Infosys layoffs| ಬೆದರಿಕೆ ತಂತ್ರಗಳನ್ನು ಬಳಸಿ ಉದ್ಯೋಗಿಗಳನ್ನು ವಜಾ ಮಾಡಿಲ್ಲ; : ಇನ್ಫೋಸಿಸ್ ಸ್ಪಷ್ಟನೆ
ತರಬೇತಿ ಪಡೆದವರನ್ನು ವಜಾಗೊಳಿಸುವ ಸಂದರ್ಭದಲ್ಲಿ ಯಾವುದೇ ರೀತಿಯ ಬಲವಂತ ಅಥವಾ ಬೆದರಿಕೆ ತಂತ್ರಗಳನ್ನು ಬಳಸಿಲ್ಲ ಮತ್ತು ಕಾರ್ಮಿಕ ಇಲಾಖೆ ಅಧಿಕಾರಿಗಳಿಗೆ ಈ ಘಟನೆಗಳ ಬಗ್ಗೆ ಸಂಪೂರ್ಣವಾಗಿ ವಿವರಿಸುವುದಾಗಿ ಹೇಳಿದೆ.;
ಐಟಿ ದೈತ್ಯ ಇನ್ಫೋಸಿಸ್ ಮೈಸೂರು ಕ್ಯಾಂಪಸ್‌ನಲ್ಲಿ ಕಾರ್ಯಕ್ಷಮತೆಗೆ ಸಂಬಂಧಿಸಿದ ಸಮಸ್ಯೆಗಳ ಮೇಲೆ ತರಬೇತಿ ಪಡೆದವರನ್ನು ವಜಾಗೊಳಿಸುವ ಸಂದರ್ಭದಲ್ಲಿ ಯಾವುದೇ ರೀತಿಯ ಬಲವಂತ ಅಥವಾ ಬೆದರಿಕೆ ತಂತ್ರಗಳನ್ನು ಬಳಸಿಲ್ಲ ಮತ್ತು ಕಾರ್ಮಿಕ ಇಲಾಖೆ ಅಧಿಕಾರಿಗಳಿಗೆ ಈ ಘಟನೆಗಳ ಬಗ್ಗೆ ಸಂಪೂರ್ಣವಾಗಿ ವಿವರಿಸುವುದಾಗಿ ಹೇಳಿದೆ.
ಆದರೆ, ಈ ಹಿಂದಿಗಿಂತ ಈ ಬಾರಿ ಮೌಲ್ಯಮಾಪನ ಪರೀಕ್ಷೆಯಲ್ಲಿನ ಅನುತ್ತೀರ್ಣತೆಯ ಶೇಕಡಾವಾರು ಪ್ರಮಾಣ ಕೊಂಚ ಹೆಚ್ಚಿತ್ತು ಎಂದು PTI ಸುದ್ದಿ ಸಂಸ್ಥೆಗೆ ನೀಡಿರುವ ಸಂದರ್ಶನದಲ್ಲಿ ಇನ್ಫೋಸಿಸ್ ನ ಮುಖ್ಯ ಮಾನವ ಸಂಪನ್ಮೂಲ ಅಧಿಕಾರಿ ಶಾಜಿ ಮ್ಯಾಥ್ಯೂ ಒಪ್ಪಿಕೊಂಡಿದ್ದಾರೆ. ಆದರೆ, ಪರೀಕ್ಷೆಗಳನ್ನು ಅನುತ್ತೀರ್ಣಗೊಳಿಸಲೆಂದೇ ವಿನ್ಯಾಸಗೊಳಿಸಲಾಗಿತ್ತು ಎಂಬ ಆರೋಪಗಳನ್ನು ಅವರು ಅಲ್ಲಗಳೆದಿದ್ದಾರೆ.
2026ನೇ ಹಣಕಾಸು ವರ್ಷದಲ್ಲಿ ಕ್ಯಾಂಪಸ್ ನೇಮಕಾತಿಗೆ ತೆರಳಲಿರುವ ಇನ್ಫೋಸಿಸ್ ನ ಬ್ಯಾಂಡ್ ಖ್ಯಾತಿಗೆ ಈ ವಜಾಗಳೇನಾದರೂ ಚ್ಯುತಿ ತರಲಿವೆಯೆ ಎಂಬ ಪ್ರಶ್ನೆಕಗೆ ಉತ್ತರಿಸಿರುವ ಶಾಜಿ ಮ್ಯಾಧೂ ನಾವು ಮುಂದಿನ ಹಣಕಾಸು ವರ್ಷದಲ್ಲಿ 20,000 ಹೊಸ ಉದ್ಯೋಗಿಗಳನ್ನು ನೇಮಕ ಮಾಡಿಕೊಳ್ಳಲು ಯೋಜಿಸುತ್ತಿದ್ದು, ಅವರು ಅತ್ಯುತ್ತಮ ಕಾರ್ಪೊರೇಟ್ ತರಬೇತಿ ಪಡೆಯಲಿರುವುದರಿಂದ, ಅವರು ಕಳವಳ ಪಡಬೇಕಾದ ಅಗತ್ಯವಿಲ್ಲ ಎಂದು ಭರವಸೆ ನೀಡಿದ್ದಾರೆ.
ಇತ್ತೀಚೆಗೆ ಮೈಸೂರು ಕ್ಯಾಂಪಸ್ ನಲ್ಲಿ 300ಕ್ಕೂ ಹೆಚ್ಚು ಮಂದಿ ಉದ್ಯೋಗಿಗಳನ್ನು ವಜಾಗೊಳಿಸುವಾಗ ಪರೀಕ್ಷಾ ಮಾನದಂಡಗಳು, ಮೌಲ್ಯಮಾಪನ ಮಾನದಂಡ ಹಾಗೂ ಪಠ್ಯಕ್ರಮವನ್ನು ಬದಲಿಸಲಾಗಿತ್ತು ಹಾಗೂ ಬೆದರಿಕೆ ತಂತ್ರಗಳನ್ನು ಅನುಸರಿಸಲಾಗಿತ್ತು ಎಂಬ ಆರೋಪಗಳ ಕುರಿತು ಪ್ರತಿಕ್ರಿಯಿಸಿರುವ ಅವರು, "ತರಬೇತಿ ನಿರತ ಉದ್ಯೋಗಿಗಳನ್ನು ಆಯ್ಕೆ ಮಾಡಲು ಹಾಗೂ ಅವರನ್ನು ತರಬೇತಿ ಕಾರ್ಯಕ್ರಮದಲ್ಲಿ ತೊಡಗಿಸಲು ಕಂಪನಿಯು ಹಣ ಹಾಗೂ ಶ್ರಮವನ್ನು ವ್ಯಯಿಸುವುದರಿಂದ, ಇನ್ಫೋಸಿಸ್ ಹಿತದೃಷ್ಟಿಯಿಂದ ಈ ಎಲ್ಲ ಉದ್ಯೋಗಿಗಳೂ ಯಶಸ್ವಿಯಾಗುವುದನ್ನು ಕಾಣಲು ಬಯಸುತ್ತೇವೆ. ಆಗ ಮಾತ್ರ. ಅವರನ್ನೆಲ್ಲ ನಮ್ಮ ಯೋಜನೆಗಳಲ್ಲಿ ತೊಡಗಿಸಲು ಸಾಧ್ಯ" ಎಂದು ಸ್ಪಷ್ಟನೆ ನೀಡಿದ್ದಾರೆ.
ತರಬೇತಿಯ ಸಮಯದಲ್ಲಿ ಸಂಬಳವನ್ನೂ ನೀಡುತ್ತೇವೆ
ತರಬೇತಿಗೆ ಹೂಡಿಕೆ ಬರುತ್ತಿದೆ ಮತ್ತು ನಾವು ಅವರಿಗೆ ತರಬೇತಿಯ ಸಮಯದಲ್ಲಿ ಸಂಬಳವನ್ನೂ ನೀಡುತ್ತೇವೆ... ಈ ಜನರಲ್ಲಿ ಯಾರನ್ನೂ ಹೋಗಲು ಬಿಡುವುದು ಕಂಪನಿಯ ಹಿತಾಸಕ್ತಿಯಲ್ಲಿಲ್ಲ... ಇದು ಅವರಿಗೆ ನಷ್ಟವೇ, ನಮಗೂ ನಷ್ಟವೇ. ತರಬೇತಿ ಪಡೆಯುವವರ ನಿರ್ದಿಷ್ಟ ಬ್ಯಾಚ್ ಮೂರು ಪ್ರಯತ್ನಗಳ ನಂತರವೂ ಆಂತರಿಕ ಮೌಲ್ಯಮಾಪನಗಳನ್ನು ಪೂರ್ಣಗೊಳಿಸಿಲ್ಲ ಎಂದು ಅವರು ತಿಳಿಸಿದರು.
ಕಾರ್ಮಿಕ ಇಲಾಖೆ ಕಂಪನಿಯೊಂದಿಗೆ ಸಂಪರ್ಕದಲ್ಲಿದೆ
ಕರ್ನಾಟಕ ರಾಜ್ಯ ಕಾರ್ಮಿಕ ಇಲಾಖೆಗೆ ಕ್ರಮ ಕೈಗೊಳ್ಳುವಂತೆ ಕಾರ್ಮಿಕ ಸಚಿವಾಲಯದ ನಿರ್ದೇಶನ ಮತ್ತು ಕಾರ್ಮಿಕ ಇಲಾಖೆ ಅಧಿಕಾರಿಗಳು ಬೆಂಗಳೂರು ಮತ್ತು ಮೈಸೂರಿನಲ್ಲಿರುವ ಇನ್ಫೋಸಿಸ್ ಕ್ಯಾಂಪಸ್‌ಗಳಿಗೆ ಭೇಟಿ ನೀಡಿದ್ದಾರೆ ಎಂಬ ವರದಿಗಳ ಕುರಿತು ಮಾತನಾಡಿರುವ ಮ್ಯಾಥ್ಯೂ, ಕಾರ್ಮಿಕ ಇಲಾಖೆ ಕಂಪನಿಯೊಂದಿಗೆ ಸಂಪರ್ಕದಲ್ಲಿದೆ ಮತ್ತು ಇನ್ಫೋಸಿಸ್ ಅಧಿಕಾರಿಗಳೊಂದಿಗೆ ಸಹಕರಿಸುತ್ತಿದೆ ಎಂದು ಹೇಳಿದರು.
ಕಾರ್ಮಿಕ ಇಲಾಖೆ ನಮ್ಮೊಂದಿಗೆ ಸಂಪರ್ಕದಲ್ಲಿದೆ. ಅವರು ನಮ್ಮ ತರಬೇತಿ ಪ್ರಕ್ರಿಯೆ ಮತ್ತು ಮೌಲ್ಯಮಾಪನ ಇತ್ಯಾದಿಗಳನ್ನು ಅರ್ಥಮಾಡಿಕೊಳ್ಳಲು ಬಯಸಿದ್ದರು ಮತ್ತು ನಾವು (ಅವರನ್ನು) ಸಂಪೂರ್ಣ ತರಬೇತಿ ಪ್ರಕ್ರಿಯೆ, ಮೌಲ್ಯಮಾಪನದ ಮೂಲಕ ತೆಗೆದುಕೊಂಡಿದ್ದೇವೆ ಮತ್ತು ಇದು ಇನ್ಫೋಸಿಸ್‌ಗೆ ಮಾತ್ರವಲ್ಲದೆ ಇಡೀ ಐಟಿ ಉದ್ಯಮಕ್ಕೂ ಭವಿಷ್ಯದ ಪ್ರತಿಭೆಯನ್ನು ಅಭಿವೃದ್ಧಿಪಡಿಸುವಲ್ಲಿ ನಿರ್ಣಾಯಕ ಭಾಗವಾಗಿದೆ ಎಂದು ನಾನು ಭಾವಿಸುತ್ತೇನೆ.
ಅವರು ಸಾಕಷ್ಟು ಬೆಂಬಲ ನೀಡಿದ್ದಾರೆ ಮತ್ತು ತರಬೇತಿ ಮತ್ತು ಮೌಲ್ಯಮಾಪನದ ವಿಷಯದಲ್ಲಿ ನಾವು ಎದುರಿಸುತ್ತಿರುವ ಸಂಪೂರ್ಣ ಪ್ರಕ್ರಿಯೆಯನ್ನು ಅವರು ಅರ್ಥಮಾಡಿಕೊಂಡಿದ್ದಾರೆ ಎಂದು ನಾನು ಭಾವಿಸುತ್ತೇನೆ. ಆದ್ದರಿಂದ ನಾವು ಇಲ್ಲಿಯವರೆಗೆ ಅವರೊಂದಿಗೆ ಸಹಕರಿಸಿದ್ದೇವೆ... ಮತ್ತು ಅವರಿಂದ ಯಾವುದೇ ಪ್ರಶ್ನೆ ಬಂದಿಲ್ಲ ಎಂದು ಹೇಳಿದರು.
ತರಬೇತಿ ಪಡೆದವರನ್ನು ಮರಳಿ ಕೆಲಸಕ್ಕೆ ಸೇರಿಸಿಕೊಳ್ಳುವ ಬಗ್ಗೆ ಇನ್ಫೋಸಿಸ್ ಪರಿಗಣಿಸುತ್ತದೆಯೇ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು. ಅವರನ್ನು ಮರಳಿ ಕೆಲಸಕ್ಕೆ ಸೇರಿಸಿಕೊಳ್ಳುವ ಬಗ್ಗೆ ಯಾವುದೇ ಪ್ರಶ್ನೆ ಬಂದಿಲ್ಲ ಎಂದು ಹೇಳಿದರು.
300 ಕ್ಕೂ ಹೆಚ್ಚು ಉದ್ಯೋಗಿಗಳ ವಜಾ
ಈ ತಿಂಗಳ ಆರಂಭದಲ್ಲಿ ಭಾರತದ ಎರಡನೇ ಅತಿದೊಡ್ಡ ಐಟಿ ಸೇವೆಗಳ ಕಂಪನಿ ಇನ್ಫೋಸಿಸ್ ತನ್ನ ಮೈಸೂರು ಕ್ಯಾಂಪಸ್‌ನಲ್ಲಿ ತರಬೇತಿ ಪಡೆದ ಆದರೆ ಆಂತರಿಕ ಮೌಲ್ಯಮಾಪನಗಳನ್ನು ಪೂರ್ಣಗೊಳಿಸಲು ಸಾಧ್ಯವಾಗದ 300 ಕ್ಕೂ ಹೆಚ್ಚು ಹೊಸಬರನ್ನು ವಜಾಗೊಳಿಸಿದ ಆರೋಪ ಎದುರಿತ್ತು.
ಈ ಬಗ್ಗೆ ಐಟಿ ಉದ್ಯೋಗಿಗಳ ಒಕ್ಕೂಟ NITES, ಕಂಪನಿಯ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಕಾರ್ಮಿಕ ಮತ್ತು ಉದ್ಯೋಗ ಸಚಿವಾಲಯದ ತುರ್ತು ಹಸ್ತಕ್ಷೇಪವನ್ನು ಕೋರಿತ್ತು. ಇನ್ಫೋಸಿಸ್ ಕಂಪನಿಯು ಉದ್ಯೋಗಿಗಳನ್ನು ಬೆದರಿಸಲು ಬೌನ್ಸರ್ ಹಾಗೂ ಭದ್ರತಾ ಸಿಬ್ಬಂದಿ ಬಳಕೆ ಮಾಡಲಾಗುತ್ತಿದೆ. ಗೌಪ್ಯತಾ ಒಪ್ಪಂದಕ್ಕೆ ಸಹಿ ಹಾಕುವಂತೆ ಬೆದರಿಸಲಾಗುತ್ತಿದೆ. ಉದ್ಯೋಗಿಗಳ ಮೊಬೈಲ್ ಕಸಿದುಕೊಂಡು, ಸಹಿ ಹಾಕಲು ಒತ್ತಾಯಿಸಲಾಗುತ್ತಿದೆ. ಇದರಿಂದ ಐಟಿ ಕ್ಷೇತ್ರ ಪ್ರವೇಶಿಸಿದ ಹೊಸ ಉದ್ಯೋಗಿಗಳಿಗೆ ತೀವ್ರ ತೊಂದರೆಯಾಗಲಿದೆ. ಆದಾಗ್ಯೂ, ಉದ್ಯೋಗಿಗಳನ್ನು ಕೆಲಸದಿಂದ ತೆಗೆದುಹಾಕುತ್ತಿರುವ ಕ್ರಮವನ್ನು ಸಮರ್ಥಿಸಿಕೊಳ್ಳುತ್ತಿರುವ ಇನ್ಫೋಸಿಸ್ ಧೋರಣೆ ಸರಿಯಲ್ಲ ಎಂದು ನೈಟ್ಸ್ ಟೀಕಿಸಿದೆ.