ಹಿಜಾಬ್ ವಿವಾದ | ಪರೀಕ್ಷೆ ಬಂದರೂ ಸ್ಪಷ್ಟ ನಿರ್ಧಾರ ಕೈಗೊಳ್ಳದ ಸರ್ಕಾರ: ಮುಂದುವರಿದ ಗೊಂದಲ
ಪರೀಕ್ಷೆ ಆರಂಭಕ್ಕೆ ಕೇವಲ 20 ದಿನಗಳು(ಮಾರ್ಚ್ 1 ರಿಂದ ದ್ವಿತೀಯ ಪಿಯು ಪರೀಕ್ಷೆ) ಇದ್ದರೂ, ರಾಜ್ಯ ಸರ್ಕಾರ ಹಿಜಾಬ್ ವಿಷಯದಲ್ಲಿ ಇನ್ನೂ ಚರ್ಚೆ ನಡೆಸುವ ತಯಾರಿಯಲ್ಲೇ ಇದೆ.;
ದ್ವಿತೀಯ ಪಿಯು ಮತ್ತು ಎಸ್‌ಎಸ್‌ಎಲ್‌ಸಿ ಪರೀಕ್ಷೆಗಳು ಸಮೀಪಿಸುತ್ತಿದ್ದಂತೆ ʼಹಿಜಾಬ್ʼಗೊಂದಲ ಮತ್ತೆ ಎದುರಾಗಿದೆ.
ಪರೀಕ್ಷೆಗಳ ಹೊತ್ತಲ್ಲಿ ಕಳೆದ ಮೂರ್ನಾಲ್ಕು ವರ್ಷಗಳಿಂದ ಹಿಜಾಬ್ ಗಲಾಟೆ ಮತ್ತೆ ಮತ್ತೆ ತಲೆ ಎತ್ತುತ್ತಿರುವ ಹಿನ್ನೆಲೆಯಲ್ಲಿ ಪಿಯು ಕಾಲೇಜು ಮತ್ತು ಪ್ರೌಢಶಾಲೆಗಳ ಮುಖ್ಯಸ್ಥರಿಗೆ ಪರೀಕ್ಷೆಗಳು ಸಮೀಪಿಸುತ್ತಿದ್ದಂತೆ ಗೊಂದಲ ಹೆಚ್ಚುತ್ತಿದೆ. ಪರೀಕ್ಷೆ ವೇಳೆ ಹಿಜಾಬ್ ಧರಿಸಿ ಬರುವ ಮಕ್ಕಳಿಗೆ ಇತರರಿಂದ ತೊಂದರೆಯಾಗದಂತೆ ಪರೀಕ್ಷೆಗೆ ಅವಕಾಶ ಕೊಡುವುದೊ ಅಥವಾ ಪ್ರಕರಣ ಸುಪ್ರೀಂಕೊರ್ಟಿನಲ್ಲಿ ವಿಚಾರಣಾ ಹಂತದಲ್ಲಿರುವುದರಿಂದ ಹಿಜಾಬ್ ಧರಿಸದೇ ಬರುವಂತೆ ಹೇಳುವುದೋ? ಎಂಬ ಗೊಂದಲ ಶಿಕ್ಷಣ ಸಂಸ್ಥೆಗಳದ್ದು. ಈ ಬಗ್ಗೆ ಕೋರ್ಟಿನ ಸೂಚನೆಯನ್ವಯ ಶಿಕ್ಷಣ ಸಂಸ್ಥೆಗಳಿಗೆ ಮಾರ್ಗದರ್ಶನ ಮಾಡಬೇಕಿದ್ದ ಸರ್ಕಾರ ಮತ್ತು ಶಿಕ್ಷಣ ಇಲಾಖೆ ಕೂಡ ಯಾವುದೇ ಸುತ್ತೋಲೆ ಕಳಿಸದೇ ಕೈಕಟ್ಟಿ ಕುಳಿತಿದೆ.
ಈ ಗೊಂದಲದ ಕುರಿತು ಸ್ವತಃ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯ ಸಚಿವರೇ ಮಾಧ್ಯಮಗಳಿಗೆ ಮಾಹಿತಿ ನೀಡಿದ್ದು, ಹಿಜಾಬ್ ಕುರಿತ ಪ್ರಕರಣ ಸದ್ಯ ಸುಪ್ರೀಂಕೋರ್ಟಿನಲ್ಲಿ ವಿಚಾರಣೆ ಹಂತದಲ್ಲಿದೆ. ಅಲ್ಲದೆ, ಸರ್ಕಾರ ಕೂಡ ಆ ವಿಷಯದಲ್ಲಿ ಯಾವುದೇ ನಿರ್ಧಾರ ಕೈಗೊಂಡಿಲ್ಲ ಎಂದು ಸಚಿವ ಮಧು ಬಂಗಾರಪ್ಪ ಹೇಳಿದ್ದಾರೆ.
ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡುತ್ತಾ ಮಧು ಬಂಗಾರಪ್ಪ, ಹಿಜಾಬ್ ವಿಷಯ ಬಗ್ಗೆ ಗೃಹ ಸಚಿವ ಡಾ. ಜಿ. ಪರಮೇಶ್ವರ ಅವರೊಂದಿಗೆ ಚರ್ಚಿಸಿದ ಬಳಿಕ ಸ್ಪಷ್ಟತೆ ನೀಡಲು ಸಾಧ್ಯ ಎಂದು ಹೇಳಿದ್ದಾರೆ.
ಆದರೆ, ಮಂಗಳವಾರ ಮಾಧ್ಯಮಗಳ ಜೊತೆಗೆ ಮಾತನಾಡಿರುವ ಗೃಹ ಸಚಿವ ಡಾ ಜಿ.ಪರಮೇಶ್ವರ್, ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ ಹಿಜಾಬ್ ಗೆ ಅವಕಾಶ ನೀಡುವ ವಿಚಾರವಾಗಿ ಸುದೀರ್ಘ ಚರ್ಚೆ ಮಾಡುತ್ತೇವೆ. ಇನ್ನು ಒಂದು ತಿಂಗಳು ಸಮಯವಿದೆ. ನೋಡೋಣ ಚರ್ಚೆ ಮಾಡುತ್ತೇವೆ ಎಂದು ಹೇಳಿದ್ದಾರೆ.
ಅಂದರೆ; ಪರೀಕ್ಷೆ ಆರಂಭಕ್ಕೆ ಕೇವಲ 20 ದಿನಗಳು(ಮಾರ್ಚ್ 1 ರಿಂದ ದ್ವಿತೀಯ ಪಿಯು ಪರೀಕ್ಷೆ) ಇದ್ದರೂ, ರಾಜ್ಯ ಸರ್ಕಾರ ಹಿಜಾಬ್ ವಿಷಯದಲ್ಲಿ ಇನ್ನೂ ಚರ್ಚೆ ನಡೆಸುವ ತಯಾರಿಯಲ್ಲೇ ಇದೆ. ಸಹಜವಾಗಿ ಸರ್ಕಾರದ ಈ ಧೋರಣೆ ಶಿಕ್ಷಣ ಸಂಸ್ಥೆಗಳ ಮುಖ್ಯಸ್ಥರಿಗೆ ತಲೆನೋವಾಗಿ ಪರಿಣಮಿಸಿದೆ.
ಏನಿದು ಹಿಜಾಬ್ ವಿವಾದ?
ಉಡುಪಿಯಲ್ಲಿ 2021 ರಂದು ನಡೆದ ಹಿಜಾಬ್ ಪ್ರಕರಣ ಇಡೀ ರಾಷ್ಟ್ರ ಮಟ್ಟದಲ್ಲಿ ಸುದ್ದಿಯಾಗಿತ್ತು. ಹಿಜಾಬ್ ಧರಿಸಿ ಉಡುಪಿಯ ಸರ್ಕಾರಿ ಪಿಯು ಕಾಲೇಜಿಗೆ ಬಂದ 6 ವಿದ್ಯಾರ್ಥಿನಿಯರನ್ನು ತರಗತಿಗೆ ಪ್ರವೇಶ ನಿರಾಕರಿಸಿ, ಕಾಲೇಜಿನ ಗೇಟಿನಿಂದಲೇ ಹೊರಗೆ ನಿಲ್ಲಿಸಲಾಗಿತ್ತು. ಕಾಲೇಜು ಪ್ರಾಂಶುಪಾಲರ ಈ ನಡೆ ಹಿಂದೂ ಮತ್ತು ಮುಸ್ಲಿಂ ಸಂಘಟನೆಗಳ ನಡುವೆ ಸಂಘರ್ಷಕ್ಕೆ ಕಾರಣವಾಗಿತ್ತು.
ಹಿಜಾಬ್ ವಿವಾದ ಬಳಿಕ ಶಿವಮೊಗ್ಗ ಸೇರಿದಂತೆ ರಾಜ್ಯದ ವಿವಿಧ ಭಾಗಗಳಲ್ಲಿ ಭಾರೀ ಪ್ರತಿಭಟನೆ, ಸಂಘರ್ಷಕ್ಕೆ ಕಾರಣವಾಗಿತ್ತು. ಶಿವಮೊಗ್ಗದಲ್ಲಿ ಲಾಠಿ ಚಾರ್ಜ್ ನಡೆದು ಗಲಭೆ ನಿಯಂತ್ರಣಕ್ಕೆ ಪೊಲೀಸರು ಕರ್ಫ್ಯೂ ಹೇರಿದರು. ಆ ಮೂಲಕ ಪ್ರಕರಣ ದೇಶಮಟ್ಟದಲ್ಲಿ ಸುದ್ದಿಯಾಯಿತು. ಸಮಾನತೆ, ಸಮಗ್ರತೆ ಮತ್ತು ಸಾರ್ವಜನಿಕ ಸುವ್ಯವಸ್ಥೆಗೆ ಧಕ್ಕೆ ತರುವಂತಹ ಎಲ್ಲಾ ಧಾರ್ಮಿಕ ಬಟ್ಟೆಗಳನ್ನು ಶಾಲಾ-ಕಾಲೇಜುಗಳಲ್ಲಿ ಧರಿಸುವುದನ್ನು ನಿಷೇಧಿಸಲಾಗಿದೆ ಎಂದು ಹಿಜಾಬ್ ವಿವಾದ ಕುರಿತು 5 ಫೆಬ್ರವರಿ 2022 ರಂದು ಕರ್ನಾಟಕ ಸರ್ಕಾರವು ಆದೇಶ ಹೊರಡಿಸಿತು.
ಕರ್ನಾಟಕ ಹೈಕೋರ್ಟ್‌ನಲ್ಲಿ ಸರ್ಕಾರದ ಈ ಆದೇಶವನ್ನೂ ಪ್ರಶ್ನಿಸಲಾಗಿತ್ತು. ಮುಸ್ಲಿಂ ವಿದ್ಯಾರ್ಥಿನಿಯರು, ಹಿಜಾಬ್ ತಮ್ಮ ಧಾರ್ಮಿಕ ನಂಬಿಕೆಯ ಭಾಗ ಎಂದು, ಅದನ್ನು ಧರಿಸದಂತೆ ನಿಷೇಧಿಸುವುದು ಮೂಲಭೂತ ಹಕ್ಕಿನ ಉಲ್ಲಂಘನೆ ಎಂದು ವಾದಿಸಿದ್ದರು. ಸದ್ಯ ಪ್ರಕರಣ ಸುಪ್ರೀಂಕೋರ್ಟ್‌ನಲ್ಲಿ ವಿಚಾರಣಾ ಹಂತದಲ್ಲಿದೆ.