Hampi Horror: ಇಸ್ರೇಲ್​ ಮಹಿಳೆ ಮೇಲೆ ಅತ್ಯಾಚಾರ ಪ್ರಕರಣ; ಹೋಮ್​ ಸ್ಟೇ, ರೆಸಾರ್ಟ್​ಗಳಿಗೆ ಸರ್ಕಾರದಿಂದ ಮಾರ್ಗಸೂಚಿ

ರಾಜ್ಯದ ಪ್ರವಾಸಿ ತಾಣಗಳಲ್ಲಿರುವ ಹೋಂ ಸ್ಟೇಗಳು, ರೆಸಾರ್ಟ್‌ಗಳು ಮತ್ತು ಹೋಟೆಲ್‌ಗಳು, ಎಲ್ಲಾ ಪ್ರವಾಸಿಗರಿಗೆ ವಿಶೇಷವಾಗಿ ವಿದೇಶಿ ಪ್ರವಾಸಿಗರಿಗಾಗಿ ಸೂಕ್ತ ಭದ್ರತಾ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಸರ್ಕಾರ ತನ್ನ ಆದೇಶದಲ್ಲಿ ಹೇಳಿದೆ.;

Update: 2025-03-11 12:42 GMT

ಎಐ ರಚಿತ ಚಿತ್ರ.

ಮಾರ್ಚ್ 6ರಂದು ಹಂಪಿ ಸಮೀಪದ ಸಾಣಾಪುರ ಕೆರೆ ಬಳಿಕ ಒಡಿಶಾದ ಪ್ರವಾಸಿಗನ ಹತ್ಯೆ ಮತ್ತು ಇಸ್ರೇಲಿ ಮಹಿಳೆ ಹಾಗೂ ಹೋಂ ಸ್ಟೇ ಮಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣದ ಹಿನ್ನೆಲೆಯಲ್ಲಿ, ಕರ್ನಾಟಕ ಸರ್ಕಾರ ಮಂಗಳವಾರ ರಾಜ್ಯದ ಹೋಂ ಸ್ಟೇ, ರೆಸಾರ್ಟ್ ಮತ್ತು ಹೋಟೆಲ್‌ಗಳಿಗೆ ಹೊಸ ಮಾರ್ಗಸೂಚಿಗಳನ್ನು ಪ್ರಕಟಿಸಿದೆ. ಅತಿಥಿಗಳ ಭದ್ರತೆಗಾಗಿ ಕಟ್ಟುನಿಟ್ಟಾದ ಭದ್ರತಾ ಕ್ರಮಗಳನ್ನು ಅನುಸರಿಸಲು ಕಡ್ಡಾಯವಾಗಿ ಸೂಚಿಸಲಾಗಿದೆ.

'ಸಾಣಾಪುರದಲ್ಲಿ ನಡೆದ ಘಟನೆ ಅತೀ ದುಃಖದ ಮತ್ತು ಖೇದಕರ ಎಂದು ಸರ್ಕಾರ ಹೇಳಿದ್ದು, ಭವಿಷ್ಯದಲ್ಲಿ ಇಂತಹ ಘಟನೆಗಳು ಮರುಕಳಿಸದಂತೆ ನೋಡಿಕೊಳ್ಳುವುದಕ್ಕೆ ಈ ಹೊಸ ಮಾರ್ಗಸೂಚಿಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು,'' ಎಂದು ತಿಳಿಸಿದೆ.

ರಾಜ್ಯದ ಪ್ರವಾಸಿ ತಾಣಗಳಲ್ಲಿರುವ ಹೋಂ ಸ್ಟೇಗಳು, ರೆಸಾರ್ಟ್‌ಗಳು ಮತ್ತು ಹೋಟೆಲ್‌ಗಳು, ಎಲ್ಲಾ ಪ್ರವಾಸಿಗರಿಗೆ ವಿಶೇಷವಾಗಿ ವಿದೇಶಿ ಪ್ರವಾಸಿಗರಿಗಾಗಿ ಸೂಕ್ತ ಭದ್ರತಾ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಸರ್ಕಾರ ತನ್ನ ಆದೇಶದಲ್ಲಿ ಹೇಳಿದೆ.

ರೆಸಾರ್ಟ್​​ನಲ್ಲಿ ತಂಗುವ ಪ್ರವಾಸಿಗರನ್ನು, ಹಳ್ಳಿಗಳ ಹೊರಭಾಗ, ನಿರ್ಜನ ಪ್ರದೇಶಗಳು ಅಥವಾ ಕಾಡು ಪ್ರದೇಶಗಳಿಗೆ ಕರೆದೊಯ್ಯುವ ಮೊದಲು ಸಂಬಂಧಿತ ಪೊಲೀಸ್ ಠಾಣೆಯ ಅನುಮತಿ ಪಡೆಯಬೇಕು ಎಂದು ಮಾರ್ಗಸೂಚಿಯಲ್ಲಿ ಸ್ಪಷ್ಟಪಡಿಸಲಾಗಿದೆ.

ಪೊಲೀಸ್ ಅಥವಾ ಅರಣ್ಯ ಇಲಾಖೆಯ ಅನುಮತಿಯಿಲ್ಲದೆ ಪ್ರವಾಸಿಗರನ್ನು ನಿರ್ಜನ ಪ್ರದೇಶ, ಕಾಡು ಪ್ರದೇಶ ಅಥವಾ ನಗರ ಹೊರವಲಯಕ್ಕೆ ಕರೆದೊಯ್ದರೆ ಹೋಂ ಸ್ಟೇ ಮಾಲಕರೇ ಜವಾಬ್ದಾರರು. ಗ್ಯಾಂಗ್‌ರೇಪ್, ದರೋಡೆ, ಅಥವಾ ಕಾಡುಪ್ರಾಣಿಗಳ ದಾಳಿ ನಡೆದರೆ ಅವರೇ ಕಾನೂನು ಕ್ರಮ ಎದುರಿಸಬೇಕಾಗುತ್ತದೆ ಎಂದು ಸರ್ಕಾರದ ಆದೇಶದಲ್ಲಿ ತಿಳಿಸಲಾಗಿದೆ.

ಜಿಲ್ಲಾಧಿಕಾರಿಗಳೇ ಹೊಣೆ

ಹೋಮ್​ ಸ್ಟೇ, ಹೋಟೆಲ್​ಗಳ ಬಗ್ಗೆ ನಿಗಾ ವಹಿಸುವ ಹೊಣೆಗಾರಿಕೆಯನ್ನು ಸರ್ಕಾರ ಜಿಲ್ಲಾಧಿಕಾರಿಗಳಿಗೆ ನೀಡಿದೆ. ಹೋಂ ಸ್ಟೇ, ಹೋಟೆಲ್, ಮತ್ತು ರೆಸಾರ್ಟ್‌ ಮಾಲಕರು ಸೈಟ್ ವಿಸಿಟ್ ಯೋಜನೆಗಳ ಪಟ್ಟಿ ಜಿಲ್ಲಾಧಿಕಾರಿಗಳಿಗೆ ನೀಡಬೇಕು ಎಂದು ಅಧಿಸೂಚನೆಯಲ್ಲಿ ಹೇಳಲಾಗಿದೆ.

ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಮೂರು ಆರೋಪಿಗಳನ್ನು ಬಂಧಿಸಲಾಗಿದೆ. ಹೋಂ ಸ್ಟೇ ಮಾಲಕಿ ಪ್ರವಾಸಿಗರನ್ನು ತುಂಗಭದ್ರಾ ಕಾಲುವೆ ಬಳಿ ನಕ್ಷತ್ರ ವೀಕ್ಷಣೆಗೆ ಕರೆದೊಯ್ದ ವೇಳೆ ಬೈಕ್ ಸವಾರರ ಗುಂಪು ದಾಳಿ ನಡೆಸಿತ್ತು

Tags:    

Similar News