಕ್ತಿಗಳಿಂದ ತೊಂದರೆಗಳಾದಾಗ ಆಸ್ಪತ್ರೆಯವರು ದೀರ್ಘ ಕಾಲ ನರ್ಸಿಂಗ್‌ ಸಿಬ್ಬಂದಿಯ ಕಾಳಜಿ ವಹಿಸಿದ್ದಾರೆ ಮತ್ತು ವೆಚ್ಚವನ್ನೂ ಭರಿಸಿದ್ದಾರೆ. ಕೋವಿಡ್‌ ಸಂದರ್ಭ ಇದಕ್ಕೆ ಒಳ್ಳೆಯ ಉದಾಹರಣೆ.

ವಯಸ್ಸಾದವರನ್ನು, ಪುಟ್ಟ ಮಕ್ಕಳಿರುವವರನ್ನು ದೀರ್ಘಾವಧಿ ಕರ್ತವ್ಯಕ್ಕೆ ಬಳಸದೇ ಸೀಮಿತ ಸಿಬ್ಬಂದಿಯ ಮೂಲಕ ಕಾರ್ಯಾಚರಣೆ ನಡೆಸಿದ್ದಾರೆ. ಅನೇಕ ಗರ್ಭಿಣಿ ಸಿಬ್ಬಂದಿಗೆ ಪ್ರಸವ ಪೂರ್ವ ಮತ್ತು ಪ್ರಸವಾನಂತರ ತಲಾ 6 ತಿಂಗಳು ವೇತನಸಹಿತ ರಜೆ ಕೊಟ್ಟದ್ದೂ ಇದೆ ಎಂದು ಕೃತಜ್ಞತೆ ವ್ಯಕ್ತಪಡಿಸುತ್ತಾರೆ ಮಂಗಳೂರಿನ ಒಬ್ಬರು ದಾದಿ.

ಒಟ್ಟಿನಲ್ಲಿ ನಿಫಾ ಸೋಂಕಿತರ ಪ್ರಕರಣದಲ್ಲಿ ಕ್ಯಾಲಿಕಟ್‌ನ ಇಕ್ರಾ ಆಸ್ಪತ್ರೆ ನರ್ಸ್‌ಗಳ ದೃಷಿಯಲ್ಲಿ ಶ್ಲಾಘನೆಗೆ ಪಾತ್ರವಾಗಿದೆ.

ಏನಿದು ಟಿಟ್ಟೋ ಥಾಮಸ್‌ ಪ್ರಕರಣ?

ನಿಫಾ ಸೋಂಕು ತಗುಲಿದ ವ್ಯಕ್ತಿಯ ಆರೈಕೆ ಮಾಡಿದವರೇ ಈಗ ಅದೇ ಸೋಂಕಿಗೆ ತುತ್ತಾಗಿ ಕೋಮಾ ಹಂತದಲ್ಲಿದ್ದಾರೆ. ಕಡಬ ತಾಲೂಕಿನ ಐತ್ತೂರು ಗ್ರಾಮದ ಮರ್ದಾಳ ಸಮೀಪದ ತುಂಬ್ಯ ನಿವಾಸಿ ಥಾಮಸ್ ಟಿ.ಸಿ. ಅವರ ಪುತ್ರ ಟಿಟ್ಟೋ ಥಾಮಸ್(24) ಈ ತೊಂದರೆಗೊಳಗಾದವರು. ಕೇರಳದ ಕ್ಯಾಲಿಕಟ್‌ನ ಇಕ್ರಾ ಇಂಟರ್‌ನ್ಯಾಷನಲ್‌ ಹಾಸ್ಪಿಟಲ್ ಆ್ಯಂಡ್ ರಿಸರ್ಚ್ ಸೆಂಟರ್‌ನಲ್ಲಿ ಅವರು ನರ್ಸ್‌ ಆಗಿ ಕೆಲಸ ಮಾಡುತ್ತಿದ್ದರು. ಅವರು ನಿಫಾ ಸೋಂಕಿತ ವ್ಯಕ್ತಿಗೆ ಆರೈಕೆ ಮಾಡಿದ್ದರು.

ಆ ಬಳಿಕ ಅವರನ್ನು ಕ್ವಾರಂಟೈನ್‌ನಲ್ಲಿ ಇರಿಸಲಾಗಿತ್ತು. ಎರಡು ತಿಂಗಳ ಬಳಿಕ ಅವರಿಗೆ ವಿಪರೀತ ತಲೆನೋವು ಕಾಣಿಸಿಕೊಂಡಿತು. ತಪಾಸಣೆ ವೇಳೆ ಅವರು ಮಿದುಳಿನ ಪಾರ್ಶ್ವವಾಯು (ಸ್ಟ್ರೋಕ್‌)ಗೆ ತುತ್ತಾಗಿದ್ದರು. ಬಳಿಕ ಕೋಮಾಗೆ ಜಾರಿದರು. ಆಸ್ಪತ್ರೆ ಇದುವರೆಗೆ ಸುಮಾರು 40 ಲಕ್ಷ ರೂಪಾಯಿ ವೆಚ್ಚದಲ್ಲಿ ಚಿಕಿತ್ಸೆ ನೀಡಿದೆ. ಆದರೂ ಅವರ ಪರಿಸ್ಥಿತಿಯಲ್ಲಿ ಸುಧಾರಣೆ ಕಂಡುಬಂದಿಲ್ಲ. ಅವರಿಗೆ ಹೆಚ್ಚಿನ ಚಿಕಿತ್ಸೆ ನೀಡಲು ನೆರವಾಗಬೇಕು ಎಂದು ಟಿಟ್ಟೋ ಅವರ ಕುಟುಂಬ ಕೇರಳ ಸರ್ಕಾರದ ಮೊರೆ ಹೋಗಿದೆ.

ಕೇರಳ ಸರ್ಕಾರ ಟಿಟ್ಟೋ ಅವರಿಗೆ ಜೀವನಾಂಶ ಕೊಡಬೇಕು. ಮುಂದಿನ ಚಿಕಿತ್ಸೆಗೆ ನೆರವಾಗಬೇಕು ಎಂದು ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್‌ ಅವರಿಗೆ ಮನವಿ ಮಾಡಿದ್ದೇವೆ. ಸರ್ಕಾರ ಸ್ಪಂದಿಸುವ ಭರವಸೆ ಇದೆ. ಮುಂದೆ ಅವರನ್ನು ಕರೆತಂದು ಮಂಗಳೂರಿನಲ್ಲಿ ಚಿಕಿತ್ಸೆ ಮುಂದುವರಿಸಲಿದ್ದೇವೆ ಎಂದು ಅವರ ಸಹೋದರ ಶಿಜೋ ಜಾಯ್‌ ಹೇಳಿದರು.

Tags:    

Similar News