ಜೂನ್ 1ರಿಂದ ವಿಧಾನಸೌಧದೊಳಗೆ ಸಾರ್ವಜನಿಕರಿಗೂ ಪ್ರವೇಶ; ನೋದಂಣಿ ಹೇಗೆ? ಶುಲ್ಕ ಎಷ್ಟು? ಎಲ್ಲ ಮಾಹಿತಿ ಇಲ್ಲಿದೆ
ಜೂನ್ ಒಂದರಿಂದ ಪ್ರವಾಸ ಅಧಿಕೃತವಾಗಿ ಆರಂಭವಾಗಲಿದ್ದು ಪ್ರತಿ ಭಾನುವಾರ, ಎರಡು ಹಾಗೂ ನಾಲ್ಕನೇ ಶನಿವಾರ ಬೆಳಿಗ್ಗೆ 8 ಗಂಟೆಯಿಂದ ಸಂಜೆ 5 ಗಂಟೆವರೆಗೂ ಕಾಲಾವಕಾಶ ನಿಗದಿಪಡಿಸಲಾಗಿದೆ. ಕನ್ನಡ ಹಾಗೂ ಇಂಗ್ಲೀಷ್‌ನಲ್ಲಿ ವಿವರಣೆ ಇರಲಿದ್ದು ಪ್ರವಾಸದ ಸಮಯಕ್ಕೂ 20 ನಿಮಿಷ ಮೊದಲು ಬಂದು ತಪಾಸಣೆಗೆ ಒಳಪಡಬೇಕಿದೆ.;
ಶಕ್ತಿಕೇಂದ್ರ ವಿಧಾನಸೌಧ.
ಕರ್ನಾಟಕದ ಹೆಮ್ಮೆಯ ವಿಧಾನಸೌಧವನ್ನು ಇದೇ ಮೊದಲ ಬಾರಿಗೆ ಸಾರ್ವಜನಿಕರ ವೀಕ್ಷಣೆಗೆ ಮುಕ್ತಗೊಳಿಸಲಾಗಿದೆ. ಪ್ರವಾಸೋದ್ಯಮ ಇಲಾಖೆ ಮತ್ತು ಸಿಬ್ಬಂದಿ ಹಾಗೂ ಆಡಳಿತ ಸುಧಾರಣಾ ಇಲಾಖೆಯ ಸಹಯೋಗದೊಂದಿಗೆ ಜೂನ್ 1ರಿಂದ ವಿಧಾನಸೌಧದ ''ಗೈಡೆಡ್ ಟೂರ್''ಗೆ ಚಾಲನೆ ನೀಡಲಾಗುತ್ತಿದೆ. ಪ್ರತಿ ಭಾನುವಾರ ಹಾಗೆಯೇ ಎರಡನೇ ಮತ್ತು ನಾಲ್ಕನೇ ಶನಿವಾರದಂದು ಬೆಳಗ್ಗೆ 8 ರಿಂದ ಸಂಜೆ 5 ಗಂಟೆಯವರೆಗೆ ಈ ಪ್ರವಾಸವನ್ನು ಆಯೋಜನೆಗೊಳ್ಳಲಿದೆ
ರಾಜ್ಯ ಪ್ರವಾಸೋದ್ಯಮ ಇಲಾಖೆ, ವಿಧಾನಸೌಧ ಸಚಿವಾಲಯ, ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆಯ ಸಹಭಾಗಿತ್ವದಲ್ಲಿ ಈ ಪ್ರವಾಸ ಕಾರ್ಯಕ್ರಮ ಆಯೋಜನೆಗೊಳ್ಳಲಿದೆ. ಸ್ಟಾರ್ಟ್ಅಪ್ ಕಂಪನಿ ''ಗಲ್ಲಿ ಟೂರ್ಸ್'' ಈ ಪ್ರವಾಸಕ್ಕೆ ಗೈಡ್ಗಳನ್ನು ಒದಗಿಸಲಿದೆ.
ಟೂರ್ ಆರಂಭದ ಹಿನ್ನೆಲೆಯಲ್ಲಿ ಆಯೋಜಿಸಿದ್ದ ಸಮಾರಂಭದಲ್ಲಿ ಮಾತನಾಡಿದ ವಿಧಾನಸಭೆ ಸಭಾಧ್ಯಕ್ಷ ಯು.ಟಿ.ಖಾದರ್, ದೇಶದಲ್ಲೇ ಮೊದಲು ವಿಧಾನಸೌಧ ನಿರ್ಮಾಣವಾಗಿದ್ದು ಕರ್ನಾಟಕದಲ್ಲಿ. 1890ರಿಂದಲೇ ಪ್ರಜಾಪ್ರಭುತ್ವ ನೆಲೆಗಳು ಆರಂಭಗೊಂಡಿದ್ದವು. ರಾಜ್ಯದ ಭವ್ಯ ಪರಂಪರೆಯನ್ನು ಜನರಿಗೆ ಪರಿಚಯಿಸಬೇಕು ಎಂಬ ಉದ್ದೇಶದಿಂದ ವಿಧಾನಸೌಧ ಪ್ರವಾಸಿ ಮಾರ್ಗದರ್ಶಿ ಆರಂಭಿಸಲಾಗಿದೆ ಎಂದು ತಿಳಿಸಿದ್ದಾರೆ.
ಪ್ರವಾಸೋದ್ಯಮ ಸಚಿವ ಎಚ್.ಕೆ. ಪಾಟೀಲ್ ಅವರು ಈ ಕಾರ್ಯಕ್ರಮದ ಉದ್ಘಾಟಿಸಿ, "ವಿಧಾನಸೌಧವು ಜಗತ್ತಿನ ಅತ್ಯಂತ ಸುಂದರ ಕಟ್ಟಡಗಳಲ್ಲಿ ಒಂದಾಗಿದ್ದು, ಪ್ರಜಾಪ್ರಭುತ್ವದ ದೇಗುಲವಾಗಿದೆ. ಇದರ ಗೈಡೆಡ್ ಟೂರ್ ಜ್ಞಾನ ಹಂಚಿಕೆ ಉದ್ದೇಶವನ್ನು ಹೊಂದಿದೆ. ಇದು ಕೇವಲ ಮನರಂಜನೆಯ ಪ್ರವಾಸವಲ್ಲ, ಜನರು ಪ್ರಜಾಪ್ರಭುತ್ವದ ಬಗ್ಗೆ ತಿಳಿದುಕೊಳ್ಳುವ ಉದ್ದೇಶದ್ದು" ಎಂದು ತಿಳಿಸಿದರು.
ವಿಧಾನಸಭಾ ಸಭಾಪತಿ ಬಸವರಾಜ ಹೊರಟ್ಟಿ ಅವರು ತಮ್ಮ ವಿದ್ಯಾರ್ಥಿ ದಿನಗಳ ನೆನಪು ಹಂಚಿಕೊಂಡರು. "ನಾನು ವಿದ್ಯಾರ್ಥಿಯಾಗಿದ್ದಾಗ ವಿಧಾನಸೌಧವನ್ನು ನೋಡಲು ಬಂದಿದ್ದೆ, ಆದರೆ ಗುರುತಿನ ಚೀಟಿ ಇಲ್ಲದ ಕಾರಣ ಪ್ರವೇಶ ಸಿಗಲಿಲ್ಲ. ಬಳಿಕ ಶಾಸಕರಾದ ಮೇಲೆ ಮಾತ್ರ ಇಲ್ಲಿಗೆ ಪ್ರವೇಶ ದೊರಕಿತು. ಈಗ ಸಾರ್ವಜನಿಕರಿಗೆ ಈ ಅವಕಾಶ ನೀಡುವುದು ಸಂತಸದ ವಿಷಯ" ಎಂದು ಹೇಳಿದರು. ರಾಜಕೀಯ ಅಧ್ಯಯನಕ್ಕಾಗಿ ಪೊಲಿಟಿಕಲ್ ಕಾಲೇಜು ಸ್ಥಾಪನೆಯ ಕುರಿತು ಮುಖ್ಯಮಂತ್ರಿಗಳೊಂದಿಗೆ ಚರ್ಚೆ ನಡೆಸುವುದಾಗಿಯೂ ಅವರು ಹೇಳಿದರು.
ಶುಲ್ಕ ಮತ್ತು ಪ್ರವಾಸದ ವಿವರಗಳು
ಶುಲ್ಕ: ವಯಸ್ಕರಿಗೆ (16 ವರ್ಷಕ್ಕಿಂತ ಮೇಲ್ಪಟ್ಟವರಿಗೆ) 50 ರೂಪಾಯಿ ಶುಲ್ಕ ನಿಗದಿಪಡಿಸಲಾಗಿದೆ. 15 ವರ್ಷಕ್ಕಿಂತ ಕೆಳಗಿನ ಮಕ್ಕಳಿಗೆ ಉಚಿತ ಪ್ರವೇಶವಿರುತ್ತದೆ.
ವೇಳಾಪಟ್ಟಿ: ಗೈಡೆಡ್ ಟೂರ್‌ಗಳು ಪ್ರತಿ ಭಾನುವಾರ, ಎರಡನೇ ಮತ್ತು ನಾಲ್ಕನೇ ಶನಿವಾರದಂದು ಬೆಳಗ್ಗೆ 8ರಿಂದ ಸಂಜೆ 5 ಗಂಟೆವರೆಗೆ ನಡೆಯಲಿವೆ.
ಬುಕಿಂಗ್: ಪ್ರವಾಸಕ್ಕೆ ಬರುವವರು ಕರ್ನಾಟಕ ರಾಜ್ಯ ಪ್ರವಾಸೋದ್ಯಮ ಅಭಿವೃದ್ಧಿ ನಿಗಮ (KSTDC) ಆನ್‌ಲೈನ್ ಪೋರ್ಟಲ್ ಮೂಲಕ ಮುಂಗಡ ಬುಕಿಂಗ್ ಮಾಡಬೇಕು.
ಪ್ರವಾಸಿಗರ ಸಂಖ್ಯೆ ಮತ್ತು ಅವಧಿ: ಪ್ರತಿ ಗುಂಪಿನಲ್ಲಿ 30 ಜನರಿಗೆ ಅವಕಾಶ ನೀಡಲಾಗುವುದು. ಒಂದು ಟೂರ್‌ಗೆ 90 ನಿಮಿಷಗಳ ಕಾಲಾವಧಿ ಇರುತ್ತದೆ. ಒಂದು ದಿನಕ್ಕೆ ಗರಿಷ್ಠ 300 ಜನರಿಗೆ ಮಾತ್ರ ಪ್ರವೇಶವಿರುತ್ತದೆ.
ಗೈಡ್ ಸೇವೆ: ಪ್ರವಾಸಿಗರಿಗೆ ಕನ್ನಡ ಮತ್ತು ಇಂಗ್ಲಿಷ್ ಭಾಷೆಗಳಲ್ಲಿ ಗೈಡ್‌ಗಳಿಂದ ಮಾಹಿತಿ ಸಿಗಲಿದೆ. .
ಪ್ರವೇಶ ದ್ವಾರ: ವಿಧಾನಸೌಧದ ಗೇಟ್ ಸಂಖ್ಯೆ 3 ರಿಂದ ಪ್ರವೇಶಕ್ಕೆ ಅವಕಾಶ ನೀಡಲಾಗುವುದು.
ವಿಶೇಷ ಏನು?
ವಿಧಾನಸೌಧವು ಕರ್ನಾಟಕದ ವಿಧಾನ ಮಂಡಲದ ಉಭಯ ಸದನಗಳು ನಡೆಯುವ ಶಕ್ತಿಕೇಂದ್ರ. ಮಾಜಿ ಮುಖ್ಯಮಂತ್ರಿ ಕೆಂಗಲ್ ಹನುಮಂತಯ್ಯನವರ ಆಳಿತದ ಅವಧಿಯಲ್ಲಿ ರಚನೆಗೊಂಡ ಈ ಸೌಧಕ್ಕೆ 1951 ಜುಲೈ 13ರಂದು ಅಂದಿನ ಪ್ರಧಾನಿಯಾಗಿದ್ದ ಜವಾಹರಲಾಲ್ ನೆಹರು ಶಂಕುಸ್ಥಾಪನೆ ಮಾಡಿದ್ದರು. 1952ರಲ್ಲಿ ಪ್ರಾರಂಭವಾದ ಕಟ್ಟಡ ನಿರ್ಮಾಣ ಕಾರ್ಯವು ಪೂರ್ಣಗೊಳ್ಳಲು ನಾಲ್ಕು ವರ್ಷಗಳಾಗಿದ್ದವು. 5000ಕ್ಕೂ ಹೆಚ್ಚು ಕೆಲಸಗಾರರು ಈ ಕಟ್ಟಡ ನಿರ್ಮಾಣದಲ್ಲಿ ಪಾಲ್ಗೊಂಡಿದ್ದರು. ರಾಜ್ಯ ಸಾರ್ವಜನಿಕ ಕಾರ್ಯಗಳ ಇಲಾಖೆಯಲ್ಲಿ ಮುಖ್ಯ ಎಂಜಿನಿಯರ್ ಹಾಗೂ ವಾಸ್ತುಶಿಲ್ಪಿಯಾಗಿದ್ದ ಮಾಣಿಕ್ಯಂ. ಕಟ್ಟಡ ನಿರ್ಮಾಣದ ಉಸ್ತುವಾರಿ ನೋಡಿಕೊಂಡಿದ್ದರು. ಇದರ ವಾಸ್ತುಶಿಲ್ಪವನ್ನು, ಮೈಸೂರು ದ್ರಾವಿಡ ಶೈಲಿ ಎಂದು ಕೆಲವರು ಕರೆಯುತ್ತಾರೆ. ಇನ್ನು ಕೆಲವರು ಇಂಡೋ ಸಾರ್ಸೆನಿಕ್ ಮತ್ತು ದ್ರಾವಿಡ ಶೈಲಿಯ ತಂತ್ರಜ್ಞಾನ ಇಲ್ಲಿ ಅಳವಡಿಸಲಾಗಿದೆ ಎನ್ನುತ್ತಾರೆ.