Water Crisis | ದಾಖಲೆಯ ತಾಪಮಾನ ಏರಿಕೆ: ಕುಡಿಯುವ ನೀರಿನ ಬಿಕ್ಕಟ್ಟು ಆತಂಕ
ಪ್ರಸ್ತುತ ವರ್ಷ ಫೆಬ್ರವರಿಯಲ್ಲಿ ವಾಡಿಕೆಗಿಂತ 2.5 ಡಿಗ್ರಿ ಸೆಲ್ಸಿಯನ್ ಬಿಸಿಲು ಅಧಿಕವಾಗಿದ್ದರೆ, ಪೂರ್ವ ಮುಂಗಾರಿನಲ್ಲಿ ವಾಡಿಕೆಗಿಂತ ಅಧಿಕ ಮಳೆಯಾಗುವ ಸಾಧ್ಯತೆ ಇದೆ.
ಮಾನ್ಯ ಕಂದಾಯ ಸಚಿವರ ಅಧ್ಯಕ್ಷತೆಯಲ್ಲಿ ಪಕೃತಿ ವಿಕೋಪಕ್ಕೆ ಸಂಬಂಧಿಸಿದಂತೆ ಗುರುವಾರ ನಡೆದ ಸಚಿವ ಸಂಪುಟ ಉಪಸಮಿತಿ ಸಭೆಯಲ್ಲಿ ಪ್ರಸ್ತುತ 2025 ನೇ ಸಾಲಿನ ಹಿಂಗಾರು-ಮುಂಗಾರು ಮಳೆ ಸ್ಥಿತಿ, ಕೃಷಿ, ಕುಡಿಯುವ ನೀರು, ಹವಾಮಾನ ಹಾಗೂ ಅಣೆಕಟ್ಟೆಗಳಲ್ಲಿನ ನೀರಿನ ಮಟ್ಟದ ಕುರಿತು ಚರ್ಚಿಸಲಾಯಿತು.
ಈ ವೇಳೆ ಸಚಿವರಿಗೆ ಮಾಹಿತಿ ನೀಡಿದ ಅಧಿಕಾರಿಗಳು, “ಪ್ರಸ್ತುತ ವರ್ಷ ಪೂರ್ವ ಮುಂಗಾರಿನಲ್ಲಿ ವಾಡಿಕೆಗಿಂತ ಅಧಿಕ ಮಳೆಯಾಗಲಿದೆ. ಏಪ್ರಿಲ್-ಮೇ ತಿಂಗಳುಗಳಲ್ಲಿ ಉತ್ತಮ ಮಳೆಯಾಗಲಿದೆ. ಫೆಬ್ರವರಿ-ಮಾರ್ಚ್ ತಿಂಗಳ ಕೊನೆಯ ವಾರದಲ್ಲೂ ಹೆಚ್ಚು ಮಳೆ ಸಾಧ್ಯತೆ ಇದೆ. ಆದರೆ, ಹಿಂಗಾರಿನಲ್ಲಿ ಪ್ರಸ್ತುತ ವರ್ಷ ವಾಡಿಕೆಗಿಂತ ಕಡಿಮೆ ಮಳೆಯಾಗಲಿದೆ. ಅಕ್ಟೋಬರ್, ನವೆಂಬರ್, ಡಿಸೆಂಬರ್ ತಿಂಗಳಲ್ಲಿ ಮಳೆಯ ಪ್ರಮಾಣ ಇಳಿಮುಖವಾಗಲಿದೆ” ಎಂದು ಮಾಹಿತಿ ನೀಡಿದರು.
ಪ್ರಸ್ತುತ ವರ್ಷ ಫೆಬ್ರವರಿಯಲ್ಲೇ ಬಿಸಿಲಿನ ತಾಪ ಹೆಚ್ಚಾಗಿದೆ. ಈ ಪ್ರಮಾಣ ವಾಡಿಕೆಗಿಂತ 2.5 ಡಿಗ್ರಿ ಸೆಲ್ಸಿಯಸ್ ಅಧಿಕವಾಗಿದ್ದು, ತಿಂಗಳ ಕೊನೆಯ ವಾರದಲ್ಲಿ ತಾಪಮಾನ ಇಳಿಮುಖವಾಗುವ ಸಾಧ್ಯತೆ ಇದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದರು. ಇದೇ ವೇಳೆ ರಾಜ್ಯಾದ್ಯಂತ ಯಾವ ಭಾಗದಲ್ಲೂ ಕುಡಿಯುವ ನೀರಿಗೆ ತೊಂದರೆ ಆಗದಂತೆ ಎಚ್ಚರಿಕಾ ಕ್ರಮಗಳನ್ನು ವಹಿಸುವಂತೆ ಅಧಿಕಾರಿಗಳಿಗೆ ಸಚಿವ ಕೃಷ್ಣ ಬೈರೇಗೌಡ ಅವರು ಸೂಚಿಸಿದರು.
ಜಲಾಶಯ ನೀರಿನ ಮಟ್ಟದ ಮೇಲೆ ನಿಗಾ
ರಾಜ್ಯದ ಪ್ರಮುಖ ಜಲಾಶಯಗಳ ನೀರಿನ ಮಟ್ಟ ಸಂಗ್ರಹಣೆ ಕುರಿತು ಉಪ ಸಮಿತಿಯಲ್ಲಿ ಕೂಲಂಕುಶವಾಗಿ ಪರಿಶೀಲಿಸಲಾಯಿತು. ರಾಜ್ಯದಲ್ಲಿನ ಪ್ರಮುಖ 14 ಜಲಾಶಯಗಳಲ್ಲಿ ಪ್ರಸ್ತುತ ಒಟ್ಟು 535.21 ಟಿ.ಎಂ.ಸಿ. ನೀರಿನ ಸಂಗ್ರಹಣೆಯಿದ್ದು, ಸರಾಸರಿ ನೀರಿನ ಸಂಗ್ರಹಣೆಯ ಶೇ.60 ರಷ್ಟು ಇದೆ. ಕಳೆದ ವರ್ಷ ಇದೇ ಸಮಯದಲ್ಲಿ 332.52 ಟಿ.ಎಂ.ಸಿ. ನೀರಿನ ಸಂಗ್ರಹಣೆ ಇತ್ತು ಎಂಬ ವಿಷಯವನ್ನು ಉಪಸಮಿತಿಯಲ್ಲಿ ಚರ್ಚಿಸಲಾಯಿತು.
ಕೆಲವೊಂದು ಜಲಾಶಯಗಳಲ್ಲಿ ನೀರಿನ ಮಟ್ಟ ತೃಪ್ತಿಕರವಾಗಿ ಇಲ್ಲದೆ ಇರುವ ಬಗ್ಗೆ ಆತಂಕ ವ್ಯಕ್ತಪಡಿಸಿದ ಸಚಿವರು, ಜಲಾನಯನ ಪ್ರದೇಶಗಳಲ್ಲಿನ ಬೆಳೆಗಳಿಗೆ ಅವಶ್ಯವಿರುವ ನೀರಿನ ಪ್ರಮಾಣ ಇತ್ಯಾದಿ ವಿಷಯಗಳನ್ನು ಗಮನದಲ್ಲಿರಿಸಿಕೊಂಡು ಮುಂಬರುವ ದಿನಗಳಲ್ಲಿ ಜಲಾಶಯಗಳ ನೀರಿನ ಮಟ್ಟ ಯಾವ ಮಟ್ಟ ತಲುಪಲಿದೆ, ಅದರಿಂದಾಗಿ ಕುಡಿಯುವ ನೀರಿಗಾಗಿ ಲಭ್ಯವಾಗಲಿರುವ ನೀರಿನ ಪ್ರಮಾಣವೆಷ್ಟು? ಈ ಕುರಿತು ಮುಂದಿನ ಸಭೆಗಳಲ್ಲಿ ಸ್ಪಷ್ಟ ಮಾಹಿತಿ ನೀಡುವಂತೆ ಜಲಸಂಪ್ಮೂಲ ಇಲಾಖೆಗೆ ಸೂಚಿಸಿದರು. ಕುಡಿಯುವ ನೀರಿಗೆ ಅವಶ್ಯವಿರುವ ನೀರನ್ನು ಕಾಯ್ದಿರಿಸಿದ ನಂತರವೇ ನೀರಾವರಿಗಾಗಿ ನೀರನ್ನು ಬಿಡುಗಡೆಗೊಳಿಸುವ ಕುರಿತು ಸಂಬಂಧಿತ ಅಧಿಕಾರಿಗಳಿಗೆ ಸ್ಪಷ್ಟ ಸೂಚನೆ ನೀಡಿದರು.
ಟ್ಯಾಂಕರ್ ಮೂಲಕ ಕುಡಿಯುವ ನೀರು
ಪ್ರಸ್ತುತ ರಾಜ್ಯದ 5 ಜಿಲ್ಲೆಗಳಾದ ಚಿಕ್ಕಬಳ್ಳಾಪುರ, ಚಿತ್ರದುರ್ಗ, ತುಮಕೂರು, ಬೆಂಗಳೂರು ನಗರ ಮತ್ತು ರಾಮನಗರ ಜಿಲ್ಲೆಗಳ 13 ತಾಲ್ಲೂಕುಗಳ ವ್ಯಾಪ್ತಿಯ 66 ಗ್ರಾಮಗಳಿಗೆ ದೀರ್ಘಕಾಲೀನ ಸಮಸ್ಯೆ ಹಾಗೂ ನೀರಿನ ಗುಣಮಟ್ಟದ ಸಮಸ್ಯೆಯಿಂದಾಗಿ ಬಾಡಿಗೆ ಟ್ಯಾಂಕರ್ ಮತ್ತು ಬೋರ್ವೆಲ್ಗಳ ಮುಖಾಂತರ ಕುಡಿಯುವ ನೀರು ಸರಬರಾಜು ಮಾಡಲಾಗುತ್ತಿದೆ.
ಅದೇ ರೀತಿ ನಗರ ವ್ಯಾಪ್ತಿಗೆ ಸಂಬಂಧಿಸಿದಂತೆ 2 ಜಿಲ್ಲೆಗಳಾದ ಚಿಕ್ಕಬಳ್ಳಾಪುರ, ಬೆಂಗಳೂರು ನಗರ ಮತ್ತು ಕೋಲಾರ ಜಿಲ್ಲೆಗಳ 5 ನಗರ ಸ್ಥಳೀಯ ಸಂಸ್ಥೆಗಳ 56 ವಾರ್ಡ್ಗಳಿಗೆ ಟ್ಯಾಂಕರ್ ಮತ್ತು ಬೋರ್ವೆಲ್ಗಳ ಮುಖಾಂತರ ಕುಡಿಯುವ ನೀರು ಸರಬರಾಜು ಮಾಡಲಾಗುತ್ತಿದೆ. ಈ ಹಿನ್ನೆಲೆಯಲ್ಲಿ ಮುಂಬರುವ ದಿನಗಳಲ್ಲಿ ಸಮಸ್ಯೆ ಉಂಟಾಗಬಹುದಾದ ಗ್ರಾಮಗಳ ಪಟ್ಟಿ ಮಾಡಲು ಸಭೆಯಲ್ಲಿ ಸಚಿವರು ಸೂಚನೆ ನೀಡಿದರು.
ಕುಡಿಯುವ ನೀರಿನ ಸಮಸ್ಯೆಗಳನ್ನು ಬಗೆಹರಿಸಲು ಈ ಹಿಂದಿನ ವರ್ಷಗಳಲ್ಲಿ ಕೈಗೊಂಡ ಕ್ರಮಗಳ ಜೊತೆಗೆ ಕೈಗೊಳ್ಳಬಹುದಾದ ಹೆಚ್ಚುವರಿ ಕ್ರಮಗಳ ಕುರಿತು ಸಂಪೂರ್ಣ ಪೂರ್ವ ಸಿದ್ದತೆ ಮಾಡಿಕೊಳ್ಳುವಂತೆ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ಅಧಿಕಾರಿಗಳಿಗೆ ಸಚಿವ ಕೃಷ್ಣ ಬೈರೇಗೌಡ ಸೂಚಿಸಿದರು. ಈ ಕುರಿತಂತೆ ಸ್ಪಷ್ಟವಾದ ವರದಿಯನ್ನು ಮುಂದಿನ ಸಚಿವರ ಸಂಪುಟ ಉಪಸಮಿತಿ ಸಭೆಯಲ್ಲಿ ಮಂಡಿಸುವಂತೆಯೂ ನಿರ್ದೇಶನ ನೀಡಿದರು.
ರಾಜ್ಯದ ಎಲ್ಲಾ ಜಿಲ್ಲಾಧಿಕಾರಿಗಳು ಹಾಗೂ ತಹಶೀಲ್ದಾರರುಗಳ ಪಿ.ಡಿ. ಖಾತೆಯಲ್ಲಿ (ವಿಪತ್ತು ನಿಧಿ) ಪ್ರಸ್ತುತ ಒಟ್ಟು ರೂ.488.30 ಕೋಟಿಗಳ ಅನುದಾನ ಲಭ್ಯವಿದ್ದು, ಪರಿಹಾರ ಕ್ರಮಕ್ಕೆ ಯಾವುದೇ ಹಣಕಾಸು ಸಮಸ್ಯೆ ಇಲ್ಲ ಎಂಬ ವಿಷಯವನ್ನು ಸಚಿವ ಕೃಷ್ಣ ಬೈರೇಗೌಡ ಅವರು ಉಪ ಸಮಿತಿಯ ಗಮನ ಸೆಳೆದರು.
ಸಭೆಯಲ್ಲಿ ಲೋಕೋಪಯೋಗಿ ಇಲಾಖೆ ಸಚಿವರಾದ ಸತೀಶ್ ಜಾರಕಿಹೊಳಿ, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ಸಚಿವರಾದ ಪ್ರಿಯಾಂಕ್ ಖರ್ಗೆ ಹಾಗೂ ಕೃಷಿ ಸಚಿವರಾದ ಎನ್. ಚಲುವರಾಯ ಸ್ವಾಮಿ ಉಪಸ್ಥಿತರಿದ್ದರು.