Karnataka Bandh | ಕರ್ನಾಟಕ ಬಂದ್: ನಾಳೆ ಏನೆಲ್ಲ ಬಂದ್‌ ಆಗಲಿವೆ?

ಶಾಲಾ- ಕಾಲೇಜು ತರಗತಿ ಹಾಗೂ ಪರೀಕ್ಷೆಗಳನ್ನು ನಡೆಸುವುದಕ್ಕೆ ಸಂಬಂಧಿಸಿದಂತೆ ಸರ್ಕಾರದಿಂದ ಇನ್ನಷ್ಟೇ ಅಧಿಕೃತ ನಿರ್ಧಾರ ಪ್ರಕಟಗೊಳ್ಳಬೇಕಿದೆ.;

Update: 2025-03-21 11:12 GMT

ಕರ್ನಾಟಕ ಬಂದ್‌ 

ರಾಜ್ಯದಲ್ಲಿ ಮಹಾರಾಷ್ಟ್ರ ಏಕೀಕರಣ ಸಮಿತಿ(ಎಂಇಎಸ್‌) ನಡೆಸುತ್ತಿರುವ ಪುಂಡಾಟಿಕೆ, ಬಸ್ ಕಂಡಕ್ಟರ್ ಮೇಲೆ ಹಲ್ಲೆ, ಮೇಕೆದಾಟು ಯೋಜನೆ, ಕಲ್ಯಾಣ ಕರ್ನಾಟಕ ಅಭಿವೃದ್ಧಿ ಸೇರಿದಂತೆ ವಿವಿಧ ವಿಷಯಗಳಿಗೆ ಸಂಬಂಧಪಟ್ಟಂತೆ ನಾಳೆ(ಮಾ.22) ವಾಟಾಳ್ ನಾಗರಾಜ್ ನೇತೃತ್ವದ ಕನ್ನಡ ಒಕ್ಕೂಟ ಕರ್ನಾಟಕ ಬಂದ್‌ಗೆ ಕರೆ ಕೊಟ್ಟಿದೆ.

ಬೆಳಿಗ್ಗೆ 6 ರಿಂದ ಸಂಜೆ 6 ಗಂಟೆಯವರೆಗೆ ಸಂಪೂರ್ಣ ಬಂದ್‌ಗೆ ಕರೆ ನೀಡಲಾಗಿದೆ. ಆದರೆ, ಈ ಬಂದ್‌ಗೆ ಹಲವು ಸಂಘಟನೆ, ಒಕ್ಕೂಟಗಳು ಬೆಂಬಲ ಘೋಷಿಸಿದ್ದರೆ, ಇನ್ನೂ ಕೆಲವು ಸಂಘಟನೆಗಳು ಈವರೆಗೆ ಬೆಂಬಲ ಘೋಷಿಸಿಲ್ಲ. ಹಾಗಾಗಿ ಬಂದ್‌ ಪೂರ್ಣ ಯಶಸ್ವಿಯಾಗುವುದೆ? ಸಾರಿಗೆ, ಸಂಚಾರ, ಶಾಲಾ-ಕಾಲೇಜು, ಸರ್ಕಾರಿ ಕಚೇರಿಗಳು ಸಂಪೂರ್ಣ ಬಂದ್‌ ಆಗುವವೇ ಎಂಬ ಬಗ್ಗೆ ಈವರೆಗೂ ಸ್ಪಷ್ಟ ಸೂಚನೆ ಕಂಡುಬಂದಿಲ್ಲ.

ಕರ್ನಾಟಕ ರಾಜ್ಯರಸ್ತೆ ಸಾರಿಗೆ ಸಂಸ್ಥೆಯ ಕೆಲವು ಸಂಘಟನೆಗಳು ಬಂದ್‌ಗೆ ಬೆಂಬಲ ಘೋಷಿಸಿವೆ. ಆದರೆ, ಎಸ್‌ಎಸ್‌ಎಲ್‌ಸಿ ಮತ್ತಿತರ ಪ್ರಮುಖ ಪರೀಕ್ಷೆಗಳ ಹಿನ್ನೆಲೆಯಲ್ಲಿ ಸಾರಿಗೆ ಬಸ್‌ಗಳು, ಬಿಎಂಟಿಸಿ, ರೈಲು ಸಂಚಾರ ಎಂದಿನಂತೆ ಇರಲಿವೆ ಎನ್ನಲಾಗಿದೆ. ಓಲಾ, ಊಬರ್ ಚಾಲಕರು ಬಂದ್‌ಗೆ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಕೆಲ ಆಟೋ ಸಂಘಟನೆಗಳು ಬಂದ್‌ಗೆ ಬೆಂಬಲ ವ್ಯಕ್ತಪಡಿಸಿವೆ.

ಅಗತ್ಯ ಸೇವೆಗಳಾದ ಹಾಲು, ಔಷಧ, ದಿನಪತ್ರಿಕೆ, ತರಕಾರಿ ಸೇವೆಗಳು ಎಂದಿನಂತೆ ಇರಲಿವೆ.

ವಾಟಾಳ್ ನಾಗರಾಜ್, ನಗರ ಪೊಲೀಸ್ ಆಯುಕ್ತ ದಯಾನಂದ್ ಅವರನ್ನು ಭೇಟಿ ಮಾಡಿ ಬಂದ್‌ಗೆ ಅವಕಾಶ ನೀಡುವಂತೆ ಮನವಿ ಮಾಡಿದ್ದಾರೆ. ಕಮಿಷನರ್ ಮಾಡಿದ ಮನವಿಯನ್ನು ತಿರಸ್ಕರಿಸಿದ ವಾಟಾಳ್ ಬಂದ್ ಮಾಡಿಯೇ ತೀರುತ್ತೇವೆ ಎಂದು ಹೇಳಿದ್ದಾರೆ.

ಬಂದ್‌ಗೆ ನೈತಿಕ ಬೆಂಬಲ ಸೂಚಿಸಿರುವ ಹೋಟೆಲ್‌ ಮಾಲೀಕರ ಸಂಘ, ನಾಳೆ ತಮಗೆ ರಕ್ಷಣೆ ನೀಡಬೇಕೆಂದು ಪೊಲೀಸರಿಗೆ ಮನವಿ ಮಾಡಿದೆ ಎಂದು ಸಂಘದ ಅಧ್ಯಕ್ಷ ಜಿ.ಕೆ ಶೆಟ್ಟಿ ಹೇಳಿದ್ದಾರೆ. ಹೋಟೆಲ್ ಮಾಲೀಕರ ಸಂಘ ನೈತಿಕ ಬೆಂಬಲ ನೀಡುವುದಾಗಿ ಘೋಷಿಸಿದೆ.

ಚಲನಚಿತ್ರ ವಾಣಿಜ್ಯ ಮಂಡಳಿ ಬೆಂಬಲ

ಚಲನಚಿತ್ರ ವಾಣಿಜ್ಯಮಂಡಳಿ ಅಧ್ಯಕ್ಷ ನರಸಿಂಹಲು ಮಾತನಾಡಿ, ಕನ್ನಡ ಚಿತ್ರರಂಗ ಕರ್ನಾಟಕ ಬಂದ್‌ಗೆ ತನ್ನ ಬೆಂಬಲ ನೀಡುತ್ತಿದೆ. ಆದರೆ ಯಾವುದೇ ಚಿತ್ರೀಕರಣ ಸ್ಥಗಿತಗೊಳ್ಳುವುದಿಲ್ಲ. ಅದು ಎಂದಿನಂತೆ ನಡೆಯಲಿವೆ ಎಂದರು.

ಚಿತ್ರಪ್ರದರ್ಶಕರು ಸಹ ಬಂದ್‌ಗೆ ತಮ್ಮ ಬೆಂಬಲ ನೀಡಿದ್ದು, ಬೆಳಗಿನ ಪ್ರದರ್ಶನ ನಿಲ್ಲಿಸುತ್ತಿದ್ದಾರೆ. ಆದರೆ ಮಧ್ಯಾಹ್ನದ ನಂತರ ಎಂದಿನಂತೆ ಸಿನಿಮಾ ಪ್ರದರ್ಶನ ನಡೆಯಲಿವೆ. ರಾಜಣ್ಣ ಅವರ ಕಾಲದಿಂದಲೂ ಕನ್ನಡ ನೆಲ, ಜಲ, ಭಾಷೆಗೆ ಕುತ್ತು ಬಂದಾಗ ಚಿತ್ರರಂಗ ಬೆಂಬಲ ನೀಡುತ್ತಾ ಬಂದಿದೆ. ಈಗ ರಾಜ್ಯದ ಹಿತದೃಷ್ಟಿಯಿಂದ ಮಾಡುತ್ತಿರುವ ಈ ಬಂದ್‌ಗೆ ಚಿತ್ರರಂಗದ ಎಲ್ಲಾ ವಲಯಗಳ ಬೆಂಬಲವಿದೆ. ಕಲಾವಿದರ ಸಂಘ, ನಿರ್ಮಾಪಕರ ಸಂಘವೂ ಸಹ ಬೆಂಬಲ ವ್ಯಕ್ತಪಡಿಸಿದೆ ಎಂದು ತಿಳಿಸಿದರು.

ಬಂದ್ ಹಿನ್ನೆಲೆಯಲ್ಲಿ ಬೆಂಗಳೂರು ಸೇರಿದಂತೆ ರಾಜ್ಯಾದ್ಯಂತ ಯಾವುದೇ ಅಹಿತಕರ ಘಟನೆಗಳು ಸಂಭವಿಸದಂತೆ ಕಟ್ಟೆಚ್ಚರ ವಹಿಸಲಾಗಿದೆ. ಮುಖ್ಯವಾಗಿ ಬೆಳಗಾವಿಯಲ್ಲಿ ಹೆಚ್ಚಿನ ಭದ್ರತೆ ಕೈಗೊಳ್ಳಲಾಗಿದೆ. ಬೆಂಗಳೂರಿನ ಆಯಕಟ್ಟಿನ ಪ್ರದೇಶಗಳಲ್ಲಿ ಪೊಲೀಸ್ ಸರ್ಪಗಾವಲು ಹಾಕಲಾಗಿದೆ.

ಕನ್ನಡಪರ ಸಂಘಟನೆಗಳ ಮಿಶ್ರ ಪ್ರತಿಕ್ರಿಯೆ

ಬಂದ್‌ ಕರೆ ನೀಡಿರುವ ಕನ್ನಡ ಪರ ಸಂಘಟನೆಗಳಿಗೆ ಕೆಲವು ಜಿಲ್ಲೆಗಳ ಕನ್ನಡಪರ ಸಂಘಟನೆಗಳು ಸಂಪೂರ್ಣ ಬೆಂಬಲ ವ್ಯಕ್ತಪಡಿಸಿದರೆ ಇನ್ನು ಕೆಲವು ಜಿಲ್ಲೆಗಳಲ್ಲಿ ಬೆಂಬಲ ನೀಡಿಲ್ಲ. ಚಿಕ್ಕಮಗಳೂರು ಹಾಗೂ ಚಿತ್ರದುರ್ಗ ಜಿಲ್ಲೆಗಳಲ್ಲಿ ಬಂದ್​ಗೆ ವ್ಯಾಪಕ ಬೆಂಬಲ ವ್ಯಕ್ತವಾಗಿದೆ. ಚಿತ್ರದುರ್ಗದಲ್ಲೂ ಕನ್ನಡ ಸಂಘಟನೆಗಳು ಬಂದ್​ಗೆ ಬೆಂಬಲ ಸೂಚಿಸಿವೆ. ಆದರೆ ಕೋಲಾರ, ದಕ್ಷಿಣ ಕನ್ನಡ, ಹುಬ್ಬಳ್ಳಿ, ಕಲಬುರಗಿ, ಕೊಪ್ಪಳ ಈ ಜಿಲ್ಲೆಗಳಲ್ಲಿ ಬಂದ್‌ಗೆ ಬೆಂಬಲ ವ್ಯಕ್ತವಾಗಿಲ್ಲ. 

ವಿವಿಧ ಸಂಘಟನೆಗಳ ಬೆಂಬಲ

ಏರ್​​ಪೋರ್ಟ್​ ಟ್ಯಾಕ್ಸಿ, ಆಟೋ ಚಾಲಕರ ಸಂಘಟನೆ, ಖಾಸಗಿ ಸಾರಿಗೆ ಒಕ್ಕೂಟ, ಎಪಿಎಂಸಿ ಸಂಘಟನೆ, ಕಾರ್ಮಿಕ ಪರಿಷತ್, ಬಂದ್‌ಗೆ ಬೆಂಬಲ ಸೂಚಿಸಿದೆ. 

ಕೆಲ ಖಾಸಗಿ ವಾಹನಗಳು ಹಾಗೂ ಏರ್​​ಪೋರ್ಟ್ ಟ್ಯಾಕ್ಸಿ ಸಂಚಾರ ಇರುವುದಿಲ್ಲ.ಕರ್ನಾಟಕ ಸಾರಿಗೆ ನೌಕರರ ಒಕ್ಕೂಟ, ಕೆಎಸ್​ಆರ್​​ಟಿಸಿ, ಬಿಎಂಟಿಸಿ ನೌಕರರ ಸಂಘದಿಂದ ಕೂಡ ಬಂದ್​ಗೆ ಬೆಂಬಲ ವ್ಯಕ್ತವಾಗಿದೆ. ಹೀಗಾಗಿ ಕೆಎಸ್​ಆರ್​​ಟಿಸಿ, ಬಿಎಂಟಿಸಿ ಬಸ್​ ಸಂಚಾರದಲ್ಲಿ ವ್ಯತ್ಯಯವಾಗುವ ಸಾಧ್ಯತೆ ಇದೆ.

ಓಲಾ, ಊಬರ್‌ ವಾಹನ ಚಾಲಕರಿಗೆ ಯಾವ ಸಂಘಟನೆಗಳು ಕೂಡ ಬಂದ್‌ ಬೆಂಬಲಿಸಲು ಹೇಳಿಲ್ಲ. ಬಂದ್‌ಗೆ ಕರೆ ನೀಡಿರುವವರೇ ಮನಸೋಇಚ್ಛೆ ಹೇಳಿಕೆ ನೀಡುತ್ತಿದ್ದಾರೆ. ಮಕ್ಕಳಿಗೆ ಎಸ್‌ಎಸ್‌ಎಲ್‌ಸಿ ಪರೀಕ್ಷೆ ಇರುವುದರಿಂದ ನಾವು ಬಂದ್‌ ಬೆಂಬಲಿಸುವುದಿಲ್ಲ. ಪರಿಸ್ಥಿತಿ ನೋಡಿಕೊಂಡು ಕಾರ್ಯ ನಿರ್ವಹಿಸುತ್ತೇವೆ ಎಂದು ಊಬರ್‌ ಚಾಲಕ ಮಹೇಶ್‌ "ದ ಫೆಡರಲ್‌ ಕರ್ನಾಟಕ"ಕ್ಕೆ ತಿಳಿಸಿದರು.

Tags:    

Similar News