JDS Protest |ಕುರ್ಚಿ ಉಳಿಸಿಕೊಳ್ಳಲು ಜಾತಿಗಣತಿ ನಾಟಕ; ಕುಮಾರಸ್ವಾಮಿ ಆರೋಪ

ಹತ್ತು ವರ್ಷದಲ್ಲಿ ಬಹಳ ಬದಲಾವಣೆ ಆಗಿದೆ. ಈಗ ನೋಡಿದರೆ ಇವರು ತಮ್ಮ ರಾಜಕೀಯ ಸ್ವಾರ್ಥಕ್ಕಾಗಿ ಜಾತಿ-ಜಾತಿಗಳ ಮಧ್ಯೆ ಸಂಘರ್ಷ ತರುವ ಕೆಲಸ ಮಾಡುತ್ತಿದ್ದಾರೆ ಎಂದು ಕುಮಾರಸ್ವಾಮಿ ಆರೋಪಿಸಿದ್ದಾರೆ.;

Update: 2025-04-12 13:45 GMT

ಜಾತಿಗಣತಿ ವರದಿಗೆ ಅರ್ಥವೇ ಇಲ್ಲ, ಕಾಂತರಾಜು ಆಯೋಗದ ವರದಿ ಸಿದ್ದ ಮಾಡಿ ಹತ್ತು ವರ್ಷಗಳೇ ಕಳೆದಿವೆ. ಜನರಲ್ಲಿ ಗ್ಯಾರಂಟಿ ವೈಫಲ್ಯ, ಭ್ರಷ್ಟಾಚಾರ, ದರ ಏರಿಕೆ ವಿರುದ್ಧ ಆಕ್ರೋಶ ಸ್ಫೋಟವಾಗುವ ಹಂತದಲ್ಲಿದೆ. ಹೀಗಾಗಿ ಜನರ ಗಮನ ಬೇರೆಡೆಗೆ ಹೊರಳಿಸಲು ಸಿಎಂ ಸಿದ್ದರಾಮಯ್ಯ ಅವರು ಜಾತಿ ಗಣತಿ ಡ್ರಾಮಾ ‌ಆಡುತ್ತಿದ್ದಾರೆ ಎಂದು ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ ಕಿಡಿಕಾರಿದ್ದಾರೆ. 

ಬೆಂಗಳೂರಿನ ಫ್ರೀಡಂ ಪಾರ್ಕ್ ಬಳಿ ಮಾಧ್ಯಮಗಳ ಜತೆ ಮಾತನಾಡಿದ ಅವರು, ಜಾತಿ ಗಣತಿ ಮಾಡಬೇಕಾದರೆ ಹೊಸದಾಗಿ ಸಮೀಕ್ಷೆ ಮಾಡಬೇಕು. ಹೊಸದಾಗಿ ನೀವು ವರದಿ ಕೊಡಬೇಕಾಗುತ್ತದೆ. ಹತ್ತು ವರ್ಷದಲ್ಲಿ ಬಹಳ ಬದಲಾವಣೆ ಆಗಿದೆ. ಈಗ ನೋಡಿದರೆ ಇವರು ತಮ್ಮ ರಾಜಕೀಯ ಸ್ವಾರ್ಥಕ್ಕಾಗಿ ಜಾತಿ-ಜಾತಿಗಳ ಮಧ್ಯೆ ಸಂಘರ್ಷ ತರುವ ಕೆಲಸ ಮಾಡುತ್ತಿದ್ದಾರೆ. ಸಿದ್ದರಾಮಯ್ಯ ರಾಜ್ಯವನ್ನು ಸರ್ವನಾಶ ಮಾಡಲು ಹೊರಟಿದ್ದಾರೆ ಎಂದು ಆರೋಪಿಸಿದ್ದಾರೆ.

ಜಾತ್ಯತೀತ ಎಂದು ಹೇಳಿಕೊಳ್ಳುವ, ಸಂವಿಧಾನ ಪ್ರತಿಯನ್ನು ಸದಾ ಕೈಯ್ಯಲ್ಲಿ ಹಿಡಿದು ಶೋ ಮಾಡುವ ಕಾಂಗ್ರೆಸ್ ಸಮಾಜವನ್ನು ಒಡೆಯುವ ಕೆಲಸ ಮಾಡುತ್ತಿದೆ ಎಂದು ಅವರು ವಾಗ್ದಾಳಿ ನಡೆಸಿದ್ದಾರೆ.

ಜಾತಿ ಸಂಘರ್ಷಕ್ಕೆ ಏನೇನು ಮಾಡಬೇಕೋ ಅದಕ್ಕೆ ವೇದಿಕೆ ಸಿದ್ಧ ಮಾಡಲು ಸಿದ್ದರಾಮಯ್ಯ ಹೊರಟಿದ್ದಾರೆ. ಇವರು ಬಂದು ಎರಡು ವರ್ಷವಾಯಿತು. ಆವಾಗಿನಿಂದ ಯಾಕೆ ವರದಿ ಜಾರಿ ಮಾಡಲಿಲ್ಲ. ಕುರ್ಚಿ ಉಳಿಸಿಕೊಳ್ಳಬೇಕೆಂದು ಈ ಡ್ರಾಮಾ ಆರಂಭ ಮಾಡಿದ್ದಾರೆ ಎಂದು ದೂರಿದ್ದಾರೆ.

ನನ್ನನ್ನು ಹೆದರಿಸಿ ಬೆದರಿಸಲು ಪ್ರಯತ್ನ 

ನನ್ನ ಬಳಿ ಟನ್‌ಗಟ್ಟಲೇ ದಾಖಲೆಗಳು ಇವೆ ಎಂಬುದು ನಿಜ. ಆದರೆ ಕೆಲವರು ನನ್ನನ್ನು ಹೆದರಿಸುವ ಕೆಲಸ ಮಾಡುತ್ತಿದ್ದಾರೆ. ನನ್ನ ದನಿಯನ್ನು ಅಡಗಿಸಲು ಯಾರಿಂದಲೂ ಸಾಧ್ಯವಿಲ್ಲ. ಹೆದರುವ ವ್ಯಕ್ತಿಯೂ ನಾನಲ್ಲ ಎಂದು ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ ಹೇಳಿದ್ದಾರೆ. 

ನನ್ನ ವಿರುದ್ಧ ಪ್ರತಿಭಟನೆ ಮಾಡಿ ಲಾರಿಯಲ್ಲಿ ದಾಖಲೆಗಳನ್ನು ತಂದು ಕೊಡುತ್ತಾರಂತೆ. ತಂದು ಕೊಡಲಿ, ನಾನೂ ನೋಡುತ್ತೇನೆ. ಕಾಂಗ್ರೆಸ್‌ ಪುಡಾರಿಗಳು ಯಾವ ಮಟ್ಟದಲ್ಲಿ ಭ್ರಷ್ಟಾಚಾರ ಮಾಡುತ್ತಿದ್ದಾರೆ ಎನ್ನುವುದು ನನಗೆ ಗೊತ್ತಿದೆ. ನನ್ನಲ್ಲಿರುವ ದಾಖಲೆಗಳನ್ನು ಬಿಚ್ಚಿಟ್ಟರೆ ಜನರೇ ಇವರನ್ನು ಓಡಿಸುತ್ತಾರೆ ಎಂದು ಎಚ್ಚರಿಕೆ ನೀಡಿದ್ದಾರೆ.

ಕಾಂಗ್ರೆಸ್ಸಿಗರಿಂದ ಕಿರುಕುಳ; ಆರೋಪ 

ನಾನು ಅಧಿಕಾರದಲ್ಲಿದ್ದಾಗ ಯಾವುದೇ ಕಾನೂನು ಸಂಸ್ಥೆಗಳನ್ನು ದುರುಪಯೋಗ ಮಾಡಿಕೊಂಡಿಲ್ಲ. ನ್ಯಾಯಕ್ಕಾಗಿ ಹೋರಾಟ ಮಾಡುತ್ತಿದ್ದೇನೆ. ಈಗ ಕೇಂದ್ರ ಸಚಿವನಾಗಿದ್ದಾಗಲೂ ಕಾಂಗ್ರೆಸ್ ನವರು ನನಗೆ ಕಿರುಕುಳ ನೀಡುತ್ತಿದ್ದಾರೆ. ಅದಕ್ಕೆ ಹೆದರಲ್ಲ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಸಿದ್ದರಾಮಯ್ಯ ಮೇಲೆ ಗಣಿ ಆರೋಪವಿದೆ 

ನನ್ನ ಮೇಲೆ ಗಣಿ ಗುತ್ತಿಗೆ ಆರೋಪ ಮಾಡಿರುವ ಸಿದ್ದರಾಮಯ್ಯ ಅವರು, ಈಗ ತಮ್ಮ ಸುತ್ತ ಸುತ್ತಿಕೊಂಡಿರುವ ಗಣಿ ಅಕ್ರಮದ ಬಗ್ಗೆ ಮಾತನಾಡಲಿ. ತಮ್ಮ ವಿರುದ್ಧ ಬಂದಿರುವ ಆರೋಪಕ್ಕೆ ಅವರು ಏನು ಹೇಳುತ್ತಾರೆ? ಎಂದು ಪ್ರಶ್ನಿಸಿದ್ದಾರೆ.

ರಾಮಮೂರ್ತಿ ಗೌಡ ಎನ್ನುವವರು ಸಿದ್ದರಾಮಯ್ಯ ವಿರುದ್ಧ ಅಕ್ರಮ ಗಣಿಗಾರಿಕೆ ಬಗ್ಗೆ ತನಿಖೆಗೆ ಪ್ರಾಸಿಕ್ಯೂಷನ್ ಕೊಡಿ ಅಂತ ರಾಜ್ಯಪಾಲರ ಕೇಳಿದ್ದಾರೆ. ಸಿದ್ದರಾಮಯ್ಯ ಅವರು ಮೊದಲ ಅವಧಿಗೆ ಸಿಎಂ ಆಗಿದ್ದ ಸಂದರ್ಭದಲ್ಲಿ ಗಣಿ ಗುತ್ತಿಗೆ ನವೀಕರಣಕ್ಕೆ 500 ಕೋಟಿ ರೂ.ಕಿಕ್‌ಬ್ಯಾಕ್‌ ಪಡೆದಿರುವ ಆರೋಪವಿದೆ. ಗಣಿ ಗುತ್ತಿಗೆ ನವೀಕರಣದಿಂದ ಸರ್ಕಾರದ ಬೊಕ್ಕಸಕ್ಕೆ 5,000 ಕೋಟಿ ರೂ.ನಷ್ಟ ಉಂಟು ಮಾಡಿರುವ ಗಂಭೀರ ಆಪಾದನೆ ಎದುರಿಸುತ್ತಿದ್ದಾರೆ. ಇದಕ್ಕೆ ಮೊದಲು ಉತ್ತರ ಕೊಡಿ ಎಂದು ಕುಮಾರಸ್ವಾಮಿ ಅವರು ಸಿಎಂ ಸಿದ್ದರಾಮಯ್ಯ ಅವರನ್ನು ಆಗ್ರಹಿಸಿದ್ದಾರೆ.

ಅತ್ಯಂತ ಕೆಟ್ಟ ಸರ್ಕಾರ ಎಂದ ಎಚ್‌ಡಿಕೆ

ಇನ್ನೆರಡು ತಿಂಗಳಲ್ಲಿ ಕಾಂಗ್ರೆಸ್ ಸರ್ಕಾರ ಎರಡು ವರ್ಷ ಪೂರೈಸಲಿದೆ. ಕರ್ನಾಟಕದಲ್ಲಿ ಇಲ್ಲಿಯವರೆಗೆ ಇಂತ ಕೆಟ್ಟ ಸರ್ಕಾರ ಅಧಿಕಾರಕ್ಕೆ ಬಂದಿರಲಿಲ್ಲ. ನಮ್ಮ ಪಕ್ಷದ 16 ಶಾಸಕರು ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದಾರೆ. ಇಂಥ ಪಕ್ಷವನ್ನು ಸರ್ವನಾಶ ಮಾಡಲು ಸಂಚು ಮಾಡಿದ್ದರು. ಆ ಸಂಚನ್ನು ವಿಫಲ ಮಾಡಿದ್ದೇವೆ. ಮುಂದೆಯೂ ಮಾಡುತ್ತೇವೆ ಎಂದು ಕುಮಾರಸ್ವಾಮಿ ಹೇಳಿದ್ದಾರೆ.

Tags:    

Similar News