Invest Karnataka 2025 : ಇನ್ವೆಸ್ಟ್ ಕರ್ನಾಟಕಕ್ಕೆ ಚಾಲನೆ, 10 ಲಕ್ಷ ಕೋಟಿ ರೂ. ಹೂಡಿಕೆ ನಿರೀಕ್ಷೆ
Invest Karnataka 2025 : 75ಕ್ಕೂ ಹೆಚ್ಚು ಗಣ್ಯರು, 25ಕ್ಕೂ ಹೆಚ್ಚು ತಾಂತ್ರಿಕ ನಿಯೋಗ, 10ಕ್ಕೂ ಹೆಚ್ಚು ದೇಶಗಳ ವಿಶೇಷ ಸಭೆಗಳು ಹಾಗೂ ಸಂವಾದ ಗೋಷ್ಠಿಗಳು ಹೂಡಿಕೆದಾರರ ಸಮ್ಮೇಳನದ ಪ್ರಮುಖ ಆಕರ್ಷಣೆಯಾಗಲಿದೆ.;
ಬೆಂಗಳೂರು: ಕರ್ನಾಟಕದ ಉದ್ಯಮ ಪ್ರಗತಿಗೆ ಜಾಗತಿಕ ಸಹಭಾಗಿತ್ವ ಪಡೆಯುವ ಉದ್ದೇಶದೊಂದಿಗೆ ಕರ್ನಾಟಕ ಸರ್ಕಾರ ಆಯೋಜಿಸಿರುವ ಮೂರು ದಿನಗಳ ‘ಇನ್ವೆಸ್ಟ್ ಕರ್ನಾಟಕ 2025’ (Invest Karnataka 2025) ಜಾಗತಿಕ ಹೂಡಿಕೆದಾರರ ಸಮ್ಮೇಳನ ಫೆಬ್ರವರಿ 12ರಂದು (ಮಂಗಳವಾರ) ಉದ್ಘಾಟನೆಗೊಂಡಿತು. ಅಭಿವೃದ್ಧಿಯ ಮರುಕಲ್ಪನೆ ಎಂಬ ಥೀಮ್‌ನಡಿ ನಡೆಯಲಿರುವ ಈ ಕಾರ್ಯಕ್ರಮದಲ್ಲಿ 10 ಲಕ್ಷ ಕೋಟಿ ರೂಪಾಯಿ ಮೌಲ್ಯದ ಹೂಡಿಕೆ ಪ್ರಸ್ತಾವನೆಗಳ ನಿರೀಕ್ಷೆ ಇದೆ. ಅವುಗಳಲ್ಲಿ ಕನಿಷ್ಠ ಶೇಕಡಾ 70ರಷ್ಟು ಕಾರ್ಯರೂಪಕ್ಕೆ ತರುವುದಾಗಿ ಬೃಹತ್ ಮತ್ತು ಮಧ್ಯಮ ಕೈಗಾರಿಕೆ ಸಚಿವ ಎಂ.ಬಿ. ಪಾಟೀಲ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
75ಕ್ಕೂ ಹೆಚ್ಚು ಗಣ್ಯರು, 25ಕ್ಕೂ ಹೆಚ್ಚು ತಾಂತ್ರಿಕ ನಿಯೋಗ, 10ಕ್ಕೂ ಹೆಚ್ಚು ದೇಶಗಳ ವಿಶೇಷ ಸಭೆಗಳು ಹಾಗೂ ಸಂವಾದ ಗೋಷ್ಠಿಗಳು ಹೂಡಿಕೆದಾರರ ಸಮ್ಮೇಳನದ ಪ್ರಮುಖ ಆಕರ್ಷಣೆಯಾಗಲಿದೆ. ಜಾಗತಿಕ ಆರ್ಥಿಕ ಪ್ರವೃತ್ತಿಗಳು, ತಂತ್ರಜ್ಞಾನದ ಪರಿವರ್ತನೆಗಳು, ಹೊಸ ಸಂಶೋಧನೆಗಳು, ಕೈಗಾರಿಕಾ ಬದಲಾವಣೆಗಳ ಬಗ್ಗೆ ಅರಿತುಕೊಳ್ಳುವುದಕ್ಕೆ ಈ ಸಮ್ಮೇಳನ ನೆರವಾಗಲಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಅರಮನೆ ನಡೆಯಲಿರುವ ಈ ಕಾರ್ಯಕ್ರಮ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಉದ್ಘಾಟಿಸಿದ್ದಾರೆ. ರಾಜ್ಯಪಾಲ ಥಾವರ್‌ಚಂದ್ ಗೆಹ್ಲೋಟ್ ಮತ್ತು ಮುಖ್ಯಮಂತ್ರಿ ಸಿದ್ದರಾಮಯ್ಯ ಉದ್ಘಾಟನಾ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
ಲೋಕಸಭೆಯ ಪ್ರತಿಪಕ್ಷದ ನಾಯಕ ರಾಹುಲ್ ಗಾಂಧಿ ಮತ್ತು ರಾಜ್ಯಸಭೆಯ ಪ್ರತಿಪಕ್ಷದ ನಾಯಕ ಹಾಗೂ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಉದ್ಘಾಟನಾ ಕಾರ್ಯಕ್ರಮದಲ್ಲಿ ಭಾಗವಹಿಸಿಲ್ಲ. ಅವರು ಸಂಸತ್ ಅಧಿವೇಶನದಲ್ಲಿದ್ದಾರೆ ಎಂದು ಪಕ್ಷದ ಮೂಲಗಳು ತಿಳಿಸಿವೆ.
ಕೆಂದ್ರಿಯ ಸಚಿವರಾದ ಪ್ರಹ್ಲಾದ್ ಜೋಶಿ, ಎಚ್.ಡಿ. ಕುಮಾರಸ್ವಾಮಿ, ನಿರ್ಮಲಾ ಸೀತಾರಾಮನ್, ಪಿಯೂಷ್ ಗೋಯಲ್, ಅಶ್ವಿನಿ ವೈಷ್ಣವ್, ಶೋಭಾ ಕರಂದ್ಲಾಜೆ, ವಿ. ಸೋಮಣ್ಣ ಸೇರಿದಂತೆ ಹಲವರು ಫೆಬ್ರವರಿ 12ರಿಂದ14ರ ನಡುವೆ ನಡೆಯುವ ಈ ಜಾಗತಿಕ ಶೃಂಗದಲ್ಲಿ ಭಾಗವಹಿಸಲಿದ್ದಾರೆ.
ಹೊಸ ಮಾದರಿಯ ಹೂಡಿಕೆ ನೀತಿ, ನವೋದ್ಯಮ ಕೇಂದ್ರಗಳು ಮತ್ತು ಕೈಗಾರಿಕಾ ಬೆಳವಣಿಗೆಗಳಿಗೆ ಸಂಬಂಧಿಸಿದ ಪ್ರಮುಖ ಘೋಷಣೆಗಳನ್ನು ಈ ಸಮ್ಮೇಳನದಲ್ಲಿ ಪ್ರಕಟಗೊಳ್ಳಲಿವೆ.
ಈ ಉದ್ಯಮಿಗಳ ಭಾಗಿ ನಿರೀಕ್ಷೆ
ಸಮ್ಮೇಳನದಲ್ಲಿ ಅನಂದ್ ಮಹೀಂದ್ರಾ, ಸಜ್ಜನ್ ಜಿಂದಾಲ್, ಶಶಿ ತರೂರ್, ಸೆಬಾಸ್ಟಿಯನ್ ಥ್ರುನ್, ಅನ್ ಡಂಕಿನ್, ನಿಖಿಲ್ ಕಾಮತ್, ಕಿರಣ್ ರಾವ್, ಗೀತಾಂಜಲಿ ಕಿರ್ಲೋಸ್ಕರ್, ಕಿರಣ್ ಮಜುಂದಾರ್-ಶಾ, ವಿವೇಕ್ ಲಾಲ್, ಸುದರ್ಶನ್ ವೇಣು, ಮಾರ್ಟಿನ್ ಲುಂಡ್ಸ್ಟೆಡ್, ರಾಬ್ ಬಾಯ್ಡ್, ಅಕಿಸ್ ಎವ್ಯಾಂಜಲಿಡಿಸ್, ಪ್ರಶಾಂತ್ ಪ್ರಕಾಶ್ ಅವರಂತಹ ಜಾಗತಿಕ ಕೈಗಾರಿಕಾ ನಾಯಕರು ಭಾಗವಹಿಸುವ ಸಾಧ್ಯತೆಗಳಿವೆ.
ಫ್ಯೂಚರ್ ಆಫ್ ಇನ್ನೋವೇಷನ್ ಎಕ್ಸ್ಪೋದಲ್ಲಿ ವಿಶ್ವದಾದ್ಯಂತದ 40ಕ್ಕೂ ಹೆಚ್ಚು ಕಂಪನಿಗಳು ತಂತ್ರಜ್ಞಾನಗಳನ್ನು ಪ್ರದರ್ಶಿಸಲಿವೆ.
ನವೋದ್ಯಮಗಳ ಘೋಷಣೆ
ಸಮಾವೇಶದ ವೇಳೆ ಹುಬ್ಬಳ್ಳಿಯ ವಿಮಾನ ನಿಲ್ದಾಣದ ಹತ್ತಿರ 200 ಎಕರೆ ವಿಸ್ತೀರ್ಣದ ನವೋದ್ಯಮ ಉದ್ಯಾನ ಘೋಷಣೆಯಾಗಲಿದೆ. ಇದರಲ್ಲಿ 400ಕ್ಕೂ ಹೆಚ್ಚು ನವೋದ್ಯಮಗಳಿಗೆ ಅವಕಾಶ ಸಿಗಲಿದೆ. ತಿಡಗುಂಡಿ, ವಿಜಯಪುರ ಜಿಲ್ಲೆಯಲ್ಲಿ 1,200 ಎಕರೆ ಅಗ್ಗದ ಸೌರ ಕೋಶ ತಯಾರಿಕಾ ಮತ್ತು ಕೃಷಿ ತಂತ್ರಜ್ಞಾನ ಉದ್ಯಾನ ಸ್ಥಾಪಿಸಲು ಯೋಜನೆ ರೂಪಿಸಲಾಗಿದೆ.
60ಕ್ಕೂ ಹೆಚ್ಚು ನವೋದ್ಯಮಗಳು ಹಾಗೂ ಕೈಗಾರಿಕಾ ಕಂಪನಿಗಳು, ಕಾರ್ಬನ್ ನ್ಯಾನೋಟ್ಯೂಬ್ಸ್, ಮಾನವರಹಿತ ವಿಮಾನಗಳು (UAVs) ಮತ್ತು ಸುಧಾರಿತ ರೋಬೋಟಿಕ್ಸ್ ಕ್ಷೇತ್ರಗಳಲ್ಲಿ ತಮ್ಮ ಸಂಶೋಧನೆಗಳನ್ನು ಸಮ್ಮೇಳನದಲ್ಲಿ ಪ್ರದರ್ಶಿಸಲಿವೆ.
14 ಮಂದಿಗೆ ಪ್ರಶಸ್ತಿ
ಫೆಬ್ರವರಿ 12ರಂದು ಇನ್ವೆಸ್ಟ್ ಕರ್ನಾಟಕ ಪ್ರಶಸ್ತಿಗಳು ಪ್ರಕಟವಾಗಲಿದೆ. ಕರ್ನಾಟಕದ ಆರ್ಥಿಕತೆಗೆ ಸೇವೆ ಸಲ್ಲಿಸಿದ 14 ಪ್ರಮುಖ ಕೈಗಾರಿಕೆಗಳಿಗೆ ಈ ಗೌರವ ಸಿಗಲಿದೆ. ವಿಮಾನೋದ್ಯಮ ಮತ್ತು ರಕ್ಷಣಾ ಕ್ಷೇತ್ರ (ಸರಕಾರಿ ಹಾಗೂ ಖಾಸಗಿ), ವಾಹನ ಮತ್ತು ವಿದ್ಯುತ್ ವಾಹನಗಳು (EV), ಜೀವವಿಜ್ಞಾನ ಮತ್ತು ತಂತ್ರಜ್ಞಾನ ಮುಂತಾದ ಕ್ಷೇತ್ರಗಳಲ್ಲಿ ಅತ್ಯುತ್ತಮ ಸೇವೆ ಸಲ್ಲಿಸಿದವರು ಪ್ರಶಸ್ತಿ ಪಡೆಯಲಿದ್ದಾರೆ.
ಫೆಬ್ರವರಿ 13ರಂದು ಸಣ್ಣ ಹಾಗೂ ಮಧ್ಯಮ ಉದ್ಯಮಗಳ ಪ್ರಶಸ್ತಿಗಳು ಪ್ರಕಟವಾಗಲಿದೆ. ಇದು ಕರ್ನಾಟಕದ ಕೈಗಾರಿಕಾ ಬೆಳವಣಿಗೆ, ನವೋದ್ಯಮ ಮತ್ತು ಉದ್ಯೋಗ ಸೃಷ್ಟಿಯಲ್ಲಿ ಪ್ರಮುಖ ಪಾತ್ರ ವಹಿಸಿದ 35 ಕ್ಕೂ ಹೆಚ್ಚು ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳಿಗೆ ಪ್ರಶಸ್ತಿ ಸಿಗಲಿದೆ.