Dhootha Sameer MD | ಸೌಜನ್ಯಾ ಕೊಲೆ ಪ್ರಕರಣ: ಯೂಟ್ಯೂಬರ್ ಸಮೀರ್ ವಿರುದ್ಧ ಎಫ್‌ಐಆರ್
ಸೌಜನ್ಯ ಪರ ಹೋರಾಟಗಳಲ್ಲಿ ಗುರುತಿಸಿಕೊಂಡಿದ್ದ ಮಾಜಿ ಪೊಲೀಸ್ ಅಧಿಕಾರಿ ಗಿರೀಶ್ ಮಟ್ಟಣ್ಣನವರ್ ಅವರ ಜೊತೆಗೆ ಸಮೀರ್ ಅವರು ಬುಧವಾರ ತಡರಾತ್ರಿ ಫೇಸ್‌ಬುಕ್ ಲೈವ್‌ನಲ್ಲಿ ತನಗೆ ವ್ಯಾಪಕ ಜೀವ ಬೆದರಿಕೆ ಒಡ್ಡಲಾಗುತ್ತಿದೆ ಎಂದು ಹೇಳಿದ್ದಾರೆ.;
ಸಮೀರ್ ಎಂ ಡಿ
ಸೌಜನ್ಯ ಅತ್ಯಾಚಾರ ಪ್ರಕರಣದ ಕುರಿತು ವಿಡಿಯೋ ಮಾಡಿದ್ದ ಯೂಟ್ಯೂಬರ್ ಸಮೀರ್ ಎಂಡಿ ವಿರುದ್ಧ ಬಳ್ಳಾರಿ ಜಿಲ್ಲೆಯ ಕೌಲ್‌ಬಜಾರ್ ಠಾಣೆಯ ಪೊಲೀಸರು ಸ್ವಯಂ ಪ್ರೇರಿತ ಪ್ರಕರಣ ದಾಖಲಿಸಿದ್ದಾರೆ.
ಸಮೀರ್ ವೀಡಿಯೋದಿಂದ ಧರ್ಮಸ್ಥಳದ ಮೇಲೆ ಸಾರ್ವಜನಿಕರ ಧಾರ್ಮಿಕ ಭಾವನೆಗೆ ಧಕ್ಕೆಯಾಗಿದೆ ಎಂದು ಎಫ್‌ಐಆರ್‌ನಲ್ಲಿ ಉಲ್ಲೇಖಿಸಲಾಗಿದೆ.
ಸಮೀರ್ ಅವರು ಧರ್ಮಸ್ಥಳ ಸೌಜನ್ಯ ಪ್ರಕರಣದ ಬಗ್ಗೆ ಇತ್ತೀಚೆಗೆ ಮಾಡಿದ್ದ ವೀಡಿಯೊವೊಂದು ವ್ಯಾಪಕ ವೈರಲ್ ಆಗಿತ್ತು. ಈ ನಡುವೆ ಅವರ ಧರ್ಮವನ್ನು ಮುನ್ನಲೆಗೆ ತಂದು ಅವಮಾನಿಸುತ್ತಿದ್ದಾರೆ ಎಂದು ಸಮೀರ್ ವಿರುದ್ಧ ಹಿಂದೂಪರ ಸಂಘಟನೆಗಳು ಆರೋಪ ಮಾಡಿದ್ದವು.
ಸಮೀರ್ ವಿರುದ್ಧ ಪೊಲೀಸರು ಭಾರತೀಯ ನ್ಯಾಯ ಸಂಹಿತೆ (ಬಿಎನ್‌ಎಸ್) ಕಲಂ -299 ಅಡಿಯಲ್ಲಿ ಪ್ರಕರಣ ದಾಖಲಿಸಿದ್ದಾರೆ.
ವಿವಿಧ ಸಾಮಾಜಿಕ ಮಾಧ್ಯಮ ವೇದಿಕೆಗಳಲ್ಲಿ ವಿಡಿಯೋ ವೈರಲ್ ಆದ ನಂತರ ಸಮೀರ್ ಮನೆಗೆ ಬುಧವಾರ ತಡ ರಾತ್ರಿ ಪೊಲೀಸರು ಪ್ರವೇಶಿಸಿದ್ದು, ಅವರನ್ನು ಬಂಧಿಸಲು ಪ್ರಯತ್ನಿಸಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ಈ ಕುರಿತು ಸಮೀರ್ ರಾತ್ರಿ 1 ಗಂಟೆಗೆ ಫೇಸ್‌ಬುಕ್ ಲೈವ್‌ನಲ್ಲಿ ಖಚಿತಪಡಿಸಿದ್ದಾರೆ.
ಈ ನಡುವೆ ಎಡಿಜಿಪಿ ( ಕಾನೂನು ಮತ್ತು ಸುವ್ಯವಸ್ಥೆ) ಅವರು ಹೊರಡಿಸಿದ್ದಾರೆ ಎನ್ನಲಾದ ಆದೇಶದ ಪ್ರತಿಯೊಂದು ಬುಧವಾರ ಸಂಜೆಯಿಂದ ವೈರಲ್ ಆಗಿದೆ. ಈ ಆದೇಶದಲ್ಲಿ “ಸಮೀರ್ ವೀಡಿಯೊದಿಂದ ಕಾನೂನು ಸುವ್ಯವಸ್ಥೆಗೆ ಧಕ್ಕೆಯಾಗುವ ಸಂಭವವಿದ್ದು, ಸಾಮಾಜಿಕ ಮಾಧ್ಯಮ ಮಾನಿಟರಿಂಗ್ ಸೆಲ್ ಚುರುಕುಗೊಳಿಸಿ ಕ್ರಮ ಕೈಗೊಳ್ಳಬೇಕು” ಎಂದು ಹೇಳಿದ್ದು, ಈ ಆದೇಶವು ಸಾಕಷ್ಟು ಜನಾಕ್ರೋಶಕ್ಕೆ ಗುರಿಯಾಗಿದೆ.
ಸೌಜನ್ಯ ಪರ ಹೋರಾಟಗಳಲ್ಲಿ ಗುರುತಿಸಿಕೊಂಡಿದ್ದ ಮಾಜಿ ಪೊಲೀಸ್ ಅಧಿಕಾರಿ ಗಿರೀಶ್ ಮಟ್ಟಣ್ಣನವರ್ ಅವರ ಜೊತೆಗೆ ಸಮೀರ್ ಅವರು ಬುಧವಾರ ತಡರಾತ್ರಿ ಫೇಸ್‌ಬುಕ್ ಲೈವ್‌ನಲ್ಲಿ ತನಗೆ ವ್ಯಾಪಕ ಜೀವ ಬೆದರಿಕೆ ಒಡ್ಡಲಾಗುತ್ತಿದೆ ಎಂದು ಹೇಳಿದ್ದಾರೆ.
ಪ್ರಸ್ತುತ ತನಗೆ ತೊಂದರೆ ಆಗುತ್ತಿರುವುದು, ಮುಸ್ಲಿಮನೊಬ್ಬ ಧರ್ಮಸ್ಥಳ ಸೌಜನ್ಯ ಪ್ರಕರಣದ ಬಗ್ಗೆ ಮಾತನಾಡಿದ್ದೆ ತಪ್ಪು ಹಾಗೂ ಹಿಂದೂ ವಿರೋಧಿ ಎಂದು ಬಿಂಬಿಸಲಾಗುತ್ತಿದೆ. ಆದರೂ ತಾನು ಅನ್ಯಾಯದ ವಿರುದ್ಧ ಧ್ವನಿಯೆತ್ತಿದ್ದು, ಅದು ನನ್ನ ಧರ್ಮ, ಅದನ್ನು ನಾನು ಪಾಲಿಸುತ್ತಿದ್ದೇನೆ ಎಂದು ಅವರು ತಿಳಿಸಿದ್ದಾರೆ.
“ಒಂದು ವೇಳೆ ನಾನು ಹಿಂದೂ ವಿರೋಧಿ ಆಗಿದ್ದರೆ, ಒಬ್ಬ ಹಿಂದೂ ಹುಡುಗಿಗೆ ಆಗಿರುವ ಅನ್ಯಾಯದ ಬಗ್ಗೆ ನಾನು ಯಾಕೆ ಧ್ವನಿ ಎತ್ತಬೇಕು? ನ್ಯಾಯದ ಬಗ್ಗೆ ಮಾತನಾಡೋಣ. ಅದುವೇ ಧರ್ಮ” ಎಂದು ಸಮೀರ್ ಅವರು ಫೇಸ್‌ಬುಕ್ ಲೈವ್‌ನಲ್ಲಿ ಹೇಳಿದ್ದಾರೆ.