ಭಗವದ್ಗೀತೆ, ಬೈಬಲ್​, ಕುರಾನ್​ ತೇರಲ್ಲಿಟ್ಟು ಎಳೆದರು; ಇದು ಸೌಹಾರ್ದದ ರಥೋತ್ಸವ

ರಥೋತ್ಸದಲ್ಲಿ ಜಗತ್ತಿನ ಎಲ್ಲಾ ಪ್ರಮುಖ ಧರ್ಮಗಳ ಪವಿತ್ರ ಗ್ರಂಥಗಳನ್ನು ರಥದೊಳಗೆ ಇರಿಸಿ ರಥ ಎಳೆಯಲಾಯಿತು.;

Update: 2025-03-11 09:32 GMT

ಧರ್ಮಗ್ರಂಥಗಳನ್ನು  ರಥದೊಳಗಿಟ್ಟು ಕೊಟ್ಟೂರುಸ್ವಾಮಿ ಮಠದ ಮುಂಭಾಗದ ಮೇನ್ ಬಜಾರ್‌ನಲ್ಲಿ ರಥ ಎಳೆಯಲಾಯಿತು.

ಸಾಮಾನ್ಯವಾಗಿ ರಥಗಳಲ್ಲಿ ದೇವರ ಮೂರ್ತಿಗಳನ್ನು ಪ್ರತಿಷ್ಠಾಪನೆ ಮಾಡಿ ಎಳೆಯಲಾಗುತ್ತದೆ. ಆದರೆ ಇಲ್ಲಿ ನಡೆದ ರಥೋತ್ಸದಲ್ಲಿ ಜಗತ್ತಿನ ಎಲ್ಲಾ ಪ್ರಮುಖ ಧರ್ಮಗಳ ಪವಿತ್ರ ಗ್ರಂಥಗಳನ್ನು ರಥದೊಳಗೆ ಇರಿಸಿ ರಥ ಎಳೆಯಲಾಯಿತು. ಹೊಸಪೇಟೆ ತಾಲೂಕಿನ ಕೊಟ್ಟೂರುಸ್ವಾಮಿ ಮಠದ ಮುಂಭಾಗದ ಮೇನ್ ಬಜಾರ್‌ನಲ್ಲಿ ಸೋಮವಾರ ಸಂಜೆ ಈ ವಿಭಿನ್ನ ರೀತಿಯ ರಥೋತ್ಸವಕ್ಕೆ ಸಾವಿರಾರು ಮಂದಿ ಸಾಕ್ಷಿಯಾದರು. 

ಇಂತಹ ವಿಶಿಷ್ಟ ಆಚಾರದ ಮೂಲಕ ಸಾಮರಸ್ಯ, ವಿಶ್ವ ಬಾಂಧವ್ಯ ಮತ್ತು ಶಾಂತಿಯ ಸಂದೇಶವನ್ನು ಸಾರುವ  ಈ ಅಪೂರ್ವ ರೀತಿಯ ಕಾರ್ಯಕ್ರಮವು ಧಾರ್ಮಿಕ ಸೌಹಾರ್ದತೆ ಮತ್ತು ಸಮಾನತೆಯ ಮಹತ್ವವನ್ನು ಜನರಿಗೆ ಸಾರಿತು. 

ಕೊಟ್ಟೂರು ಸ್ವಾಮಿ ಮಠದ ಈ ಹಿಂದಿನ ಪೀಠಾಧಿಪತಿಗಳಾಗಿದ್ದ ಸಂಗನಬಸವ ಸ್ವಾಮೀಜಿ ಅವರು ಎಂಟು ವರ್ಷಗಳ ಹಿಂದೆ ಸರ್ವಧರ್ಮ ರಥೋತ್ಸವ ಆರಂಭಿಸುವ ಮೂಲಕ ಮಠವು ಯಾವುದೇ ಜಾತಿ, ಧರ್ಮ, ಜನಾಂಗದ ಸಮುದಾಯಗಳಿಗೆ ಸೀಮಿತವಾಗಿಲ್ಲ, ಮಠವೆಂದರೆ ಸರ್ವ ಜನಾಂಗದ ಶಾಂತಿಯ ತಾಣ ಎಂಬ ಸಂದೇಶ ಸಾರಿದ್ದರು. ಮೂರು ವರ್ಷಗಳ ಹಿಂದೆ ಅವರು ಲಿಂಗೈಕ್ಯರಾದರೂ ಅವರು ಹುಟ್ಟುಹಾಕಿದ ಪರಂಪರೆಯನ್ನು ಇಂದಿನ ಗುರುಗಳಾದ ಕೊಟ್ಟೂರು ಬಸವಲಿಂಗ ಸ್ವಾಮೀಜಿ ಅವರು ಮುಂದುವರಿಸಿದ್ದಾರೆ.

ಈ ರಥೋತ್ಸವದ ವಿಶೇಷತೆ ಎಂದರೆ,  ತೇರಿನಲ್ಲಿ ಭಗವದ್ಗೀತೆ, ಬೈಬಲ್, ಕುರಾನ್, ಸಿದ್ಧಾಂತ ಶಿಖಾಮಣಿ ಸೇರಿದಂತೆ ವಿಶ್ವದ ಎಲ್ಲಾ ಧರ್ಮದ ಗ್ರಂಥಗಳನ್ನು ಇಟ್ಟು ಮೊದಲಿಗೆ ಪೂಜಿಸಲಾಯಿತು. ಬಳಿಕ ಸಮಾಳ, ನಂದಿಕೋಲು, ಚಂಡೆ, ಮದ್ದಳೆ ಸೇರಿದಂತೆ ವಿವಿಧ ಬಗೆಯ ಮಂಗಳವಾದ್ಯಗಳೊಂದಿಗೆ ಮಠದ ಪರಂಪರೆಯಂತೆ ತೇರನ್ನು ಎಳೆಯಲಾಯಿತು. ಮೇನ್ ಬಜಾರಿಗೆ ಹೊಂದಿಕೊಂಡಿರುವ ಮಠದ ಹೆಬ್ಬಾಗಿಲಿನಿಂದ ಆರಂಭವಾದ ರಥೋತ್ಸವ ಪಾದಗಟ್ಟಿ ಆಂಜನೇಯ ದೇವಸ್ಥಾನದವರೆಗೆ ಸಾಗಿದ್ದು, ವಾಪಸ್‌ ಕೊಟ್ಟೂರು ಸ್ವಾಮಿ ಮಠವನ್ನು ಸೇರಿತು.

ರಥೋತ್ಸವದಲ್ಲಿ ಹಿಂದೂಗಳು, ಮುಸ್ಲಿಮರು, ಕ್ರೈಸ್ತರು, ಜೈನರು, ಬೌದ್ಧರು ಸೇರಿದಂತೆ ಹಲವಾರು ಸಮುದಾಯದವರು ಭಾಗಿಯಾಗಿದ್ದರು.

Tags:    

Similar News