Honey Trap | ಹನಿಟ್ರ್ಯಾಪ್ ಯತ್ನ ಪ್ರಕರಣ: ವಿಚಾರಣೆಗೆ ಕರೆದರೆ ಯುಗಾದಿ ಬಳಿಕ ಬರುವೆ ಎಂದ ಸಚಿವ ರಾಜಣ್ಣ

ಕರೆ ಸ್ವೀಕರಿಸಿದ ರಾಜಣ್ಣ ಅವರು, ಯುಗಾದಿ ಹಾಗೂ ಹೊಸತೊಡಕು ಪೂಜೆ ಮುಗಿದ ನಂತರ ವಿಚಾರಣೆಗೆ ಹಾಜರಾಗುತ್ತೇನೆ ಎಂದು ಅಧಿಕಾರಿಗಳಿಗೆ ತಿಳಿಸಿದ್ದರು.;

Update: 2025-03-29 07:58 GMT

ಕೆ. ಎನ್‌ ರಾಜಣ್ಣ 

ಸಹಕಾರ ಸಚಿವ ಕೆ.ಎನ್. ರಾಜಣ್ಣ ಅವರ ಹನಿಟ್ರ್ಯಾಪ್ ಯತ್ನ ಪ್ರಕರಣಕ್ಕೆ ಸಂಬಂಧಿಸಿದಂತೆ ಯುಗಾದಿ ಹಬ್ಬದ ನಂತರ ವಿಚಾರಣೆಗೆ ಹಾಜರಾಗುವುದಾಗಿ ಪ್ರಕರಣದ ತನಿಖೆ ನಡೆಸುತ್ತಿರುವ ಸಿಐಡಿ ಅಧಿಕಾರಿಗಳಿಗೆ ವಿನಂತಿಸಿದ್ದಾರೆ.

ಹನಿಟ್ರ್ಯಾಪ್ ಪ್ರಕರಣದ ಬಗ್ಗೆ ಹೆಚ್ಚಿನ ಮಾಹಿತಿ ಪಡೆಯಲು ಅಧಿಕಾರಿಗಳು ಶುಕ್ರವಾರ ಸಚಿವ ರಾಜಣ್ಣ ಅವರನ್ನು ಸಂಪರ್ಕಿಸಿ, ಅವರ ಹೇಳಿಕೆ ಪಡೆಯಲು ಕರೆ ಮಾಡಿದ್ದರು. ಕರೆ ಸ್ವೀಕರಿಸಿದ ರಾಜಣ್ಣ ಅವರು, ಯುಗಾದಿ ಹಾಗೂ ಹೊಸತೊಡಕು ಪೂಜೆ ಮುಗಿದ ನಂತರ ವಿಚಾರಣೆಗೆ ಹಾಜರಾಗುತ್ತೇನೆ ಎಂದು ಅಧಿಕಾರಿಗಳಿಗೆ ತಿಳಿಸಿದ್ದರು.

ಸಚಿವರ ಮನವಿಯನ್ನು ಸಿಎಂಐಡಿ ಅಧಿಕಾರಿಗಳು ಪರಿಗಣಿಸಿ, ಯುಗಾದಿ ಹಬ್ಬದ ನಂತರ ವಿಚಾರಣೆಯನ್ನು ಮುಂದುವರಿಸಲು ನಿರ್ಧರಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಸಿಐಡಿ ಅಧಿಕಾರಿಗಳ ಪ್ರಾಥಮಿಕ ಪರಿಶೀಲನೆ

ಹನಿಟ್ರ್ಯಾಪ್ ಯತ್ನ ಕುರಿತು ಸಿಐಡಿ ಅಧಿಕಾರಿಗಳು ಈಗಾಗಲೇ ವಿಚಾರಣೆ ಪ್ರಾರಂಭಿಸಿದ್ದು, ಅವರು ಬೆಂಗಳೂರಿನ ಜಯಮಹಲ್ ರಸ್ತೆಯಲ್ಲಿರುವ ಸಚಿವ ರಾಜಣ್ಣ ಅವರ ಅಧಿಕೃತ ಸರ್ಕಾರಿ ನಿವಾಸಕ್ಕೆ ತೆರಳಿ ಪ್ರಾಥಮಿಕ ಹಂತದ ಪರಿಶೀಲನೆ ನಡೆಸಿದ್ದಾರೆ. ಈ ವೇಳೆ ಮನೆಯ ಭದ್ರತಾ ಸಿಬ್ಬಂದಿ ಹಾಗೂ ಕೆಲಸಗಾರರನ್ನು ವಿಚಾರಣೆ ನಡೆಸಿ ಘಟನೆ ಸಂಬಂಧ ಮಾಹಿತಿಯನ್ನು ಸಂಗ್ರಹಿಸಿದ್ದಾರೆ.

ಪ್ರಕರಣದ ತನಿಖೆ: ಸರ್ಕಾರದ ತುರ್ತು ನಿರ್ಧಾರ

ರಾಜ್ಯ ಸರ್ಕಾರ ಈ ಪ್ರಕರಣದ ವಿಚಾರಣೆಯನ್ನು ಸಿಐಡಿಗೆ ವಹಿಸಿದ್ದು, ತ್ವರಿತವಾಗಿ ವರದಿ ನೀಡುವಂತೆ ಸೂಚಿಸಿದೆ. ಈ ಹಿನ್ನೆಲೆಯಲ್ಲಿ ಸಿಐಡಿ ಡಿಐಜಿ ವಂಶಿಕೃಷ್ಣ ನೇತೃತ್ವದ ತಂಡ, ಎಸ್ಪಿ ರಾಘವೇಂದ್ರ ಹೆಗಡೆ ಹಾಗೂ ಡಿವೈಎಸ್ಪಿ ಕೇಶವಮೂರ್ತಿ ಅವರ ನೇತೃತ್ವದಲ್ಲಿ ಕಾರ್ಯಾಚರಣೆ ನಡೆಸುತ್ತಿದೆ.

ಸಚಿವರ ಮನವಿ

ಇದಕ್ಕೂ ಮೊದಲು, ಸಚಿವ ರಾಜಣ್ಣ ಅವರು ರಾಜ್ಯ ಗೃಹ ಸಚಿವ ಡಾ.ಜಿ. ಪರಮೇಶ್ವರ್ ಅವರನ್ನು ಭೇಟಿಯಾಗಿ, ತಮ್ಮ ವಿರುದ್ಧ ಹನಿಟ್ರ್ಯಾಪ್ ಯತ್ನ ನಡೆಸಿದ ಕಿಡಿಗೇಡಿಗಳ ವಿರುದ್ಧ ಕಾನೂನು ಕ್ರಮ ಜರುಗಿಸುವಂತೆ ಮನವಿ ಸಲ್ಲಿಸಿದ್ದರು. ಈ ಕುರಿತು ಸರ್ಕಾರದಿಂದ ಸಿಐಡಿಗೆ ಪತ್ರ ಕಳುಹಿಸಲಾಗಿದ್ದು, ತಕ್ಷಣವೇ ಪ್ರಕರಣದ ತನಿಖೆ ಆರಂಭಿಸಲು ಸೂಚನೆ ನೀಡಲಾಗಿದೆ.

ಯುಗಾದಿ ನಂತರ ಸಚಿವ ರಾಜಣ್ಣ ವಿಚಾರಣೆಗೆ ಹಾಜರಾಗಲಿದ್ದು, ಅವರಿಂದ ಹನಿಟ್ರ್ಯಾಪ್ ಯತ್ನದ ಬಗ್ಗೆ ಸಿಐಡಿ ಅಧಿಕಾರಿಗಳು ಸಂಪೂರ್ಣ ಮಾಹಿತಿಯನ್ನು ಪಡೆಯಲಿದ್ದಾರೆ. ಪ್ರಕರಣದ ತನಿಖೆ ಚುರುಕುಗೊಳ್ಳುವ ಸಾಧ್ಯತೆಯಿದೆ.

Tags:    

Similar News