ವಿಧಾನಸಭೆಯಲ್ಲಿ ಮೈಕ್ರೋ ಫೈನಾನ್ಸ್ ವಿಧೇಯಕ ಅಂಗೀಕಾರ

ಫೈನಾನ್ಸ್‌ ದಂಧೆ ತೀವ್ರವಾಗಿದೆ. ಇಸ್ಪೀಟ್‌ ದಂಧೆ, ಗಾಂಜಾ ಮಾಫಿಯಾ ಸೇರಿದಂತೆ ಕೆಟ್ಟ ದಂಧೆಕೋರರು ಫೈನಾನ್ಸ್‌ ನಡೆಸುತ್ತಾರೆ. ತಿಂಗಳಿಗೆ ಶೇ.10 ರಷ್ಟು ಬಡ್ಡಿ ವಿಧಿಸುವ ದೊಡ್ಡ ಜಾಲವೂ ಇದೆ.;

Update: 2025-03-10 12:21 GMT

ವಿಧಾನಸಭೆ

ಮೈಕ್ರೊಫೈನಾನ್ಸ್​ ದಂಧೆಯಲ್ಲಿ ಸಿಲುಕಿ ನಲುಗಿರುವವರನ್ನು ರಕ್ಷಿಸುವ ಉದ್ದೇಶದ 2025ನೇ ಸಾಲಿನ ಕರ್ನಾಟಕ ಕಿರು ಸಾಲ ಮತ್ತು ಸಣ್ಣ ಸಾಲ (ಬಲವಂತದ ಕ್ರಮಗಳ ಪ್ರತಿಬಂಧಕ) ವಿಧೇಯಕಕ್ಕೆ ವಿಧಾನಸಭೆಯಲ್ಲಿ ಸೋಮವಾರ ಅಂಗೀಕಾರ ದೊರೆಯಿತು.

ಮುಖ್ಯಮಂತ್ರಿ ಸಿದ್ದರಾಮಯ್ಯನವರ ಪರವಾಗಿ ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಎಚ್‌.ಕೆ.ಪಾಟೀಲ್‌ ವಿಧೇಯಕ ಮಂಡಿಸಿದರು. ಬಲವಂತವಾಗಿ ಸಾಲ ವಸೂಲಿ ಮಾಡುವುದು, ಅಧಿಕ ಬಡ್ಡಿ ವಿಧಿಸಿ ತೊಂದರೆ ಕೊಡುವುದರಿಂದ ಸಾಲಗಾರರು ಬೀದಿಗೆ ಬರುವಂತಹ ಮತ್ತು ಆತಹತ್ಯೆ ಮಾಡಿಕೊಳ್ಳುವ ಪರಿಸ್ಥಿತಿಗೆ ದೂಡುವುದನ್ನು ತಡೆಯಲು ಹಾಗೂ ತಪ್ಪಿತಸ್ಥರಿಗೆ 10 ವರ್ಷ ಶಿಕ್ಷೆ ಹಾಗೂ 5 ಲಕ್ಷ ರೂ. ದಂಡ ವಿಧಿಸಲು ಅವಕಾಶ ಕಲ್ಪಿಸಲು ಈ ವಿಧೇಯಕವನ್ನು ಮಂಡಿಸಲಾಗಿದೆ ಎಂದು ಅವರು ವಿವರಿಸಿದರು.

ಕಿರು ಸಾಲ ಮತ್ತು ಸಣ್ಣ ಸಾಲ, ಖಾಸಗಿ ಹಣಕಾಸು ಮತ್ತು ಇತರೆ ಅನಿಯಂತ್ರಿತ ಲೇವಾದೇವಿ ಮಾಫಿಯಾಗಳು ಬಡ ಗ್ರಾಮೀಣ ಜನರಿಗೆ, ನಗರ ಕಾರ್ಮಿಕರು, ಸಮಾಜದ ಅಶಕ್ತ ಮತ್ತು ದುರ್ಬಲರನ್ನು ಪೀಡಿಸುತ್ತಿರುವ ಪ್ರಕರಣಗಳು ವರದಿಯಾಗಿವೆ. ದುಪ್ಪಟ್ಟು ಬಡ್ಡಿ ವಿಧಿಸಿ  ಸಾಲಗಾರರನ್ನು ತೊಂದರೆಗೆ ಸಿಲುಕಿಸುವುದನ್ನು ತಡೆಯಲು ಈ ವಿಧೇಯಕ ತರಲಾಗಿದೆ. ಕಪ್ಪು ಹಣಕ್ಕೆ ಕಡಿವಾಣ ಹಾಕುವುದು, ಲೇವಾದೇವಿ ಮಾಫಿಯಾಗಳಿಂದ ಸಾಲ ಪಡೆದವರಿಗೆ ಕಿರುಕುಳ ತಪ್ಪಿಸುವ ಉದ್ದೇಶವಿದೆ ಎಂದು ಸಚಿವರು ಹೇಳಿದರು. 

ವಿಧೇಯಕ ಕುರಿತು ಪಕ್ಷ  ಭೇದ ಮರೆತು ಶಾಸಕರು ಕೆಲವು ಉಪಯುಕ್ತ ಸಲಹೆಗಳನ್ನು ನೀಡಿದರು. ಪ್ರತಿಪಕ್ಷದ ನಾಯಕ ಆರ್‌.ಅಶೋಕ್‌ ಮಾತನಾಡಿ, ಈಗ ಜಾರಿಯಲ್ಲಿರುವ ಕಾಯ್ದೆಗಳ ಮೂಲಕವೇ ಹಣಕಾಸು ದಂಧೆಕೋರರನ್ನು ಬಗ್ಗು ಬಡಿಯಬಹುದಾಗಿತ್ತು. ಸರ್ಕಾರ ಸೂಕ್ತ ಕ್ರಮ ಕೈಗೊಳ್ಳುವಲ್ಲಿ ಸಂಪೂರ್ಣ ವಿಫಲವಾಯಿತು. ಕೆಲವು ಬಡಜನರ ಪ್ರಾಣ ನಷ್ಟವಾಯಿತು ಎಂದು ಹೇಳಿದರು.

ಇದೇ ವೇಳೆ ಅವರು, ನ್ಯಾಯಯುತವಾಗಿ ಸಾಲ ನೀಡುವವರಿಗೂ ತೊಂದರೆಯಾಗದಂತೆ ಗಮನ ಹರಿಸಬೇಕು ಎಂಬ ಸಲಹೆ ನೀಡಿದರು. 

ಪ್ರತಿಪಕ್ಷದ ಉಪನಾಯಕ ಅರವಿಂದ ಬೆಲ್ಲದ್‌ ಮಾತನಾಡಿ, ಫೈನಾನ್ಸ್‌ ದಂಧೆ ತೀವ್ರವಾಗಿದೆ. ಇಸ್ಪೀಟ್‌ ದಂಧೆ, ಗಾಂಜಾ ಮಾಫಿಯಾ ಸೇರಿದಂತೆ ಕೆಟ್ಟ ದಂಧೆಕೋರರು ಫೈನಾನ್ಸ್‌ ನಡೆಸುತ್ತಾರೆ. ತಿಂಗಳಿಗೆ ಶೇ.10ರಷ್ಟು ಬಡ್ಡಿ ವಿಧಿಸುವ ದೊಡ್ಡ ಜಾಲವೂ ಇದೆ. ಪರೋಕ್ಷವಾಗಿ ಪೊಲೀಸರ ಸಹಕಾರವೂ ಇರುತ್ತದೆ ಎಂದರು.

ಕಾಂಗ್ರೆಸ್‌‍ ಶಾಸಕರಾದ ಲಕ್ಷ್ಮಣ್‌ ಸವದಿ, ರಂಗನಾಥ್‌, ನಂಜೇಗೌಡ ಸೇರಿದಂತೆ ಬಿಜೆಪಿ ಶಾಸಕರು ಚರ್ಚೆಯಲ್ಲಿ ಪಾಲ್ಗೊಂಡು ಸಲಹೆ ನೀಡಿದರು. ಬಳಿಕ ಪ್ರತಿಕ್ರಿಯಿಸಿದ ಕಾನೂನು ಸಚಿವ  ಎಚ್‌.ಕೆ ಪಾಟೀಲ್‌. ಆರ್ಥಿಕವಾಗಿ ದುರ್ಬಲ ಗುಂಪುಗಳು ಮತ್ತು ವ್ಯಕ್ತಿಗಳು ವಿಶೇಷವಾಗಿ ಮಹಿಳೆಯರು, ಮಹಿಳಾ ಸ್ವಸಹಾಯ ಸಂಘವನ್ನು ರಕ್ಷಿಸಲು ಉದ್ದೇಶಿಸಲಾಗದೆ. ಮೈಕ್ರೋಫೈನಾನ್ಸ್‌ ಸಂಸ್ಥೆಗಳು, ಸಾಲ ನೀಡಿಕೆ ಏಜೆನ್ಸಿಗಳು ಸಂಸ್ಥೆಗಳನ್ನು ನಿಯಂತ್ರಿಸಲು ಪರಿಣಾಮಕಾರಿ ಕಾರ್ಯ ವ್ಯವಸ್ಥೆಯನ್ನು ಜಾರಿಗೆ ತರುವ ವಿಧೇಯಕ ಒಳಗೊಂಡಿದೆ.

ನೋಂದಣಿ ಮಾಡದ  ಲೇವಾದೇವಿದಾರರನ್ನು ನಿಯಂತ್ರಿಸುವುದು, ಮೂಲಭೂತ ಹಕ್ಕುಗಳ ರಕ್ಷಣೆ ನೀಡುವ  ಅಂಶಗಳನ್ನುವಿಧೇಯಕ  ಒಳಗೊಂಡಿದೆ. ಕಾನೂನು ಬದ್ಧ ಲೇವಾದೇವಿಯನ್ನು ನಿಷೇಧಿಸುವುದಿಲ್ಲ. ಆದರೆ ಬಲವಂತವಾದ ಸಾಲ ವಸೂಲಾತಿಯನ್ನು ನಿರ್ಬಂಧಿಸಲಿದೆ. ಅಮಾನವೀಯ ಸಾಲ ವಸೂಲಾತಿಯಲ್ಲಿ ತಪ್ಪಿತಸ್ಥರಿಗೆ 10 ವರ್ಷದವರೆಗೆ ವಿಸ್ತರಿಸುವ ಸೆರೆವಾಸ, 5 ಲಕ್ಷ ರೂ. ದಂಡ ವಿಧೇಯಕದಲ್ಲಿ ಪ್ರಸ್ತಾಪಿಸಲಾಗಿದೆ. ಈಗಾಗಲೇ ಸುಗ್ರೀವಾಜ್ಞೆ ಮೂಲಕ ಜಾರಿಗೊಳಿಸಲಾಗಿದೆ  ಎಂದು ಹೇಳಿದರು.

ಸಮಾಜದ ಸ್ವಾಸ್ಥ್ಯ ಹಾಳು ಮಾಡುವುದನ್ನು ತಪ್ಪಿಸುವ ಉದ್ದೇಶವಿದೆ ಎಂದು ಹೇಳಿ ಈ ವಿಧೇಯಕಕ್ಕೆ ಒಪ್ಪಿಗೆ ನೀಡುವಂತೆ ಕೋರಿದರು. ಆಗ ಸಭಾಧ್ಯಕ್ಷ ಯು.ಟಿ.ಖಾದರ್‌ರವರು ಮತಕ್ಕೆ ಹಾಕಿದ ಬಳಿಕ ವಿಧೇಯಕಕ್ಕೆ ಅನುಮೋದನೆ ದೊರೆಯಿತು. 

Tags:    

Similar News