ಸಂಡೂರು ಬಳಿ ಭೀಕರ ರಸ್ತೆ ಅಪಘಾತ: ನಾಲ್ವರು ಸ್ಥಳದಲ್ಲೇ ಸಾವು, ಚಾಲಕನಿಗೆ ಗಂಭೀರ ಗಾಯ
ಮೃತರನ್ನು ಸಂಡೂರು ತಾಲೂಕಿನ ಲಕ್ಷ್ಮಿಪುರ ಗ್ರಾಮದ ನಿವಾಸಿಗಳಾದ ಆಶಾ (28 ವರ್ಷ), ಜಯಲಕ್ಷ್ಮಿ (21 ವರ್ಷ), ಒಬ್ಬ ಬಾಲಕ ಮತ್ತು ಒಬ್ಬ ಬಾಲಕಿ ಎಂದು ಗುರುತಿಸಲಾಗಿದೆ.;
ಬಳ್ಳಾರಿ ಜಿಲ್ಲೆಯ ಸಂಡೂರು ತಾಲೂಕಿನ ಜೈಸಿಂಗಾಪುರ ಗ್ರಾಮದ ಬಳಿ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಕಾರಿನಲ್ಲಿದ್ದ ನಾಲ್ವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಒಬ್ಬರಿಗೆ ಗಂಭೀರ ಪ್ರಮಾಣದ ಗಾಯಗಳಾಗಿವೆ. ಅದಿರು ಲಾರಿ ಮತ್ತು ಕಾರಿನ ನಡುವೆ ಮುಖಾಮುಖಿ ಡಿಕ್ಕಿ ಸಂಭವಿಸಿ ಈ ದುರ್ಘಟನೆ ಸಂಭವಿಸಿದೆ.
ಜೈಸಿಂಗಾಪುರ ಗ್ರಾಮದ ಸಮೀಪದ ರಸ್ತೆಯಲ್ಲಿ ನಡೆದಿದೆ. ಸಂಡೂರು ಪಟ್ಟಣದಿಂದ ಹೊಸಪೇಟೆ ಕಡೆಗೆ ತೆರಳುತ್ತಿದ್ದ ಕಾರಿಗೆ ವಿರುದ್ಧ ದಿಕ್ಕಿನಿಂದ ಅತಿ ವೇಗವಾಗಿ ಬಂದ ಅದಿರು ಲಾರಿಗೆ ಡಿಕ್ಕಿ ಹೊಡೆದಿದೆ. ಡಿಕ್ಕಿಯ ತೀವ್ರತೆ ಎಷ್ಟಿತ್ತೆಂದರೆ, ಕಾರು ಸಂಪೂರ್ಣವಾಗಿ ನುಜ್ಜುಗುಜ್ಜಾಗಿ, ಕಾರಿನಲ್ಲಿದ್ದ ನಾಲ್ವರು ಪ್ರಯಾಣಿಕರು ಸ್ಥಳದಲ್ಲೇ ಕೊನೆಯುಸಿರೆಳೆದಿದ್ದಾರೆ.
ಮೃತರನ್ನು ಸಂಡೂರು ತಾಲೂಕಿನ ಲಕ್ಷ್ಮಿಪುರ ಗ್ರಾಮದ ನಿವಾಸಿಗಳಾದ ಆಶಾ (28 ವರ್ಷ), ಜಯಲಕ್ಷ್ಮಿ (21 ವರ್ಷ), ಒಬ್ಬ ಬಾಲಕ ಮತ್ತು ಒಬ್ಬ ಬಾಲಕಿ ಎಂದು ಗುರುತಿಸಲಾಗಿದೆ. ಕಾರಿನ ಚಾಲಕನಿಗೆ ಗಂಭೀರ ಗಾಯಗಳಾಗಿದ್ದು, ಅವರನ್ನು ತಕ್ಷಣ ಆಸ್ಪತ್ರೆಗೆ ದಾಖಲಿಸಲಾಗಿದೆ. ಘಟನೆ ನಡೆದ ಕೂಡಲೇ ಲಾರಿ ಚಾಲಕ ಸ್ಥಳದಿಂದ ಪರಾರಿಯಾಗಿದ್ದಾನೆ ಎಂದು ತಿಳಿದುಬಂದಿದೆ.
ಘಟನೆಯ ಮಾಹಿತಿ ತಿಳಿದ ಕೂಡಲೇ ಸಂಡೂರು ಠಾಣೆಯ ಪೊಲೀಸರು ಸ್ಥಳಕ್ಕೆ ಧಾವಿಸಿ ಪರಿಶೀಲನೆ ನಡೆಸಿದ್ದಾರೆ. ಅಪಘಾತದ ಕುರಿತು ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು, ಪರಾರಿಯಾಗಿರುವ ಲಾರಿ ಚಾಲಕನ ಪತ್ತೆಗಾಗಿ ಶೋಧ ನಡೆಸುತ್ತಿದ್ದಾರೆ. ಅಪಘಾತಕ್ಕೆ ನಿಖರ ಕಾರಣ ಮತ್ತು ಇದಕ್ಕೆ ಯಾರು ಹೊಣೆ ಎಂಬುದರ ಬಗ್ಗೆ ಮುಂದಿನ ತನಿಖೆ ನಡೆಯುತ್ತಿದೆ.