Attack on Bus Conductor | ಕಂಡಕ್ಟರ್ ಮೇಲೆ ಪೋಕ್ಸೊ ಕೇಸ್ ದಾಖಲಿಸಿದ್ದ ಸಿಪಿಐ ಎತ್ತಂಗಡಿ

ಕಂಡಕ್ಟರ್ ಮೇಲೆ ಪೋಕ್ಸೋ ಕೇಸ್ ದಾಖಲಿಸಿಕೊಂಡಿದ್ದ ಸಿಪಿಐ ಗುರುರಾಜ್ ಕಲ್ಯಾಣಶೆಟ್ಟರ್ ಅವರನ್ನು ವರ್ಗಾವಣೆ ಮಾಡಿ ಬೆಳಗಾವಿ ಪೊಲೀಸ್ ಆಯುಕ್ತ ಯಡಾ ಮಾರ್ಟಿನ್ ಆದೇಶ ಹೊರಡಿಸಿದ್ದಾರೆ.;

Update: 2025-02-25 05:44 GMT
ಹಲ್ಲೆಗೊಳಗಾದ ಕಂಡೆಕ್ಟರ್‌

ಮರಾಠಿ ಮಾತನಾಡಿಲ್ಲವೆಂದು ಕಂಡಕ್ಟರ್‌ ಮೇಲೆ ಹಲ್ಲೆ ನಡೆಸಿ, ಅವರ ವಿರುದ್ಧ ದುರುದ್ದೇಶದಿಂದ ಪೋಕ್ಸೊ ಪ್ರಕರಣ ದಾಖಲಿಸಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾರಿಹಾಳ ಪೊಲೀಸ್‌ ಠಾಣೆಯ ಇನ್ಸ್‌ಪೆಕ್ಟರ್‌ ಅವರನ್ನು ವರ್ಗಾವಣೆ ಮಾಡಲಾಗಿದೆ.

ಮರಾಠಿ ಮಾತನಾಡದೆ ಕನ್ನಡ ಮಾತನಾಡಿದ್ದಕ್ಕೆ ಕೆಎಸ್​ಆರ್​ಟಿಸಿ ಬಸ್ ನಿರ್ವಾಹಕನ ಮೇಲೆ ಹಲ್ಲೆ ನಡೆಸಿದ್ದ ಮರಾಠಿಗರು ಪಿತೂರಿ ಮಾಡಿ ಪೋಕ್ಸೊ ಪ್ರಕರಣ ದಾಖಲು ಮಾಡಿದ್ದರು. ಈ ಪ್ರಕರಣದ ವಿರುದ್ಧ ಕನ್ನಡ ಪರ ಸಂಘಟನೆಗಳು ಬೀದಿಗೆ ಬಂದು ಹೋರಾಟ ನಡೆಸಿದ್ದವು. ಮರಾಠಿಗರ ಪಿತೂರಿಗೆ ಮಣಿದು ಪೂರ್ವಾಪರ ಪರಿಶೀಲಿಸದೆ ಏಕಾಏಕಿ ಪೋಕ್ಸೊ ಪ್ರಕರಣ ದಾಖಲಿಸಿದ್ದ ಮಾರಿಹಾಳ ಠಾಣೆಯ ಸಿಪಿಐ ಗುರುರಾಜ್ ಕಲ್ಯಾಣಶೆಟ್ಟರ್ ಅವರನ್ನು ವರ್ಗಾವಣೆ ಮಾಡಿ ಬೆಳಗಾವಿ ಪೊಲೀಸ್ ಆಯುಕ್ತ ಯಡಾ ಮಾರ್ಟಿನ್ ಆದೇಶ ಹೊರಡಿಸಿದ್ದಾರೆ. ಮಾರಿಹಾಳ ಠಾಣೆಯ ನೂತನ ಸಿಪಿಐ ಆಗಿ ಮಂಜುನಾಥ ನಾಯಕ ಅವರನ್ನು ನೇಮಕ ಮಾಡಲಾಗಿದೆ.

ಠಾಣೆಗೆ ಹೋರಾಟಗಾರರ ಮುತ್ತಿಗೆ

ಕೆಎಸ್‌ಆರ್‌ಟಿಸಿ ಬಸ್ ಕಂಡಕ್ಟರ್ ಮಹದೇವ ಹುಕ್ಕೇರಿ ವಿರುದ್ಧ ಪೋಕ್ಸ್ ಕಾಯ್ದೆಯಡಿ ಪ್ರಕರಣ ದಾಖಲಾಗುತ್ತಿದ್ದಂತೆ ಕನ್ನಡ ಹೋರಾಟಗಾರರು ಪ್ರತಿಭಟನೆ ನಡೆಸಿದ್ದರು. 

ಕರ್ನಾಟಕ ರಕ್ಷಣಾ ವೇದಿಕೆ ಶಿವರಾಮೇಗೌಡ ಬಣದ ಜಿಲ್ಲಾಧ್ಯಕ್ಷ ವಾಜೀದ್ ಹಿರೇಕೊಡಿ ಹಾಗೂ ಕಿತ್ತೂರು ಕರ್ನಾಟಕ ಸೇನೆ ಕಾರ್ಯಕರ್ತರು ಬೆಳಗಾವಿ-ಬಾಗಲಕೋಟೆ ಹೆದ್ದಾರಿ ತಡೆದು ಪ್ರತಿಭಟಿಸಿದ್ದರು. ಈ ವೇಳೆ ಪೊಲೀಸರು ಹಾಗೂ ಹೋರಾಟಗಾರರ ಮಧ್ಯೆ ವಾಗ್ವಾದ ನಡೆದಿತ್ತು. ಕನ್ನಡ ಪರ ಹೋರಾಟಗಾರರು ಮಹಾರಾಷ್ಟ್ರ ಏಕೀಕರಣ ಸಮಿತಿ(ಎಂಇಎಸ್) ಪ್ರತಿಕೃತಿ ದಹಿಸಲು ಯತ್ನಿಸಿದಾಗ ಅವರನ್ನು ಪೊಲೀಸರು ವಶಕ್ಕೆ ಪಡೆದಿದ್ದರು. 

ಈ ಮಧ್ಯೆ ಕರ್ನಾಟಕ ರಕ್ಷಣಾ ವೇದಿಕೆ ಟಿ.ಎ.ನಾರಾಯಣಗೌಡ ಬಣದ ಕಾರ್ಯಕರ್ತರು ಮಾರಿಹಾಳ ಪೊಲೀಸ್‌ ಠಾಣೆಗೆ ಮುತ್ತಿಗೆ ಹಾಕಿದ್ದರು. ಜಿಲ್ಲಾ ಘಟಕದ ಅಧ್ಯಕ್ಷ ದೀಪಕ್ ನೇತೃತ್ವದಲ್ಲಿ ನೂರಾರು ಸಂಖ್ಯೆಯ ಹೋರಾಟಗಾರರು ಠಾಣೆ ಎದುರು ಜಮಾಯಿಸಿ, ಮಹಾದೇವ ಹುಕ್ಕೇರಿ ವಿರುದ್ಧ ದಾಖಲಿಸಿರುವ ಪೋಕ್ಸ್ ಪ್ರಕರಣ ಹಿಂಪಡೆಯುವಂತೆ ಒತ್ತಾಯಿಸಿದ್ದರು.

ಕಾಂಗ್ರೆಸ್ ಕಾರ್ಯಕರ್ತೆ ಆಯೆಷಾ ಸನದಿ ಅವರು ಠಾಣೆಯ ಮುಂಭಾಗ ಮಲಗಿ ಆಕ್ರೋಶ ವ್ಯಕ್ತಪಡಿಸಿದರು. ಆಗ ಕರವೇ ಕಾರ್ಯಕರ್ತರನ್ನು ಪೊಲೀಸರು ವಶಕ್ಕೆ ಪಡೆದರು. ಅಥಣಿಯಲ್ಲಿ ಮಹಾರಾಷ್ಟ್ರ ಸಾರಿಗೆ ಸಂಸ್ಥೆಯ ಬಸ್‌ಗಳಿಗೆ ಕನ್ನಡ ಪರ ಹೋರಾಟಗಾರರು ಕನ್ನಡದ ಬಾವುಟ ಕಟ್ಟಿ ಆಕ್ರೋಶ ವ್ಯಕ್ತಪಡಿಸಿದ್ದರು. 

ಘಟನೆ ನಡೆದಿದ್ದು ಹೇಗೆ?

ಬೆಳಗಾವಿ ನಗರ ಸಾರಿಗೆ ಬಸ್ ನಿಲ್ದಾಣದಲ್ಲಿ ಯುವಕ ಹಾಗೂ ಯುವತಿ ಬಸ್ ಹತ್ತಿದ್ದಾರೆ. ನಿರ್ವಾಹಕ ಮಹಾದೇವ್ ಹುಕ್ಕೇರಿ ಟಿಕೆಟ್ ಪಡೆಯುವಂತೆ ಕನ್ನಡದಲ್ಲಿ ಕೇಳಿದಾಗ ಯುವತಿ ಆಧಾರ್ ಕಾರ್ಡ್ ತೋರಿಸಿ ಎರಡು ಟಿಕೆಟ್ ಕೇಳಿದ್ದಾರೆ. ಆಗ ನಿರ್ವಾಹಕರು ನಿಮಗಷ್ಟೇ ಉಚಿತ ಪ್ರಯಾಣ. ಯುವಕ ಹಣ ನೀಡಿ ಟಿಕೆಟ್ ಪಡೆಯಬೇಕು ಎಂದು ಹೇಳಿದ್ದರು. ಈ ವೇಳೆ ಯುವಕ-ಯುವತಿ ನಿರ್ವಾಹಕರನ್ನು ಕನ್ನಡ ಏಕೆ ಬೊಗಳುತ್ತೀ, ಮರಾಠಿ ಕಲಿತುಕೋ. ನಮ್ಮೂರು ತಲುಪಿದ ಮೇಲೆ ನಿನ್ನನ್ನು ನೋಡಿಕೊಳ್ಳುತ್ತೇವೆ ಎಂದು ಬೆದರಿಕೆ ಹಾಕಿದ್ದಳು. ಅದರಂತೆ ಸಣ್ಣ ಬಾಳೇಕುಂದ್ರಿ ಗ್ರಾಮಕ್ಕೆ ಬಸ್ ಬಂದಾಗ ಯುವಕ ಸೇರಿದಂತೆ ಗ್ರಾಮಸ್ಥರು ಚಾಲಕ ಹಾಗೂ ನಿರ್ವಾಹಕರ ಮೇಲೆ ಹಲ್ಲೆ ನಡೆಸಿದ್ದರು. 

ಘಟನೆ ಬೆನ್ನಲ್ಲೇ ಬೆಳಗಾವಿ ಸೇರಿದಂತೆ ಕರ್ನಾಟಕದ ವಿವಿಧೆಡೆ ಮರಾಠಿಗರ ದಬ್ಬಾಳಿಕೆಯ ವಿರುದ್ಧ ಆಕ್ರೋಶ ಭುಗಿಲೆದ್ದಿತ್ತು. ಪ್ರಕರಣ ಗಂಭೀರ ಸ್ವರೂಪ ಪಡೆಯುತ್ತಿದ್ದಂತೆ ಒಂದು ದಿನ ತಡವಾಗಿ ಯುವತಿಯ ತಾಯಿ, ಬಸ್ಸಿನಲ್ಲಿ ತನ್ನ ಅಪ್ರಾಪ್ತ ವಯಸ್ಸಿನ ಮಗಳಿಗೆ ಲೈಂಗಿಕ ಕಿರುಕುಳ ನೀಡಿದ್ದಾರೆ ಎಂದು ಆರೋಪಿಸಿ ಮಾರಿಹಾಳ ಪೊಲೀಸ್‌ ಠಾಣೆಯಲ್ಲಿ ಪೋಕ್ಸೊ ಪ್ರಕರಣ ದಾಖಲಿಸಿದ್ದರು.

Tags:    

Similar News