ನನ್ನ ನಾಯಕತ್ವದಲ್ಲೇ ಮುಂದಿನ ಚುನಾವಣೆ: ಡಿ ಕೆ ಶಿವಕುಮಾರ್‌ ಖಡಕ್‌ ಹೇಳಿಕೆ

ಓಪಿಎಸ್ (ಓಲ್ಡ್ ಪೆನ್ಷನ್ ಸ್ಕೀಮ್) ಜಾರಿ ಸಂಬಂಧ ಅಂಜುಮ್ ಪರ್ವೇಜ್ ಅವರ ಅಧ್ಯಕ್ಷತೆಯಲ್ಲಿ ಸಮಿತಿ ರಚನೆ ಮಾಡಲಾಗಿದ್ದು, ಆ ಸಮಿತಿಯ ವರದಿಯನ್ನು ಪರಿಶೀಲಿಸಿ ಅನುಷ್ಠಾನಕ್ಕೆ ಅಗತ್ಯ ಕ್ರಮ ಕೈಗೊಳ್ಳಲಾಗುವುದು.;

Update: 2025-02-21 08:19 GMT
ಡಿ.ಕೆ ಶಿವಕುಮಾರ್‌

ಆಡಳಿತಾರೂಢ ಕಾಂಗ್ರೆಸ್‌ ಪಕ್ಷದಲ್ಲಿ ಪಕ್ಷದ ರಾಜ್ಯಾಧ್ಯಕ್ಷ ಸ್ಥಾನ ಮತ್ತು ಮುಖ್ಯಮಂತ್ರಿ ಗಾದಿಯ ವಿಷಯದಲ್ಲಿ ತೆರೆಮರೆಯಲ್ಲಿ ಮುಸುಕಿನ ಗುದ್ದಾಟ ಕಾವೇರಿದೆ. ಕೆಪಿಸಿಸಿ ಗಾದಿಯ ಮೇಲೆ ಕಣ್ಣಿಟ್ಟಿರುವ ಹಿರಿಯ ಸಚಿವರು ಒಬ್ಬರಾದ ಮೇಲೊಬ್ಬರಂತೆ ದೆಹಲಿ ದಂಡೆಯಾತ್ರೆ ನಡೆಸುತ್ತಿದ್ದಾರೆ. ಅಧಿಕಾರ ಹಂಚಿಕೆಯ ಮಾತನ್ನು ಮತ್ತೆ ಮತ್ತೆ ಪ್ರಸ್ತಾಪಿಸುವ ಮೂಲಕ ಹಾಲಿ ಕೆಪಿಸಿಸಿ ಅಧ್ಯಕ್ಷರು ಸಿಎಂ ಕುರ್ಚಿಯ ಪಾಲು ಕೇಳುತ್ತಿದ್ದಾರೆ.

ಈ ಬೆಳವಣಿಗೆಗಳ ನಡುವೆಯೇ ಪ್ರದೇಶ ಕಾಂಗ್ರೆಸ್‌ ಅಧ್ಯಕ್ಷರಾಗಿರುವ ಉಪಮುಖ್ಯಮಂತ್ರಿ ಡಿ ಕೆ ಶಿವಕುಮಾರ್‌ ಅವರ ಗುರುವಾರ ಅಚ್ಚರಿಯ ಹೇಳಿಕೆಯೊಂದನ್ನು ನೀಡಿದ್ದಾರೆ. ಮುಂದಿನ ವಿಧಾನಸಭಾ ಚುನಾವಣೆಯೂ ತಮ್ಮದೇ ನೇತೃತ್ವದಲ್ಲಿ ನಡೆಯಲಿದೆ ಮತ್ತು ಪಕ್ಷ ಮತ್ತೆ ಅಧಿಕಾರಕ್ಕೆ ಬರಲಿದೆ ಎನ್ನುವ ಮೂಲಕ ಕೆಪಿಸಿಸಿ ಅಧ್ಯಕ್ಷಗಿರಿಯಿಂದ ಹಿಂದೆ ಸರಿಯುವ ಪ್ರಶ್ನೆಯೇ ಇಲ್ಲ ಎಂಬ ಸಂದೇಶವನ್ನು ಡಿ ಕೆ ತಮ್ಮ ಪ್ರತಿಸ್ಪರ್ಧಿಗಳಿಗೆ ರವಾನಿಸಿದ್ದಾರೆ.

ಕೆಪಿಸಿಸಿ ಅಧ್ಯಕ್ಷ ಸ್ಥಾನದ ಮೇಲೆ ಕಣ್ಣಿಟ್ಟು ದೆಹಲಿ ಮಟ್ಟದಲ್ಲಿ ತೀವ್ರ ಲಾಬಿ ನಡೆಸುತ್ತಿರುವ ಹಿರಿಯ ಸಚಿವರಾದ ಸತೀಶ್‌ ಜಾರಕಿಹೊಳಿ, ಕೆ ಎನ್‌ ರಾಜಣ್ಣ ಮತ್ತಿತರರು ಡಿ ಕೆ ಶಿವಕುಮಾರ್‌ ಅವರ ಈ ಹೇಳಿಕೆಗೆ ಹೇಗೆ ಪ್ರತಿಕ್ರಿಯಿಸಲಿದ್ದಾರೆ ಎಂಬುದು ಇದೀಗ ಕಾಂಗ್ರೆಸ್‌ ವಲಯದಲ್ಲಿ ಕುತೂಹಲ ಮೂಡಿಸಿದೆ.

ಅಷ್ಟಕ್ಕೂ ಡಿ ಕೆ ಶಿವಕುಮಾರ್‌ ಅವರು ರಾಜ್ಯ ಸರ್ಕಾರಿ ನೌಕರರ ಸಮಾವೇಶದಲ್ಲಿ ಹೇಳಿದ್ದೇನು? ವಿವರ ಇಲ್ಲಿದೆ...

'ನಾನು ಮುಂದಿನ ಬಾರಿ ಚುನಾವಣೆಗೆ ನಿಂತಾಗ, ನನ್ನ ನಾಯಕತ್ವದಲ್ಲೇ ಚುನಾವಣೆ ನಡೆಯುವಾಗ ದಯವಿಟ್ಟು ಈ ಪದವನ್ನು(ಡಿಕೆ, ಡಿಕೆ ಎಂಬ ಘೋಷಣೆ) ಉಪಯೋಗಿಸಿ. ನಾನು ವಿಧಾನಸೌಧದಲ್ಲಿ ಇರುವವನೇ. ನಾನು ಇನ್ನು ಎಂಟತ್ತು ವರ್ಷ ಎಲ್ಲೂ ಹೋಗುವುದಿಲ್ಲ. ನನ್ನ ಆರೋಗ್ಯ ಇನ್ನೂ ಗಟ್ಟಿಯಾಗಿದೆ. ನನ್ನ ಮೇಲೆ ನಂಬಿಕೆಯಿಡಿ' ಎಂದು ಅವರು ಹೇಳಿದರು.

ಆ ಮೂಲಕ ತಮ್ಮ ನಾಯಕತ್ವದಲ್ಲೇ ಮುಂದಿನ ಚುನಾವಣೆ ನಡೆಯಲಿದೆ ಎಂದು ಡಿ ಕೆ ಹೇಳಿದರು.

ಗುರುವಾರ ನಡೆದ ಸರ್ಕಾರಿ ನೌಕರರ ಸಮಾವೇಶ ಉದ್ಘಾಟಿಸಿ ಮಾತನಾಡಿದ ಅವರು, 'ಚುನಾವಣಾ ಪ್ರಣಾಳಿಕೆಯಲ್ಲಿ ನೀಡಿದ ಭರವಸೆಯಂತೆ ಒಪಿಎಸ್ ಜಾರಿ ಮಾಡುತ್ತೇವೆ. ನೀವು ಬಿಟ್ಟರೂ ಈ ವಿಚಾರವನ್ನು ನಾವು ಬಿಡುವುದಿಲ್ಲ. ಆದರೆ, ಸ್ವಲ್ಪ ತಾಳ್ಮೆಯಿರಲಿ' ಎಂದರು.

ಓಪಿಎಸ್ ಜಾರಿ ವಿಚಾರವಾಗಿ ಡಿಸಿಎಂ ಭರವಸೆ ನೀಡಿದಾಗ ನೌಕರರು ʼಡಿಕೆ, ಡಿಕೆʼ ಎಂದು ಘೋಷಣೆ ಕೂಗಿದರು.‌ ಆಗ ಸಭಿಕರಿಗೆ ಸುಮ್ಮನಿರಲು ಹೇಳಿದ ಅವರು, "ನಾನು ಮುಂದಿನ ಬಾರಿ ಚುನಾವಣೆಗೆ ನಿಂತಾಗ, ನನ್ನ ನಾಯಕತ್ವದಲ್ಲೇ ಚುನಾವಣೆ ನಡೆಯುವಾಗ ದಯವಿಟ್ಟು ಈ ಪದವನ್ನು ಉಪಯೋಗಿಸಿ"
ಎಂದು ಹೇಳಿದರು. 

'ನಾನು 1989ರಿಂದ ವಿಧಾನಸಭೆಯಲ್ಲಿ ಇದ್ದೇನೆ. ಕಾರ್ಯಾಂಗದ ಭಾಗವಾಗಿ ನೀವೀದ್ದೀರಿ. ನಿಮ್ಮ ಜವಾಬ್ದಾರಿಯ ಅರಿವು ನನಗಿದೆ. ನಾನು ಕೂಡ ಬಡ ನೌಕರನಂತೆ 38 ವರ್ಷಗಳಿಂದ ಸೇವೆ ಮಾಡುತ್ತಿದ್ದೇನೆ. ಶಾಸಕನಾಗಿ ಸರ್ಕಾರದ ವೇತನ ಪಡೆದಿದ್ದೇನೆ. ನನಗೂ ಪಿಂಚಣಿ ಬರುತ್ತದೆ' ಎಂದರು.

ಓಪಿಎಸ್ (ಓಲ್ಡ್ ಪೆನ್ಷನ್ ಸ್ಕೀಮ್) ಜಾರಿ ಸಂಬಂಧ ಅಂಜುಮ್ ಪರ್ವೇಜ್ ಅವರ ಅಧ್ಯಕ್ಷತೆಯಲ್ಲಿ ಸಮಿತಿ ರಚನೆ ಮಾಡಲಾಗಿದ್ದು, ಆ ಸಮಿತಿಯ ವರದಿಯನ್ನು ಪರಿಶೀಲಿಸಿ ಅನುಷ್ಠಾನಕ್ಕೆ ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದು ಅವರು ತಿಳಿಸಿದರು. 

Tags:    

Similar News