ಪಂಚಮಸಾಲಿ ಹೋರಾಟ | ಲಾಠಿ ಚಾರ್ಜ್‌ಗೆ ಕೇಂದ್ರ ಸಚಿವ ಎಚ್ಡಿಕೆ, ಮಾಜಿ ಸಿಎಂ ಬೊಮ್ಮಾಯಿ ಖಂಡನೆ

ಪಂಚಮಸಾಲಿಗಳ ಹೋರಾಟ ಹತ್ತಿಕ್ಕಲು ರಾಜ್ಯ ಕಾಂಗ್ರೆಸ್ ಸರ್ಕಾರ ಹಿಟ್ಲರ್ ಮಾರ್ಗ ಆಯ್ಕೆ ಮಾಡಿಕೊಂಡಿರುವುದು ದುರದೃಷ್ಟಕರ. ಪಂಚಮಸಾಲಿ ಸಮುದಾಯ ಶ್ರೀಗಳಾದ ಬಸವ ಜಯ ಮೃತ್ಯುಂಜಯ ಸ್ವಾಮೀಜಿಯನ್ನು ಹೇಯವಾಗಿ ನಡೆಸಿಕೊಂಡಿದೆ ಎಂದು ಕೇಂದ್ರ ಸಚಿವ ಕುಮಾರಸ್ವಾಮಿ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.;

Update: 2024-12-10 14:21 GMT

ಬೆಳಗಾವಿಯಲ್ಲಿ ಪ್ರತಿಭಟನಾನಿರತ ಪಂಚಮಸಾಲಿ ಸಮುದಾಯದ ಬಸವ ಜಯ ಮೃತ್ಯುಂಜಯ ಸ್ವಾಮೀಜಿ ಹಾಗೂ ಮುಖಂಡರ ಮೇಲೆ ಲಾಠಿ ಪ್ರಹಾರ ನಡೆಸಿರುವ ಪೊಲೀಸರ ಕ್ರಮಕ್ಕೆ ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ, ಮಾಜಿ ಸಿಎಂ ಹಾಗೂ ಸಂಸದ ಬಸವರಾಜ ಬೊಮ್ಮಾಯಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಈ ಕುರಿತು ಮಾಧ್ಯಮ ಹೇಳಿಕೆ ಬಿಡುಗಡೆ ಮಾಡಿರುವ ಎಚ್ಡಿಕೆ, ಪಂಚಮಸಾಲಿಗಳ ಹೋರಾಟ ಹತ್ತಿಕ್ಕಲು ರಾಜ್ಯ ಕಾಂಗ್ರೆಸ್ ಸರ್ಕಾರ ಹಿಟ್ಲರ್ ಮಾದರಿಯ ಮಾರ್ಗ  ಆಯ್ಕೆ ಮಾಡಿಕೊಂಡಿರುವುದು ದುರದೃಷ್ಟಕರ. ಪಂಚಮಸಾಲಿ ಸಮುದಾಯ ಶ್ರೀಗಳಾದ ಬಸವ ಜಯ ಮೃತ್ಯುಂಜಯ ಸ್ವಾಮೀಜಿಯನ್ನು ಹೇಯವಾಗಿ ನಡೆಸಿಕೊಳ್ಳಲಾಗಿದೆ. ಇದು ಅಪಾಯಕಾರಿ ಮನಃಸ್ಥಿತಿಯ ಸರ್ಕಾರ ಎಂದು ವಾಗ್ದಾಳಿ ನಡೆಸಿದ್ದಾರೆ.

2ಎ ಮೀಸಲಾತಿ ಬೇಡಿಕೆ ಈಡೇರಿಸುವಂತೆ ಸ್ವಾಮೀಜಿ ನೇತೃತ್ವದಲ್ಲಿ ಸಮುದಾಯದವರು ನಿರಂತರ ಮನವಿ ಮಾಡುತ್ತಲೇ ಬರುತ್ತಿದ್ದಾರೆ. ಆದರೂ ಸರ್ಕಾರ ಕಿವುಡಾಗಿದೆ. ಶಾಂತಿಯುತವಾಗಿ ಪ್ರತಿಭಟನೆ ನಡೆಸುತ್ತಿದ್ದವರ ಮೇಲೆ ಪೊಲೀಸರು ದಬ್ಬಾಳಿಕೆ ಮಾಡಿದ್ದಾರೆ. ಶಾಂತಿ ಕದಡುವ ಪ್ರಯತ್ನ ಮಾಡಿದರೆ ಅದಕ್ಕೆ ಸರ್ಕಾರವೇ ಪೂರ್ಣ ಹೊಣೆ. ಕೂಡಲೇ ಸ್ವಾಮೀಜಿ ಹಾಗೂ ಸಮುದಾಯದವರ ಕ್ಷಮೆ ಕೇಳಬೇಕು. ಅವರ ಬೇಡಿಕೆಗಳನ್ನು ಈಡೇರಿಸಲು ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದ್ದಾರೆ.

ರಾಜ್ಯ ಸರ್ಕಾರ ತಕ್ಕ ಬೆಲೆ ತೆರಲಿದೆ; ಬೊಮ್ಮಾಯಿ

2 ಎ ಮೀಸಲಾತಿಗಾಗಿ ಪಂಚಮಸಾಲಿ ಸಮುದಾಯ ನಡೆಸುತ್ತಿದ್ದ ಪ್ರತಿಭಟನೆ ವೇಳೆ ಸರ್ಕಾರ ಪೊಲೀಸರ ಮೂಲಕ ಲಾಠಿಚಾರ್ಜ್ ಮಾಡಿಸಿ ಕ್ಷಮಿಸಲಾರದ ತಪ್ಪು ಮಾಡಿದೆ. ಇದಕ್ಕೆ ಸೂಕ್ತ ಬೆಲೆ ತೆರಬೇಕಾಗುತ್ತದೆ ಎಂದು ಮಾಜಿ ಸಿಎಂ ಹಾಗೂ ಸಂಸದ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.

ನವದೆಹಲಿಯಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಕಾಂಗ್ರೆಸ್ ಸರ್ಕಾರ ಜನ ವಿರೋಧಿ ಎಂಬುದು ಪದೇ ಪದೇ ಸಾಬೀತಾಗುತ್ತಿದೆ. ಬಿಜೆಪಿ ಜಾರಿಗೆ ತಂದಿದ್ದ ಯೋಜನೆಗಳಿಗೆ ತಿಲಾಂಜಲಿ ಇಟ್ಟಿದೆ. ಪಿಎಂ ಕಿಸಾನ್ ಸಮ್ಮಾನ್ ಯೋಜನೆ, ರೈತ ವಿದ್ಯಾನಿಧಿ ಯೋಜನೆ ನಿಲ್ಲಿಸಲಾಗಿದೆ ಎಂದು ವಾಗ್ದಾಳಿ ನಡೆಸಿದ್ದಾರೆ.

ಪಂಚಮಸಾಲಿ ಪೀಠದ ಸ್ವಾಮೀಜಿ ತಮ್ಮನ್ನು ಸರ್ಕಾರ ನಿರ್ಲಕ್ಷ್ಯ ಮಾಡುತ್ತಿದೆ ಎಂದು ಪದೇ ಪದೇ ಹೇಳುತ್ತಿದ್ದಾರೆ. ಈಗ ಪ್ರತಿಭಟನೆ ಮಾಡುವವರ ಮೇಲೆ ಲಾಠಿ ಚಾರ್ಜ್ ಮಾಡಿ ರಕ್ತ ಬರುವಂತೆ ಮಾಡಿದ್ದು, ಕ್ಷಮಿಸಲಾರದಂತಹ ಅಪರಾಧ. ಪೋಲಿಸ್ ದೌರ್ಜನ್ಯ ಬಹಳ ದಿನ ನಡೆಯುವುದಿಲ್ಲ ಎಂದು ಎಚ್ಚರಿಸಿದ್ದಾರೆ.

ಆದೇಶ ಹಿಂಪಡೆಯುತ್ತೇವೆ ಎಂದಿರಲಿಲ್ಲ

ಮೀಸಲಾತಿ ವಿಚಾರದಲ್ಲಿ ಯಥಾಸ್ಥಿತಿ ಕಾಯ್ದುಕೊಳ್ಳುವುದಾಗಿ ಬಿಜೆಪಿ ಸರ್ಕಾರವೇ ಸುಪ್ರೀಂಕೋರ್ಟ್ ಗೆ ಅಫಿಡವಿಟ್ ಸಲ್ಲಿಸಿದೆ ಎಂಬ ಸಿಎಂ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ಮೀಸಲಾತಿ ಹೆಚ್ಚಳದ ಬಗ್ಗೆ ಆದೇಶ ಮಾಡಿದ್ದು ನಿಜ. ಆದರೆ, ತಡೆ ಕೋರಿರಲಿಲ್ಲ. ಸಿಎಂ ಸಿದ್ದರಾಮಯ್ಯ ಬೆಂಬಲಿಗರೇ ಹಿನ್ನೆಲೆಯಲ್ಲಿ ನಿಂತು ಕೋರ್ಟ್ ಗೆ ಹೋದರು. ಆಗ ನಾವು ಪೂರ್ಣ ವಾದ ಮಾಡಲು ಸಿದ್ದರಿದ್ದೇವೆ ಎಂದು ಹೇಳಿದ್ದೆವು. ಆಗ ಸುಪ್ರೀಂಕೋರ್ಟ್ ಸಂಪೂರ್ಣ ವಾದ ಆಲಿಸಿ ತೀರ್ಪು ಕೊಡುತ್ತೇವೆ. ಅಲ್ಲಿಯವರೆಗೂ ರಾಜ್ಯ ಸರ್ಕಾರ ಈ ಆದೇಶ ಜಾರಿ ಮಾಡಬಾರದು ಅಂತ ಹೇಳಿತ್ತು. ನಾವು ಮುಂದಿನ ವಿಚಾರಣೆವರೆಗೂ ಆದೇಶ ಜಾರಿ ಮಾಡುವುದಿಲ್ಲ ಎಂದು ಹೇಳಿದ್ದವೇ ವಿನಃ ಶಾಶ್ವತವಾಗಿ ಆದೇಶ ಹಿಂಪಡೆಯುತ್ತೇವೆ ಎಂದು ಹೇಳಿರಲಿಲ್ಲ. ಇದೆಲ್ಲ ಗೊತ್ತಿದ್ದರೂ ಮುಖ್ಯಮಂತ್ರಿಗಳು ವಿಧಾನಸಭೆಯಲ್ಲಿ ಸುಪ್ರೀಂ ಕೋರ್ಟ್ ಆದೇಶದ ಪ್ರತಿ ಓದುತ್ತೇನೆ ಅಂತ ಹೇಳಿದ್ದಾರೆ. ಆದರೆ, ಸುಪ್ರೀಂಕೋರ್ಟ್ ಆದೇಶವನ್ನೇ ನೀಡಿಲ್ಲ ಎಂದು ತಿರುಗೇಟು ನೀಡಿದ್ದಾರೆ.

2023 ರ ಜೂನ್ ತಿಂಗಳಲ್ಲಿ ವಿಚಾರಣೆ ಮುಂದೂಡಿದ್ದರು. ಸರ್ಕಾರ ಓಟ್ ಬ್ಯಾಂಕ್ ರಾಜಕಾರಣ ಮಾಡುತ್ತಿದೆ. ಈ ಸರ್ಕಾರದ ನಿಲುವು ಏನು ಅಂತ ಕೂಡ ಹೇಳುತ್ತಿಲ್ಲ ಎಂದು ಆರೋಪಿಸಿದ್ದಾರೆ.

ನಾವು ಮುಂದಿನ ವಿಚಾರಣೆವರೆಗೆ ಮಾತ್ರ ಅಂತ ಸ್ಪಷ್ಟವಾಗಿ ಹೇಳಿದ್ದೇವೆ. ಇವರು ಓಲೈಕೆ ರಾಜಕಾರಣ ಮಾಡಲು ಪಂಚಮಸಾಲಿ ಸಮುದಾಯದ ನ್ಯಾಯಯುತ ಬೇಡಿಕೆಗೆ ಅನ್ಯಾಯ ಮಾಡುತ್ತಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ನಾವು ಸಲ್ಲಿಸಿದ್ದ ಅಫಿಡವಿಟ್ಅನ್ನು ಸರಿಯಾಗಿ ಓದಿದರೆ ಅರ್ಥವಾಗಲಿದೆ. ದಾರಿ ತಪ್ಪಿಸುವ ಕೆಲಸ ಆಗಬಾರದು ಎಂದು ಹೇಳಿದ್ದಾರೆ.

Tags:    

Similar News