Internal Reservation | ಒಳ ಮೀಸಲಾತಿ: ಸಿಎಂ ಭೇಟಿಗೆ ಸಮುದಾಯ ಮುಖಂಡರ ತೀರ್ಮಾನ

ಒಳ ಮೀಸಲಾತಿಯ ಅನುಷ್ಠಾನಕ್ಕೆ ಸೂಕ್ತ ಶಿಫಾರಸುಗಳೊಂದಿಗೆ ವರದಿ ನೀಡಲು ರಾಜ್ಯ ಸರ್ಕಾರವು ನಿವೃತ್ತ ನ್ಯಾಯಮೂರ್ತಿ ಎಚ್.ಎಸ್. ನಾಗಮೋಹನ್ ದಾಸ್ ಅವರ ಅಧ್ಯಕ್ಷತೆಯಲ್ಲಿ ಏಕಸದಸ್ಯ ಆಯೋಗ ರಚಿಸಿದೆ.;

Update: 2025-03-14 06:36 GMT

ಮುಖ್ಯಮಂತ್ರಿ ಸಿದ್ದರಾಮಯ್ಯ

ಪರಿಶಿಷ್ಟ ಜಾತಿಗಳ ಒಳ ಮೀಸಲಾತಿ ಜಾರಿ ವಿಳಂಬವಾಗುತ್ತಿರುವುದರಿಂದ, ಈ ವಿಷಯದಲ್ಲಿ ಅಸಮ್ಮತಿ ವ್ಯಕ್ತಪಡಿಸುವ ಬದಲು ಎಲ್ಲರೂ ಒಗ್ಗೂಡಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಭೇಟಿಯಾಗಿ ಚರ್ಚಿಸಲು ಪರಿಶಿಷ್ಟ ಸಮುದಾಯದ ಸಚಿವರು ಮತ್ತು ಶಾಸಕರು ತೀರ್ಮಾನಿಸಿದ್ದಾರೆ.

ಈ ಸಂಬಂಧ ಆಹಾರ ಸಚಿವ ಕೆ.ಎಚ್. ಮುನಿಯಪ್ಪ ನೇತೃತ್ವದಲ್ಲಿ ಸಮಾಜ ಕಲ್ಯಾಣ ಸಚಿವ ಎಚ್‌.ಸಿ. ಮಹದೇವಪ್ಪ ಅವರ ನಿವಾಸದಲ್ಲಿ ಪರಿಶಿಷ್ಟ ಸಮುದಾಯದ ಸಚಿವರು, ಶಾಸಕರು ಮತ್ತು ಕೆಲವು ಪ್ರಮುಖ ಮುಖಂಡರು ಗುರುವಾರ ಸಭೆ ನಡೆಸಿದರು.

ಸಭೆಗೆ ಗೃಹ ಸಚಿವ ಜಿ. ಪರಮೇಶ್ವರ, ಅಬಕಾರಿ ಸಚಿವ ಆರ್.ಬಿ. ತಿಮ್ಮಾಪುರ, ಹಿಂದುಳಿದ ವರ್ಗಗಳ ಕಲ್ಯಾಣ ಸಚಿವ ಶಿವರಾಜ ತಂಗಡಗಿ, ಶಾಸಕರಾದ ಪ್ರಸಾದ್ ಅಬ್ಬಯ್ಯ, ದರ್ಶನ್ ಧ್ರುವನಾರಾಯಣ, ಎನ್. ಶ್ರೀನಿವಾಸ, ವಿಧಾನ ಪರಿಷತ್ ಸದಸ್ಯ ಎಚ್.ಪಿ. ಸುಧಾಮ್ ದಾಸ್, ಡಾ.ಡಿ. ತಿಮ್ಮಯ್ಯ ಮುಂತಾದವರು ಹಾಜರಿದ್ದರು.

ಒಳ ಮೀಸಲಾತಿಯ ಅನುಷ್ಠಾನಕ್ಕೆ ಸೂಕ್ತ ಶಿಫಾರಸುಗಳೊಂದಿಗೆ ವರದಿ ನೀಡಲು ರಾಜ್ಯ ಸರ್ಕಾರವು ನಿವೃತ್ತ ನ್ಯಾಯಮೂರ್ತಿ ಎಚ್.ಎಸ್. ನಾಗಮೋಹನ್ ದಾಸ್ ಅವರ ಅಧ್ಯಕ್ಷತೆಯಲ್ಲಿ ಏಕಸದಸ್ಯ ಆಯೋಗವನ್ನು ನವೆಂಬರ್‌ನಲ್ಲಿ ರಚಿಸಿತ್ತು. ಆಯೋಗಕ್ಕೆ ಡಿಸೆಂಬರ್ ಮೊದಲ ವಾರದಲ್ಲಿ ವರದಿ ಸಲ್ಲಿಸುವಂತೆ ಸೂಚಿಸಲಾಗಿದ್ದು, ಲಭ್ಯ ದತ್ತಾಂಶ ಮತ್ತು 2011ರ ಜನಗಣತಿ ಆಧಾರದ ಮೇಲೆ ಪರಿಶಿಷ್ಟ ಜಾತಿಗಳಿಗೆ ವೈಜ್ಞಾನಿಕ ಮತ್ತು ತರ್ಕಬದ್ಧ ಒಳ ಮೀಸಲಾತಿ ನೀಡುವ ಬಗ್ಗೆ ವರದಿ ಸಿದ್ಧಪಡಿಸಬೇಕಾಗಿದೆ.

ಆಯೋಗದ ವರದಿ ಬಂದ ಬಳಿಕವೇ ಹೊಸ ನೇಮಕಾತಿ ಪ್ರಕ್ರಿಯೆ ಪ್ರಾರಂಭಗೊಳ್ಳಲಿದ್ದು, ವರದಿ ಸಿಗುವವರೆಗೂ ನೇಮಕಾತಿಗಳನ್ನು ತಾತ್ಕಾಲಿಕವಾಗಿ ನಿಲ್ಲಿಸಲಾಗಿದೆ. ಇದರಿಂದಾಗಿ ನೇಮಕಾತಿ ಪ್ರಕ್ರಿಯೆ ವಿಳಂಬವಾಗುವ ತೊಡಕುಗಳ ಬಗ್ಗೆ ಸಭೆಯಲ್ಲಿ ಸಮಗ್ರ ಚರ್ಚೆ ನಡೆಯಿತು.

ಒಳ ಮೀಸಲಾತಿ ವಿಚಾರವನ್ನು ಚುನಾವಣೆ ಪ್ರಣಾಳಿಕೆ ಹಾಗೂ ಸಮುದಾಯದ ಸಮಾವೇಶಗಳಲ್ಲಿ ಭರವಸೆ ನೀಡಲಾಗಿದ್ದು, ತೆಲಂಗಾಣ ಮಾದರಿಯಲ್ಲಿ ರಾಜ್ಯದಲ್ಲಿಯೂ ಅದನ್ನು ಜಾರಿಗೆ ತರುವ ಅಗತ್ಯವಿದೆ. ರಾಜ್ಯದಲ್ಲಿ ಶೀಘ್ರದಲ್ಲೇ ಸ್ಥಳೀಯ ಸಂಸ್ಥೆಗಳಿಗೆ ಚುನಾವಣೆ ನಡೆಯಲಿರುವುದರಿಂದ, ನಾಗಮೋಹನ್ ದಾಸ್ ನೇತೃತ್ವದ ಆಯೋಗದ ವರದಿ ಶೀಘ್ರವಾಗಿ ಪಡೆದು ಒಳ ಮೀಸಲಾತಿ ಜಾರಿಗೆ ಪ್ರಕ್ರಿಯೆ ವೇಗಗೊಳಿಸಬೇಕೆಂದು ಮುಖ್ಯಮಂತ್ರಿಗಳಿಗೆ ಒತ್ತಾಯಿಸಲು ಸಭೆಯಲ್ಲಿದ್ದ ಸಚಿವರು ಮತ್ತು ಶಾಸಕರು ಒಮ್ಮತದ ತೀರ್ಮಾನ ಕೈಗೊಂಡರು.

ಒಳಮೀಸಲಾತಿ ಜಾರಿಗೆ ಆಗ್ರಹ 

ಸುಪ್ರೀಂ ಕೋರ್ಟ್ ಆದೇಶದ ಪ್ರಕಾರ, ಸರ್ಕಾರವು ಹೊಂದಿರುವ ದತ್ತಾಂಶಗಳ ಆಧಾರದ ಮೇಲೆ, ವಿಳಂಬ ತಂತ್ರವನ್ನು ಅನುಸರಿಸದೆ ಒಳ ಮೀಸಲಾತಿಯನ್ನು ತಕ್ಷಣ ಜಾರಿಗೆ ತರಬೇಕು ಎಂದು ಮಾದಿಗ ಸಮುದಾಯಗಳ ಸ್ವಾಭಿಮಾನ ಒಕ್ಕೂಟ ಗುರುವಾರ ಒತ್ತಾಯಿಸಿದೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಆಲ್ ಇಂಡಿಯಾ ಬಹುಜನ ಸಮಾಜ ಪಕ್ಷದ ರಾಜ್ಯ ಘಟಕದ ಅಧ್ಯಕ್ಷ ಮಾರಸಂದ್ರ ಮುನಿಯಪ್ಪ, ದಲಿತ ಸಂಘರ್ಷ ಸಮಿತಿ ರಾಜ್ಯ ಘಟಕದ ಅಧ್ಯಕ್ಷ ಎನ್. ಮೂರ್ತಿ ಮತ್ತು ಕರ್ನಾಟಕ ದಲಿತ ಸಂಘರ್ಷ ಸಮಿತಿ ರಾಜ್ಯ ಸಂಚಾಲಕ ಗುರುಮೂರ್ತಿ, "ನ್ಯಾಯಮೂರ್ತಿ ಸದಾಶಿವ ಆಯೋಗದ ವರದಿ ಮತ್ತು ಒಳ ಮೀಸಲಾತಿ ವರ್ಗೀಕರಣದ ಶಿಫಾರಸುಗಳನ್ನು ಸಚಿವ ಸಂಪುಟದಲ್ಲಿ ಅಧಿಕೃತಗೊಳಿಸಬೇಕು. ಪರಿಶಿಷ್ಟ ಜಾತಿಗಳಿಗೆ ಮೀಸಲಾತಿ ಶೇಕಡಾ 17ಕ್ಕೆ ಹೆಚ್ಚಿರುವುದರಿಂದ, ಜನಸಂಖ್ಯೆ ಅನುಗುಣವಾಗಿ ಮಾದಿಗ ಮತ್ತು ಸಂಬಂಧಿತ ಜಾತಿಗಳಿಗೆ ಶೇಕಡಾ 7ರಷ್ಟು ಮೀಸಲಾತಿ ನಿಗದಿಪಡಿಸಬೇಕು" ಎಂದು ಒತ್ತಾಯಿಸಿದರು.

"ಒಳ ಮೀಸಲಾತಿ ಜಾರಿಯಾಗುವವರೆಗೂ 37,000 ಸರ್ಕಾರಿ ಹುದ್ದೆಗಳ ನೇಮಕಾತಿಯನ್ನು ಸ್ಥಗಿತಗೊಳಿಸಬೇಕು. ನಿಜವಾದ 49 ಅಲೆಮಾರಿಗಳನ್ನು ಪ್ರತ್ಯೇಕವಾಗಿ ಗುರುತಿಸಿ, ಶೇಕಡಾ 1ಕ್ಕಿಂತ ಹೆಚ್ಚಿನ ಒಳ ಮೀಸಲಾತಿಯನ್ನು ನಿಗದಿಪಡಿಸಬೇಕು. ಅಲೆಮಾರಿ ಸಮುದಾಯಗಳ ಅಭಿವೃದ್ಧಿಗಾಗಿ ಪ್ರತ್ಯೇಕ ನಿಗಮವನ್ನು ಸ್ಥಾಪಿಸಬೇಕು ಮತ್ತು ಅವರಿಗೆ ನ್ಯಾಯ ಒದಗಿಸಲು ಅಲೆಮಾರಿ ಆಯೋಗವನ್ನು ಪ್ರಾರಂಭಿಸಬೇಕು" ಎಂದರು.

"ಬಜೆಟ್‌ನಲ್ಲಿ ಸಮಾಜ ಕಲ್ಯಾಣ ಇಲಾಖೆಯ ಪರಿಶಿಷ್ಟ ಜಾತಿ ಉಪ ಯೋಜನೆ (ಎಸ್‌ಸಿಎಸ್‌ಪಿ) ಮತ್ತು ಪರಿಶಿಷ್ಟ ಪಂಗಡಗಳ ಉಪ ಯೋಜನೆ (ಟಿಎಸ್‌ಪಿ)ಗೆ ಅನುದಾನವನ್ನು ಜನಸಂಖ್ಯಾ ಪ್ರಮಾಣದ ಪ್ರಕಾರ ಹಂಚಿಕೆ ಮಾಡಬೇಕು. ಮಾದಿಗ, ಸಮಗಾರ, ಡೋಹರ, ಮಚಗಾರ ಸಮುದಾಯಗಳಿಗೆ ಪ್ರತ್ಯೇಕ ನಿಗಮ ಸ್ಥಾಪಿಸಿ, ತಲಾ ₹1,000 ಕೋಟಿ ಅನುದಾನ ಮೀಸಲಿಡಬೇಕು ಮತ್ತು ಈ ಅನುದಾನವನ್ನು ಆಯಾ ವರ್ಷದಲ್ಲಿ ಪೂರ್ಣವಾಗಿ ವೆಚ್ಚ ಮಾಡುವ ವ್ಯವಸ್ಥೆ ಮಾಡಬೇಕು" ಎಂದು ಆಗ್ರಹಿಸಿದರು.

'ಒಳ ಮೀಸಲಾತಿ ಜಾರಿ ಮಾಡಿ, ಇಲ್ಲವೇ ಖುರ್ಚಿ ಖಾಲಿ ಮಾಡಿ ಎಂಬ ಘೋಷವಾಕ್ಯದಡಿ ಮಾರ್ಚ್ 19ರಂದು ಬೆಂಗಳೂರಿನ ಸ್ವಾತಂತ್ರ್ಯ ಉದ್ಯಾನದಲ್ಲಿ ಪ್ರತಿಭಟನೆ ಹಮ್ಮಿಕೊಳ್ಳಲಾಗುವುದು' ಎಂದು ತಿಳಿಸಿದರು.

Tags:    

Similar News