Karnataka Budget 2025 | ರಾಜ್ಯ ಬಜೆಟ್:‌ ಪರಿಸರ ಮತ್ತು ವನ್ಯಜೀವಿ ವಲಯದ ನಿರೀಕ್ಷೆಗಳೇನು?

ಪಶ್ಚಿಮಘಟ್ಟ ಸಾಲು ಮತ್ತು ಅಪರೂಪದ ವನ್ಯಜೀವಿಗಳನ್ನು ಹೊಂದಿರುವ ಕರ್ನಾಟಕ, ಅದೇ ಹೊತ್ತಿಗೆ ಅತಿ ಹೆಚ್ಚು ಮಾನವ-ವನ್ಯಜೀವಿ ಸಂಘರ್ಷಕ್ಕೂ ಸಾಕ್ಷಿಯಾಗಿದೆ. ಅರಣ್ಯ ನಾಶದಲ್ಲೂ ದೇಶದಲ್ಲೇ ಮುಂಚೂಣಿಯಲ್ಲಿದೆ. ಆ ಹಿನ್ನೆಲೆಯಲ್ಲಿ ರಾಜ್ಯದ ಬಜೆಟ್‌ನಲ್ಲಿ ಪರಿಸರ- ವನ್ಯಜೀವಿ ವಲಯಕ್ಕೆ ಹೆಚ್ಚಿನ ನಿರೀಕ್ಷೆಗಳಿವೆ.;

Update: 2025-03-06 13:05 GMT

ಈ ಬಾರಿಯ ಬಜೆಟ್‌ನಲ್ಲಿ ಪರಿಸರ ಮತ್ತು ಅರಣ್ಯ ವಲಯಕ್ಕಾಗಿ ಬಜೆಟ್‌ನಲ್ಲಿ ವಿಶೇಷ ಅನುದಾನಕ್ಕಾಗಿ ನಾವು ಕೋರಿದ್ದೆವು. ಅರಣ್ಯ ಸಚಿವರಲ್ಲಿ ಈ ಬಗ್ಗೆ ಬೇಡಿಕೆಯನ್ನೂ ಇಟ್ಟಿದ್ದೆವು. ಅವರು ಅದಕ್ಕೆ ಪೂರಕವಾಗಿ ಸ್ಪಂದಿಸಿದ್ದಾರೆ. ಆ ಹಿನ್ನೆಲೆಯಲ್ಲಿ ಈ ಬಾರಿ ಪರಿಸರ ಮತ್ತು ವನ್ಯಜೀವಿ ವಲಯದಲ್ಲಿ ಕೆಲಸ ಮಾಡುತ್ತಿರುವವರಿಗೆ ಬಜೆಟ್ ಮೇಲೆ ಹೆಚ್ಚಿನ ನಿರೀಕ್ಷೆಗಳೇ ಇವೆ.

ಯಾಕೆಂದರೆ ಪ್ರತಿ ಬಾರಿ ಪರಿಸರ ಮತ್ತು ಅರಣ್ಯ ಎಂದರೆ ಬಜೆಟ್‌ನಲ್ಲಿ ಕೊನೆಯ ಆದ್ಯತೆ ಎಂಬುದು ರೂಢಿಯಾಗಿಹೋಗಿತ್ತು. ಆ ಹಿನ್ನೆಲೆಯಲ್ಲಿ ಈ ಬಾರಿ ಹೆಚ್ಚಿನ ಅನುದಾನ ಹಂಚಿಕೆಯ ಅಗತ್ಯ ಮತ್ತು ಅನಿವಾರ್ಯತೆಯನ್ನು ನಾವು ಅರಣ್ಯ ಸಚಿವರಿಗೆ ಮನವರಿಕೆ ಮಾಡಿದ್ದೆವು.

ಈಗ ಹಿಂದಿನಂತೆ ಪರಿಸರ ಮತ್ತು ಅರಣ್ಯ ವಲಯವನ್ನು ನಿರ್ಲಕ್ಷಿಸಲಾಗದು. ಹವಾಮಾನ ಬದಲಾವಣೆ ಮತ್ತು ತಾಪಮಾನ ಏರಿಕೆಯಿಂದಾಗಿ ನಾವು ಈಗ ನಮ್ಮ ಪರಿಸರಕ್ಕೆ ಹೆಚ್ಚಿನ ಗಮನ ಕೊಡಬೇಕಾದ, ಅದರ ರಕ್ಷಣೆಗೆ ಹೆಚ್ಚಿನ ಆರ್ಥಿಕ ಸಂಪನ್ಮೂಲ ವೆಚ್ಚ ಮಾಡಬೇಕಾದ ಅನಿವಾರ್ಯ ಪರಿಸ್ಥಿತಿ ಎದುರಾಗಿದೆ. ಹವಾಮಾನ ವೈಪರೀತ್ಯದಿಂದಾಗಿ ರೈತರು ಪರದಾಡುತ್ತಿದ್ದಾರೆ. ಜನಸಾಮಾನ್ಯರಿಗೂ ಅದರ ಬಿಸಿ ತಟ್ಟಿದೆ. ಆಹಾರ ಭದ್ರತೆ, ಜಲ ಭದ್ರತೆ ಮತ್ತು ಶುದ್ಧ ಗಾಳಿಯ ಖಾತರಿಗೂ ಈಗ ಬಿಕ್ಕಟ್ಟು ಎದುರಾಗಿದೆ. ಹಾಗಾಗಿ ಇನ್ನು ಮುಂದೆ ನಾವು ಪರಿಸರವನ್ನು ಉದಾಸೀನ ಮಾಡುವಂತಿಲ್ಲ; ಏನೋ ನಡೆಯುತ್ತೆ ಬಿಡು ಎಂಬ ಧೋರಣೆಯಿಂದ ನೋಡಲಾಗದು. ಈವರೆಗಿನ ನಮ್ಮ ಅಂತಹ ಉದಾಸೀನ ಧೋರಣೆಯಿಂದಾಗಿ ಈಗ ಅನುಭವಿಸುತ್ತಿದ್ದೇವೆ.

ಹಾಗಾಗಿ ಸರ್ಕಾರ ಈಗ ಪರಿಸರ, ವನ್ಯಜೀವಿ, ಮತ್ತು ಅರಣ್ಯ ಸೇರಿದಂತೆ ಒಟ್ಟೂ ರಾಜ್ಯದ ಪರಿಸರ ಸಮತೋಲನ ಕಾಯಲು ಹೆಚ್ಚಿನ ಅನುದಾನವನ್ನು ಘೋಷಿಸಲೇಬೇಕಿದೆ. ಯಾಕೆಂದರೆ, ವನ್ಯಜೀವಿ ಮತ್ತು ಅರಣ್ಯ ಸಂರಕ್ಷಣೆಗಾಗಿ ಹೆಚ್ಚಿನ ವೆಚ್ಚ ಮಾಡಬೇಕಾದ ಪರಿಸ್ಥಿತಿ ಎದುರಾಗಿದೆ. ಆದರೆ, ಆ ಕಾರ್ಯಕ್ಕೆ ಬೇಕಾದ ಅಗತ್ಯ ಸಿಬ್ಬಂದಿ ನೇಮಕಾತಿ ಆಗಬೇಕಿದೆ. ಯಾಕೆಂದರೆ, ಈಗ ಸದ್ಯಕ್ಕೆ ಇಲಾಖೆಯಲ್ಲಿ ಸಿಬ್ಬಂದಿ ಕೊರತೆ ಹೆಚ್ಚಾಗಿದೆ. ಸದ್ಯದ ಸ್ಥಿತಿಯಲ್ಲಿ ಕರ್ನಾಟಕ ಅರಣ್ಯ ಇಲಾಖೆಯಲ್ಲಿ ಸಿಬ್ಬಂದಿ ಕೊರತೆ ಶೇ.40ರಷ್ಟಿದ್ದು, ಪಶ್ಚಿಮಘಟ್ಟ ಮತ್ತು ಅಪರೂಪದ ವನ್ಯಜೀವಿ ಸಂಪತ್ತನ್ನು ಹೊಂದಿರುವ ರಾಜ್ಯದಲ್ಲಿ ಈ ಮಟ್ಟಿಗಿನ ಸಿಬ್ಬಂದಿ ಕೊರತೆ ಆತಂಕಕಾರಿ. ಹಾಗಾಗಿ ಸಿಬ್ಬಂದಿ ಕೊರತೆ ನೀಗಲೂ ಕೂಡಲೇ ನೇಮಕಾತಿ ಆಗಬೇಕಿದೆ. ಆಗ ವೇತನ ವೆಚ್ಚ ಅನಿವಾರ್ಯವಾಗಿ ಏರಿಕೆಯಾಗಲಿದೆ. ಈಗಲೇ ಇಲಾಖೆಯ ಒಟ್ಟು ಅನುದಾನದಲ್ಲಿ ಶೇ.70ರಷ್ಟು ಸಿಬ್ಬಂದಿ ವೇತನಕ್ಕೇ ವೆಚ್ಚವಾಗುತ್ತಿದೆ. ಹಾಗಾಗಿ ಅರಣ್ಯ ಮತ್ತು ವನ್ಯಜೀವಿ ಸಂರಕ್ಷಣೆ, ಸಂವರ್ಧನೆ, ಮಾನವ-ವನ್ಯಜೀವಿ ಸಂಘರ್ಷ ಪರಿಸ್ಥಿತಿ ನಿರ್ವಹಣೆ ಸೇರಿದಂತೆ ಉಳಿದ ಮೂಲ ಚಟುವಟಿಕೆಗಳಿಗೆ ಕೇವಲ ಶೇ.30ರಷ್ಟು ಅನುದಾನ ಮಾತ್ರ ಬಳಸುವಂತಹ ನಿರಾಶಾದಾಯಕ ಪರಿಸ್ಥಿತಿ ಇದೆ.

ಆ ಹಿನ್ನೆಲೆಯಲ್ಲಿ ಈ ಬಾರಿ ವನ್ಯಜೀವಿ ಮಂಡಳಿಯ ಅಧ್ಯಕ್ಷರೂ ಆಗಿರುವ ಮುಖ್ಯಮಂತ್ರಿಗಳು ವನ್ಯಜೀವಿ ಮತ್ತು ಅರಣ್ಯ ವಲಯದ ಈ ಪರಿಸ್ಥಿತಿಯನ್ನು ಸುಧಾರಿಸಲು ಈ ಬಾರಿಯ ಬಜೆಟ್ನಲ್ಲಿ ಆ ಇಲಾಖೆಗೆ ಹೆಚ್ಚಿನ ಅನುದಾನವನ್ನು ನೀಡಲೇಬೇಕಾಗಿದೆ. ಕೇಂದ್ರ ಸರ್ಕಾರ ಕೂಡ ಈ ಬಾರಿ ತನ್ನ ಬಜೆಟ್ನಲ್ಲಿ ಪರಿಸರ ಮತ್ತು ವನ್ಯಜೀವಿ ಸಂರಕ್ಷಣೆಗೆ ಶೇ.9ರಷ್ಟು ಅನುದಾನ ಹೆಚ್ಚಳ ಮಾಡಿದೆ. ಹಾಗಾಗಿ ರಾಜ್ಯ ಸರ್ಕಾರ ಕೂಡ ಕನಿಷ್ಟ ಶೇ.20ರಷ್ಟು ಅನುದಾನ ಹಂಚಿಕೆಯನ್ನು ಹೆಚ್ಚಿಸಬೇಕು ಎಂಬುದು ನಮ್ಮ ಹಕ್ಕೊತ್ತಾಯ.

ಅಲ್ಲದೆ, ಮಾನವ- ವನ್ಯಜೀವಿ ಸಂಘರ್ಷದ ಕುರಿತು ಅಧ್ಯಯನ ನಡೆಸಿ ವರದಿ ಸಲ್ಲಿಸಲು ರಚಿಸಲಾಗಿದ್ದ ತಜ್ಞರ ಸಮಿತಿ ಕೂಡ ಆನೆ ದಾಳಿ ಸೇರಿದಂತೆ ವಿವಿಧ ವನ್ಯಜೀವಿ ದಾಳಿಗಳನ್ನು ತಡೆಯಲು, ಮಾನವ- ಕಾಡುಪ್ರಾಣಿ ಸಂಘರ್ಷ ತಡೆಯಲು ಸರ್ಕಾರ ಕೈಗೊಳ್ಳಬೇಕಿರುವ ಕ್ರಮಗಳ ಕುರಿತು ಸರ್ಕಾರಕ್ಕೆ ಶಿಫಾರಸು ಮಾಡಿದೆ. ಆ ಸಮಿತಿಯ ವರದಿಯನ್ನು ಜಾರಿಗೆ ತರಲು ರೈಲ್ವೆ ಬ್ಯಾರಿಕೇಡ್, ಇಪಿಟಿ(ಆನೆ ತಡೆ ತೋಡು) ಮಾಡಬೇಕು, ಟೆಂಟೆಕಲ್ ಫೆನ್ಸಿಂಗ್ ಮಾಡಬೇಕು. ಅದೆಲ್ಲಾ ಮಾಡಬೇಕು ಎಂದರೆ ಅದಕ್ಕೆ ಹಣ ಬೇಕು. ವನ್ಯಜೀವಿ ದಾಳಿಗೊಳಗಾದ ಜನರಿಗೆ, ಬೆಳೆಗಳಿಗೆ ಪ್ರತಿ ವರ್ಷ ಲಕ್ಷಾಂತರ ರೂಪಾಯಿ ಹಣವನ್ನು ಸರ್ಕಾರ ಪರಿಹಾರ ರೂಪದಲ್ಲಿ ನೀಡುತ್ತಿದೆ. ಆದರೆ, ಹೀಗೆ ಆನೆ ಸೇರಿದಂತೆ ವನ್ಯಜೀವಿ ತಡೆ ಬೇಲಿ, ತೋಡು ವ್ಯವಸ್ಥೆಯನ್ನು ಸಮರ್ಪಕವಾಗಿ ಸಮರೋಪಾದಿಯಲ್ಲಿ ಜಾರಿಗೆ ತಂದರೆ ಅಂತಹ ವೆಚ್ಚಗಳಿಗೂ ಕಡಿವಾಣ ಬೀಳಲಿದೆ. ಮಾನವ- ವನ್ಯಜೀವಿ ಸಂಘರ್ಷ ಕೂಡ ಕಡಿಮೆಯಾಗಬಹುದು.

ಹಾಗಾಗಿ, ಸರ್ಕಾರ ಈ ಬಾರಿ ಪರಿಸರ ಮತ್ತು ವನ್ಯಜೀವಿ ವಲಯಕ್ಕೆ ಕನಿಷ್ಟ ಈ ಬಾರಿಯಾದರೂ ಹೆಚ್ಚಿನ ಹಣಕಾಸು ಅನುದಾನ ನೀಡಬೇಕು. ಕೇವಲ ಐಟಿ – ಬಿಟಿ, ನಗರಾಭಿವೃದ್ಧಿಯಿಂದಲೇ ಕರ್ನಾಟಕದ ಸಮಗ್ರ ಅಭಿವೃದ್ಧಿ ಸಾಧಿಸುತ್ತೇವೆ ಎನ್ನಲಾಗದು. ಇಲ್ಲಿನ ಪರಿಸರ, ವಾತಾವರಣ, ಶುದ್ಧ ಗಾಳಿ ಮತ್ತು ನೀರು, ಸಂಘರ್ಷರಹಿತ ವನ್ಯಜೀವಿ- ಮಾನವ ಸಮಾಜದ ಸಹಜೀವನ ವ್ಯವಸ್ಥೆ ಮುಂತಾದವು ಕೂಡ ಒಂದು ಸಮೃದ್ಧ ರಾಜ್ಯ ನಿರ್ಮಾಣವಾಗಲು ಅತ್ಯಂತ ಅಗತ್ಯ. ಹಾಗಾಗಿ ಸರ್ಕಾರ ಇದನ್ನು ಅರಿತು ವನ್ಯಜೀವಿ ಮತ್ತು ಪರಿಸರ ವಲಯಕ್ಕೆ ಹೆಚ್ಚಿನ ಅನುದಾನ ನೀಡುತ್ತದೆ ಎಂಬ ನಿರೀಕ್ಷೆ ನಮ್ಮದು.

Tags:    

Similar News