ಕಟ್ಟಡ ಕಾರ್ಮಿಕರ ಚಿಕಿತ್ಸೆಗೆ ಮೀಸಲಾಗಿರುವ 135 ಸಂಚಾರಿ ಆಸ್ಪತ್ರೆಗಳಿಗೆ ಸಿಎಂ ಹಸಿರು ನಿಶಾನೆ
ಕಾರ್ಮಿಕರ ಸೆಸ್ ಹಣದಿಂದ ಕಾರ್ಮಿಕ ಕಲ್ಯಾಣ ಮಂಡಳಿ ಸುಸಜ್ಜಿತ ಸಂಚಾರಿ ಆಸ್ಪತ್ರೆಗಳನ್ನು ಲೋಕಾರ್ಪಣೆಗೊಳಿಸಲಾಗಿದೆ ಎಂದು ಅವರು ತಿಳಿಸಿದರು.;
135 ಸಂಚಾರಿ ಆಸ್ಪತ್ರೆಗಳನ್ನು ಕಾರ್ಮಿಕರಿಗೆ ಒಪ್ಪಿಸಿದ ಸಿಎಂ
ಕಾರ್ಮಿಕ ಇಲಾಖೆ ವತಿಯಿಂದ ಕಟ್ಟಡ ಕಾರ್ಮಿಕರಿಗಾಗಿ ಮಾತ್ರ ಮೀಸಲಾಗಿರುವ 135 ʻಸಂಚಾರಿ ಆರೋಗ್ಯ ಘಟಕʼ ಆ್ಯಂಬುಲೆನ್ಸ್ ವಾಹನಗಳನ್ನು ಸಿಎಂ ಸಿದ್ದರಾಮಯ್ಯ ಮಂಗಳವಾರ ಲೋಕಾರ್ಪಣೆ ಮಾಡಿದರು.
ಬಳಿಕ ಮಾತನಾಡಿದ ಅವರು, ಬಸವಣ್ಣನವರ ಕಾಯಕ-ದಾಸೋಹ ಪರಿಕಲ್ಪನೆಯಲ್ಲಿ ನಾವು ಕಾರ್ಯಕ್ರಮ ರೂಪಿಸುತ್ತಿದ್ದೇವೆ. ಸಮಾಜದಲ್ಲಿ ದುಡಿಯುವ ವರ್ಗ ಒಂದು ಕಡೆ ಇದ್ದರೆ, ದುಡಿಸಿಕೊಳ್ಳುವ ವರ್ಗ ಮತ್ತೊಂದು ಕಡೆ ಇರುತ್ತದೆ. ಯಾರು ಉತ್ಪಾದನಾ ಚಟುವಟಿಕೆಯಲ್ಲಿ ಭಾಗವಹಿಸುತ್ತಾರೋ ಅವರೇ ದೇಶ ನಿರ್ಮಾತೃಗಳು. ಇಡೀ ದೇಶ ಕಾರ್ಮಿಕರ ಶ್ರಮವನ್ನು ಅವಲಂಬಿಸಿದೆ ಎಂದು ಅವರು ಅಭಿಪ್ರಾಯಪಟ್ಟರು.
ಸಚಿವ ಸಂತೋಷ್ ಲಾಡ್ ಅವರ ಕಾಳಜಿ ಮತ್ತು ಕರ್ತವ್ಯಪ್ರಜ್ಞೆಯಿಂದಾಗಿ ಉಚಿತ ಸಂಚಾರಿ ಆಸ್ಪತ್ರೆಗಳನ್ನು ಜಾರಿಗೊಳಿಸಲಾಗಿದೆ. ಕಾರ್ಮಿಕರ ಸೆಸ್ ಹಣದಿಂದ, ಕಾರ್ಮಿಕ ಕಲ್ಯಾಣ ಮಂಡಳಿ ಸುಸಜ್ಜಿತ ಸಂಚಾರಿ ಆಸ್ಪತ್ರೆಗಳನ್ನು ಲೋಕಾರ್ಪಣೆಗೊಳಿಸಿದೆ ಎಂದು ಅವರು ತಿಳಿಸಿದರು.
ಕಟ್ಟಡ ಮತ್ತು ಇತರೆ ಕಾರ್ಮಿಕರ ಮಕ್ಕಳು ಶಿಕ್ಷಣದಿಂದ ವಂಚಿತರಾಗಬಾರದು ಎನ್ನುವ ಕಾರಣದಿಂದ ಸರ್ಕಾರ ಕಾರ್ಮಿಕರ ಮಕ್ಕಳಿಗಾಗಿ ಉಚಿತ ಊಟ ಮತ್ತು ವಸತಿ ಶಾಲೆಗಳನ್ನು ತೆರೆಯಲಿದೆ ಎಂದು ಘೋಷಿಸಿದರು. ಇಂಥಹ ಸವಲತ್ತುಗಳನ್ನು ಕಾರ್ಮಿಕರು ಸದುಪಯೋಗ ಪಡಿಸಿಕೊಳ್ಳಬೇಕು ಎಂದು ಸಿ.ಎಂ ತಿಳಿಸಿದರು.