IPL 2024 | ಯಾವುದೇ ಚಿಂತೆಯಿಲ್ಲದೆ ಮುನ್ನುಗ್ಗಿ: RCB ಹುರಿದುಂಬಿಸಿದ ವಿಜಯ್ ಮಲ್ಯ
ರಾಯಲ್ ಚಾಲೆಂಜರ್ಸ್ ಬೆಂಗಳೂರು ಈ ವರ್ಷದ ಐಪಿಎಲ್‌ನಲ್ಲಿ ಸತತ 6 ಪಂದ್ಯಗಳನ್ನು ಗೆಲ್ಲುವ ಮೂಲಕ ಪ್ಲೇಆಫ್ ಹಂತಕ್ಕೆ ಮರಳಿದೆ. ಫಾಫ್ ಡು ಪ್ಲೆಸಿಸ್ ನೇತೃತ್ವದ ಆರ್‌ಸಿಬಿ ಇಂದು (ಮೇ 22) ಅಹಮದಾಬಾದ್‌ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ರಾಜಸ್ತಾನ್ ರಾಯಲ್ಸ್ ವಿರುದ್ಧ ಮೊದಲ ಪ್ಲೇಆಫ್ ಪಂದ್ಯ ಆಡಲಿದೆ. ಆ ಹಿನ್ನೆಲೆಯಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಫ್ರಾಂಚೈಸಿಯ ಸಂಸ್ಥಾಪಕರು, ತಂಡದ ಮಾಜಿ ಮಾಲೀಕ ವಿಜಯ ಮಲ್ಯ ಆರ್‌ಸಿಬಿ ತಂಡಕ್ಕೆ ಶುಭಕೋರಿದ್ದಾರೆ.
ಆರ್‌ಸಿಬಿ ಮತ್ತು ರಾಜಸ್ತಾನ್ ರಾಯಲ್ಸ್ ಪಂದ್ಯಕ್ಕು ಮುನ್ನ ಮಾಜಿ ಆರ್‌ಸಿಬಿ ಮಾಲೀಕ ವಿಜಯ್ ಮಲ್ಯ ತಮ್ಮ ಮಾಜಿ ತಂಡಕ್ಕೆ ಶುಭ ಹಾರೈಸಿ ʼಎಕ್ಸ್ʼನಲ್ಲಿ ಪೋಸ್ಟ್ ಮಾಡಿದ್ದಾರೆ. ವಿಶೇಷ ಸಂದೇಶ ಹಂಚಿಕೊಂಡಿರುವ ಅವರು ಸುಮಾರು 17 ವರ್ಷಗಳ ಹಿಂದೆ ವಿರಾಟ್ ಕೊಹ್ಲಿಗಾಗಿ ಬಿಡ್ ಮಾಡಿದ್ದನ್ನು ನೆನಪಿಸಿಕೊಂಡಿದ್ದಾರೆ. ಇದಕ್ಕಿಂತ ಉತ್ತಮ ಆಯ್ಕೆ ಮಾಡಲು ಸಾಧ್ಯವಿರಲಿಲ್ಲ ಎಂದು ಹೇಳಿದ್ದಾರೆ. ಇದಲ್ಲದೆ, ಈ ವರ್ಷ ಐಪಿಎಲ್ ಟ್ರೋಫಿ ಗೆಲ್ಲಲು ಆರ್‌ಸಿಬಿಗೆ ಉತ್ತಮ ಅವಕಾಶವಿದೆ ಎಂದು ವಿಜಯ್ ಮಲ್ಯ ಹೇಳಿದ್ದಾರೆ.
ʻʻನಾನು ಆರ್‌ಸಿಬಿ ಫ್ರಾಂಚೈಸಿ ಖರೀದಿಗಾಗಿ ಬಿಡ್ ಮಾಡಿದಾಗ ಮತ್ತು ವಿರಾಟ್ ಕೊಹ್ಲಿಗಾಗಿ ಬಿಡ್ ಮಾಡಿದಾಗ, ಇದಕ್ಕಿಂತ ಉತ್ತಮ ಆಯ್ಕೆಗಳಿಲ್ಲ ಎಂದು ನನ್ನ ಒಳ ಮನಸ್ಸು ಹೇಳುತ್ತಿತ್ತು. ಇದೀಗ ಆರ್‌ಸಿಬಿ ತಂಡಕ್ಕೆ ಟ್ರೋಫಿ ಗೆಲ್ಲಲು ಉತ್ತಮ ಅವಕಾಶವಿದೆ ಎಂದು ನನ್ನ ಒಳ ಮನಸ್ಸು ಹೇಳುತ್ತಿದೆ. ಯಾವುದೇ ಚಿಂತೆಯಿಲ್ಲದೆ ಮುನ್ನುಗ್ಗಿ...ಬೆಸ್ಟ್ ಆಫ್ ಲಕ್ʼʼ ಎಂದು ಆರ್‌ಸಿಬಿ ತಂಡಕ್ಕೆ ಮಲ್ಯ ಶುಭಕೋರಿದ್ದಾರೆ.
When I bid for the RCB franchise and I bid for Virat, my inner instinct told me that I could not have made better choices. My inner instinct tells me that RCB have the best chance to go for the IPL Trophy. Onward and Upward. Best of luck.
— Vijay Mallya (@TheVijayMallya) May 21, 2024
ಇದಕ್ಕೂ ಮುನ್ನ ಸಿಎಸ್ಕೆ ತಂಡವನ್ನು ಬಗ್ಗು ಬಡಿದು ಆರ್‌ಸಿಬಿ ಪ್ಲೇಆಫ್ ಪ್ರವೇಶಿಸಿದಾಗ ವಿಜಯ ಮಲ್ಯ ಅಭಿನಂದನೆ ಸಲ್ಲಿಸಿದ್ದರು. "ಪ್ಲೇಆಫ್ಗೆ ಅರ್ಹತೆ ಪಡೆದಿದ್ದಕ್ಕಾಗಿ ಆರ್‌ಸಿಬಿಗೆ ಅಭಿನಂದನೆಗಳು. ನಿರಾಶಾದಾಯಕ ಆರಂಭದ ಹೊರತಾಗಿಯೂ ಸತತ ಗೆಲುವುಗಳ ಮೂಲಕ ಈ ಹಂತಕ್ಕೇರಿದೆ. ಇದೇ ಹಾದಿಯಲ್ಲಿ ಮುನ್ನುಗ್ಗಿ ಟ್ರೋಫಿ ಗೆಲ್ಲುವುದೊಂದೇ ಬಾಕಿ.." ಎಂದು ಎಕ್ಸ್ನಲ್ಲಿ ಆರ್‌ಸಿಬಿ ತಂಡದ ಮಾಜಿ ಮಾಲೀಕ ಬರೆದುಕೊಂಡಿದ್ದರು.
Heartiest congratulations to RCB for qualifying in the top four and reaching the IPL playoffs. Great determination and skill have created a winning momentum after a disappointing start. Onward and upward towards the trophy.
— Vijay Mallya (@TheVijayMallya) May 18, 2024
ಇದೀಗ ರಾಜಸ್ತಾನ್ ರಾಯಲ್ಸ್ ತಂಡದ ವಿರುದ್ಧದ ಎಲಿಮಿನೇಟರ್ ಪಂದ್ಯಕ್ಕೂ ಮುನ್ನ ವಿಜಯ ಮಲ್ಯ ಆರ್‌ಸಿಬಿ ತಂಡಕ್ಕೆ ಶುಭಕೋರಿದ್ದು, ಈ ಮೂಲಕ ಈ ಸಲ ರಾಯಲ್ ಚಾಲೆಂಜರ್ಸ್ ಹುಡುಗರು ಟ್ರೋಫಿ ಗೆದ್ದೇ ಗೆಲ್ಲುತ್ತಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ವಿಜಯ್ ಮಲ್ಯ ರಾಯಲ್ ಚಾಲೆಂಜರ್ಸ್ ಬೆಂಗಳೂರು ಫ್ರಾಂಚೈಸಿಯ ಸಂಸ್ಥಾಪಕರು. 2008 ರಲ್ಲಿ ನಡೆದ ಇಂಡಿಯನ್ ಪ್ರೀಮಿಯರ್ ಲೀಗ್ ತಂಡಗಳ ಬಿಡ್ಡಿಂಗ್ನಲ್ಲಿ ಮಲ್ಯ ಅವರು ಆರ್‌ಸಿಬಿ ತಂಡವನ್ನು ಬರೋಬ್ಬರಿ 455 ಕೋಟಿ ರೂ. ನೀಡಿ ಖರೀದಿಸಿದ್ದರು.
ಆದರೆ 2016 ರಲ್ಲಿ ಆರ್ಥಿಕ ಮುಗ್ಗಟ್ಟು ಎದುರಿಸಿ ಸಾಲದ ಸುಳಿಗೆ ಸಿಲುಕಿದ ವಿಜಯ ಮಲ್ಯ ಭಾರತದಿಂದ ಪಾಲಾಯನ ಮಾಡಿ, ಈಗ ಇಂಗ್ಲೆಂಡ್ನಲ್ಲಿ ನೆಲೆಸಿದ್ದಾರೆ. ಇದೀಗ ಆರ್‌ಸಿಬಿ ತಂಡದ ಮಾಲೀಕತ್ವವು ಯುನೈಟೆಡ್ ಸ್ಪಿರಿಟ್ಸ್ ಕಂಪೆನಿಯ ಹೆಸರಿನಲ್ಲಿದ್ದರೂ, ತಂಡದ ಮಾಲೀಕತ್ವದ ಶೇ.54.8 ರಷ್ಟು ಭಾಗ ಡಿಯಾಜಿಯೊ ಕಂಪೆನಿಯ ಅಧೀನದಲ್ಲಿದೆ.