Covid Cases |ಕೋವಿಡ್‌ ಕುರಿತು ಅನಗತ್ಯ ಭಯ ಬೇಡ, ಮುನ್ನೆಚ್ಚರಿಕೆಯೇ ಮದ್ದು; ಸಚಿವ ದಿನೇಶ್‌ ಗುಂಡೂರಾವ್‌

ಸಾರ್ವಜನಿಕರು ವಿಶೇಷವಾಗಿ ಮಕ್ಕಳು, ಗರ್ಭಿಣಿಯರು ಹಾಗೂ ಇತರೆ ಆರೋಗ್ಯ ಸಮಸ್ಯೆಗಳಿಂದ ಬಳಲುತ್ತಿರುವವರು ಮುಂಜಾಗ್ರತಾ ಕ್ರಮವಾಗಿ ಜನನಿಬಿಡ ಪ್ರದೇಶಗಳಿಗೆ ತೆರಳುವಾಗ ಮಾಸ್ಕ್‌ ಧರಿಸುವುದು ಸೂಕ್ತವಾಗಿದ್ದು, ಕೈಗಳ ಸ್ವಚ್ಛತೆ, ಹ್ಯಾಂಡ್‌ ಸ್ಯಾನಿಟೈಸರ್‌ನ ಬಳಕೆ ಮಾಡುವುದು ಸೂಕ್ತವಾಗಿ ಎಂದರು.;

Update: 2025-05-24 08:07 GMT

ಆರೋಗ್ಯ ಸಚಿವ ದಿನೇಶ್‌ ಗುಂಡೂರಾವ್‌

ರಾಜ್ಯದಲ್ಲಿ ಕೋವಿಡ್‌-19 ಪ್ರಕರಣಗಳ ಸಂಖ್ಯೆ ಮತ್ತೆ ಏರಿಕೆಯಾಗುತ್ತಿದ್ದು, ಸಾರ್ವಜನಿಕರು ಮುಂಜಾಗ್ರತಾ ಕ್ರಮಗಳನ್ನು ಅನುಸರಿಸುವಂತೆ ಆರೋಗ್ಯ ಇಲಾಖೆ ಸಲಹೆ ನೀಡಿದೆ.

ರಾಜ್ಯದಲ್ಲಿ ಒಟ್ಟು 35 ಪ್ರಕರಣಗಳು ವರದಿಯಾಗಿವೆ. ಬೆಂಗಳೂರು ನಗರ ಒಂದರಲ್ಲೇ 32 ಪ್ರಕರಣಗಳು ಪತ್ತೆಯಾಗಿದ್ದು ಯಾವುದೇ ಮರಣ ಸಂಭವಿಸಿಲ್ಲ. ಕೋವಿಡ್‌ ಸೋಂಕು ಹತೋಟಿಯಲ್ಲಿದ್ದು, ಸಾರ್ವಜನಿಕರು ಭಯಪಡಬೇಕಿಲ್ಲ ಎಂದು ಹೇಳಿದೆ. 

ಬೆಂಗಳೂರಿನಲ್ಲಿ ಶನಿವಾರ ಮಾಧ್ಯಮದವರೊಂದಿಗೆ ಮಾತನಾಡಿದ ಆರೋಗ್ಯ ಸಚಿವ ದಿನೇಶ್‌ ಗುಂಡೂರಾವ್‌ ಅವರು, ಕೋವಿಡ್ ತಾಂತ್ರಿಕ ಸಮಿತಿಯ ಸಭೆ ನಡೆಸಲಾಗಿದೆ. ಕೋವಿಡ್‌ ಸೋಂಕು ನಿಯಂತ್ರಣಕ್ಕೆ ಇಲಾಖೆ ಮುನ್ನೆಚ್ಚರಿಕೆ ಕ್ರಮ ಕೈಗೊಂಡಿದೆ. ದೇಶದಲ್ಲಿ ಒಟ್ಟು 257ಪ್ರಕರಣಗಳು ದೃಢಪಟ್ಟಿವೆ. ಕೇಂದ್ರ ಆರೋಗ್ಯ ಸಚಿವಾಲಯದೊಂದಿಗೂ ಈ ಸಂಬಂಧ ನಿಕಟ ಸಂಪರ್ಕದಲ್ಲಿದ್ದೇವೆ. ಯಾರೂ ಕೂಡ ಕೋವಿಡ್‌ ಸೋಂಕಿನ ಕುರಿತು ಅನಗತ್ಯವಾಗಿ ಭಯಪಡಬಾರದು ಎಂದು ಹೇಳಿದ್ದಾರೆ.

ಕೋವಿಡ್ ಸೋಂಕಿನ ಲಕ್ಷಣ ಇರುವವರು ಗಾಬರಿ ಪಡಬಾರದು. ಇದು ಗಂಭೀರವಾದ ಸಮಸ್ಯೆಯೇನೂ ಅಲ್ಲ. ಉಸಿರಾಟದ ಸಮಸ್ಯೆ ಇರುವವರು ಕಡ್ಡಾಯವಾಗಿ ಕೋವಿಡ್ ಪರೀಕ್ಷೆ ಮಾಡಿಸಬೇಕು. ಶಿಷ್ಟಾಚಾರದಂತೆ ಕೋವಿಡ್‌ ಮುಂಜಾಗ್ರತಾ ಕ್ರಮಗಳನ್ನು ಪಾಲಿಸಬೇಕು. ಜನಸಂದಣಿ ಹೆಚ್ಚಿರುವ ಕಡೆ ಬಾಣಂತಿಯರು ಮಾಸ್ಕ್ ಧರಿಸಬೇಕು ಎಂದು ಸಲಹೆ ನೀಡಿದ್ದಾರೆ.   

ಮಾಸ್ಕ್ ಕಡ್ಡಾಯವಲ್ಲ

ಕೋವಿಡ್‌ ಸೋಂಕಿನ ಹಿನ್ನೆಲೆಯಲ್ಲಿ ಎಲ್ಲರಿಗೂ ಮಾಸ್ಕ್‌ ಕಡ್ಡಾಯವಲ್ಲ. ಬದಲಿಗೆ ಬಾಣಂತಿಯರು, ಗರ್ಭಿಣಿಯರು ಮಾಸ್ಕ್‌ ಧರಿಸಬೇಕು. ಮಕ್ಕಳು ಹಾಗೂ ಇತರೆ ಆರೋಗ್ಯ ಸಮಸ್ಯೆಗಳಿಂದ ಬಳಲುತ್ತಿರುವವರು ಕೋವಿಡ್‌ ಅವಧಿಯಲ್ಲಿ ಜಾರಿ ಮಾಡಲಾದ ಮುಂಜಾಗ್ರತಾ ಕ್ರಮಗಳನ್ನು ಪಾಲಿಸಬೇಕು ಎಂದು ಹೇಳಿದ್ದಾರೆ. 

ಜೆಎನ್‌1 ರೂಪಾಂತರದ ಬಗ್ಗೆ ಎಚ್ಚರಿಕೆ

ಸಿಂಗಾಪುರ ಹಾಗೂ ಹಾಂಗ್ ಕಾಂಗ್‌ನಂತಹ ರಾಷ್ಟ್ರಗಳಲ್ಲಿ ಓಮಿಕ್ರಾನ್‌ನ ಉಪತಳಿ ಜೆಎನ್‌1 ರೂಪಾಂತರದ ಸೋಂಕುಗಳ ಹೊಸ ಅಲೆ ಹೆಚ್ಚಾಗುತ್ತಿದೆ. ಸಿಂಗಾಪುರದಲ್ಲಿ ಆಸ್ಪತ್ರೆಗೆ ದಾಖಲಾಗುವವರ ಸಂಖ್ಯೆ ಹೆಚ್ಚುತ್ತಿದ್ದರೆ, ಹಾಂಗ್ ಕಾಂಗ್‌ನಲ್ಲಿ ಸಾವುಗಳು ವರದಿಯಾಗುತ್ತಿವೆ. ಈ ಜಾಗತಿಕ ಪರಿಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡು, ಭಾರತದಲ್ಲಿ ಪ್ರಸ್ತುತ ಕೋವಿಡ್ ಪರಿಸ್ಥಿತಿ ನಿಯಂತ್ರಣದಲ್ಲಿದ್ದರೂ ಸಹ, ರಾಜ್ಯದಲ್ಲಿ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದು ಸಚಿವರು ತಿಳಿಸಿದ್ದಾರೆ.

ರೋಗ ಲಕ್ಷಣಗಳು

ಜೆಎನ್‌1 ರೂಪಾಂತರದಲ್ಲಿ ಒಣ ಕೆಮ್ಮು, ಮೂಗು ಕಟ್ಟುವಿಕೆ, ತಲೆನೋವು, ಗಂಟಲು ನೋವು, ಜ್ವರ, ಆಯಾಸ ಅಥವಾ ಬಳಲಿಕೆ, ರುಚಿ ಅಥವಾ ವಾಸನೆಯ ಗ್ರಹಿಕೆ ಇಲ್ಲದಿರುವುದು, ಮತ್ತು ಅತಿಸಾರದಂತಹ ಲಕ್ಷಣಗಳು ಹೆಚ್ಚಾಗಿ ಕಂಡುಬರುತ್ತವೆ. ಈ ಬಗ್ಗೆ ಸಾರ್ವಜನಿಕರು ಆತಂಕ ಪಡುವ ಬದಲು, ಅಗತ್ಯ ಮುನ್ನೆಚ್ಚರಿಕೆ ಕ್ರಮಗಳನ್ನು ಅನುಸರಿಸುವ ಮೂಲಕ ಸೋಂಕು ತಡೆಗಟ್ಟಬಹುದು ಎಂದು ಆರೋಗ್ಯ ಇಲಾಖೆ ತಿಳಿಸಿದೆ.

Tags:    

Similar News