ಕೋಸ್ಟ್ ಗಾರ್ಡ್ ಕಾರ್ಯಾಚರಣೆ | ಅರಬ್ಬಿ ಸಮುದ್ರದಲ್ಲಿ ಗುಂಡಿನ ಸದ್ದು, ಮೈನವಿರೇಳಿಸುವ ಕಸರತ್ತು
ಕಡಲಗಸ್ತು ಹಡಗು ‘ವರಾಹ’, ಇನ್ನೊಂದು ನೌಕೆ ‘ಸಕ್ಷಮ್’, ಮೂರು ಫಾಸ್ಟ್ ಪ್ಯಾಟ್ರೋಲ್ ವೆಸೆಲ್‌ಗಳಾದ ಅಮಾರ್ತ್ಯ, ರಾಜ್‌ಧೂತ್ ಹಾಗೂ ಸಾವಿತ್ರಿಭಾಯಿ ಫುಲೆ, ಎರಡು ಇಂಟರ್‌ಸೆಪ್ಟರ್ ಬೋಟುಗಳು, ‘ಚೇತಕ್’ ಹೆಲಿಕಾಪ್ಟರ್ ಕಾರ್ಯಾಚರಣೆಯಲ್ಲಿ ಭಾಗವಹಿಸಿತ್ತು.;
ಅಬ್ಬಬ್ಬಾ..! ಮೈನವಿರೇಳಿಸುವಂತಹ ಕಸರತ್ತು. ಹೆಲಿಕಾಪ್ಟರ್ ಹಾರಾಟ. ತೊಂದರೆಗೆ ಸಿಲುಕಿದ ಯುವಕನ ರಕ್ಷಣೆಗೆ ಧಾವಿಸಿ ಬಂದ ನೌಕೆ. ಕೋಸ್ಟ್ ಗಾರ್ಡ್ ಸಿಬ್ಬಂದಿಯಿಂದ ರೋಚಕ ಕಾರ್ಯಾಚರಣೆ. ಈ ದೃಶ್ಯಕ್ಕೆ ಸಾಕ್ಷಿಯಾದದ್ದು ಮಂಗಳೂರಿನ ಎನ್ಎಂಪಿಎ ಬಂದರು.
ಹೌದು... ಪ್ರಶಾಂತವಾಗಿದ್ದ ಅರಬ್ಬಿಸಮುದ್ರದಲ್ಲಿ ಏಕಾಏಕಿ ಪ್ರಕ್ಷುಬ್ಧ ವಾತಾವರಣ. ಪ್ರಾಣರಕ್ಷಣೆಗೆ ಯುವಕನೊಬ್ಬ ಒದ್ದಾಡುತ್ತಿದ್ದ. ಅಷ್ಟರಲ್ಲೇ ನೀಲಾಕಾಶದಲ್ಲಿ ಹೆಲಿಕಾಪ್ಟರ್ ಕಾಣಿಸಿಕೊಂಡಿತು. ಒಂದಷ್ಟು ಹೊತ್ತು ರೌಂಡ್ ಹೊಡೆದ ಹೆಲಿಕಾಪ್ಟರ್ ಕೆಲವೇ ಕ್ಷಣಗಳಲ್ಲಿ ಯುವಕನನ್ನು ಏರ್ ಲಿಫ್ಟ್ ಮಾಡಿತು. ಕೆಲಹೊತ್ತಿನಲ್ಲಿ ಗುಂಡಿನ ಮೊರೆತ ಕೇಳಿಸಿತು. ಅದಾಗಿ ಕೆಲವೇ ಹೊತ್ತಿನಲ್ಲಿ ಕೋಸ್ಟ್ ಗಾರ್ಡ್ ಹಡಗುಗಳು ರಕ್ಷಣಾ ಕಾರ್ಯಚರಣೆಗೆ ಆಗಮಿಸಿದವು.
ಅರೇ ಅರಬ್ಬಿಸಮುದ್ರದಲ್ಲಿ ಅಂತದೇನಾಯಿತೆಂದು ಆತಂಕಗೊಂಡಿರಾ?. ಇದು ಕಡಲಗಸ್ತು, ಕಡಲಿನಲ್ಲಿ ಆಗುವ ಅನಾಹುತಗಳ ನಿರ್ವಹಣೆ, ನಾಗರಿಕರ ರಕ್ಷಣೆಯ ಜವಾಬ್ದಾರಿ ಹೊಂದಿರುವ ಕೋಸ್ಟ್‌ಗಾರ್ಡ್‌ನಿಂದ ಸಮುದ್ರದ ಮಧ್ಯೆಯ ಕಾರ್ಯಾಚರಣೆಯ ರೋಚಕ ಅಣಕು ಪ್ರದರ್ಶನದ ದೃಶ್ಯ ತುಣುಕು. ಭಾರತೀಯ ಕೋಸ್ಟ್‌ಗಾರ್ಡ್ ತನ್ನ 49ನೇ ಸ್ಥಾಪನಾ ದಿನದ ಅಂಗವಾಗಿ ಭಾನುವಾರ ಎನ್ಎಂಪಿಎ ಬಂದರಿನಿಂದ 20ನಾಟಿಕಲ್ ಮೈಲು ದೂರದಲ್ಲಿ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಅವರ ಸಮಕ್ಷಮದಲ್ಲಿ ಈ ಮೈನವಿರೇಳಿಸುವ ಅಣಕು ಕಾರ್ಯಾಚರಣೆ ನಡೆಸಿತು.
ವಿವಿಧ ನೌಕೆಗಳು, ಹೆಲಿಕಾಫ್ಟರ್‌ಗಳನ್ನು ಬಳಸಿ ಸುಮಾರು 400ರಷ್ಟು ಕೋಸ್ಟ್ ಗಾರ್ಡ್ ಸಿಬ್ಬಂದಿ ಮೈನವಿರೇಳಿಸುವ ಕಸರತ್ತು ಪ್ರದರ್ಶಿಸಿದರು. ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ನೌಕೆಯಲ್ಲಿದ್ದುಕೊಂಡೇ ಕೋಸ್ಟ್ ಗಾರ್ಡ್‌ನ ಅಣುಕು ಪ್ರದರ್ಶನ ವೀಕ್ಷಿಸಿ ಮೆಚ್ಚುಗೆ ವ್ಯಕ್ತಪಡಿಸಿದರು.
ಕಡಲಗಸ್ತು ಹಡಗು ‘ವರಾಹ’, ಇನ್ನೊಂದು ನೌಕೆ ‘ಸಕ್ಷಮ್’, ಮೂರು ಫಾಸ್ಟ್ ಪ್ಯಾಟ್ರೋಲ್ ವೆಸೆಲ್‌ಗಳಾದ ಅಮಾರ್ತ್ಯ, ರಾಜ್‌ಧೂತ್ ಹಾಗೂ ಸಾವಿತ್ರಿಭಾಯಿ ಫುಲೆ, ಎರಡು ಇಂಟರ್‌ಸೆಪ್ಟರ್ ಬೋಟುಗಳು, ‘ಚೇತಕ್’ ಹೆಲಿಕಾಪ್ಟರ್ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದವು. ಸಮುದ್ರ ಮಾರ್ಗದ ಮೂಲಕ ಅಕ್ರಮ ಪ್ರವೇಶಕ್ಕೆ ತಡೆ, ಕಡಲುಗಳ್ಳರ ಪತ್ತೆ, ಸಮುದ್ರದಲ್ಲಿ ನಡೆಯುವ ಅವಘಡಗಳು ಹಾಗೂ ನಾಗರಿಕರ ರಕ್ಷಣೆಯ ಕ್ಷಿಪ್ರ ಕಾರ್ಯಾಚರಣೆಗಳನ್ನು ಕೋಸ್ಟ್ ಗಾರ್ಡ್ ಸಿಬ್ಬಂದಿ ಪ್ರದರ್ಶಿಸಿದರು.
ಭಾರತದ ಸೀಮಾರೇಖೆಯೊಳಗೆ ಅಕ್ರಮವಾಗಿ ಹಡಗುಗಳು ಪ್ರವೇಶವಾದಲ್ಲಿ ಅದನ್ನು ಸುತ್ತುವರಿದು ಗುಂಡುಗಳನ್ನು ಹಾರಿಸಿ ವಶಕ್ಕೆ ಪಡೆಯುವುದು ಹೇಗೆ ಎಂಬ ರೀತಿಯ ಮೈನವಿರೇಳಿಸುವ ಕಾರ್ಯಾಚರಣೆಯ ಪ್ರದರ್ಶನ ಮೊದಲಿಗೆ ನಡೆಯಿತು. ಸಮುದ್ರದ ನಡುವೆಯೇ ಬೋಟ್‌ಗಳು ತೊಂದರೆಗೆ ಸಿಲುಕಿದಾಗ ಕ್ಷಿಪ್ರಗತಿಯಲ್ಲಿ ಹಡುಗು ಗಮ್ಯಸ್ಥಳಕ್ಕೆ ಧಾವಿಸಿ ಯಾವ ರೀತಿ ರಕ್ಷಿಸುವುದು, ಗಸ್ತು ಹಡಗಿನಲ್ಲಿರುವ ಸಿಬ್ಬಂದಿ ಸಹಿತ ‘ಲೈಫ್ ರಾಫ್ಟ್’ಗಳನ್ನು ಸಮುದ್ರಕ್ಕಿಳಿಸಿ ಅವುಗಳ ಮೂಲಕ ರಕ್ಷಣಾ ಕಾರ್ಯಾಚರಣೆ ಹೇಗೆ?, ಹೆಲಿಕಾಪ್ಟರ್‌ನ ಹಗ್ಗದ ಮೂಲಕ ಸಮುದ್ರಕ್ಕಿಳಿದು ರಕ್ಷಣೆ, ನೌಕಾ ಫಿರಂಗಿಗಳಿಂದ ನಡೆದ ಫೈರಿಂಗ್ ದೃಶ್ಯ ರೋಚಕವಾಗಿತ್ತು. ಆಸಕ್ತರಿಗೆ ಈ ವಿಶೇಷ ಅಣಕು ಪ್ರದರ್ಶನ ವೀಕ್ಷಿಸಲು ಅವಕಾಶ ನೀಡಲಾಗಿತ್ತು. ಕೋಸ್ಟ್ ಗಾರ್ಡ್ ಸಿಬ್ಬಂದಿಯ ರೋಚಕ ಕಾರ್ಯಾಚರಣೆಯನ್ನು ಜನ ಬೆಕ್ಕಸಬೆರಗಾಗಿ ವೀಕ್ಷಿಸಿದರು.
ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಅವರೊಂದಿಗೆ ದಕ್ಷಿಣಕನ್ನಡ ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್, ಮಂಗಳೂರು ನಗರ ಪೊಲೀಸ್ ಆಯುಕ್ತ ಅನುಪಮ್ ಆಗ್ರವಾಲ್, ಕೋಸ್ಟ್ ಗಾರ್ಡ್-3 ಡಿಐಜಿ ಪಿ.ಕೆ. ಮಿಶ್ರಾ ಇದ್ದರು. ವಿಧಾನಸಭಾ ಸ್ಪೀಕರ್ ಯು.ಟಿ. ಖಾದರ್ ಕೂಡ ಗಸ್ತು ಹಡಗು ‘ವರಾಹ’ಕ್ಕೆ ಬಂದು ರಾಜ್ಯಪಾಲರ ಜತೆ ಕೋಸ್ಟ್‌ಗಾರ್ಡ್ ಅಧಿಕಾರಿ, ಸಿಬ್ಬಂದಿಯಿಂದ ಗೌರವ ರಕ್ಷೆ ಸ್ವೀಕರಿಸಿ ನಿರ್ಗಮಿಸಿದರು.