Medicine Shortage | ಸರ್ಕಾರಿ ಆಸ್ಪತ್ರೆ, ಆರೋಗ್ಯ ಕೇಂದ್ರಗಳಲ್ಲಿ ಔಷಧ ಕೊರತೆ ತೀವ್ರ
2017-18 ಮತ್ತು 2021-22 ರ ನಡುವೆ ರಾಜ್ಯಾದ್ಯಂತ ಆರೋಗ್ಯ ಸಂಸ್ಥೆಗಳು ಮನವಿ ಸಲ್ಲಿಸಿದ ಪ್ರಮಾಣದಲ್ಲಿ ರಾಜ್ಯದಲ್ಲಿ ರಾಜ್ಯ ವೈದ್ಯಕೀಯ ಸರಬರಾಜು ನಿಗಮ ನಿಯಮಿತ (KSMSCL) ಅಗತ್ಯ ಔಷಧಿಗಳನ್ನು ಖರೀದಿಸಿಯೇ ಇಲ್ಲ.;
ರಾಜ್ಯದಲ್ಲಿ ಔಷಧಗಳ ಕೊರತೆ ಬಗ್ಗೆ ಆಗಾಗ್ಗೆ ದೂರು ಕೇಳಿಬರುತ್ತಿದ್ದು, ಇದೀಗ ಭಾರತೀಯ ಸಾರ್ವಜನಿಕ ಆರೋಗ್ಯ ಗುಣಮಟ್ಟ (ಐಪಿಎಚ್‌ಎಸ್) ಮಾನದಂಡಗಳಿಗಿಂತ ಕರ್ನಾಟಕದ ಆರೋಗ್ಯ ಸಂಸ್ಥೆಗಳಲ್ಲಿ ಅಗತ್ಯ ಔಷಧಿಗಳ ಸಂಖ್ಯೆ ಗಣನೀಯವಾಗಿ ಕಡಿಮೆ ಇದೆ ಎಂದು ಸಿಎಜಿ ವರದಿ ಹೇಳಿದೆ.
2017-18 ಮತ್ತು 2021-22 ರ ನಡುವೆ ರಾಜ್ಯಾದ್ಯಂತ ಆರೋಗ್ಯ ಸಂಸ್ಥೆಗಳು ಮನವಿ ಸಲ್ಲಿಸಿದ ಪ್ರಮಾಣದಲ್ಲಿ ರಾಜ್ಯದಲ್ಲಿ ರಾಜ್ಯ ವೈದ್ಯಕೀಯ ಸರಬರಾಜು ನಿಗಮ ನಿಯಮಿತ (KSMSCL) ಅಗತ್ಯ ಔಷಧಿಗಳನ್ನು ಖರೀದಿಸಿಯೇ ಇಲ್ಲ.
2020-21ರಲ್ಲಿ ರಾಜ್ಯದ ಆರೋಗ್ಯ ಸಂಸ್ಥೆಗಳು ನಿಗಮಕ್ಕೆ 761 ಅಗತ್ಯ ಔಷಧಗಳ ಖರೀದಿಗೆ ಮನವಿ ಸಲ್ಲಿಸಿದ್ದವು. ಆದರೆ, ಆ ಪೈಕಿ 238 ಔಷಧಗಳನ್ನು ಮಾತ್ರ ಖರೀದಿಸಲಾಗಿದೆ ಎಂದು ವರದಿ ಉಲ್ಲೇಖಿಸಿದೆ. ಉಳಿದಂತೆ ಸ್ಥಳೀಯವಾಗಿ ಖರೀದಿಸಲು ಸಂಸ್ಥೆಗಳಿಗೆ ಅನುಮತಿ ನೀಡಲಾಗಿತ್ತು.
ಜಿಲ್ಲಾ ಆಸ್ಪತ್ರೆಗಳಲ್ಲಿ ಸುಮಾರು 128 ರಷ್ಟು ಔಷಧಗಳ ಅಗತ್ಯವಿದ್ದರೆ, 50 ಕ್ಕಿಂತಲೂ ಕಡಿಮೆ ಅಗತ್ಯ ಔಷಧಿಗಳ ದಾಸ್ತಾನು ಮಾತ್ರ ಇರುವುದು ಗೊತ್ತಾಗಿದೆ. ಅಂದರೆ, ಶೇ 61 ರಷ್ಟು ಕೊರತೆಯಿದೆ ಎಂದು ಸಿಎಜಿ ವರದಿ ತಿಳಿಸಿದೆ.
ತಾಲೂಕು ಆಸ್ಪತ್ರೆಗಳಲ್ಲಿ 81 ರಷ್ಟು ಔಷಧಗಳ ಅಗತ್ಯವಿದ್ದರೆ, ಕೇವಲ 35 ಅಥವಾ ಅದಕ್ಕಿಂತ ಕಡಿಮೆ ದಾಸ್ತಾನಿವೆ. ಅಂದರೆ, ಶೇ 57 ರಷ್ಟು ಕೊರತೆಯಿದೆ. ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ (ಸಿಎಚ್‌ಸಿ) ಕೇವಲ 25 ಅಥವಾ ಅದಕ್ಕಿಂತ ಕಡಿಮೆ ಅಗತ್ಯ ಔಷಧಗಳ ದಾಸ್ತಾನಿವೆ. ಇವುಗಳಲ್ಲಿ ಸದ್ಯ 64 ಅಗತ್ಯ ಔಷಧಗಳ ಬೇಡಿಕೆ ಇವೆ ಎಂದು ಸಿಎಜಿ ಹೇಳಿದೆ.
2016-22ರಲ್ಲಿ ತಪಾಸಣೆ ನಡೆಸಿದ ಎಲ್ಲಾ ಐದು ಜಿಲ್ಲೆಗಳಲ್ಲಿ (ಬಳ್ಳಾರಿ, ಬೆಂಗಳೂರು ನಗರ, ಧಾರವಾಡ, ಕೋಲಾರ ಮತ್ತು ಮೈಸೂರು) ಅಗತ್ಯ ಔಷಧಿ ಪೂರೈಕೆಯ ಒಟ್ಟಾರೆ ಶೇಕಡಾವಾರು ಪ್ರಮಾಣ ಶೇ.35 ಕ್ಕಿಂತ ಕಡಿಮೆಯಾಗಿದೆ ಎಂದು ವರದಿ ತಿಳಿಸಿದೆ.
ಆರೋಗ್ಯ ಸಂಸ್ಥೆಗಳು ಸ್ಥಳೀಯವಾಗಿ ಕೆಲವು ಔಷಧಿಗಳನ್ನು ಖರೀದಿಸುವುದರಿಂದ ವೆಚ್ಚದಲ್ಲಿ ವ್ಯತ್ಯಾಸವಾಗುತ್ತಿದೆ ಎಂದು ಸಿಎಜಿ ವರದಿ ತಿಳಿಸಿದ್ದು, ಆ ಕುರಿತ ವಿವರವನ್ನೂ ಒದಗಿಸಿದೆ. ವಿವರಣಾತ್ಮಕ ಪ್ರಕರಣಗಳನ್ನು ವರದಿಯು ಒದಗಿಸಿದೆ, 2019-20 ರಲ್ಲಿ ನೋವಿನ ಔಷಧಿಗೆ ಶೇ 783.7 ರಷ್ಟು ಹೆಚ್ಚು ವೆಚ್ಚವಾಗಿದೆ. ಏಕೆಂದರೆ, ಈ ಔಷಧದ ಪ್ರತಿ ಯೂನಿಟ್ ದರವು ಕೆಎಸ್ಎಂಎಸ್ಸಿಎಲ್ನಲ್ಲಿ 2.15 ರೂ. ಆಗಿದ್ದರೆ, ಸ್ಥಳೀಯ ಪೂರೈಕೆದಾರರಿಂದ ಖರೀದಿಸಲು 19 ರೂ. ತೆರಬೇಕಾಗಿತ್ತು ಎಂದು ವರದಿ ತಿಳಿಸಿದೆ.