Namma Metro Fare Hike| ಪ್ರಯಾಣ ದರ ಭಾರೀ ಏರಿಕೆಗೆ ಬಿಎಂಆರ್‌ಸಿಎಲ್‌ ಸಮರ್ಥನೆ

Namma Metro fare hike | ಟ್ಯಾಕ್ಸಿ, ಆಟೋ, ಬಿಎಂಟಿಸಿ ಬಸ್‌ ದರಕ್ಕೆ ಹೋಲಿಸಿದರೆ ಈಗಲೂ ಮೆಟ್ರೋ ಪ್ರಯಾಣದರ ಅಗ್ಗವಾಗಿದೆ ಎಂದು ಬಿಎಂಆರ್‌ಸಿಎಲ್‌ ದರ ಏರಿಕೆಯನ್ನು ಸಮರ್ಥಿಸಿಕೊಂಡಿದೆ;

Update: 2025-02-10 11:08 GMT
ನಮ್ಮ ಮೆಟ್ರೋ

ಪ್ರಯಾಣಿಕರ ತೀವ್ರ ಆಕ್ರೋಶದ ಬೆನ್ನಲ್ಲೇ ನಮ್ಮ ಮೆಟ್ರೋ ರೈಲು ಪ್ರಯಾಣ ದರ ಏರಿಕೆಗೆ ಕುರಿತು ಬಿಎಂಆರ್‌ಸಿಎಲ್‌ ಆ ಬಗ್ಗೆ ಅಧಿಕೃತ ಪ್ರತಿಕ್ರಿಯೆ ನೀಡಿದ್ದು, ಬೆಲೆ ಏರಿಕೆಯನ್ನು ಅತಾರ್ಕಿಕ ಹೋಲಿಕೆಯ ಮೂಲಕ ಸಮರ್ಥಿಸಿಕೊಂಡಿದೆ.

ಬಿಎಂಆರ್ ಸಿಎಲ್ ಸ್ಪಷ್ಟನೆ

ದರ ಏರಿಕೆ ವಿಚಾರವಾಗಿ ಸ್ಪಷ್ಟನೆ ನೀಡಿರುವ ಬಿಎಂಆರ್ ಸಿಎಲ್ ಅಧಿಕಾರಿಗಳು ದರ ಏರಿಕೆಯನ್ನು ಸಮರ್ಥಿಸಿಕೊಂಡಿದ್ದು, ಮೆಟ್ರೋ ಪ್ರಯಾಣ ಬೆಲೆಯನ್ನು ಹಲವು ವರ್ಷಗಳಿಂದ ಮಾಡಿಲ್ಲ. ಹೀಗಾಗಿ ಇದರ ಬೆಲೆ ಹೆಚ್ಚಳ ಮಾಡುವುದು ಅನಿವಾರ್ಯವಾಗಿತ್ತು. ಆದರೆ, ಈ ದರ ಏರಿಕೆ ಬೆಂಗಳೂರಿನ ಆಟೋಗಳು ಅಥವಾ ಟ್ಯಾಕ್ಸಿಗಳ ದರಕ್ಕಿಂತ ಅಗ್ಗವಾಗಿದೆ ಎಂದು ಹೇಳಿದ್ದಾರೆ.

2 ಕಿ.ಮೀ ದೂರಕ್ಕೆ ಮೆಟ್ರೋ ಪ್ರಯಾಣಕ್ಕೆ ಕೇವಲ 10 ರೂ. ವೆಚ್ಚವಾಗುತ್ತದೆ. ಆದರೆ ಆಟೋದಲ್ಲಿ ಅದೇ ದೂರಕ್ಕೆ 30 ರೂ. ಮತ್ತು ಟ್ಯಾಕ್ಸಿಯಲ್ಲಿ 100 ರೂ. ಇದೆ. 25-30 ಕಿ.ಮೀ ದೂರಕ್ಕೆ, ಮೆಟ್ರೋ ಈಗ 90 ರೂ. ವಿಧಿಸುತ್ತದೆ. ಆದರೆ ಆಟೋ ದರ 390 ರಿಂದ 450 ರೂ. ಆಗುತ್ತದೆ ಮತ್ತು ಟ್ಯಾಕ್ಸಿಯಲ್ಲಿ ಅದೇ ದೂರಕ್ಕೆ 676 ರಿಂದ 748 ರೂ.ವರೆಗೆ ದರ ವಿಧಿಸಲಾಗುತ್ತಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ಬಿಎಂಟಿಸಿ ಎಸಿ ಬಸ್‌ನಲ್ಲಿ ಕನಿಷ್ಠ ದೂರದ ದರ 15 ರೂ.ಗೆ ತಲುಪಿದ್ದರೆ, 25 ಕಿ.ಮೀ ಗಿಂತ ಹೆಚ್ಚು ದೂರಕ್ಕೆ 50 ರೂ. ವಿಧಿಸಲಾಗುತ್ತಿದೆ. ಎಸಿರಹಿತ ಬಸ್ ದರ ಅತ್ಯಂತ ಅಗ್ಗ ಎನ್ನಲಾಗುತ್ತಿದ್ದು, ಕನಿಷ್ಠ ದರ ಕಿ.ಮೀಗೆ ರೂ. 26 ಗಿಂತ ಹೆಚ್ಚಾಗಿದೆ. ಈ ಎಲ್ಲ ಅಂಕಿಅಂಶಗಳನ್ನು ಪರಿಶೀಲಿಸಿದರೆ ಈಗಲೂ ಮೆಟ್ರೋ ಪ್ರಯಾಣ ದರವೇ ಅಗ್ಗವಾಗಿದೆ ಎಂದು ಹೇಳಿದ್ದಾರೆ.

ಬೆಂಗಳೂರಿನಲ್ಲಿ ಮೆಟ್ರೋ ಸಂಚಾರ ಆರಂಭವಾದಾಗಿನಿಂದ ಇದೇ ಮೊದಲ ಬಾರಿಗೆ ಬಿಎಂಆರ್‌ಸಿಎಲ್ ಪ್ರಯಾಣ ದರ ಪರಿಷ್ಕರಿಸಿದೆ. ಆದರೆ, ಏಕಾಏಕಿ ಶೇ 50-100 ರಷ್ಟು ಪ್ರಯಾಣ ದರ ಏರಿಕೆ ಮಾಡಿರುವುದು ಪ್ರಯಾಣಿಕರ ಆಕ್ರೋಶಕ್ಕೆ ಕಾರಣವಾಗಿದೆ. ಪ್ರಸ್ತುತ, ಮೆಟ್ರೊ ದರಗಳು ಕನಿಷ್ಠ 10ರೂ. ನಿಂದ ಹಿಡಿದು ಗರಿಷ್ಠ 90 ರೂ. ರವರೆಗೆ ಇದೆ.

Tags:    

Similar News