Attack on Bus Conductor | ಮಹಾರಾಷ್ಟ್ರ ವಾಹನ ತಡೆದು ಹೂ, ಸಿಹಿ ನೀಡಿ ಎಚ್ಚರಿಸಿದ ಕರವೇ
ಚಾಲಕರಿಗೆ ಗುಲಾಬಿ ಹೂವು, ಸಿಹಿ ನೀಡಿ ಕನ್ನಡ ಶಾಲು ಹಾಕಿ ಸನ್ಮಾನ ಮಾಡಿ ಮಹಾರಾಷ್ಟ್ರದ ಎಂಇಎಸ್ ಅವರಿಗೆ ತಿಳಿಸುವಂತೆ ಸೂಚನೆ ನೀಡಿ ಕಳಿಸಲಾಗಿದೆ.;
ಬೆಳಗಾವಿಯಲ್ಲಿ ಕೆಎಸ್‌ಆರ್‌ಟಿಸಿ ಕಂಡಕ್ಟರ್ ಮೇಲಿನ ಹಲ್ಲೆ ಪ್ರಕರಣದ ಹಿನ್ನೆಲೆಯಲ್ಲಿ ಮಹಾರಾಷ್ಟ್ರದಲ್ಲಿ ಕನ್ನಡಿಗರ ವಾಹನಗಳ ಮೇಲೆ ಎಂಇಎಸ್ ಪುಂಡಾಟಿಕೆ ನಡೆಸಿತ್ತು. ಈ ಹಿನ್ನಲೆಯಲ್ಲಿ ಕರವೇ ವಿಭಿನ್ನ ಪ್ರತಿಭಟನೆ ನಡೆಸಿದೆ.
ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ- ದೊಡ್ಡಬಳ್ಳಾಪುರ ನಡುವೆ ರಾಷ್ಟ್ರೀಯ ಹೆದ್ದಾರಿ 648 ರಲ್ಲಿ ಕರ್ನಾಟಕ ರಕ್ಷಣಾ ವೇದಿಕೆ ಪ್ರವೀಣ್ ಶೆಟ್ಟಿ ಬಣದ ಕಾರ್ಯಕರ್ತರು ವಿಭಿನ್ನ ಹೋರಾಟ ನಡೆಸಿದ್ದು, ಮಹಾರಾಷ್ಟ್ರ ನೋಂದಣಿಯ ಕಾರು ಲಾರಿಗಳನ್ನು ತಡೆದು ಹೂ ಮತ್ತು ಸಿಹಿ ನೀಡಿ ಎಚ್ಚರಿಕೆ ನೀಡಿದೆ. ಮಹಾರಾಷ್ಟ್ರದಲ್ಲಿನ ಎಂಇಎಸ್‌ನವರಿಗೆ ನಿಮ್ಮ ವಾಹನಗಳು ನಮ್ಮಲ್ಲಿಗೆ ಬರುತ್ತವೆ ಎಂದು ಎಚ್ಚರಿಕೆಯನ್ನೂ ನೀಡಿದೆ.
ಚಾಲಕರಿಗೆ ಗುಲಾಬಿ ಹೂವು, ಸಿಹಿ ನೀಡಿ ಕನ್ನಡದ ಶಾಲು ಹಾಕಿ ಸನ್ಮಾನ ಮಾಡಿ ಮಹಾರಾಷ್ಟ್ರದಲ್ಲಿನ ಎಂಇಎಸ್ ಅವರಿಗೆ ತಿಳಿಸುವಂತೆ ಸೂಚನೆ ನೀಡಲಾಗಿದೆ.
ಶುಕ್ರವಾರ ಮಧ್ಯಾಹ್ನ 12.30ರ ವೇಳೆಗೆ ಬೆಳಗಾವಿಯಿಂದ ಸುಳೇಬಾವಿಗೆ ಹೊರಟಿದ್ದ ಬಸ್‌ನಲ್ಲಿ ಓರ್ವ ಯುವಕ, ಯುವತಿ ಪ್ರಯಾಣಿಸುತ್ತಿದ್ದರು. ಟಿಕೆಟ್ ಪಡೆಯಲು ನಿರ್ವಾಹಕ ಹೇಳಿದಾಗ, ಮರಾಠಿ ಭಾಷೆಯಲ್ಲಿ ಯುವಕ ಉತ್ತರಿಸಿದ್ದ. ಮರಾಠಿ ಭಾಷೆ ಅರ್ಥವಾಗುತ್ತಿಲ್ಲ. ಕನ್ನಡದಲ್ಲಿ ಮಾತನಾಡಿ ಎಂದು ಕಂಡಕ್ಟರ್ ಹೇಳಿದ್ದರು. ಈ ಕಾರಣಕ್ಕೆ ಯುವಕ- ಯುವತಿ ಇಬ್ಬರೂ ನಿರ್ವಾಹಕ ಮಹಾದೇವ ಅವರ ಮೇಲೆ ಹಲ್ಲೆ ನಡೆಸಿದ್ದರು. ಬಸ್ ಸುಳೇಬಾವಿ ಗ್ರಾಮ ಪ್ರವೇಶಿಸುತ್ತಿದ್ದಂತೆ ತಮ್ಮೂರಿನ ನಾಲ್ವರು ಯುವಕರನ್ನು ಕರೆಯಿಸಿಕೊಂಡು ನಿರ್ವಾಹಕನ ಮೇಲೆ ಹಲ್ಲೆ ನಡೆಸಿದ್ದರು.
ಈ ಪ್ರಕರಣಕ್ಕೆ ಸಂಬಂಧಿಸಿದಂತೆ, ಕರ್ನಾಟಕ ರಕ್ಷಣಾ ವೇದಿಕೆ ಸೇರಿದಂತೆ ವಿವಿಧ ಕನ್ನಡಪರ ಸಂಘಟನೆಗಳು ರಾಜ್ಯಾದ್ಯಂತ ಪ್ರತಿಭಟನೆ ನಡೆಸುತ್ತಿವೆ.