ಹೂವಿನ ಬೊಕೇ 'ನ್ಯಾಷನಲ್ ವೇಸ್ಟ್' ಅಲ್ಲ: ಸಂಸದ ತೇಜಸ್ವಿ ಸೂರ್ಯಗೆ ಹೂ ಮಾರಾಟಗಾರರ ತರಾಟೆ!

ಆರತಕ್ಷತೆ ಕಾರ್ಯಕ್ರಮಕ್ಕೆ ಹೂವಿನ ಬೊಕೆ, ಡ್ರೈಫ್ರೂಟ್ಸ್‌ಗಳನ್ನು ದಯವಿಟ್ಟು ತರಬೇಡಿ ಎಂದು ಫೇಸ್‌ಬುಕ್‌ ಹಾಗೂ ಯೂಟ್ಯೂಬ್‌ ಲೈವ್​ನಲ್ಲಿ ಕಾರಣವನ್ನೂ ನೀಡಿ ಸಂಸದ ತೇಜಸ್ವಿ ಸೂರ್ಯ ಮನವಿ ಮಾಡಿದ್ದರು.;

Update: 2025-03-11 07:44 GMT

ತೇಜಸ್ವಿ ಸೂರ್ಯ 

ಹೂವಿನ ಮ 'ನ್ಯಾಷನಲ್‌ ವೇಸ್ಟ್‌' ಎಂದು  ಬಿಜೆಪಿ ಸಂಸದ ತೇಜಸ್ವಿ ಸೂರ್ಯ ಸೋಶಿಯಲ್ ಮೀಡಿಯಾಗಳ ಮೂಲಕ ನೀಡಿರುವ ಹೇಳಿಕೆಗೆ ಹೂವು ಬೆಳೆಗಾರರಿಂದ ತೀವ್ರ ಆಕ್ಷೇಪ ವ್ಯಕ್ತವಾಗಿದೆ. ಹೇಳಿಕೆ ಹಿಂಪಡೆಯುವಂತೆ ದಕ್ಷಿಣ ಭಾರತ ಹೂವಿನ ಕೃಷಿ ಸಂಘ ಭಾನುವಾರ ಒತ್ತಾಯಿಸಿದೆ.

ಕಳೆದ ಗುರುವಾರ ರೆಸಾರ್ಟ್‌ವೊಂದರಲ್ಲಿ ಗಾಯಕಿ ಶಿವಶ್ರೀ ಸ್ಕಂದಪ್ರಸಾದ್ ಅವರೊಂದಿಗೆ ದಾಂಪತ್ಯ ಜೀವನಕ್ಕೆ ಕಾಲಿಸಿರಿದ ತೇಜಸ್ವಿ ಸೂರ್ಯ ಅವರ ವಿವಾಹ ಆರತಕ್ಷತೆ ಕಾರ್ಯಕ್ರಮ ಭಾನುವಾರ ಅರಮನೆ ಮೈದಾನದಲ್ಲಿ ನಡೆಯಿತು. ಆರತಕ್ಷತೆ ಕಾರ್ಯಕ್ರಮಕ್ಕೆ ಹೂವಿನ ಬೊಕೆ, ಡ್ರೈಫ್ರೂಟ್ಸ್‌ಗಳನ್ನು ದಯವಿಟ್ಟು ತರಬೇಡಿ ಎಂದು ಫೇಸ್‌ಬುಕ್‌ ಹಾಗೂ ಯೂಟ್ಯೂಬ್‌ ಲೈವ್​ನಲ್ಲಿ ಕಾರಣವನ್ನೂ ನೀಡಿ ಮನವಿ ಮಾಡಿದ್ದರು. 

ತೇಜಸ್ವಿ ಹೇಳಿದ್ದೇನು

ನಮ್ಮ ವಿವಾಹ ಆರತಕ್ಷತೆ ಕಾರ್ಯಕ್ರಮವಿದ್ದು, ನಿಮ್ಮೆಲ್ಲರ ಆಗಮನ ನಮಗೆ ಹೆಚ್ಚಿನ ಸಂತಸ ತರಲಿದೆ. ಇದೆಲ್ಲ ಸಂಭ್ರಮ, ಸಂತಸದ ನಡುವೆ ತಮ್ಮೆಲ್ಲರಲ್ಲಿ ನನ್ನದೊಂದು ವಿನಂತಿ.  ಭಾರತದಲ್ಲಿ ಪ್ರತಿವರ್ಷ ನಡೆಯುವ 1 ಕೋಟಿಗೂ ಅಧಿಕ ಮದುವೆ ಸಮಾರಂಭಗಳಲ್ಲಿ ನ ಶೇ.85 ರಷ್ಟು ಹೂವುಗಳು ಮತ್ತು ಬೊಕೆಗಳು ಕೇವಲ 24 ಗಂಟೆಗಳಲ್ಲಿ ನಿಷ್ಕ್ರಿಯವಾಗುತ್ತವೆ. ವರ್ಷಕ್ಕೆ ಏನಿಲ್ಲವೆಂದರೂ 300,000 ಕೆಜಿ ಯಷ್ಟು ಡ್ರೈ ಫ್ರೂಟ್ಸ್‌ ಗಳೂ ಮದುವೆ ನಡೆಯುವ ಸ್ಥಳದಲ್ಲಿಯೇ ಉಳಿದು ಹೋಗುತ್ತವೆ. ಇದರಿಂದ ವಾರ್ಷಿಕ 315 ಕೋಟಿ ರೂಪಾಯಿ ಮೊತ್ತ ಅನವಶ್ಯಕವಾಗಿ ವೆಚ್ಚವಾಗುತ್ತದೆ. ಕಾರ್ಯಕ್ರಮಕ್ಕೆ ಹೂ ಬೊಕ್ಕೆಗಳು, ಡ್ರೈ ಫ್ರೂಟ್ಸ್‌ ಗಳನ್ನು ದಯವಿಟ್ಟು ತರಬೇಡಿ ಎಂದು ತಮ್ಮಲ್ಲಿ ವಿನಂತಿಸುತ್ತೇನೆ ಎಂದು ತಮ್ಮ ಸಾಮಾಜಿಕ ಮಾಧ್ಯಮಗಳಲ್ಲಿ ಬರೆದುಕೊಂಡಿದ್ದರು. 

 ತೇಜಸ್ವಿ ಹೇಳಿಕೆಗೆ ತಿರುಗೇಟು 

ಸಂಸದ ತೇಜಸ್ವಿ ಸೂರ್ಯ ಅವರ ಪೋಸ್ಟ್‌ಗೆ ಆಕ್ಷೇಪ ವ್ಯಕ್ತಪಡಿಸಿರುವ ದಕ್ಷಿಣ ಭಾರತ ಪುಷ್ಪ ಕೃಷಿ ಸಂಘದ ಅಧ್ಯಕ್ಷ ಟಿ.ಎಂ. ಅರವಿಂದ್, ಜವಾಬ್ದಾರಿಯುತ ಸ್ಥಾನದಲ್ಲಿರುವ ತೇಜಸ್ವಿ ಸೂರ್ಯ ಅವರ ಇಂತಹ ಹೇಳಿಕೆಗಳು ಅನುಚಿತ ಮತ್ತು ತಮ್ಮ ಜೀವನಕ್ಕಾಗಿ ಪುಷ್ಪ ಕೃಷಿಯನ್ನು ಅವಲಂಬಿಸಿರುವ ಲಕ್ಷಾಂತರ ರೈತರ ಶ್ರಮವನ್ನು ದುರ್ಬಲಗೊಳಿಸುತ್ತವೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. 

52 ಲಕ್ಷಕ್ಕೂ ಹೆಚ್ಚು ವ್ಯಕ್ತಿಗಳಿಗೆ ಉದ್ಯೋಗ

ಕರ್ನಾಟಕದ ಪುಷ್ಪಕೃಷಿ ಉದ್ಯಮವು 38,000 ಹೆಕ್ಟೇರ್‌ಗಳಷ್ಟು ವ್ಯಾಪಿಸಿದೆ.  1,500 ಹೆಕ್ಟೇರ್‌ಗಳಿಗೂ ಹೆಚ್ಚು ವಾಣಿಜ್ಯ ಹೂವುಗಳನ್ನು ಬೆಳೆಯಲಾಗುತ್ತದೆ. ರಾಜ್ಯದಲ್ಲಿ ಗುಲಾಬಿ, ಸೇವಂತಿಗೆ, ಚೆಂಡುಹೂವು, ಮಲ್ಲಿಗೆ ಮತ್ತು ಕನಕಾಂಬರ ಸೇರಿದಂತೆ ವಿವಿಧ ಹೂವುಗಳನ್ನು ಬೆಳೆಯಲಾಗುತ್ತದೆ. ಜೊತೆಗೆ ಗ್ರೀನ್‌ಹೌಸ್‌ ಮತ್ತು ಪಾಲಿಹೌಸ್‌ಗಳಲ್ಲಿ ಜರ್ಬೆರಾ, ಅಂತೂರಿಯಂ ಮತ್ತು ಆರ್ಕಿಡ್‌ಗಳಂತಹ ಅಲಂಕಾರಿಕ ಹೂವುಗಳನ್ನು ಬೆಳೆಸಲಾಗುತ್ತದೆ. 2.8 ಲಕ್ಷ ಎಕರೆಗಳಲ್ಲಿ ಪುಷ್ಪಕೃಷಿ ನಡೆಯುತ್ತಿದ್ದು 52 ಲಕ್ಷಕ್ಕೂ ಹೆಚ್ಚು ಹೂಬೆಳೆಗಾರರು ತೊಡಗಿಸಿಕೊಂಡಿದ್ದಾರೆ. ಪುಷ್ಪ ಮಾರುಕಟ್ಟೆಯಲ್ಲಿ ಪ್ರತ್ಯೇಕ್ಷ ಹಾಗೂ ಪರೋಕ್ಷವಾಗಿ 11 ಲಕ್ಷ  ಜನರಿಗೆ ಉದ್ಯೋಗ ನೀಡುತ್ತಿದೆ ಎಂದು ಅರವಿಂದ್‌ ವಿವರಿಸಿದ್ದಾರೆ.  

ಕೃತಕ ಹೂವು, ಅಸ್ಥಿರ ಮಾರುಕಟ್ಟೆ ಹಾಗೂ ಬೆಲೆಗಳ ಸವಾಲು ಹೊರತಾಗಿಯೂ ರೈತರು ನೈಸರ್ಗಿಕ ಹೂವುಗಳಿಗೆ ಉತ್ತೇಜನ ನೀಡುತ್ತಿದ್ದಾರೆ. ಚಿಕ್ಕಬಳ್ಳಾಪುರದ ಬಿಜೆಪಿ ಸಂಸದ ಕೆ. ಸುಧಾಕರ್ ಇತ್ತೀಚೆಗೆ ತಮ್ಮ ಕ್ಷೇತ್ರದಲ್ಲಿ 25,000 ಎಕರೆಗಳಲ್ಲಿ ಪುಷ್ಪಕೃಷಿ ನಡೆಯುತ್ತಿದೆ.  ಹಾಗಾಗಿ ಪುಪ್ಪೋದ್ಯಮ  ಬೆಂಬಲಿಸಲು ಪುಷ್ಪಕೃಷಿ ಮಂಡಳಿಯನ್ನು ಸ್ಥಾಪಿಸುವಂತೆ ಸಂಸತ್ತಿನಲ್ಲಿ ಪ್ರಸ್ತಾಪಿಸಿದ್ದರು ಎಂಬುದಾಗಿ ಅರವಿಂದ್‌ ಸ್ಮರಿಸಿದರು.

ಹಿಂದೂ ಸಂಪ್ರದಾಯಗಳಲ್ಲಿ ಹೂವುಗಳಿಗೆ ಸಾಂಸ್ಕೃತಿಕ ಮತ್ತು ಧಾರ್ಮಿಕ ಮಹತ್ವವಿದೆ. ಅತಿಯಾದ ಉಡುಗೊರೆಗಳನ್ನು ತಪ್ಪಿಸುವುದು ಅವರ ಉದ್ದೇಶವಾಗಿದ್ದರೂ, ಹೂಗುಚ್ಛಗಳಿಗೆ 'ನ್ಯಾಷನಲ್‌ ವೇಸ್ಟ್‌' ಎಂದು ಹಣೆಪಟ್ಟಿ ಕಟ್ಟುವುದು ರೈತರ ಪ್ರಯತ್ನಗಳನ್ನು ಕಡೆಗಣಿಸಿದಂತೆ ಹಾಗೂ ಅವರ ಜೀವನೋಪಾಯಕ್ಕೆ ಪೆಟ್ಟುಕೊಟ್ಟಂತೆ ಎಂದು ಅರವಿಂದ್ ಅವರು ಅಭಿಪ್ರಾಯಪಟ್ಟಿದ್ದಾರೆ.  

Tags:    

Similar News