BJP Infighting | ಕಮಲ ಪಾಳೆಯದಲ್ಲಿ ಆರದ ಭಿನ್ನಮತದ ಕಿಚ್ಚು: ಯತ್ನಾಳ್ ಬಣ ದೆಹಲಿಗೆ ದೌಡು
ಬಿಜೆಪಿ ಅಧ್ಯಕ್ಷ ವಿಜಯೇಂದ್ರ ಅವರನ್ನು ಕೆಳಗಿಳಸಲು ಶತಪ್ರಯತ್ನ ನಡೆಸುತ್ತಿರುವ ಶಾಸಕ ಬಸನಗೌಡ ಪಾಟೀಲ ಯತ್ನಾಳ ನೇತೃತ್ವದ ಬಣದ ನಾಯಕರು ಇಂದು ದೆಹಲಿಗೆ ತೆರಳುತ್ತಿದ್ದು, ವರಿಷ್ಠರನ್ನು ಭೇಟಿ ಮಾಡಲಿದ್ದಾರೆ.;
ಬಿಜೆಪಿ ರಾಜ್ಯಾಧ್ಯಕ್ಷ ಸ್ಥಾನದ ಚುನಾವಣೆ ತಯಾರಿಗಳು ಆರಂಭವಾಗಿರುವ ಬೆನ್ನಲ್ಲೇ ಬಿಜೆಪಿಯಲ್ಲಿ ಭಿನ್ನಮತೀಯ ಚಟುವಟಿಕೆಗಳು ಜೋರಾಗಿವೆ. ಬಿಜೆಪಿ ಅಧ್ಯಕ್ಷ ಬಿ.ವೈ.ವಿಜಯೇಂದ್ರ ಅವರನ್ನು ಕೆಳಗಿಳಸಲು ಶತಪ್ರಯತ್ನ ನಡೆಸುತ್ತಿರುವ ಶಾಸಕ ಬಸನಗೌಡ ಪಾಟೀಲ ಯತ್ನಾಳ ನೇತೃತ್ವದ ಬಣದ ನಾಯಕರು ಇಂದು (ಸೋಮವಾರ) ದೆಹಲಿಗೆ ತೆರಳುತ್ತಿದ್ದು, ವರಿಷ್ಠರನ್ನು ಭೇಟಿ ಮಾಡಲಿದ್ದಾರೆ.
ಶಾಸಕ ಬಸನಗೌಡ ಪಾಟೀಲ ಯತ್ನಾಳ್, ರಮೇಶ ಜಾರಕಿಹೊಳಿ, ಕುಮಾರ್ ಬಂಗಾರಪ್ಪ, ಬಿ.ಪಿ.ಹರೀಶ್, ಜಿ.ಎಂ.ಸಿದ್ದೇಶ್ವರ ಹಾಗೂ ಇತರರು ದೆಹಲಿಗೆ ತೆರಳುತ್ತಿದ್ದಾರೆ. ಮೂರ್ನಾಲ್ಕು ದಿನ ದೆಹಲಿಯಲ್ಲೇ ಉಳಿಯಲಿರುವ ಈ ನಾಯಕರು ವರಿಷ್ಠರನ್ನು ಭೇಟಿ ಮಾಡಿ ಮಾತುಕತೆ ನಡೆಸಲಿದ್ದಾರೆ ಎಂದು ತಿಳಿದು ಬಂದಿದೆ.
ಈಗಾಗಲೇ ಯತ್ನಾಳ ಬಣದ ನಾಯಕ ಅರವಿಂದ ಲಿಂಬಾವಳಿ ಅವರು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಅವರನ್ನು ಭೇಟಿ ಮಾಡಿ ವಿಜಯೇಂದ್ರ ಅವರನ್ನು ಹುದ್ದೆಯಲ್ಲಿ ಮುಂದುವರಿಸಬಾರದು ಎಂದು ಮನವಿ ಮಾಡಿ, ದೂರು ಸಲ್ಲಿಸಿದ್ದಾರೆ. ಈ ಮಧ್ಯೆ ವಿಜಯೇಂದ್ರ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿರುವ ಮಾಜಿ ಸಚಿವರಾದ ಶ್ರೀರಾಮುಲು ಹಾಗೂ ಡಾ.ಕೆ. ಸುಧಾಕರ್ ಕೂಡ ಯತ್ನಾಳ ಬಣದ ಪರವಾಗಿ ಮಾತನಾಡಿರುವುದು ಭಿನ್ನರ ಬಲ ಹೆಚ್ಚಿದಂತಾಗಿದೆ.
ಯತ್ನಾಳ ಬಣದ ನಾಯಕರಾದ ರಮೇಶ ಜಾರಕಿಹೊಳಿ, ಕುಮಾರ್ ಬಂಗಾರಪ್ಪ ಮತ್ತು ಇತರರು ಭಾನುವಾರ ಮೈಸೂರಿನ ಚಾಮುಂಡಿ ಬೆಟ್ಟಕ್ಕೆ ತೆರಳಿ ಚಾಮುಂಡೇಶ್ವರಿ ದೇವಿಯ ದರ್ಶನ ಪಡೆದಿದ್ದಾರೆ. ಸಂಜೆ ಬೆಂಗಳೂರಿನಲ್ಲಿ ಸಮಾನ ಮನಸ್ಕ ಮುಖಂಡರೊಂದಿಗೆ ಪ್ರತ್ಯೇಕ ಸಭೆ ನಡೆಸಿರುವುದು ಕೂಡ ಕುತೂಹಲ ಕೆರಳಿಸಿದೆ.
ಯತ್ನಾಳರಿಗೂ ಅಧ್ಯಕ್ಷರಾಗುವ ಅರ್ಹತೆ ಇದೆ
ಈ ಮಧ್ಯೆ, ಬಿಜೆಪಿ ಬಣಗಳಿಂದ ಅಂತರ ಕಾಯ್ದುಕೊಂಡಿರುವ ನಾಯಕರು ಕೂಡ ಇಲ್ಲಿ ವ್ಯಕ್ತಿಗಿಂತ ಪಕ್ಷ ಮುಖ್ಯ. ಶಾಸಕ ಬಸನಗೌಡ ಪಾಟೀಲ ಯತ್ನಾಳ ಕೂಡ ಅಧ್ಯಕ್ಷರಾಗುವ ಅರ್ಹತೆ ಹೊಂದಿದ್ದಾರೆ ಎಂದು ಹೇಳಿದ್ದಾರೆ.
ಕೂಡಲಸಂಗಮದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಮಾಜಿ ಸಚಿವ ಪ್ರಭು ಚೌಹಾಣ್, ನಾವು ಯಾವ ಗುಂಪಿಗೂ ಸೇರಿಲ್ಲ. ನನ್ನದು ಬರೀ ಬಿಜೆಪಿ ಗುಂಪು. ಎರಡೂ ಬಣಗಳ ಕಚ್ಚಾಟದಿಂದ ಕಾರ್ಯಕರ್ತರು ಗೊಂದಲಕ್ಕೆ ಒಳಗಾಗಿದ್ದಾರೆ. ಇಲ್ಲಿ ಯಾವುದೇ ವ್ಯಕ್ತಿಗಿಂತ ಪಕ್ಷ ಮುಖ್ಯ. ಯತ್ನಾಳ ಅವರಿಗೂ ರಾಜ್ಯಾಧ್ಯಕ್ಷರಾಗುವ ಅರ್ಹತೆ ಇದೆ ಎಂದಿದ್ದಾರೆ.
ವಿಜಯೇಂದ್ರ ವಿರುದ್ಧ ದೂರು
ಬಿಜೆಪಿ ಅಧ್ಯಕ್ಷ ಬಿ.ವೈ. ವಿಜಯೇಂದ್ರ ವಿರುದ್ಧ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ ನಡ್ಡಾ ಅವರಿಗೆ ಯತ್ನಾಳ್ ಬಣದ ನಾಯಕ ಅರವಿಂದ ಲಿಂಬಾವಳಿ ಅವರು ದೂರು ನೀಡಿದ್ದಾರೆ.
ಎರಡು ದಿನಗಳ ಹಿಂದೆ ನವದೆಹಲಿಯಲ್ಲಿ ಜೆ.ಪಿ.ನಡ್ಡಾ ಅವರನ್ನು ಭೇಟಿಯಾಗಿ ಚರ್ಚಿಸಿದ ಲಿಂಬಾವಳಿ, ವಿಜಯೇಂದ್ರ ಬದಲಾವಣೆಗೆ ಒತ್ತಾಯಿಸಿದ್ದಾರೆ. ಒಂದು ವೇಳೆ ವಿಜಯೇಂದ್ರ ಅವರನ್ನು ಅಧ್ಯಕ್ಷ ಸ್ಥಾನದಿಂದ ಕೆಳಗಿಳಿಸದೇ ಹೋದರೆ ನಮ್ಮ ಬಣದಿಂದ ಅಧ್ಯಕ್ಷ ಸ್ಥಾನದ ಚುನಾವಣೆಯಲ್ಲಿ ಅಭ್ಯರ್ಥಿಯನ್ನು ಕಣಕ್ಕಳಿಸಲಾಗುವುದು ಎಂದು ಸ್ಪಷ್ಟಪಡಿಸಿದ್ದಾರೆ. ಅಲ್ಲದೇ ರಾಜ್ಯ ಘಟಕದಲ್ಲಿ ಉಲ್ಬಣಿಸಿರುವ ಗೊಂದಲ, ವಿಜಯೇಂದ್ರ ವಿರುದ್ಧ ಮೂಡಿರುವ ಅಸಮಾಧಾನದ ಕುರಿತು ಮಾಹಿತಿ ನೀಡಿದ್ದಾರೆ ಎನ್ನಲಾಗಿದೆ.
ಬಿಜೆಪಿ ಅಧ್ಯಕ್ಷ ಬಿ.ವೈ. ವಿಜಯೇಂದ್ರ ಅವರು ಯಾವುದೇ ನಾಯಕರನ್ನು ವಿಶ್ವಾಸಕ್ಕೆ ತೆಗೆದುಕೊಂಡಿಲ್ಲ. ಈಚೆಗೆ ಪಕ್ಷದ ಹಿರಿಯ ನಾಯಕರಾದ ಶ್ರೀರಾಮುಲು, ಡಾ.ಕೆ. ಸುಧಾಕರ್ ಅವರು ರಾಜ್ಯಾಧ್ಯಕ್ಷರ ಏಕಪಕ್ಷೀಯ ನಿರ್ಧಾರಗಳ ವಿರುದ್ಧ ದನಿ ಎತ್ತಿದ್ದಾರೆ. ಕಾಂಗ್ರೆಸ್ ವಿರುದ್ಧದ ಯಾವುದೇ ಹೋರಾಟವನ್ನು ತಾರ್ಕಿಕ ಅಂತ್ಯಕ್ಕೆ ಕೊಂಡೊಯ್ಯುತ್ತಿಲ್ಲ. ಕಾಂಗ್ರೆಸ್ ನಾಯಕರೊಂದಿಗೆ ಹೊಂದಾಣಿಕೆ ರಾಜಕೀಯ ಮಾಡಿಕೊಂಡಿದ್ದಾರೆ. ಪಕ್ಷದ ಜಿಲ್ಲಾಧ್ಯಕ್ಷರ ಸ್ಥಾನಗಳಿಗೆ ಆಪ್ತರಿಗೆ ಮಣೆ ಹಾಕಿದ್ದಾರೆ ಎಂದು ಅರವಿಂದ ಲಿಂಬಾವಳಿ ಆರೋಪಿಸಿದ್ದಾರೆ.
ಇನ್ನೊಂದು ವಾರದಲ್ಲಿ ಅಧ್ಯಕ್ಷರ ಆಯ್ಕೆ
ಯತ್ನಾಳ್ ಬಣದ ನಾಯಕರ ಭಿನ್ನಮತೀಯ ಚಟುವಟಿಕೆ ಜೋರಾಗಿರುವಾಗಲೇ ಬಿಜೆಪಿ ಅಧ್ಯಕ್ಷ ಸ್ಥಾನದ ಗೊಂದಲಗಳಿಗೆ ವಾರದಲ್ಲಿ ತೆರೆ ಬೀಳಲಿದೆ. ಪಕ್ಷದ ಹಿರಿಯ ನಾಯಕರ ಸಹಕಾರದಿಂದ ನಾನೇ ಬಿಜೆಪಿ ಅಧ್ಯಕ್ಷನಾಗಿ ಮುಂದುವರಿಯುವೆ. ಪಕ್ಷವನ್ನು ಮತ್ತೆ ಬಲಪಡಿಸುತ್ತೇನೆ ಎಂದು ಬಿಜೆಪಿ ಅಧ್ಯಕ್ಷ ಬಿ.ವೈ. ವಿಜಯೇಂದ್ರ ಹೇಳಿದ್ದಾರೆ.
ಶಿವಮೊಗ್ಗದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಆಂತರಿಕ ಗೊಂದಲ, ಬಹಿರಂಗ ಹೇಳಿಕೆಗಳಿಂದ ಪಕ್ಷಕ್ಕೆ ಸಾಕಷ್ಟು ಹಾನಿಯಾಗಿದೆ. ಪಕ್ಷದ ರಾಜ್ಯ ಅಧ್ಯಕ್ಷನಾಗಿ ಕಳೆದೊಂದು ವರ್ಷದಿಂದ ಯಾವ ಮುಖಂಡರು ಹಾಗೂ ಪಕ್ಷದ ವಿರುದ್ಧ ಬಹಿರಂಗ ಹೇಳಿಕೆ ನೀಡಿಲ್ಲ. ನನ್ನ ಜವಾಬ್ದಾರಿಯ ಅರಿವು ಇರುವುದರಿಂದ ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಭ್ರಷ್ಟ ಕಾಂಗ್ರೆಸ್ ವಿರುದ್ಧ ಹೋರಾಟ ಮಾಡುತ್ತಿದ್ದೇನೆ ಎಂದು ಹೇಳಿದ್ದಾರೆ.
ಪಕ್ಷದ ಕಾರ್ಯಕರ್ತರು, ಶಾಸಕರಿಗೆ ವಿಜಯೇಂದ್ರ ಮಾಡಿರುವ ಕೆಲಸ ಗೊತ್ತಿದೆ. ಹಾಗಾಗಿ ಎಲ್ಲರ ಸಹಕಾರದಿಂದ ನಾನೇ ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷನಾಗಿ ಮುಂದುವರಿಯುವೆ ಎಂದು ಹೇಳಿದ್ದಾರೆ.