ಬ್ಯಾಂಕ್ ವಂಚನೆ ಪ್ರಕರಣ | ಮಾಜಿ ಸಚಿವ ಕೃಷ್ಣಯ್ಯ ಶೆಟ್ಟಿ ಸೇರಿ ನಾಲ್ವರಿಗೆ ಜೈಲು
1993ರಲ್ಲಿ ಬಾಲಾಜಿಕೃಪಾ ಎಂಟರ್‌ಪ್ರೈಸಸ್‌ನ ಮಾಲೀಕರಾಗಿದ್ದ ಕೃಷ್ಣಯ್ಯ ಶೆಟ್ಟಿ ಸಾರ್ವಜನಿಕ ಉದ್ದಿಮೆಗಳ ನೌಕರರಿಗೆ ಗೃಹ ನಿರ್ಮಾಣಕ್ಕೆ ಸಾಲ ಕೊಡಿಸುವುದಾಗಿ ಹೇಳಿ ವಂಚನೆ ನಡೆಸಿದ್ದರು.;
ಬ್ಯಾಂಕ್ ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಜಿ ಸಚಿವ ಕೃಷ್ಣಯ್ಯ ಶೆಟ್ಟಿ ದೋಷಿ ಎಂದು ಬೆಂಗಳೂರಿನ ಜನಪ್ರತಿನಿಧಿಗಳ ಕೋರ್ಟ್ ತೀರ್ಪು ನೀಡಿದ್ದು, ಶಿಕ್ಷೆಯ ಪ್ರಮಾಣ ಪ್ರಕಟಿಸಬೇಕಿದೆ.
ವಂಚನೆ ಪ್ರಕರಣದಲ್ಲಿ ಮಾಜಿ ಸಚಿವ ಕೃಷ್ಣಯ್ಯ ಶೆಟ್ಟಿ, ರೆಡ್ಡಿ ಎಂಟಿವಿ, ಶ್ರೀನಿವಾಸ್ ಹಾಗೂ ಮುನಿರಾಜು ನಾಲ್ಕೂ ಜನರು ತಪ್ಪಿತಸ್ಥರು ಎಂದು ಕೋರ್ಟ್ ಹೇಳಿದೆ. ನಕಲಿ ದಾಖಲೆ ನೀಡಿ ಕೋಟ್ಯಾಂತರ ರೂಪಾಯಿ ಸಾಲ ಪಡೆದು ವಂಚನೆ ಮಾಡಿದ್ದ ಆರೋಪ ಈ ನಾಲ್ವರ ಮೇಲೆ ಇತ್ತು. ಇದೀಗ ಈ ಆರೋಪ ಸಾಬೀತಾಗಿದೆ.
ಕೃಷ್ಣಯ್ಯ ಶೆಟ್ಟಿ, ಕೆ.ವಿ.ಹನುಮಪ್ಪ ರೆಡ್ಡಿ, ಜಿ.ಎಂ.ರಮೇಶ್ ಹಾಗೂ ಇತರ ಆರೋಪಿಗಳ ವಿರುದ್ಧ ಭಾರತೀಯ ದಂಡ ಸಂಹಿತೆ 120ಬಿ, 409, 419, 420, 467, 471 ಹಾಗೂ ಸಿಆರ್‌ಪಿಸಿ ಸೆಕ್ಷನ್ 13(1)ಡಿ, 13(2)ರಡಿ ಸಿಬಿಐ ಕೇಸ್ ದಾಖಲಿಸಿತ್ತು. ಕೋರ್ಟ್ ತೀರ್ಪು ಪ್ರಕಟಿಸಿದ ಬೆನ್ನಲ್ಲೇ ಇದೀಗ ನಾಲ್ವರು ಅಪರಾಧಿಗಳನ್ನು ಸಿಬಿಐ ಅಧಿಕಾರಿಗಳು ಕೋರ್ಟ್‌ನಿಂದಲೇ ಕಸ್ಟಡಿಗೆ ಪಡೆದಿದ್ದಾರೆ.
ಏನಿದು ವಂಚನೆ ಪ್ರಕರಣ?
1993ರಲ್ಲಿ ಬಾಲಾಜಿ ಕೃಪಾ ಎಂಟರ್‌ಪ್ರೈಸಸ್‌ನ ಮಾಲೀಕರಾಗಿದ್ದ ಕೃಷ್ಣಯ್ಯ ಶೆಟ್ಟಿ ಸಾರ್ವಜನಿಕ ಉದ್ದಿಮೆಗಳ ನೌಕರರಿಗೆ ಗೃಹ ನಿರ್ಮಾಣಕ್ಕೆ ಸಾಲ ಕೊಡಿಸುವುದಾಗಿ ಹೇಳಿ ವಂಚನೆ ನಡೆಸಿದ್ದರು.
ಬಿಟಿಎಸ್, ಕೆಎಸ್‌ಆರ್‌ಟಿಸಿ, ಬಿಎಸ್‌ಎನ್‌ಎಲ್, ಐಟಿಐ, ಎಚ್‌ಎಎಲ್, ಬಿಇಎಂಎಲ್, ಎಡಿಇ ಸಂಸ್ಥೆಗಳ 181 ಮಂದಿಯ ಹೆಸರಿನಲ್ಲಿ ನಕಲಿ ದಾಖಲೆ ಸೃಷ್ಟಿಸಿ 7.17 ಕೋಟಿ ರೂ.ಬ್ಯಾಂಕ್ ಸಾಲ ಪಡೆದ ಆರೋಪ ಇತ್ತು. ಇದರಲ್ಲಿ 3.53 ಕೋಟಿ ಸಾಲ ತೀರಿಸಿಲ್ಲ ಎಂದು ಸಿಸಿಐ ಆರೋಪಿಸಿತ್ತು. ಮುಖ್ಯ ವಿಚಕ್ಷಣೆ ದಳದ ಮುಖ್ಯಸ್ಥ ಆರ್.ಡಿ.ನಾಯ್ಡು ನೀಡಿರುವ ದೂರು ಆಧರಿಸಿ, ಸಿಬಿಐ ತನಿಖೆ ಕೈಗೆತ್ತಿಕೊಂಡಿತ್ತು. ಬ್ಯಾಂಕ್ ಖಾತೆಗಳು, ಸಾಲ ವಿತರಣೆಯಾದ ಮಾಹಿತಿ ಕಲೆ ಹಾಕಿ ಸಿಬಿಐ ಚಾರ್ಜ್‌ಶೀಟ್ ಸಲ್ಲಿಸಿತ್ತು.
ಸಾಲ ಕೊಡಿಸುವಾಗ ನೌಕರರಲ್ಲದವರನ್ನು ನೌಕರರೆಂದು ಸುಳ್ಳು ವೇತನ ರಸೀದಿ, ಪ್ರಮಾಣಪತ್ರ ಕೊಟ್ಟು 263 ಪ್ರಕರಣಗಳಲ್ಲಿ 15.61 ಕೋಟಿ ಸಾಲ ಪಡೆದಿದ್ದು, 33 ಪ್ರಕರಣಗಳಲ್ಲಿ 1.47 ಕೋಟಿ ರೂ.ಬಾಕಿ ಪಾವತಿ ಮಾಡಬೇಕಿದೆ. 181 ಮಂದಿ ಬೇನಾಮಿ ಹೆಸರಲ್ಲಿ ಯೋಜನೆಯ ಲಾಭ ಪಡೆದಿದ್ದಾರೆ. ಬೆಂಗಳೂರು ಗ್ರಾಮಾಂತರ ನಗರ ಶಾಖೆಯ ಎಸ್‌ಬಿಎಂನ ವ್ಯವಸ್ಥಾಪಕ ಎಂ.ಟಿ.ವಿ.ರೆಡ್ಡಿ ಇದರಲ್ಲಿ ಶಾಮೀಲಾಗಿದ್ದು,ಒಂದು ಸಾಲ ಬಿಡುಗಡೆಗೆ 20 ಸಾವಿರ ರೂ. ಹಣ ಪಡೆದಿದ್ದಕ್ಕೆ ಸಾಕ್ಷ್ಯ ದೊರೆತಿದೆ. ನಾಗವಾರದ ಬಳಿ ನಿವೇಶನ ಎಂದು ತೋರಿಸಿದ್ದ ಜಾಗ ಮೊದಲೇ ಕೆಐಎಡಿಬಿಗೆ ಸೇರಿದ್ದಾಗಿತ್ತು. ಇದು ವಂಚನೆಗೆ ಕಾರಣ ಎಂದು ಸಿಬಿಐ ಚಾರ್ಜ್‌ಶೀಟ್‌ನಲ್ಲಿ ಸುದೀರ್ಫ ಮಾಹಿತಿ ನೀಡಿತ್ತು.
ಬೆಂಗಳೂರು ಉತ್ತರ ತಾಲೂಕಿನ ನಾಗವಾರ ಗ್ರಾಮದ ಸರ್ವೇ ನಂಬರ್ 98ರಲ್ಲಿ 3 ಎಕರೆಗೂ ಹೆಚ್ಚಿನ ಜಾಗದಲ್ಲಿ ಲೇಔಟ್ ನಿರ್ಮಾಣಕ್ಕಾಗಿ ಸಾಲ ಪಡೆಯಲಾಗಿತ್ತು. ಈ ಪ್ರದೇಶದಲ್ಲಿ ಗೃಹ ನಿರ್ಮಾಣ ಯೋಜನೆಗೆ ಕೃಷ್ಣಯ್ಯ ಶೆಟ್ಟಿ ಬಾಲಾಜಿ ಎಂಟರ್‌ಪ್ರೈಸಸ್ ಹೆಸರಿನಲ್ಲಿ 2003ರಿಂದ 2008ರವರೆಗೆ ಚಾಲ್ತಿ ಖಾತೆಯಲ್ಲಿ ಎಸ್‌ಬಿಎಂನಿಂದ ಸಾಲ ಪಡೆದಿದ್ದಾರೆ. ಇದಕ್ಕಾಗಿ ಅವರು ತೊಟ್ಟಿ ದಾಖಲೆ ಸೃಷ್ಟಿಸಿದ್ದಾರೆ' ಎಂಬುದು ಸಿಬಿಐ ಆರೋಪವಾತ್ತು.
ಈ ಪ್ರಕರಣದಲ್ಲಿ ನನ್ನ ತಪ್ಪಿಲ್ಲ. ನನ್ನನ್ನು ಪ್ರಕರಣದಿಂದ ಕೈ ಬಿಡಬೇಕೆಂದು 2013ರಲ್ಲಿ ಕೃಷ್ಣಯ್ಯ ಶೆಟ್ಟಿ ಸಿಬಿಐ ವಿಶೇಷ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಿದ್ದರು. ಆದರೆ ಈ ಮನವಿ ತಿರಸ್ಕೃತಗೊಂಡಿತ್ತು. 2023 ಲ್ಲಿ ಹೈಕೋರ್ಟ್ ನಿಂದ ಕೂಡ ಕೃಷ್ಣಯ್ಯಶೆಟ್ಟಿ ಮನವಿ ತಿರಸ್ಕೃತವಾಗಿತ್ತು. ಕೃಷ್ಣಯ್ಯ ಶೆಟ್ಟಿ, ಕೆ.ವಿ.ಹನುಮಪ್ಪ ರೆಡ್ಡಿ, ಜಿ.ಎಂ.ರಮೇಶ್ ಹಾಗೂ ಇತರ ಆರೋಪಿಗಳ ವಿರುದ್ಧ ಭಾರತೀಯ ದಂಡ ಸಂಹಿತೆ 120ಬಿ, 409, 419, 420, 467, 471 ಹಾಗೂ ಸಿಆರ್‌ಪಿಸಿ ಸೆಕ್ಷನ್ 13(1)ಡಿ, 13(2)ರಡಿ ಸಿಬಿಐ ಕೇಸ್ ದಾಖಲಿಸಿತ್ತು.