Crime News | ಖೋಟಾ ನೋಟು ಜಾಲ: ಪೊಲೀಸ್ ಪೇದೆ ಸೇರಿ ನಾಲ್ವರ ಬಂಧನ
ರಾಯಚೂರಿನ ಪಶ್ಚಿಮ ಠಾಣೆಯ ಪೊಲೀಸರು ಖಚಿತ ಮಾಹಿತಿ ಮೇರೆಗೆ ನಗರದಲ್ಲಿ ದಾಳಿಯನ್ನು ನಡೆಸಿ, ಖೋಟಾ ನೋಟು ದಂಧೆಯ ಅಡ್ಡೆಯನ್ನು ಪತ್ತೆ ಹಚ್ಚಿದ್ದಾರೆ.;
ಖೋಟಾನೋಟು ಜಾಲಕ್ಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರನ್ನು ಪೊಲೀಸರು ಬಂಧಿಸಿದ್ದಾರೆ.
ರಾಯಚೂರಿನಲ್ಲಿ ಖೋಟಾ ನೋಟು ಜಾಲವನ್ನು ಭೇದಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ. ಈ ಅಕ್ರಮದಲ್ಲಿ ತೊಡಗಿದ್ದ ಪೊಲೀಸ್ ಕಾನ್ಸ್‌ಟೇಬಲ್ ಸಹಿತ ನಾಲ್ವರನ್ನು ಪೊಲೀಸರು ಬಂಧಿಸಿದ್ದಾರೆ.
ರಾಯಚೂರು ಸಶಸ್ತ್ರ ಮೀಸಲು ಪಡೆಯ ಕಾನ್ಸ್ ಸ್ಟೇಬಲ್ ಮರಿಲಿಂಗ, ರಮೇಶ್ ಆದಿ, ಶಿವಲಿಂಗ ಸೇರಿದಂತೆ ನಾಲ್ವರು ಆರೋಪಿಗಳನ್ನು ಬಂಧಿಸಲಾಗಿದೆ.
ರಾಯಚೂರು ಗಡಿಭಾಗದ ಗ್ರಾಮಗಳಲ್ಲಿ ಹಾಗೂ ನಗರ ಸೇರಿದಂತೆ ಜಿಲ್ಲೆಯ ಹಲವೆಡೆ ಖೋಟಾ ನೋಟುಗಳ ಚಲಾವಣೆಯಾಗುತ್ತಿರುವ ಬಗ್ಗೆ ದೂರು ಕೇಳಿ ಬಂದಿತ್ತು. ಗಡಿಭಾಗದ ಅನೇಕ ಪೆಟ್ರೋಲ್ ಬಂಕ್‌ಗಳಲ್ಲಿ ನಕಲಿ ನೋಟುಗಳು ಪತ್ತೆಯಾಗಿತ್ತು. ಇದರ ಜಾಡು ಹಿಡಿದು ಎಸ್ ಪಿ.ಪುಟ್ಟಮಾದಯ್ಯ ನೇತೃತ್ವದ ಪೊಲೀಸರ ತಂಡ ಸಕ್ರಿಯವಾಗಿ ತನಿಖೆ ನಡೆಸುತ್ತಿದ್ದರು. ಇದರ ಪರಿಣಾಮವಾಗಿ ಸೋಮವಾರ ಆಶಾಪುರ ರಸ್ತೆಯ ಆರೋಪಿ ಸದ್ದಾಂ ಮನೆಯಲ್ಲಿ ನಕಲಿ ನೋಟುಗಳ ಸಮೇತ ನಾಲ್ವರನ್ನು ಪಶ್ಚಿಮ ಠಾಣೆಯ ಪೊಲೀಸರು ಖಚಿತ ಮಾಹಿತಿ ಮೇರೆಗೆ ದಾಳಿ ಮಾಡಿ ಆರೋಪಿಗಳನ್ನು ಬಂಧಿಸಿದ್ದಾರೆ.
ಈ ದಾಳಿಯಲ್ಲಿ ಲಕ್ಷಾಂತರ ರೂಪಾಯಿಗಳ ಮೌಲ್ಯದ ಖೋಟಾ ನೋಟುಗಳು ಹಾಗೂ ಅದನ್ನು ತಯಾರಿಸಲು ಬಳಸುತ್ತಿದ್ದ ವೈಟ್ ಪೇಪರ್ ಮತ್ತು ಇತರ ಪೂರಕ ವಸ್ತುಗಳನ್ನು ಪೊಲೀಸರು ಜಪ್ತಿ ಮಾಡಿದ್ದಾರೆ. ವಶಪಡಿಸಿಕೊಂಡ ಎಲ್ಲಾ ನೋಟುಗಳು 500 ರೂ. ಗಳಿದ್ದು, ಬಂಧಿತರಲ್ಲಿ ಮೂವರು ಟ್ರಾನ್ಸ್ ಪೋರ್ಟ್ ನಲ್ಲಿ ಚಾಲಕ, ಕ್ಲಿನರ್ ಹಾಗೂ ಲಾರಿ ಮಾಲಕರಾಗಿದ್ದು ಆಂಧ್ರ ಪ್ರದೇಶದಿಂದ ನಕಲಿ ನೋಟುಗಳನ್ನು ಪಡೆದು ಜಿಲ್ಲೆಯಲ್ಲಿ ಚಲಾವಣೆ ಮಾಡಲು ಯತ್ನಿಸಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.