ಭೂ ಮಾಫಿಯಾದಿಂದ ಕೊನೆಗೂ ಮುಕ್ತಿ| ರಾಜಧಾನಿಯ ಜಲಮೂಲ ಹೆಸರಘಟ್ಟ ಹುಲ್ಲುಗಾವಲು ಇನ್ನು ಸಂರಕ್ಷಿತ ಪ್ರದೇಶ
ಇದರಿಂದ ಭೂಮಾಫಿಯಾದಿಂದಲೂ ರಕ್ಷಣೆ ಸಿಕ್ಕಂತಾಗುತ್ತದೆ. 133 ಪ್ರಭೇದದ ಪಕ್ಷಿಗಳು, 40 ಸ್ಥಳೀಯ ಹಾಗೂ ನೈಸರ್ಗಿಕ ಸಸ್ಯಗಳು ಮತ್ತು ಚಿರತೆ, ತೋಳ, ಕಾಡುಪಾಪ ಮೊದಲಾದ ವನ್ಯಜೀವಿಗಳಿಗೆ ಆಶ್ರಯತಾಣ ಸುರಕ್ಷಿತವಾಗಿದೆ.;
ಪರಿಸರ ಮಾಲಿನ್ಯದಿಂದ ಕಂಗೆಟ್ಟಿರುವ ಸಿಲಿಕಾನ್ ಸಿಟಿ ಬೆಂಗಳೂರಿನ ಮಟ್ಟಿಗೆ ಆಮ್ಲಜನಕದ ತೊಟ್ಟಿಲು ಹಾಗೂ ರಾಕ್ಷಸ ವೇಗದಲ್ಲಿ ಬೆಳೆಯುತ್ತಿರುವ ಮಹಾನಗರದ ಪ್ರಮುಖ ಜಲ ಮೂಲವಾಗಿರುವ ಹೆಸರಘಟ್ಟ ಕೆರೆ ಮತ್ತು ಸುತ್ತಲಿನ ಪ್ರದೇಶವನ್ನು "ಗ್ರೇಟರ್ ಹೆಸರಘಟ್ಟ ಹುಲ್ಲುಗಾವಲು ಸಂರಕ್ಷಣಾ ಮೀಸಲು ಪ್ರದೇಶ" ಎಂದು ಸರ್ಕಾರ ಘೋಷಿಸಿದೆ. ಇದರಿಂದಾಗಿ ರಿಯಲ್ ಎಸ್ಟೇಟ್ ಚಟುವಟಿಕೆ ಮತ್ತು ಅಭಿವೃದ್ಧಿ ಹೆಸರಿನ ಹಸ್ತಕ್ಷೇಪದಿಂದ ಹುಲ್ಲುಗಾವಲನ್ನು ರಕ್ಷಿಸುವ ಪರಿಸರ ಹೋರಾಟಗಾರರ ಪ್ರಯತ್ನಕ್ಕೆ ಯಶಸ್ಸು ದೊರಕಿದೆ.
ಇದರಿಂದ 133 ಪ್ರಭೇದದ ಪಕ್ಷಿಗಳು, 40 ಸ್ಥಳೀಯ ಹಾಗೂ ನೈಸರ್ಗಿಕ ಸಸ್ಯಗಳು ಮತ್ತು ಚಿರತೆ, ತೋಳ, ಕಾಡುಪಾಪ ಮೊದಲಾದ ವನ್ಯಜೀವಿಗಳಿಗೆ ಆಶ್ರಯತಾಣವಾದ ಈ ಹುಲ್ಲುಗಾವಲು ಪ್ರದೇಶದ ಸಂರಕ್ಷಣೆ ಬಗ್ಗೆ ಅನೇಕ ವರ್ಷಗಳಿಂದ ಎದ್ದಿದ್ದ ಪರಿಸರವಾದಿಗಳ ಕೂಗಿಗೆ ನ್ಯಾಯ ದೊರೆತಂತಾಗಿದೆ.
ದಶಕಗಳಿಂದ ಕೇಳಿಬಂದಿದ್ದ ಹೆಸರಘಟ್ಟ ಉಳಿಸಿ (ಸೇವ್ ಹೆಸರಘಟ್ಟ) ಅಭಿಯಾನ ಇತ್ತೀಚಿನ ವರ್ಷಗಳಲ್ಲಿ ಹೆಚ್ಚು ಪ್ರಬಲವಾಗಿತ್ತು. ಪರಿಸರವಾದಿಗಳು SAVE HESARAGHATTA ಎಂಬ ಅಭಿಯಾನದ ಮೂಲಕ ಜಗತ್ತಿನಾದ್ಯಂತ ಪರಿಸರ ಪ್ರೇಮಿಗಳ ಬೆಂಬಲ ಪಡೆದುಕೊಂಡಿದ್ದರು. ಇದು ರಾಜ್ಯ ಮತ್ತು ಕೇಂದ್ರ ಸರ್ಕಾರದ ಗಮನವನ್ನೂ ಸೆಳೆಯಲಾಗಿತ್ತು. ಸಹಿಸಂಗ್ರಹ ಅಭಿಯಾನದ ಮೂಲಕ ಸಾರ್ವಜನಿಕರೂ ತಮ್ಮ ಬೆಂಬಲವನ್ನು ವ್ಯಕ್ತಪಡಿಸಿದ್ದರು.
ಕಳದ ಅಕ್ಟೋಬರ್ ನಲ್ಲಿ ವನ್ಯಜೀವಿ ಮಂಡಳಿಯ ಅನುಮೋದನೆ ಬಳಿಕ ಇಡೀ ಪ್ರದೇಶದ ವಾಸ್ತವ ಸಮೀಕ್ಷೆ ನಡೆಸಿ ನಕ್ಷೆ ತಯಾರಿಸಲು ಸೂಚಿಸಲಾಗಿತ್ತು, ಸರ್ವೆಯಲ್ಲಿ 5010 ಎಕರೆಗೆ ಬದಲಾಗಿ 5678.32 ಎಕರೆ ಪ್ರದೇಶವಿರುವುದು ಖಾತ್ರಿಯಾಗಿತ್ತು. ಈಗ ಇಡೀ ಪ್ರದೇಶವನ್ನು ಸಂರಕ್ಷಿತ ಮೀಸಲು ಎಂದು ಘೋಷಿಸಲಾಗಿದೆ.
ಈ ಘೋಷಣೆಯಿಂದ ಬೆಂಗಳೂರಿನ ಆಮ್ಲಜನಕದ ಹೆಬ್ಬಾಗಿಲಾದ ಹೆಸರಘಟ್ಟ ಹುಲ್ಲುಗಾವಲು , ಅನಪೇಕ್ಷಿತ ನಿರ್ಮಾಣಗಳು, ಕಾಮಗಾರಿಗಳಿಂದ ತಪ್ಪಿಸಿಕೊಂಡಂತಾಗುತ್ತದೆ. ಭೂಕಬಳಿಕೆ ಮಾಡುವ ರಿಯಲ್ ಎಸ್ಟೇಟ್ ಮಾಪಿಯಾದ ಕಣ್ಣಿಂದಲೂ ರಕ್ಷಣೆ ಸಿಕ್ಕಂತಾಗುತ್ತದೆ. ಅಮೂಲ್ಯ ಜೀವ ವೈವಿವಧ್ಯದ ತಾಣವನ್ನು ಬೆಂಗಳೂರಿನ ಒಡಲಲ್ಲಿ ಕಾಪಾಡಿಕೊಂಡಂತಾಗುತ್ತದೆ.
ಈ ಪ್ರದೇಶದಲ್ಲಿ ಹೆಸರಘಟ್ಟ ಕೆರೆ, ಬ್ಯಾತ ಕೆರೆ ಸೇರಿದಂತೆ ಹಲವು ಕೆರೆಗಳಿದ್ದು ವಲಸೆ ಹಕ್ಕಿಗಳ ಸಂತಾನೋತ್ಪತ್ತಿಯ ತಾಣವೂ ಆಗಿದೆ. ಬೆಂಗಳೂರು ನಗರದ ಜನತೆಯ ನೀರಿನ ಅವಶ್ಯಕತೆ ಪೂರೈಸುತ್ತಿದ್ದ ಹೆಸರಘಟ್ಟ ಕೆರೆ ಭವಿಷ್ಯದಲ್ಲೂ ರಾಜಧಾನಿಯ ಪ್ರಮುಖ ಜಲ ಮೂಲವಾಗಲಿದೆ. ಬೆಂಗಳೂರು ನಗರ ಜಿಲ್ಲೆ ಯಲಹಂಕ ಉತ್ತರ ತಾಲೂಕಿನ ಒಟ್ಟು 5678.32 ಎಕರೆ ಪ್ರದೇಶವನ್ನು ವನ್ಯಜೀವಿ ಸಂರಕ್ಷಣಾ ಅಧಿನಿಯಮ 1972ರ ಕಲಂ 36(ಎ) ಅನ್ವಯ ‘ಗ್ರೇಟರ್ ಹೆಸರುಘಟ್ಟ ಹುಲ್ಲುಗಾವಲು ಸಂರಕ್ಷಣಾ ಮೀಸಲು’ ಎಂದು ಘೋಷಿಸಲಾಗಿದ್ದು, ಈಗ ಇಡೀ ಪ್ರದೇಶ ಸುರಕ್ಷಿತವಾಗಿರಲಿದೆ.
ಕಳೆದ ಅಕ್ಟೋಬರ್ 7ರಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಅಧ್ಯಕ್ಷತೆಯಲ್ಲಿ ನಡೆದ ರಾಜ್ಯ ವನ್ಯಜೀವಿ ಮಂಡಳಿಯ ಸಭೆಯಲ್ಲಿ ‘ಗ್ರೇಟರ್ ಹೆಸರುಘಟ್ಟ ಹುಲ್ಲುಗಾವಲು ಸಂರಕ್ಷಣಾ ಮೀಸಲು’ ಎಂದು ಘೋಷಿಸುವ ಪ್ರಸ್ತಾವನೆಗೆ ಅನುಮೋದನೆ ನೀಡಲಾಗಿತ್ತು. ಗುರುವಾರ ನಡೆದ ಸಚಿವ ಸಂಪುಟ ಸಭೆ ಇದಕ್ಕೆ ಅಧಿಕೃತ ಮುದ್ರೆ ಒತ್ತಿದೆ.
ಈ ಘೋಷಣೆಯಿಂದ ಅಪರೂಪದ ನೈಸರ್ಗಿಕ ಹುಲ್ಲುಗಾವಲಿನ ಸಂರಕ್ಷಣೆ ಆಗಲಿದೆ. ಪಕ್ಷಿ ಮತ್ತು ಕೀಟಗಳ ಸಂರಕ್ಷಣೆಗೆ ಹುಲ್ಲುಗಾವಲಿನ ರಕ್ಷಣೆ ಅತ್ಯಗತ್ಯ. ಬೆಂಗಳೂರಿನೊಳಗೇ ಇರುವ ಇಂತಹ ಸುಂದರ ಹುಲ್ಲುಗಾವಲನ್ನು ರಕ್ಷಿಸಲು ತಾವು ಎಲ್ಲ ಒತ್ತಡಗಳನ್ನೂ ಮೀರಿ ನಿರ್ಧಾರ ಕೈಗೊಂಡಿದ್ದಾಗಿ ಅರಣ್ಯ ಮತ್ತು ಪರಿಸರ ಖಾತೆ ಸಚಿವ ಈಶ್ವರ ಖಂಡ್ರೆ ತಿಳಿಸಿದ್ದಾರೆ. ಹಾಗೂ ಸಿದ್ದರಾಮಯ್ಯ ಅವರನ್ನು ಈ ಸಂಬಂಧ ಅಭಿನಂದಿಸಿದ್ದಾರೆ.
ಸ್ಥಳೀಯರಿಗೆ ತೊಡಕಿಲ್ಲ
‘ಗ್ರೇಟರ್ ಹೆಸರುಘಟ್ಟ ಹುಲ್ಲುಗಾವಲು ಸಂರಕ್ಷಣಾ ಮೀಸಲು’ ಎಂದು ಘೋಷಣೆ ಮಾಡಿರುವುದರಿಂದ ಸ್ಥಳೀಯರಿಗೆ ಯಾವುದೇ ತೊಡಕಾಗುವುದಿಲ್ಲ. ಆದರೆ ಈ ಘೋಷಣೆ ಅತ್ಯಮೂಲ್ಯವಾದ ಭೂಮಿಯ ಒತ್ತುವರಿ ಮತ್ತು ಅಪರೂಪದ ಪಕ್ಷಿ, ಪ್ರಾಣಿಗಳ ಕಳ್ಳಬೇಟೆಯನ್ನು ನಿಯಂತ್ರಿಸುತ್ತದೆ ಎಂದು ಹೇಳಿದರು.
ಹೆಸರಘಟ್ಟ ಯಾಕೆ ಮುಖ್ಯ?
ಬೆಂಗಳೂರಿನ ಮೂಲ ಪರಿಸರದಲ್ಲಿದ್ದಂತಹ ಸಸ್ಯ, ಕ್ರೀಟ ಪ್ರಭೇದಗಳು ಹೆಸರಘಟ್ಟ ಹುಲ್ಲುಗಾವಲಿನಲ್ಲಿವೆ. ಸುಮಾರು 1900 ಎಕರೆ ಆವರಣದಲ್ಲಿ ಮೂರ್ನಾಲ್ಕು ಕೆರೆಗಳು ಹಾಗೂ 356 ಎಕರೆ ವಿಸ್ತೀರ್ಣದಲ್ಲಿ ಹುಲ್ಲುಗಾವಲಿದೆ. ಈ ಹುಲ್ಲುಗಾವಲು ಅಂತರ್ಜಲ ಹೆಚ್ಚಳಕ್ಕೆ ಕಾರಣವೂ ಆಗಿದ್ದು, ಸುತ್ತಲಿನ ಜಲಮೂಲಗಳಿಗೂ ಆಸರೆಯಾಗುತ್ತಿದೆ. ಬನ್ನೇರುಘಟ್ಟದ ನಂತರ ಬೆಂಗಳೂರು ಮಹಾನಗರದ ಎರಡನೇ ಅತಿ ದೊಡ್ಡ ಹಸಿರು ತಾಣ (ಗ್ರೀನ್‌ಸ್ಪೇಸ್) ಹೆಸರಘಟ್ಟದ ಹುಲ್ಲುಗಾವಲು. ಅರ್ಕಾವತಿ ನದಿ ಪಾತ್ರದಲ್ಲಿರುವ ಈ ಹುಲ್ಲುಗಾವಲಿನಲ್ಲಿ ದಶಕಗಳ ಹಿಂದೆ ‘ಕಾಂಕ್ರೀಟ್ ಕಾಡು’ ನಿರ್ಮಿಸುವ ಪ್ರಯತ್ನಗಳು ಆರಂಭವಾದವು. ಇದರಿಂದ ಆತಂಕಗೊಂಡ ಪರಿಸರ ಕಾರ್ಯಕರ್ತರು, ಹೆಸರಘಟ್ಟ ಉಳಿಸಿ, ಹುಲ್ಲುಗಾವಲನ್ನು ಸಂರಕ್ಷಿತ ಪ್ರದೇಶ ಎಂದು ಘೋಷಿಸುವಂತೆ ಒತ್ತಾಯಿಸಿ ಅಭಿಯಾನ ಆರಂಭಿಸಿದ್ದರು.
ಹೆಸರಘಟ್ಟ ಹುಲ್ಲುಗಾವಲನ್ನು ಪರಿಸರ ತಜ್ಞರು ಬೆಂಗಳೂರು ಮಹಾನಗರದ ‘ಆಮ್ಲಜನಕದ ತಾಣ’ ಎಂದು ಗುರುತಿಸಿದ್ದಾರೆ. ಈ ಪ್ರದೇಶ ವಿಶಿಷ್ಟ ಜೀವಸಂಕುಲ, ಜೀವವೈವಿಧ್ಯದ ತಾಣವಾಗಿದೆ. ನೋಡುವಾಗ ಕೇವಲ ಹುಲ್ಲುಗಾವಲಿನಂತೆ ಕಾಣುವ ಈ ಪ್ರದೇಶದಲ್ಲಿ, ಹುಲ್ಲಿನ ಪೊದೆಯಲ್ಲೇ ಗೂಡು ಕಟ್ಟಿ, ಮೊಟ್ಟೆ ಇಟ್ಟು ಸಂಸಾರ ಮಾಡುವ ನೆಲಗುಬ್ಬಿಯಂತಹ ಪಕ್ಷಿ ಪ್ರಭೇದಗಳಿವೆ. ಅಳಿವಿನಂಚಿನಲ್ಲಿರುವ ಲೆಸ್ಸರ್ ಫ್ಲೋರಿಕಾನ್‌ನಂತಹ ಪಕ್ಷಿಗಳೂ ಇವೆ. ದೊಡ್ಡ ಚುಕ್ಕಿ ಗಿಡುಗ (ಗ್ರೇಟರ್ ಸ್ಪಾಟೆಡ್ ಈಗಲ್), ಇವೆ. ಚಳಿಗಾಲದಲ್ಲಿ ರಷ್ಯಾ, ಮಧ್ಯ ಏಷ್ಯಾ ಭಾಗದಿಂದ ಪಕ್ಷಿಗಳು ವಲಸೆ ಬರುತ್ತವೆ. ಕಾಡುಪಾಪ (ಸ್ಲೆಂಡರ್ ಲೋರಿಸ್), ನೀರು ನಾಯಿ (ಸ್ಮೂತ್ ಕೋಟೆಡ್ ಒಟ್ಟೆರ್) ಅಂತಹ ವನ್ಯಜೀವಿಗಳೂ ಇಲ್ಲಿವೆ.