Dengue Outbreak | ರಾಜ್ಯದಲ್ಲಿ ಐದು ಸಾವಿರ ಗಡಿ ದಾಟಿದ ಪ್ರಕರಣ: ಸಮುದಾಯ ಸೋಂಕು ಹಂತಕ್ಕೆ ರೋಗ?

ರಾಜ್ಯದಲ್ಲಿ 91,853 ಜನರನ್ನು ಡೆಂಗ್ಯೂ ಶಂಕಿತರು ಎಂದು ಗುರುತಿಸಲಾಗಿದೆ. ಈ ಪ್ರಮಾಣದಲ್ಲಿ ಡೆಂಗ್ಯೂ ಶಂಕಿತರು ಇರುವುದು ಸಮುದಾಯದ ಹಂತಕ್ಕೆ ಡೆಂಗ್ಯೂ ಹಬ್ಬಿದೆಯೇ ಎನ್ನುವ ಪ್ರಶ್ನೆ ಎದುರಾಗಿದೆ.

Update: 2024-06-30 02:10 GMT
ಡೆಂಗ್ಯೂ

ರಾಜ್ಯದಲ್ಲಿ ಡೆಂಗ್ಯೂ ಪ್ರಕರಣಗಳು ಉಲ್ಬಣವಾಗುತ್ತಿದ್ದು, ಆತಂಕದ ವಾತಾವರಣ ನಿರ್ಮಾಣವಾಗಿದೆ.

ರಾಜ್ಯದಲ್ಲಿ ಈವರೆಗೆ (ಜೂ.27ರ ವರೆಗೆ) ಅಧಿಕೃತವಾಗಿ 5,543 ಡೆಂಗ್ಯೂ ಪ್ರಕರಣಗಳು ದೃಢಪಟ್ಟಿವೆ. ಇದರಲ್ಲಿ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿಯೇ 1,230 ಪ್ರಕರಣಗಳು ದೃಢಪಟ್ಟಿದ್ದು, ಆರೋಗ್ಯ ಇಲಾಖೆಯ ಅಧಿಕೃತ ಮಾಹಿತಿಯ ಪ್ರಕಾರ ಐವರು ಈವರೆಗೆ ರೋಗಕ್ಕೆ ಬಲಿಯಾಗಿದ್ದಾರೆ. ಆದರೆ, ಶನಿವಾರ ಚಿಕ್ಕಮಗಳೂರಿನಲ್ಲಿ ಬಾಲಕಿಯೊಬ್ಬರು ಹಾಗೂ ಬಿಬಿಎಂಪಿ ವ್ಯಾಪ್ತಿಯಲ್ಲಿ ಇಬ್ಬರು ಡೆಂಗ್ಯೂವಿನಿಂದ ಸಾವನ್ನಪ್ಪಿರುವ ಶಂಕೆ ವ್ಯಕ್ತವಾಗಿದ್ದು, ಇನ್ನಷ್ಟೇ ಈ ಪ್ರಕರಣಗಳು ದೃಢಪಡಬೇಕಿದೆ.

ರಾಜ್ಯದಲ್ಲಿ ಶೇ 60ರಷ್ಟು ಡೆಂಗ್ಯೂ ಪ್ರಕರಣ ಹೆಚ್ಚಳ

ರಾಜ್ಯದಲ್ಲಿ ಕಳೆದ ವರ್ಷಕ್ಕೆ ಹೋಲಿಕೆ ಮಾಡಿದರೆ, ಆರು ತಿಂಗಳ ಅವಧಿಯಲ್ಲಿ ಎರಡು ಪಟ್ಟು ಡೆಂಗ್ಯೂ ಪ್ರಕರಣಗಳು ವರದಿಯಾಗಿವೆ. 2023ನೇ ಸಾಲಿನಲ್ಲಿ ಮೊದಲ ಆರು ತಿಂಗಳ ಅವಧಿಯಲ್ಲಿ 2,003 ಪ್ರಕರಣಗಳು ದೃಢಪಟ್ಟಿತ್ತು. ಇದೀಗ ಈ ವರ್ಷ ಜೂನ್ ಅಂತ್ಯದ ವೇಳೆಗೆ 5,543 ಡೆಂಗ್ಯೂ ಪ್ರಕರಣಗಳು ದೃಢಪಟ್ಟಿವೆ.

5 ಸಾವಿರ ಗಡಿ ದಾಟಿದ ಡೆಂಗ್ಯೂ ಪ್ರಕರಣಗಳ ಸಂಖ್ಯೆ 

ರಾಜ್ಯದಲ್ಲಿ ಡೆಂಗ್ಯೂ ಪ್ರಕರಣಗಳ ಸಂಖ್ಯೆ 5 ಸಾವಿರದ ದಾಟಿದೆ. ಮತ್ತೊಂದು ಕಡೆ ಶಂಕಿತ ಡೆಂಗ್ಯೂ ಪ್ರಕರಣಗಳ ಸಂಖ್ಯೆಯೂ ಹೆಚ್ಚಾಗುತ್ತಿದ್ದು, ಮುಂದಿನ ದಿನಗಳಲ್ಲಿ ಕರ್ನಾಟಕದಲ್ಲಿ ಡೆಂಗ್ಯೂ ಪ್ರಕರಣಗಳ ಸಂಖ್ಯೆ ಇನ್ನಷ್ಟು ಹೆಚ್ಚಳವಾಗುವ ಸಾಧ್ಯತೆ ಇದೆ. ರಾಜ್ಯದಲ್ಲಿ ಡೆಂಗ್ಯೂ ಶಂಕಿತರ ಸಂಖ್ಯೆ 91,853 ತಲುಪಿದ್ದು, 40196 ಜನರ ರಕ್ತದ ಮಾದರಿಯನ್ನು ಸಂಗ್ರಹಿಸಲಾಗಿದೆ. ರಕ್ತದ ಮಾದರಿಯನ್ನು ಪರೀಕ್ಷೆಗೆ ಒಳಪಡಿಸಲಾಗಿದೆ.

ಡೆಂಗ್ಯೂ ಸೋಂಕಿನಿಂದ ಸಾವು

ಡೆಂಗ್ಯೂವಿನಿಂದ ಇಲ್ಲಿಯ ವರೆಗೆ 5 ಜನ ಸಾವನ್ನಪ್ಪಿರುವುದಾಗಿ ಆರೋಗ್ಯ ಇಲಾಖೆ ಅಧಿಕೃತ ಮಾಹಿತಿ ತಿಳಿಸಿದೆ. ರಾಜ್ಯದಲ್ಲಿ ಡೆಂಗ್ಯೂವಿನಿಂದ ಜಿಲ್ಲಾವಾರು ಸಾವನ್ನಪ್ಪಿದವರ ವಿವರ ಈ ರೀತಿ ಇದೆ.

ಜಿಲ್ಲೆ

ಸಾವು

ಶಿವಮೊಗ್ಗ 

01

ಧಾರವಾಡ

01

ಹಾವೇರಿ

01

ಹಾಸನ

02

ಒಟ್ಟು 

05

ಬೆಂಗಳೂರಿನಲ್ಲೇ ಅತ್ಯಂತ ಹೆಚ್ಚು ಪ್ರಕರಣ

ರಾಜ್ಯದಲ್ಲಿ ಒಟ್ಟಾರೆ ಡೆಂಗ್ಯೂ ಪ್ರಕರಣಗಳಲ್ಲಿ ಬೆಂಗಳೂರು (ಬಿಬಿಎಂಪಿ ವ್ಯಾಪ್ತಿ) ಅಗ್ರ ಸ್ಥಾನದಲ್ಲಿದೆ. ಬೆಂಗಳೂರು ಗ್ರಾಮಾಂತರ, ಬೆಂಗಳೂರು ನಗರ ಜಿಲ್ಲೆಯಲ್ಲಿ 30 ಡೆಂಗ್ಯೂ ಪ್ರಕರಣಗಳು ದೃಢಪಟ್ಟಿದ್ದರೆ, ಬಿಬಿಎಂಪಿ ವ್ಯಾಪ್ತಿಯಲ್ಲಿ 1,230 ಪ್ರಕರಣಗಳು ದೃಢಪಟ್ಟಿವೆ. 5142 ಜನರನ್ನು ಡೆಂಗ್ಯೂ ಶಂಕಿತರು ಎಂದು ಗುರುತಿಸಲಾಗಿದ್ದು, 4063 ಜನರ ರಕ್ತ ಮಾದರಿಯನ್ನು ಸಂಗ್ರಹಿಸಲಾಗಿದೆ.

ಡೆಂಗ್ಯೂ ಪರೀಕ್ಷಾ ಪ್ರಮಾಣ ಹೆಚ್ಚಳ

ರಾಜ್ಯದಲ್ಲಿ ಡೆಂಗ್ಯೂ ಪ್ರಕರಣಗಳು ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಡೆಂಗ್ಯೂ ಪರೀಕ್ಷಾ ಪ್ರಮಾಣವನ್ನೂ ಹೆಚ್ಚಳ ಮಾಡುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಈಚೆಗೆ ನಡೆಸಿದ ಸಭೆಯಲ್ಲಿ ಆರೋಗ್ಯ ಇಲಾಖೆಯ ಅಧಿಕಾರಿಗಳಿಗೆ ನಿರ್ದೇಶನ ನೀಡಿದ್ದರು. ಕಳೆದ ವರ್ಷಕ್ಕೆ ಹೋಲಿಕೆ ಮಾಡಿದರೆ ಇದೀಗ ರಾಜ್ಯದಲ್ಲಿ ಡೆಂಗ್ಯೂ ಜ್ವರ ಪರೀಕ್ಷಾ ಪ್ರಮಾಣವೂ ಹೆಚ್ಚಳವಾಗಿದೆ. 2023ನೇ ಸಾಲಿನಲ್ಲಿ ಜನವರಿಯಿಂದ ಜೂನ್ ಅಂತ್ಯದ ವರೆಗೆ ಒಟ್ಟು 23041 ಜನರನ್ನು ಡೆಂಗ್ಯೂ ಸೋಂಕು ಪರೀಕ್ಷೆಗೆ ಒಳಪಡಿಸಲಾಗಿತ್ತು. 2024ನೇ ಸಾಲಿನಲ್ಲಿ ಇದೇ ಅವಧಿಯಲ್ಲಿ 39,235 ಜನರನ್ನು ಡೆಂಗ್ಯೂ ಸೋಂಕು ಪರೀಕ್ಷೆಗೆ ಒಳಪಡಿಸಲಾಗಿದೆ.

ಡೆಂಗ್ಯೂ ನಿಯಂತ್ರಣಕ್ಕೆ ಕ್ರಮ: ಆರೋಗ್ಯ ಇಲಾಖೆ

ʻರಾಜ್ಯದಲ್ಲಿ ಡೆಂಗ್ಯೂ ಪ್ರಕರಣಗಳು ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ , ಡೆಂಗ್ಯೂ ನಿಯಂತ್ರಣಕ್ಕೆ ಅಗತ್ಯ ಕ್ರಮ ತೆಗೆದುಕೊಳ್ಳಲಾಗಿದೆʼ ಎಂದು ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಆಯುಕ್ತ ಡಿ.ರಂದೀಪ್ ಹೇಳಿದರು.

ಈ ಸಂಬಂಧ ದ ಫೆಡರಲ್ ಕರ್ನಾಟಕದೊಂದಿಗೆ ಮಾತನಾಡಿದ ಅವರು, ʻಡೆಂಗ್ಯೂ ಸೋಂಕು ನಿಯಂತ್ರಿಸುವ ನಿಟ್ಟಿನಲ್ಲಿ ಸೊಳ್ಳೆಗಳ ಮೂಲ ಕಡಿತ (Source Deduction) ಮಾಡಲಾಗುತ್ತಿದೆ. ಅಂದರೆ ಸೊಳ್ಳೆಗಳು ಎಲ್ಲೆಲ್ಲಿ ಹೆಚ್ಚಾಗಿವೆ ಎಂದು ಗುರುತಿಸಿ, ಆ ಪ್ರದೇಶದಲ್ಲಿ ನಾಶಪಡಿಸಲಾಗುತ್ತಿದೆ. ಡೆಂಗ್ಯೂ ಸೋಂಕಿಗೆ ಕಾರಣವಾಗಿರುವ ಈಡಿಸ್ ಈಜಿಪ್ಟೈ ಸೊಳ್ಳೆಗಳನ್ನು ನಾಶಪಡಿಸಲು ಫಾಗಿಂಗ್, ಔಷಧಿ ಸಿಂಪಡಣೆ ಹಾಗೂ ನೀರು ನಿಲ್ಲುವ ಪ್ರದೇಶದಲ್ಲಿ ಗಪ್ಪಿ ಮೀನುಗಳನ್ನು ಬಿಡಲಾಗುತ್ತಿದೆʼ ಎಂದರು.

ʻಪ್ರತಿ ಶುಕ್ರವಾರ ಡ್ರೈ ಡೇ ಆಚರಿಸಲಾಗುತ್ತಿದೆ. ಸೊಳ್ಳೆಗಳ ಲಾರ್ವಾಗಳನ್ನು ನಾಶಪಡಿಸಲಾಗುತ್ತಿದ್ದು, ಸ್ವಚ್ಛತೆ ಕಾಪಾಡಿಕೊಳ್ಳುವಂತೆ ಜನರಲ್ಲಿ ಜಾಗೃತಿ ಮೂಡಿಸಲಾಗುತ್ತಿದೆ. ನೀರು ಸಂಗ್ರಹ ಮಾಡುವ ಸಾಧನಗಳನ್ನು ವಾರದಲ್ಲಿ ಒಂದು ದಿನ ಸ್ವಚ್ಛ ಮಾಡಿ ಬಿಸಿಲಿಗೆ ಇರಿಸುವಂತೆಯೂ ಜನರಲ್ಲಿ ಅರಿವು ಮೂಡಿಸಲಾಗುತ್ತಿದೆʼ ಎಂದು ಹೇಳಿದರು.

ಸಮುದಾಯ ಸೋಂಕು ಹಂತಕ್ಕೆ ಡೆಂಗ್ಯೂ ?

ರಾಜ್ಯದಲ್ಲಿ ಏಕಾಏಕಿ ಡೆಂಗ್ಯೂ ಪ್ರಕರಣಗಳು ಸ್ಫೋಟಕ ಪ್ರಮಾಣದಲ್ಲಿ ಹೆಚ್ಚಾಗಿದ್ದು, ಡೆಂಗ್ಯೂ ಶಂಕಿತರ ಸಂಖ್ಯೆಯೂ ಹೆಚ್ಚಳವಾಗಿದೆ. ಹೀಗಾಗಿ, ಡೆಂಗ್ಯೂ ಜ್ವರ ಸಮುದಾಯ ಸೋಂಕು ಹಂತ ತಲುಪಿದೆಯೇ ಎನ್ನುವ ಪ್ರಶ್ನೆ ಎದುರಾಗಿದೆ.

ರಾಜ್ಯದಲ್ಲಿ 91,853 ಜನರನ್ನು ಡೆಂಗ್ಯೂ ಶಂಕಿತರು ಎಂದು ಗುರುತಿಸಲಾಗಿದೆ. ಈ ಪ್ರಮಾಣದಲ್ಲಿ ಡೆಂಗ್ಯೂ ಶಂಕಿತರು ಇರುವುದು ಸಮುದಾಯದ ಹಂತಕ್ಕೆ ಡೆಂಗ್ಯೂ ಹಬ್ಬಿದೆಯೇ ಎನ್ನುವ ಪ್ರಶ್ನೆ ಎದುರಾಗಿದೆ. ಆದರೆ, ಇಲ್ಲಿಯವರೆಗೂ ರಾಜ್ಯದಲ್ಲಿ ಯಾವುದೇ ಒಂದು ನಿರ್ದಿಷ್ಟ ಪ್ರದೇಶದಲ್ಲಿ ಸ್ಫೋಟಕ ಪ್ರಮಾಣದಲ್ಲಿ ಡೆಂಗ್ಯೂ (ಸಮುದಾಯ ಹಂತದಲ್ಲಿ) ಪ್ರಕರಣಗಳು ವರದಿಯಾಗಿಲ್ಲ ಎಂದು ಆರೋಗ್ಯ ಇಲಾಖೆ ಸ್ಪಷ್ಟಪಡಿಸಿದೆ.

ಜ್ವರದ ಲಕ್ಷಣ ಕಾಣಿಸಿಕೊಂಡರೆ ನಿರ್ಲಕ್ಷ್ಯ ಬೇಡ

ಡೆಂಗ್ಯೂ ಸೇರಿದಂತೆ ಯಾವುದೇ ಜ್ವರದ ಲಕ್ಷಣಗಳು ಇದ್ದರೆ, ನಿರ್ಲಕ್ಷ್ಯ ಮಾಡಬಾರದು ಎಂದು ರಂದೀಪ್ ಅವರು ಮನವಿ ಮಾಡಿದ್ದಾರೆ. ರಾಜ್ಯದಲ್ಲಿ ಇಲ್ಲಿಯವರೆಗೆ ಡೆಂಗ್ಯೂನಿಂದ 5 ಜನ ಸಾವನ್ನಪ್ಪಿರುವುದು ವರದಿಯಾಗಿದೆ. ಡೆಂಗ್ಯೂ ಸೋಂಕು ಕಾಣಿಸಿಕೊಂಡರೂ ತಡವಾಗಿ ಆಸ್ಪತ್ರೆಗೆ ದಾಖಲಾಗಿದ್ದರಿಂದ ಸಾವು ಸಂಭವಿಸಿದೆ. ರಾಜ್ಯದ ಎಲ್ಲ ಸರ್ಕಾರಿ ಆಸ್ಪತ್ರೆಗಳಲ್ಲಿ ಉಚಿತ ಡೆಂಗ್ಯೂ ಪರೀಕ್ಷೆ ಮಾಡಲಾಗುತ್ತಿದೆ ಎಂದಿದ್ದಾರೆ.

ಡೆಂಗ್ಯೂ ಹೆಚ್ಚಳಕ್ಕೆ ಕಾರಣಗಳು ?

* ರಾಜ್ಯದಲ್ಲಿ ಬಿಟ್ಟು ಬಿಟ್ಟು ಮಳೆಯಾಗುತ್ತಿದೆ. ನಿರಂತರವಾಗಿ ಮಳೆ ಬಂದರೆ ಮಳೆ ನೀರು ಕೊಚ್ಚಿಕೊಂಡು ಹೋಗುತ್ತದೆ. ಆದರೆ, ಆ ರೀತಿ ಆಗುತ್ತಿಲ್ಲ.

* ನೀರು ಪೂರೈಕೆಯಲ್ಲಿ ವ್ಯತ್ಯಾಸವುಂಟಾಗಿದ್ದರಿಂದ ಜನ ನೀರು ಸಂಗ್ರಹ ಮಾಡಿ ಇಟ್ಟುಕೊಳ್ಳುತ್ತಿದ್ದಾರೆ. ಇದು ಸೊಳ್ಳೆಗಳ ಲಾರ್ವಾ ಉತ್ಪತ್ತಿಗೆ ಕಾರಣವಾಗಿದೆ.

* ಆರೋಗ್ಯ ಇಲಾಖೆ, ಸ್ಥಳೀಯ ಆಡಳಿತ ಸಕಾಲದಲ್ಲಿ ಎಚ್ಚೆತ್ತುಕೊಂಡು ಡೆಂಗ್ಯೂ ಬಗ್ಗೆ ಜಾಗೃತಿ ಮೂಡಿಸದೆ ಇರುವುದು ಸಹ ಡೆಂಗ್ಯೂ ಉಲ್ಬಣಕ್ಕೆ ಕಾರಣವಾಗಿದೆ. 

* ಆಸ್ಪತ್ರೆಗಳಲ್ಲಿ ರಿಪೋರ್ಟಿಂಗ್ ಪ್ರಮಾಣ ಹೆಚ್ಚಳವಾಗಿದೆ.

Tags:    

Similar News