ಬೆಂಗಳೂರಿನಲ್ಲಿ ಶೀಘ್ರವೇ ಚಾಲಕ ರಹಿತ ಕಾರು ಸಂಚಾರ ಆರಂಭ? ಟೆಸ್ಟ್​ ರೈಡ್ ಪಾಸ್​

ಸಾಂಪ್ರದಾಯಿಕ ಎಐ ವ್ಯವಸ್ಥೆಗಳಿಗಿಂತ ಭಿನ್ನವಾಗಿ ಎಐ ಮಾದರಿಯನ್ನು ಅಭಿವೃದ್ಧಿಪಡಿಸಿದೆ. ಜತೆಗೆ ಲಭ್ಯವಿರುವ ಡೇಟಾ ಅಥವಾ ಹೈ-ಡೆಫಿನೆಷನ್ ನಕ್ಷೆಗಳಿಲ್ಲದೆ ಸ್ವಯಂ-ಮೇಲ್ವಿಚಾರಣೆ ರೀತಿಯಲ್ಲಿ ತಂತ್ರಜ್ಞಾನ ಅಭಿವೃದ್ಧಿಪಡಿಸಿ ಅಳವಡಿಸಿದೆ.;

Update: 2025-05-22 07:16 GMT

ಸಾಂದರ್ಭಿಕ ಚಿತ್ರ

ರಾಜಧಾನಿ ಬೆಂಗಳೂರು ಮೂಲದ ಮೈನಸ್ ಝೀರೋ ಸ್ಟಾರ್ಟ್‌ಅಪ್ ಕಂಪನಿಯು ದೇಶದಲ್ಲಿಯೇ ಮೊದಲ ಬಾರಿಗೆ ಕೃತಕ ಬುದ್ಧಿಮತ್ತೆ ಆಧಾರಿತ ಚಾಲಕ ರಹಿತ ಕಾರನ್ನು ಅಭಿವೃದ್ಧಿಪಡಿಸಿ ನಗರದ ರಸ್ತೆಗಳಲ್ಲಿ ಯಶಸ್ವಿಯಾಗಿ ಪ್ರಾಯೋಗಿಕ ಸಂಚಾರ ನಡೆಸಿದೆ. ಈ ಯಶಸ್ವಿ ಪ್ರಯೋಗದೊಂದಿಗೆ ಶೀಘ್ರದಲ್ಲೇ ಚಾಲಕ ರಹಿತ ಕಾರುಗಳು ಭಾರತೀಯ ರಸ್ತೆಗಿಳಿಯುವ ಸಾಧ್ಯತೆ ಇದೆ.

ಕಂಪನಿಯು ತನ್ನ 'ಎಕ್ಸ್' ಖಾತೆಯಲ್ಲಿ ಈ ಮಹತ್ವದ ಸಾಧನೆಯ ಬಗ್ಗೆ ಮಾಹಿತಿ ನೀಡಿದ್ದು, ದೇಶದಲ್ಲಿಯೇ ಮೊದಲ ಬಾರಿಗೆ ಇಂತಹದೊಂದು ಪ್ರಯೋಗ ನಡೆಸಿರುವುದಾಗಿ ತಿಳಿಸಿದೆ. ವಿಶೇಷವೆಂದರೆ, ಈ ಚಾಲಕ ರಹಿತ ಕಾರು ಬೆಂಗಳೂರಿನ ಸಂಕೀರ್ಣ ರಸ್ತೆ ಪರಿಸ್ಥಿತಿಗಳಿಗೆ ಅನುಗುಣವಾಗಿ ಕಾರ್ಯನಿರ್ವಹಿಸುತ್ತದೆ. ಪ್ರಸ್ತುತ ಭಾರತದಲ್ಲಿ ಎಡಿಎಸ್ (ಅಡ್ವಾನ್ಸ್ಡ್ ಡ್ರೈವರ್ ಅಸಿಸ್ಟೆನ್ಸ್ ಸಿಸ್ಟಂ) ಎಲ್1, ಎಲ್2 ಹಂತದಲ್ಲಿದ್ದು, ಮೈನಸ್ ಝೀರೋ ಕಂಪನಿಯು ಎಲ್2+, ಎಲ್2++ ಮತ್ತು ಎಲ್3 ತಂತ್ರಜ್ಞಾನದತ್ತ ಮುನ್ನಡೆಯುವ ಗುರಿಯನ್ನು ಹೊಂದಿದೆ.

ಮೈನಸ್ ಝೀರೋ ಕಂಪನಿಯು ಸಾಂಪ್ರದಾಯಿಕ ಎಐ ವ್ಯವಸ್ಥೆಗಳಿಗಿಂತ ಭಿನ್ನವಾಗಿ, ಯಾವುದೇ ಬಾಹ್ಯ ಸೆನ್ಸಾರ್‌ಗಳನ್ನು ಬಳಸದೆ ಎಐ ಮಾದರಿಯನ್ನು ಅಭಿವೃದ್ಧಿಪಡಿಸಿದೆ. ಅಲ್ಲದೆ, ಲಭ್ಯವಿರುವ ಡೇಟಾ ಅಥವಾ ಹೈ-ಡೆಫಿನಿಷನ್ ನಕ್ಷೆಗಳಿಲ್ಲದೆ ಸ್ವಯಂ-ಮೇಲ್ವಿಚಾರಣೆ ರೀತಿಯಲ್ಲಿ ತಂತ್ರಜ್ಞಾನವನ್ನು ಅಭಿವೃದ್ಧಿಪಡಿಸಿ ಅಳವಡಿಸಲಾಗಿದೆ. ಈ ಹಿಂದೆ, ಮೈನಸ್ ಝೀರೋ ಕಂಪನಿಯು ತನ್ನ ಕ್ಯಾಂಪಸ್ ಒಳಗೆ ಆಟೋಪೈಲಟ್ ಕಾರಿನ ಪ್ರಾಯೋಗಿಕ ಸಂಚಾರವನ್ನು ಯಶಸ್ವಿಯಾಗಿ ನಡೆಸಿತ್ತು.

ಈ ಚಾಲಕ ರಹಿತ ಕಾರುಗಳು ಒನ್‌ವೇಯಲ್ಲಿ ಎದುರಾಗುವ ವಾಹನಗಳನ್ನು ಸುಲಭವಾಗಿ ಗುರುತಿಸಬಲ್ಲವು. ಎದುರಿನವರು ಏಕಾಏಕಿ ಬ್ರೇಕ್ ಹಾಕಿದಾಗ ತಕ್ಷಣ ಗಮನಿಸಿ ಕಾರು ನಿಲ್ಲುತ್ತದೆ ಮತ್ತು ಮುಂದುವರಿಯುತ್ತದೆ. ರಸ್ತೆಯಲ್ಲಿ ಅಕ್ಕಪಕ್ಕ, ಹಿಂದೆ ಮುಂದೆ ಬರುವ ಕಾರು, ಬೈಕ್‌ ಹಾಗೂ ಪಾದಚಾರಿಗಳನ್ನು ಸಹ ತಕ್ಷಣ ಗುರುತಿಸಿ ಅದಕ್ಕೆ ಅನುಗುಣವಾಗಿ ಚಾಲನೆಗೊಳ್ಳುವ ಸಾಮರ್ಥ್ಯವನ್ನು ಇದು ಹೊಂದಿದೆ.

ಇಷ್ಟು ದಿನ ವಿದೇಶಗಳಲ್ಲಿ ಚಾಲಕ ರಹಿತ ಕಾರುಗಳು ರಸ್ತೆಯಲ್ಲಿ ಓಡುವುದನ್ನು ಭಾರತೀಯರು ನೋಡಿದ್ದರು. ಆದರೆ ಇದೀಗ ಬೆಂಗಳೂರು ಮೂಲದ ಕಂಪನಿ ದೇಶಿಯವಾಗಿ ಅಭಿವೃದ್ಧಿಪಡಿಸಿರುವ ಈ ಕಾರುಗಳು ಶೀಘ್ರವೇ ನಗರದ ರಸ್ತೆಗಳಲ್ಲಿ ಓಡಾಡಲಿವೆ.

Tags:    

Similar News