Congress Protest: ಕೇಂದ್ರ ಬಿಜೆಪಿ ಸರ್ಕಾರದ ಬೆಲೆ ಏರಿಕೆ ವಿರುದ್ಧ ಕಾಂಗ್ರೆಸ್ ಬೃಹತ್ ಪ್ರತಿಭಟನೆ
ಕೇಂದ್ರ ಸರ್ಕಾರದ ಆರ್ಥಿಕ ನೀತಿಗಳಿಂದಾಗಿ ದೇಶದಾದ್ಯಂತ ಅಗತ್ಯ ವಸ್ತುಗಳ ಬೆಲೆ, ಇಂಧನ ದರ ಮತ್ತು ಎಲ್‌ಪಿಜಿ ಸಿಲಿಂಡರ್‌ಗಳ ಬೆಲೆ ಗಗನಕ್ಕೇರಿದೆ ಎಂದು ಆರೋಪಿಸಿ ಕರ್ನಾಟಕ ಕಾಂಗ್ರೆಸ್ ಈ ಪ್ರತಿಭಟನೆ ಆಯೋಜಿತ್ತು.;
ಕೇಂದ್ರ ಬಿಜೆಪಿ ಸರ್ಕಾರದ ಬೆಲೆ ಏರಿಕೆ ನೀತಿಯ ವಿರುದ್ಧ ಕರ್ನಾಟಕ ಪ್ರದೇಶ ಕಾಂಗ್ರೆಸ್ ಕಮಿಟಿ (ಕೆಪಿಸಿಸಿ) ಆಯೋಜಿಸಿದ್ದ ರಾಜ್ಯಮಟ್ಟದ ಪ್ರತಿಭಟನೆ ಗುರುವಾರ ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ ಬೃಹತ್ ಸಂಖ್ಯೆಯ ಕಾರ್ಯಕರ್ತರ ಪಾಲ್ಗೊಳ್ಳುವಿಕೆಯಿಂದ ನಡೆಯಿತು. ಈ ಪ್ರತಿಭಟನೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷರೂ ಆಗಿರುವ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ಎಐಸಿಸಿ ಪ್ರಧಾನ ಕಾರ್ಯದರ್ಶಿ ರಣದೀಪ್ ಸಿಂಗ್ ಸುರ್ಜೆವಾಲ, ಎಐಸಿಸಿ ಕಾರ್ಯದರ್ಶಿಗಳಾದ ಅಭಿಷೇಕ್ ದತ್ ಮತ್ತು ಮಯೂರ್ ಜೈಕುಮಾರ್, ಹಿರಿಯ ಕಾಂಗ್ರೆಸ್ ನಾಯಕರು ಮತ್ತು ರಾಜ್ಯ ಸಚಿವರು ಸೇರಿದಂತೆ ದೊಡ್ಡ ಸಂಖ್ಯೆಯ ನಾಯಕರು ಭಾಗವಹಿಸಿದ್ದರು.
ಕೇಂದ್ರ ಸರ್ಕಾರದ ಆರ್ಥಿಕ ನೀತಿಗಳಿಂದಾಗಿ ದೇಶದಾದ್ಯಂತ ಅಗತ್ಯ ವಸ್ತುಗಳ ಬೆಲೆ, ಇಂಧನ ದರ ಮತ್ತು ಎಲ್‌ಪಿಜಿ ಸಿಲಿಂಡರ್‌ಗಳ ಬೆಲೆ ಗಗನಕ್ಕೇರಿದೆ ಎಂದು ಆರೋಪಿಸಿ ಕರ್ನಾಟಕ ಕಾಂಗ್ರೆಸ್ ಈ ಪ್ರತಿಭಟನೆ ಆಯೋಜಿತ್ತು. ಏಪ್ರಿಲ್ 10ರಂದು ಡಿ.ಕೆ. ಶಿವಕುಮಾರ್ ಅವರು ಪತ್ರಿಕಾಗೋಷ್ಠಿಯಲ್ಲಿ ಈ ಪ್ರತಿಭಟನೆಯನ್ನು ಪ್ರಕಟಿಸಿದ್ದರು. ಅಂತೆಯೇ ಏಪ್ರಿಲ್ 17ರಂದು ಬೆಂಗಳೂರಿನ ಫ್ರೀಡಂ ಪಾರ್ಕ್ ಹಾಗೂ ಜಿಲ್ಲಾ ಕೇಂದ್ರಗಳಲ್ಲಿ ಪ್ರತಿಭಟನೆ ನಡೆಯಿತು.
ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ
ಪ್ರತಿಭಟನೆಯ ವೇಳೆ ಕಾಂಗ್ರೆಸ್ ನಾಯಕರು ಕೇಂದ್ರ ಬಿಜೆಪಿ ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು. ಸಿಎಂ ಸಿದ್ದರಾಮಯ್ಯ ಮಾತನಾಡಿ, "ಕೇಂದ್ರ ಸರ್ಕಾರವು ಕಚ್ಚಾ ತೈಲದ ಬೆಲೆ ಇಳಿಕೆಯಾದರೂ ಇಂಧನ ಬೆಲೆಯನ್ನು ಕಡಿಮೆ ಮಾಡಿಲ್ಲ. ಪೆಟ್ರೋಲ್‌ನ ಮೂಲ ಬೆಲೆ 42.60 ರೂ. ಆಗಿದ್ದರೂ, 103 ರೂ.ಗೆ ಮಾರಾಟವಾಗುತ್ತಿದೆ. ಇದರಿಂದ ಕೇಂದ್ರಕ್ಕೆ 60% ಲಾಭವಾಗುತ್ತಿದೆ," ಎಂದು ಟೀಕಿಸಿದರು. ಕಾಂಗ್ರೆಸ್ ಸರ್ಕಾರವು 52,000 ಕೋಟಿ ರೂ.ಗಳನ್ನು ಗ್ಯಾರಂಟಿ ಯೋಜನೆಗಳಿಗೆ ಮೀಸಲಿಟ್ಟು, ಬಡವರಿಗೆ ಬೆಲೆ ಏರಿಕೆಯ ಹೊರೆ ಕಡಿಮೆ ಮಾಡಿದೆ ಎಂದು ಅವರು ಒತ್ತಿ ಹೇಳಿದರು.
ಡಿಸಿಎಂ ಡಿ.ಕೆ. ಶಿವಕುಮಾರ್ ಅವರು, "ಕೇಂದ್ರ ಸರ್ಕಾರವು ಪೆಟ್ರೋಲ್, ಡೀಸೆಲ್, ಮತ್ತು ಎಲ್‌ಪಿಜಿ ಬೆಲೆ ಏರಿಕೆ ಮಾಡಿದೆ. ಹೀಗಾಗಿ ಬಿಜೆಪಿಯ ಜನಾಕ್ರೋಶ ಯಾತ್ರೆ ಕೇಂದ್ರದ ವಿರುದ್ಧವೇ ಇರಬೇಕು. ಅವರೇ ಬೆಲೆ ಏರಿಕೆಗೆ ಕಾರಣ," ಎಂದು ಆರೋಪಿಸಿದರು. ಇದೇ ವೇಳೆ ಅವರು. ರಾಜ್ಯದ ಹಾಲಿನ ಬೆಲೆ ಏರಿಕೆಯನ್ನು ರೈತರ ಜೀವನೋಪಾಯಕ್ಕಾಗಿ ಅಗತ್ಯ ಎಂದು ಸಮರ್ಥಿಸಿಕೊಂಡರು
ರಣದೀಪ್ ಸಿಂಗ್ ಸುರ್ಜೆವಾಲ ಮಾತನಾಡಿ, "ಬಿಜೆಪಿಯ ಆರ್ಥಿಕ ನೀತಿಗಳು ಸಾಮಾನ್ಯ ಜನರನ್ನು ಕಂಗೆಡಿಸಿವೆ. ಕಾಂಗ್ರೆಸ್ ಈ ಅನ್ಯಾಯದ ವಿರುದ್ಧ ಜನರ ಧ್ವನಿಯಾಗಿ ಹೋರಾಡುತ್ತದೆ," ಎಂದು ಘೋಷಿಸಿದರು.
ಜಿಲ್ಲಾ ಮಟ್ಟದಲ್ಲಿ ಪ್ರತಿಭಟನೆ
ಫ್ರೀಡಂ ಪಾರ್ಕ್‌ನ ರಾಜ್ಯಮಟ್ಟದ ಪ್ರತಿಭಟನೆಯ ಜೊತೆಗೆ, ರಾಜ್ಯದ ಎಲ್ಲ ಜಿಲ್ಲಾ ಕೇಂದ್ರಗಳಲ್ಲಿ ಕೂಡ ಕಾಂಗ್ರೆಸ್ ಕಾರ್ಯಕರ್ತರು ಪ್ರತಿಭಟನೆಯನ್ನು ಆಯೋಜಿಸಿದ್ದರು. ಈ ಪ್ರತಿಭಟನೆಗಳು ಕೇಂದ್ರ ಸರ್ಕಾರದ ಬೆಲೆ ಏರಿಕೆ ನೀತಿಯಿಂದ ಜನರಿಗೆ ಆಗಿರುವ ಆರ್ಥಿಕ ನಷ್ಟವನ್ನು ಎತ್ತಿ ತೋರಿಸಿದವು. ಜಿಲ್ಲಾ ಮತ್ತು ತಾಲೂಕು ಮಟ್ಟದಲ್ಲಿ ಮುಂದಿನ ಪ್ರತಿಭಟನಾ ಯೋಜನೆಗಳನ್ನು ಶೀಘ್ರದಲ್ಲಿ ಘೋಷಿಸುವುದಾಗಿ ಡಿ.ಕೆ. ಶಿವಕುಮಾರ್ ತಿಳಿಸಿದ್ದಾರೆ.
ಜನರಲ್ಲಿ ಜಾಗೃತಿ ಮೂಡಿಸಲು ಕರೆ
ಪ್ರತಿಭಟನೆಯಲ್ಲಿ ಭಾಗವಹಿಸಿದ ಕಾಂಗ್ರೆಸ್ ಕಾರ್ಯಕರ್ತರು ಮತ್ತು ನಾಯಕರು, ಕೇಂದ್ರ ಸರ್ಕಾರದ ಬೆಲೆ ಏರಿಕೆ ನೀತಿಯಿಂದ ಜನರು ಎದುರಿಸುತ್ತಿರುವ ಆರ್ಥಿಕ ಕಷ್ಟಗಳ ಬಗ್ಗೆ ಜಾಗೃತಿ ಮೂಡಿಸಲು ಜನರಿಗೆ ಮನವಿ ಮಾಡಿದರು. ಕಾಂಗ್ರೆಸ್ ರಾಜ್ಯಾದ್ಯಂತ ಈ ವಿಷಯವನ್ನು ಜನರ ಮುಂದಿಟ್ಟು, ಕೇಂದ್ರ ಸರ್ಕಾರದ ವಿರುದ್ಧ ತಮ್ಮ ಹೋರಾಟವನ್ನು ಮುಂದುವರಿಸುವ ಭರವಸೆ ನೀಡಿತು.
ಸಚಿವರಾದ ರಾಮಲಿಂಗಾ ರೆಡ್ಡಿ, ಕೃಷ್ಣಭೈರೇಗೌಡ, ಕೆ.ಹೆಚ್. ಮುನಿಯಪ್ಪ, ಕೆ.ಜೆ. ಜಾರ್ಜ್, ಹೆಚ್.ಸಿ. ಮಹದೇವಪ್ಪ, ಚಲುವರಾಯಸ್ವಾಮಿ, ಎಂ.ಬಿ. ಪಾಟೀಲ್, ಈಶ್ವರ್ ಖಂಡ್ರೆ, ಲಕ್ಷ್ಮೀ ಹೆಬ್ಬಾಳ್ಕರ್, ಬೋಸರಾಜು, ದರ್ಶನಾಪುರ್, ಎಂ.ಸಿ. ಸುಧಾಕರ್, ಭೈರತಿ ಸುರೇಶ್ ಪ್ರತಿಭಟನಾ ವೇದಿಕೆಯಲ್ಲಿದ್ದರು. ರಾಜ್ಯಾದ್ಯಂತದಿಂದ ಆಗಮಿಸಿದ ಕಾಂಗ್ರೆಸ್ ಕಾರ್ಯಕರ್ತರು, ಶಾಸಕರು, ಮತ್ತು ಸ್ಥಳೀಯ ನಾಯಕರು ಈ ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.