Farmers Organisation: ಒಡೆದು ಚೂರಾಗಿರುವ ರೈತ ಸಂಘಟನೆಗಳ ಐಕ್ಯತೆಯ ಕೋಲ್ಮಿಂಚು
Farmers Organisation: 1980ರಲ್ಲಿ ಎನ್.ಡಿ.ಸುಂದರೇಶ್, ಹೆಚ್.ಎಸ್.ರುದ್ರಪ್ಪ, ಪ್ರೊ.ಎಂ.ಡಿ.ನಂಜುಂಡಸ್ವಾಮಿ ಅವರ ಸಾರಥ್ಯದಲ್ಲಿ ಆರಂಭವಾದ ಕರ್ನಾಟಕ ರಾಜ್ಯ ರೈತ ಸಂಘ ರಾಜ್ಯದಲ್ಲಿ ದೊಡ್ಡ ಕ್ರಾಂತಿಯನ್ನೇ ಮಾಡಿತ್ತು. ಇದೀಗ ಮತ್ತೆ ಒಗ್ಗೂಡುವ ಮಾತು ಕೇಳಿ ಬಂದಿದೆ.;
ಅದೊಂದು ಕಾಲವಿತ್ತು, ಹಸಿರು ಶಾಲಿನ ಹವಾ ಎದ್ದಿತೆಂದರೆ ವಿಧಾನ ಸೌಧ ನಡುಗುತಿತ್ತು. ಆಳುವವರ ಎದೆಯಲ್ಲಿ ತೌಡು ಕುಟ್ಟಿದ ಅನುಭವವಾಗುತಿತ್ತು. ಎರಡು ದಶಕಗಳ ಕಾಲ ಅದೇ ಗೈರತ್ತು ಉಳಿಸಿಕೊಂಡಿದ್ದ, ಆ ಮೂಲಕ ಅನ್ನದಾತರ ಪಾಲಿನ ಆಶಾಕಿರಣವಾಗಿದ್ದ ಕರ್ನಾಟಕ ರಾಜ್ಯ ರೈತ ಸಂಘ ಇಂದು ಹಲವು ಬಣಗಳಾಗಿ ಸತ್ವ ಕಳೆದುಕೊಂಡಿದೆ. ಚಳವಳಿಗಳ ತವರು ಶಿವಮೊಗ್ಗ ಜಿಲ್ಲೆಯಲ್ಲಿಯೇ ಜನ್ಮ ತಾಳಿದ್ದ ರಾಜ್ಯ ರೈತ ಸಂಘದ ಸಂಸ್ಥಾಪಕರಲ್ಲೊಬ್ಬರಾಗಿದ್ದ ರೈತ ನಾಯಕ ಎನ್.ಡಿ.ಸುಂದರೇಶ್ ಅವರ ನೆನಪಿನ ಸಭೆ ಡಿ.21 ರಂದು ನಡೆದಿದೆ. ಮೂರು ಬಣಗಳೂ ಒಂದೇ ದಿನ ವಿಭಿನ್ನ ಸ್ಥಳಗಳಲ್ಲಿ ಕಾರ್ಯಕ್ರಮ ನಡೆಸಿವೆ. ಸಂಸ್ಥಾಪಕರ ಸ್ಮರಣೆ ಸಂದರ್ಭ ಸಂಘಟನೆ ಒಗ್ಗೂಡುವ ಮಾತು ಕೇಳಿಬಂದಿದೆ. ಈ ಹೇಳಿಕೆ ಕಗ್ಗತ್ತಲಲ್ಲಿ ಕೋಲ್ಮಿಂಚು ಹಾದು ಹೋದಂತಾಗಿದೆ.
ಈ ಬೆಳವಣಿಗೆ ಕುರಿತು ಕರ್ನಾಟಕ ರಾಜ್ಯ ರೈತರ ಸಂಘದ ಅಧ್ಯಕ್ಷ ಕೋಡಿ ಹಳ್ಳಿ ಚಂದ್ರಶೇಖರ್ ʼದ ಫೆಡರಲ್ ಕರ್ನಾಟಕʼ ದ ಜತೆ ಮಾತನಾಡಿʼʼ ಕರ್ನಾಟಕ ರಾಜ್ಯ ರೈತ ಸಂಘದ ಬಣಗಳು ಒಂದಾಗಬೇಕೆಂಬ ವಿಚಾರದಲ್ಲಿ ಸಹಮತವಿದೆ. ಬಣಗಳಾಗಿದ್ದರಿಂದ ಶಕ್ತಿ ಕುಂಠಿತವಾಗಿದೆ ಎಂಬುದನ್ನು ಒಪ್ಪಿಕೊಳ್ಳುತ್ತೇನೆ. ಹಣದ ವ್ಯವಹಾರ ಸರಿ ಇಲ್ಲ, ನೈತಿಕವಾಗಿ ಸರಿಯಿಲ್ಲ ಎಂದು ನಾವೇ ಕೆಲವರನ್ನು ಹೊರಹಾಕಿದ್ದೇವೆ. ಅವರನ್ನು ಹೊರತುಪಡಿಸಿ ಸಂಘಟನೆ ಒಂದಾಗುವುದಾದರೆ ನಾವು ಮುಕ್ತವಾಗಿದ್ದೇವೆ ಎಂದು ಹೇಳಿದ್ದಾರೆ.
1980ರಲ್ಲಿ ಎನ್.ಡಿ.ಸುಂದರೇಶ್, ಹೆಚ್.ಎಸ್.ರುದ್ರಪ್ಪ, ಪ್ರೊ.ಎಂ.ಡಿ.ನಂಜುಂಡಸ್ವಾಮಿ ಅವರ ಸಾರಥ್ಯದಲ್ಲಿ ಆರಂಭವಾದ ಕರ್ನಾಟಕ ರಾಜ್ಯ ರೈತ ಸಂಘ ರಾಜ್ಯದಲ್ಲಿ ದೊಡ್ಡ ಕ್ರಾಂತಿಯನ್ನೇ ಮಾಡಿತ್ತು. ಕೃಷಿ ಕ್ಷೇತ್ರದ ಮೇಲೆ ಬಹುರಾಷ್ಟ್ರೀಯ ಕಂಪನಿಗಳ ದಾಳಿ, ಬಿ.ಟಿ.ತಂತ್ರಜ್ಞಾನ ಪ್ರವೇಶ ಸೇರಿದಂತೆ ಕೃಷಿ ಕ್ಷೇತ್ರದ ಮೇಲೆ ಜಾಗತೀಕರಣದ ಪರಿಣಾಮಗಳ ಬಗ್ಗೆ ಎಂಬತ್ತರ ದಶಕದಲ್ಲಿಯೇ ಧ್ವನಿ ಎತ್ತಿದ್ದು ರಾಜ್ಯ ರೈತ ಸಂಘ. ಖಾಸಗೀಕರಣದ ವಿರುದ್ಧ ಪ್ರಬಲ ಧ್ವನಿ ಎತ್ತಿದ್ದ ಪ್ರೊ. ನಂಜುಂಡಸ್ವಾಮಿಯವರು ಅಂದು ಹೇಳಿದ್ದು, ಇಂದು ನಿಜವಾಗಿದೆ. ಪ್ರತಿ ಹಳ್ಳಿಯ ಅರಳಿಕಟ್ಟೆಗೂ ಈಗ ಬಹುರಾಷ್ಟ್ರೀಯ ಕಂಪೆನಿಗಳು ಒಕ್ಕರಿಸಿವೆ. ಆಳುವ ಸರ್ಕಾರಗಳು ಬಹುರಾಷ್ಟ್ರೀಯ ಕಂಪೆನಿಗಳ ಕೈಗೊಂಬೆಯಾಗಿವೆ. ಇದರ ಪರಿಣಾಮವಾಗಿ ಇಂದು ಕೃಷಿ ಕ್ಷೇತ್ರ ಭಾರೀ ಬಿಕ್ಕಟ್ಟಿನಲ್ಲಿ ಸಾಗುತ್ತಿದೆ.
ರಾಜ್ಯ ರೈತ ಸಂಘದ ಅಧ್ಯಕ್ಷೀಯ ಮಂಡಳಿ ಸದಸ್ಯರಾಗಿರುವ ಚುಕ್ಕಿ ನಂಜುಂಡಸ್ವಾಮಿ ʼದ ಫೆಡರಲ್ ಕರ್ನಾಟಕʼದ ಜತೆ ಮಾತನಾಡಿ, ರೈತ ಸಂಘಟನೆಗಳು ಒಂದಾಗಬೇಕು. ವಿಚಾರದ ಮೇಲೆ ಒಂದಾಗಲು ಒಂದು ನಿಮಿಷ ಸಾಕು. ಹಲವಾರು ಸಮಸ್ಯೆ ರೈತರನ್ನು ಕಾಡುತ್ತಿದೆ. ಯಾವ ಕಿರೀಟ ಬಯಸದೇ ರೈತರಿಗೆ ದುಡಿಯುವ ಪಡೆ ತಯಾರು ಮಾಡಬೇಕಾಗಿದೆ. ಹೋರಾಟ ಮುಂದಿನ ತಲೆಮಾರಿಗೆ ವರ್ಗಾಯಿಸಬೇಕು ಎಂದು ಹೇಳಿದ್ದಾರೆ.
ರಾಜಕೀಯ ಪ್ರವೇಶದಿಂದ ಒಡಕು
1980-90 ರದಶಕದಲ್ಲಿ ಅತ್ಯಂತ ಪ್ರಭಾವ ಶಾಲಿ ಸಂಘಟನೆಯಾಗಿದ್ದ ರಾಜ್ಯ ರೈತ ಸಂಘ ಆ ಬಳಿಕ ಹರಿದು ಹಂಚಿಹೋಗಿದೆ. ಬಲಾಢ್ಯ ಸಂಘಟನೆಯ ಮುಖ್ಯಸ್ಥರುಗಳು ಚುನಾವಣೆ ರಾಜಕೀಯಕ್ಕೆ ಪ್ರವೇಶ ಮಾಡುತಿದ್ದಂತೆ ಸಂಘಟನೆಯಲ್ಲಿ ಭಿನ್ನ ದನಿ ಮೂಡಿತ್ತು.. ರಾಜಕೀಯ ಪ್ರವೇಶ ಬೇಕು-ಬೇಡ ಎಂದು ಹುಟ್ಟಿಕೊಂಡ ವಾದ ಕೊನೆಗೆ ಸಂಘವನ್ನು ಒಡೆದು ಚೂರು ಮಾಡಿತು. ಪ್ರೊ.ನಂಜುಂಡಸ್ವಾಮಿ, ಕೆ.ಎಸ್.ಪುಟ್ಟಣ್ಣಯ್ಯ ಅವರ ನಡುವಿನ ಭಿನ್ನಾಭಿಪ್ರಾಯ ಆ ಬಳಿಕ ಎರಡನೇ ತಲೆಮಾರಿನ ನಾಯಕರುಗಳಲ್ಲಿನ ಅಧಿಕಾರಕ್ಕಾಗಿನ ಹಪಾಹಪಿಯ ಭಾಗವಾಗಿ ಕರ್ನಾಟಕ ರಾಜ್ಯ ರೈತ ಸಂಘ ಇಂದು ʼʼಊರೊಂದು ಹಲವು ಬಾಗಿಲುʼʼ ಎನ್ನುವಂತಾಗಿದೆ.
ಪ್ರಬಲ ಮೋದಿ ಸರ್ಕಾರವನ್ನೇ ಮಣಿಸಿದ್ದ ಕಿಸಾನ್ ಶಕ್ತಿ
ದೆಹಲಿಯಲ್ಲಿ ಸಂಯುಕ್ತ ಕಿಸಾನ್ ಮೋರ್ಚಾ ನೇತೃತ್ವದಲ್ಲಿ ವರ್ಷಗಟ್ಟಲೇ ನಡೆದಿದ್ದ ರೈತ ಚಳವಳಿ ಕೇಂದ್ರ ಸರ್ಕಾರದ ಮೂರು ರೈತವಿರೋಧಿ ಕೃಷಿ ಕಾಯಿದೆಗಳನ್ನು ಹಿಂಪಡೆಯುವಂತೆ ಮಾಡಿತ್ತು. ಈ ಚಳವಳಿ ರೈತಸಂಘಟನೆಗೆ ಇರುವ ಶಕ್ತಿಯನ್ನು ಸಾಬೀತು ಪಡಿಸಿತ್ತು. ಕರ್ನಾಟಕದಲ್ಲಿ ಒಂದು ಕಾಲದಲ್ಲಿ ಅದೇ ತಾಕತ್ತು ಹೊಂದಿದ್ದ ಕರ್ನಾಟಕ ರಾಜ್ಯ ರೈತ ಸಂಘ ಈಗ ಬಲಹೀನವಾಗಿದೆ. ಸರ್ಕಾರ ಯಾವುದೇ ಬಂದರೂ ರೈತ ಸಂಕುಲ ಮಾತ್ರ ಸಂಕಷ್ಟದಲ್ಲಿಯೇ ಇದೆ. ವಕ್ಫ್ ಭೂಮಿ ತೆರವು ಪ್ರಕರಣ ಇಂದು ರಾಜ್ಯಾದ್ಯಂತ ಸುದ್ದಿ ಮಾಡಿದೆ. ಆರೂವರೆ ದಶಕಗಳ ಹಿಂದೆ ನಾಡಿಗೆ ಬೆಳಕು ಕೊಡಲು ನೆಲೆ ಕಳೆದುಕೊಂಡಿದ್ದ ಶರಾವತಿ ಸಂತ್ರಸ್ತರು ಅತಂತ್ರರಾಗಿದ್ದಾರೆ.
ಮನಮೋಹನ್ ಸಿಂಗ್ ಪ್ರಧಾನಿಯಾಗಿದ್ದ ಕಾಲದಲ್ಲಿ ಜಾರಿಗೆ ತಂದಿದ್ದ ಮಹತ್ವಾಕಾಂಕ್ಷಿ ಅರಣ್ಯ ಹಕ್ಕು ಕಾಯಿದೆ ಕರ್ನಾಟಕದಲ್ಲಿ ಜಾರಿಯೇ ಆಗಿಲ್ಲ. ಸಂಶೋಧನೆಗಳು ನಿಖರವಾಗಿ ಸಾಬೀತು ಮಾಡದಿದ್ದರೂ ಅಡಕೆ ಆರೋಗ್ಯಕ್ಕೆ ಹಾನಿಕಾರಕ ಎಂಬ ಆಗಾಗ ಕಾಡುವ ಗುಮ್ಮನನ್ನು ಹೊಡೆದೋಡಿಸಲು ಆಗುತ್ತಿಲ್ಲ. ಅತಿವೃಷ್ಟಿ, ಅನಾವೃಷ್ಟಿ ಸರ್ಕಾರಗಳ ರೈತವಿರೋಧಿ ನೀತಿಗಳಿಂದಾಗಿ ಇಡೀ ರೈತ ಸಮುದಾಯ ದುರಿತ ಕಾಲದಲ್ಲಿದೆ. ಇಂತಹ ಹೊತ್ತಿನಲ್ಲಿ ಅನ್ನದಾತರಿಗೆ ಧ್ವನಿಯಾಗಬೇಕಾದ ರೈತ ಸಂಘಟನೆಗಳು ಒಗ್ಗೂಡಬೇಕಾದ ಜರೂರತ್ತಿದೆ.
ಕೇಂದ್ರ ಸರಕಾರ ಜಾರಿಗೆ ತಂದಿದ್ದ ಮೂರು ಕೃಷಿ ಕಾಯಿದೆಗೆ ಪೂರಕವಾಗಿ ರಾಜ್ಯದಲ್ಲಿ ಅಂದಿನ ಬಿಜೆಪಿ ಸರ್ಕಾರ, ಕರ್ನಾಟಕ ಭೂ ಕಂದಾಯ ಕಾಯಿದೆ 1961 ಕ್ಕೆ ತಿದ್ದುಪಡಿ ತಂದು ಸುಗ್ರೀವಾಜ್ಞೆ ಹೊರಡಿಸಿತ್ತು. ಈ ಕಾಯಿದೆ ವಿರುದ್ಧ ಅಂದು ಸಿದ್ದರಾಮಯ್ಯ ನೇತೃತ್ವದಲ್ಲಿ ಕಾಂಗ್ರೆಸ್ ಹೋರಾಟ ಮಾಡಿತ್ತು. ಈಗ ಅದೇ ಸಿದ್ದರಾಮಯ್ಯರೇ ಮುಖ್ಯಮಂತ್ರಿಯಾಗಿದ್ದಾರೆ. ಆದರೆ ಕಾಯಿದೆಯನ್ನು ಹಿಂಪಡೆದಿಲ್ಲ. ರೈತ ಸಂಘಟನೆಗಳು ಒತ್ತಾಯ ಮಾಡುತ್ತಲೇ ಇವೆ. ಚೆದುರಿದ ಮೋಡಗಳಂತಾಗಿರುವ ರೈತ ಹೋರಾಟಕ್ಕೆ ಬೆಲೆಯೂ ಇಲ್ಲದಾಗಿದೆ. ಈ ಹೊತ್ತಿನಲ್ಲಿ ರಾಜ್ಯ ರೈತ ಸಂಘಟನೆಗಳು ಒಂದಾಗಬೇಕಿರುವ ಬಗ್ಗೆ ಚರ್ಚೆಯಾಗಬೇಕಿದೆ. ರೈತ ಸಂಘ ಮತ್ತು ದಲಿತ ಸಂಘಟನೆಗಳು ಜನರ ನಡುವೆ ಹುಟ್ಟಿದ್ದರೂ, ಇವುಗಳ ನೀತಿ ನಿರೂಪಣೆ ರೂಪುಗೊಂಡಿದ್ದು, ಚಿಂತಕರ ಚಾವಡಿಯಲ್ಲಿ. ಆ ಚಾವಡಿಗಳಲ್ಲಿ ರೈತ ಸಂಘದ ಐಕ್ಯತೆಯ ಚರ್ಚೆಯಾಗಬೇಕಿದೆ.
ಬಿಜೆಪಿ ದೇಶವನ್ನೇ ಆಳುತ್ತಿದೆ
ಕರ್ನಾಟಕ ರಾಜ್ಯ ರೈತ ಸಂಘ ಮತ್ತು ಭಾರತೀಯ ಜನತಾ ಪಕ್ಷ ಎರಡೂ ಹುಟ್ಟಿದ್ದು 1980 ರಲ್ಲಿಯೇ. ಬಿಜೆಪಿ ಇಂದು ದೇಶ ಮಾತ್ರವಲ್ಲದೆ, ಹಲವು ರಾಜ್ಯಗಳನ್ನು ಆಳುತ್ತಿದೆ. ಆದರೆ ರಾಜ್ಯವನ್ನು ಪ್ರತಿನಿಧಿಸಬಲ್ಲ ಒಂದು ಪ್ರಾದೇಶಿಕ ಪಕ್ಷವಾಗುವ ಎಲ್ಲಾ ಶಕ್ತಿಯನ್ನು ಹೊಂದಿದ್ದ ಸಂಘಟನೆ ಇಂದು ಜಿಲ್ಲೆಗೊಂದು ಬಣವಾಗಿವೆ. ನಮ್ಮದು ಒಂದೇ ಜಾತಿ ಮತ್ತು ಒಂದೇ ಧರ್ಮ ಎಂಬ ಧ್ಯೇಯ ಅನ್ನದಾತರದ್ದು. ಆದರೆ ಕೆಲವು ರೈತ ನಾಯಕರ ರಾಜಕೀಯ ಲಾಲಸೆ, ಕೆಲವರ ಜಾತಿ ಪ್ರೇಮ ಮತ್ತೆ ಕೆಲವರ ಧನದಾಹದಿಂದಾಗಿ ಪ್ರಬಲ ಸಂಘಟನೆಯಾಗದೇ ಇಂದು ಶಕ್ತಿ ಕಳೆದುಕೊಂಡಿರುವುದು ದೊಡ್ಡ ದುರಂತವೇ ಆಗಿದೆ.
ಯುವ ರೈತ ಮುಖಂಡ ಎನ್.ಸುಧಾಂಶು ( ಎನ್.ಡಿ.ಸುಂದರೇಶ್ ಪುತ್ರ) ʼದ ಫೆಡರಲ್ ಕರ್ನಾಟಕʼ ಜತೆ ಮಾತನಾಡಿ ಸಂಘಟನೆಯನ್ನು ಒಗ್ಗೂಡಿಸಿಕೊಂಡು ಹೋಗಬೇಕು. ಸ್ವಾರ್ಥಕ್ಕಾಗಿ ರೈತ ಸಂಘ ಮಾಡಬಾರದು. ನಾನು ಅದಾಗಬೇಕು, ಇದಾಗಬೇಕೆನ್ನುವುದು ಇರಬಾರದು. ಸಂಘ ರೈತರಿಗಾಗಿ ಹೋರಾಟ ಮಾಡಬೇಕು ಎಂದು ಹೇಳಿದ್ದಾರೆ.