ಬಿಬಿಎಂಪಿಯನ್ನು 7 ಭಾಗ ಮಾಡಲು ಹೊರಟ ಸರ್ಕಾರವನ್ನು ಘಜ್ನಿ, ಘೋರಿಗೆ ಹೋಲಿಸಿದ ಕುಮಾರಸ್ವಾಮಿ

ಸಂಪದ್ಭರಿತ ಬೆಂಗಳೂರು ನಗರವನ್ನು ಲೂಟಿ ಮಾಡಲು ಈಗೊಬ್ಬ ಘಜ್ನಿ, ಘೋರಿ ವಕ್ಕರಿಸಿದ್ದಾನೆ. ಅವನು ನಗರದ ಲೂಟಿಗೆ 7 ದಾರಿ ಹುಡುಕುತ್ತಿದ್ದಾನೆ ಎಂದು ಕೇಂದ್ರ ಸಚಿವ ಕುಮಾರಸ್ವಾಮಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.;

Update: 2025-03-11 10:00 GMT

ಕುಮಾರಸ್ವಾಮಿ 

ಬಿಬಿಎಂಪಿಯನ್ನು ಏಳು ಭಾಗ ಮಾಡುವುದಕ್ಕೆ ಹೊರಟಿರುವ ರಾಜ್ಯ ಕಾಂಗ್ರೆಸ್ ಸರಕಾರದ ವಿರುದ್ಧ ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ ಅವರು ಹರಿಹಾಯ್ದಿದ್ದಾರೆ. ಅಲ್ಲದೆ, ಸರ್ಕಾರವನ್ನು ಅವರು ಭಾರತಕ್ಕೆ ದಾಳಿ ಮಾಡಿದ್ದ ಘಜ್ನಿ ಹಾಗೂ ಘೋರಿ ಮಹಮ್ಮದ್​ಗೆ ಹೋಲಿಸಿದ್ದಾರೆ.

ಸಂಪದ್ಭರಿತ ಬೆಂಗಳೂರು ನಗರವನ್ನು ಲೂಟಿ ಮಾಡಲು ಈಗೊಬ್ಬ ಘಜ್ನಿ, ಘೋರಿ ವಕ್ಕರಿಸಿದ್ದಾನೆ. ಅವನು ನಗರದ ಲೂಟಿಗೆ 7 ದಾರಿ ಹುಡುಕುತ್ತಿದ್ದಾನೆ ಎಂದು ಕುಮಾರಸ್ವಾಮಿ ಆಕ್ರೋಶ  ವ್ಯಕ್ತಪಡಿಸಿದ್ದಾರೆ.

ಈ ಬಗ್ಗೆ ಮಾಧ್ಯಮ ಹೇಳಿಕೆ ಬಿಡುಗಡೆ ಮಾಡಿರುವ ಅವರು, ಬಿಬಿಎಂಪಿಯನ್ನು ಛಿದ್ರ ಮಾಡುವ ಸರಕಾರದ ನಡೆಯನ್ನು ಟೀಕಿಸಿದರು. ಹೋಳು ಮಾಡುವುದು, ಒಡೆದಾಳುವುದರಲ್ಲಿ ಕಾಂಗ್ರೆಸ್ಸಿಗೆ ಕಾಂಗ್ರೆಸ್ಸೇ ಸಾಟಿ.  75 ವರ್ಷದಿಂದ ಇದನ್ನೇ ಮಾಡಿದೆ ಈಗಲೂ ಅದನ್ನೇ  ಮುಂದುವರಿಸಿದೆ ಎಂದು ಅವರು ತಿಳಿಸಿದರು.  

ಕಾಂಗ್ರೆಸ್ ನೀತಿಯೇ ಒಡೆದು ಆಳುವುದು. ಅಂದು ಅಖಂಡ ಭಾರತವನ್ನು ಹೋಳು ಮಾಡಿತ್ತು. ಇಂದು ಬೆಂಗಳೂರು ಮಹಾನಗರವನ್ನು ಹೋಳು ಮಾಡುತ್ತಿದೆ. ನಾಡಪ್ರಭು ಕೆಂಪೇಗೌಡರ ಪರಂಪರೆಯನ್ನು ಬೇರುಸಹಿತ ಹಾಳು ಮಾಡುವುದೇ ಕಾಂಗ್ರೆಸ್ ಸರಕಾರದ ದುರುದ್ದೇಶವಾಗಿದೆ. ಇವರಿಗೆ ಗ್ರೇಟರ್‌ ಬೆಂಗಳೂರು ಎನ್ನುವುದು ಹೆಸರಿಗಷ್ಟೇ ಎಂದು ಅವರು ತಿಳಿಸಿದರು. 

ಬಿಬಿಎಂಪಿ ವಿಭಜನೆ ಅಧಿಕಾರ ಅಭಿವೃದ್ಧಿ ವಿಕೇಂದ್ರೀಕರಣವಲ್ಲ. ಇದು ಲೂಟಿಯ ವಿಕೇಂದ್ರೀಕರಣ ಎಂದು ಕುಮಾರಸ್ವಾಮಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. 

Tags:    

Similar News