Health Alert | ಇಡ್ಲಿ, ಕಲ್ಲಂಗಡಿ, ಹೋಳಿಗೆ ಬಳಿಕ ಈಗ ಬೆಲ್ಲವೂ ಅಸುರಕ್ಷಿತ

ಮಾರುಕಟ್ಟೆಯಲ್ಲಿ ಲಭ್ಯವಿರುವ ಬೆಲ್ಲದ ಗುಣಮಟ್ಟ ಕಳಪೆ ಎನ್ನುವುದು ಆಹಾರ ಇಲಾಖೆ ಪರೀಕ್ಷೆಯಿಂದ ಸಾಬೀತಾಗಿದೆ;

Update: 2025-03-04 13:06 GMT

ಬೆಲ್ಲವೂ ಅಸುರಕ್ಷಿತ 

ಇಡ್ಲಿಗೆ ಬಳಸುವ ಪ್ಲಾಸ್ಟಿಕ್‌ಗಳಿಂದ ಕ್ಯಾನ್ಸರ್‌ ಬರುತ್ತದೆ ಎಂದು ಆರೋಗ್ಯ ಇಲಾಖೆ ನೀಡಿದ್ದ ವರದಿ ಬಳಿಕ ಪ್ಲಾಸ್ಟಿಕ್‌ ಬಳಸದಂತೆ ಸರ್ಕಾರ ಕಟ್ಟುನಿಟ್ಟಿನ ಆದೇಶ ಹೊರಡಿಸಿತ್ತು. ಇದರ ಬೆನ್ನಲ್ಲೇ ಇದೀಗ ರಾಜ್ಯದಲ್ಲಿ ಮಾರಾಟವಾಗುವ ಬೆಲ್ಲದ ಗುಣಮಟ್ಟ ಕೂಡ ಕಳಪೆ ಎನ್ನುವ ಸ್ಫೋಟಕ ಸಂಗತಿ ಆಹಾರ ಇಲಾಖೆ ಪರೀಕ್ಷೆಯಿಂದ ಬಹಿರಂಗವಾಗಿದೆ.

ಆಹಾರ ಇಲಾಖೆಯು ಬೆಂಗಳೂರು ಸೇರಿ ರಾಜ್ಯದ ಬೇರೆ ಬೇರೆ ಕಡೆಗಳಲ್ಲಿ ಬೆಲ್ಲದ ಸ್ಯಾಂಪಲ್ ಪಡೆದಿತ್ತು. ಮಾರುಕಟ್ಟೆಯಲ್ಲಿ ಮಾರಾಟವಾಗುತ್ತಿರುವ ಬೆಲ್ಲದ ಮಾದರಿಯ ಪರೀಕ್ಷೆಯಲ್ಲಿ ಬೆಲ್ಲ ಅಸುರಕ್ಷಿತ ಎಂದು ವರದಿ ಬಂದಿದೆ. 

ರೆಡಿಮೇಡ್ ಹೋಳಿಗೆ ಅಪಾಯಕಾರಿ

ಅಂಗಡಿಗಳಲ್ಲಿ ರೆಡಿಮೇಡ್ ಹೋಳಿಗೆ ತಯಾರಿಕೆಯಲ್ಲೂ ಪ್ಲಾಸ್ಟಿಕ್ ಬಳಕೆಯಾಗುತ್ತಿದೆ ಎಂದು ಆರೋಪಿಸಲಾಗಿದ್ದು, ರಾಜ್ಯದಾದ್ಯಂತ ಹೋಳಿಗೆ ಅಂಗಡಿಗಳ ಮೇಲೆ ಆಹಾರ ಇಲಾಖೆ ದಾಳಿ ಮಾಡಿ, ಪ್ಲಾಸ್ಟಿಕ್ ಬಳಕೆ ಮಾಡಿರುವ ಅಂಗಡಿಗಳಿಗೆ ನೋಟಿಸ್ ನೀಡಿದ್ದಾರೆ ಎನ್ನಲಾಗಿದೆ. ಹೋಳಿಗೆಗೆ ಪ್ಲಾಸ್ಟಿಕ್ ಕವರ್ ಬಳಸಿದರೆ ವಿಷಕಾರಿ ಅಂಶ ಹೋಳಿಗೆ ಸೇರುವ ಸಾಧ್ಯತೆ ಇದೆ ಎಂದು ಹೇಳಲಾಗಿದ್ದು, ಆ ಹಿನ್ನೆಲೆಯಲ್ಲಿ ಹೋಳಿಗೆಯಲ್ಲೂ ಪ್ಲಾಸ್ಟಿಕ್ ಬಳಕೆ ಮಾಡಬಾರದು ಎಂದು ಆರೋಗ್ಯ ಇಲಾಖೆ ನೋಟಿಸ್ ನೀಡಿದೆ.

ಇತ್ತೀಚೆಗೆ ನಗರದ ಸುಮಾರು 251 ತಿಂಡಿ ಹೋಟೆಲ್, ಅಂಗಡಿಗಳಿಂದ ಇಡ್ಲಿ ಮಾದರಿಗಳನ್ನು ಸ್ಯಾಂಪಲ್ಸ್ ಪಡೆಯಲಾಗಿತ್ತು. ಅವುಗಳ ಪೈಕಿ 51 ಕಡೆ ಸಂಗ್ರಹಿಸಿದ್ದ ಸ್ಯಾಂಪಲ್ಸ್ ಅಸುರಕ್ಷಿತ ಎಂಬುದು ಪ್ರಯೋಗಾಲಯ ಪರೀಕ್ಷೆಯಲ್ಲಿ ದೃಢಪಟ್ಟಿದೆ. ಅವುಗಳಲ್ಲಿ ಕ್ಯಾನ್ಸರ್ ಕಾರಕ (ಕಾರ್ಸಿನೋಜೆನಿಕ್) ಅಂಶ ಪತ್ತೆಯಾಗಿದೆ. ಪ್ಲಾಸ್ಟಿಕ್ ಬಳಕೆಯಿಂದ ಇಡ್ಲಿಯಲ್ಲಿ ಕಾರ್ಸಿನೋಜೆನಿಕ್ ಅಂಶ ಸೇರಿದೆ ಎಂದು ಸಚಿವ ದಿನೇಶ್ ಗುಂಡೂರಾವ್ ಮಾಹಿತಿ ನೀಡಿದ್ದರು.

ಹೋಟೆಲ್ ಹಾಗೂ ಉಪಾಹಾರ ಕೇಂದ್ರಗಳಲ್ಲಿ ಪಾಸ್ಟಿಕ್ ಹಾಳೆ ಬಳಸಿ ತಯಾರಿಸುವ ಅಕ್ಕಿ ಮತ್ತು ರವೆ ಇಡ್ಲಿ ಕ್ಯಾನ್ಸರ್ ಕಾರಕವಾಗಿದ್ದು, ಗ್ರಾಹಕರ ಆರೋಗ್ಯದ ಮೇಲೆ ಗಂಭೀರ ಪರಿಣಾಮ ಉಂಟು ಮಾಡಲಿದೆ ಎಂದು ಆರೋಗ್ಯ ಇಲಾಖೆ ಅಧ್ಯಯನ ತಿಳಿಸಿದ್ದು, ಈ ಕಾರಣಕ್ಕಾಗಿ ರಾಜ್ಯದ ಹೋಟೆಲ್, ಉಪಾಹಾರ ಕೇಂದ್ರಗಳಲ್ಲಿ ಪ್ಲಾಸ್ಟಿಕ್ ಬಳಕೆ ನಿಷೇಧಿಸಿದೆ. 

Tags:    

Similar News