ಕಾಂಗ್ರೆಸ್‌ ಮುಖಂಡನ ʼಕಮಿಷನ್‌ ವಿಡಿಯೋ ಬಾಂಬ್‌ʼ ಸ್ಫೋಟ ? ಗೆಸ್ಟ್ ಹೌಸ್‌ನಲ್ಲಿ ಲಂಚ ಸ್ವೀಕಾರ?

ಪರ್ಸಂಟೇಜ್‌ ಕಮಿಷನ್‌ ಹಣವನ್ನು ವಿಧಾನಸೌಧ ಕೂಗಳತೆಯಲ್ಲಿರುವ ಕುಮಾರಕೃಪಾ ಗೆಸ್ಟ್ ಹೌಸ್ ನಲ್ಲಿ ತೆಗೆದುಕೊಳ್ಳುವುದನ್ನೂ ವಿಡಿಯೋದಲ್ಲಿ ರೆಕಾರ್ಡ್‌ ಮಾಡಿಕೊಳ್ಳಲಾಗಿದೆ ಎಂದು ಹೇಳಲಾಗಿದೆ.;

Update: 2025-09-01 04:18 GMT
ಸಾಂದರ್ಭಿಕ ಚಿತ್ರ

ರಾಜ್ಯದ ಕಾಂಗ್ರೆಸ್‌ ಸರ್ಕಾರದಲ್ಲಿ ಉನ್ನತ ಸ್ಥಾನದಲ್ಲಿರುವ ವ್ಯಕ್ತಿಯೊಬ್ಬರು ಸರ್ಕಾರಿ ಕಚೇರಿಯಲ್ಲಿಯೇ ಲಂಚದ ವ್ಯವಹಾರ ನಡೆಸಿರುವ ವಿಡಿಯೋವೊಂದು ಬಿಡುಗಡೆಯಾಗಲಿದ್ದು, ರಾಜ್ಯ ರಾಜಕಾರಣದಲ್ಲಿ ಸಂಚಲನ ಸೃಷ್ಟಿಸಿದೆ.

ಸೋಮವಾರ ಬೆಂಗಳೂರಿನಲ್ಲಿ ಪತ್ರಿಕಾಗೋಷ್ಠಿಗೆ ಸಿದ್ಧತೆ ನಡೆಸಿರುವ ಬಿಜೆಪಿ ಮುಖಂಡರೊಬ್ಬರು ಆ ಸಂದರ್ಭದಲ್ಲಿ ವಿಡಿಯೋ ಮತ್ತು ಆಡಿಯೋದ ಪೆನ್‌ಡ್ರೈವ್‌ ಬಿಡುಗಡೆ ಮಾಡಲಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಪರಿಶಿಷ್ಟ ವರ್ಗಗಳ ನಾಯಕರೂ ಆಗಿರುವ ಬಿಜೆಪಿ ಮುಖಂಡ, ಕಾಂಗ್ರೆಸ್ ನ ಮುಖಂಡರೊಬ್ಬರ  ಲಂಚ ವ್ಯವಹಾರದ ಬಗ್ಗೆ ವಿಡಿಯೋ ಬಿಡುಗಡೆ ಮಾಡಲಿದ್ದಾರೆ ಎನ್ನಲಾಗಿದೆ. ಆ ವಿಡಿಯೋದಲ್ಲಿ ಆ ಮುಖಂಡ ಸರ್ಕಾರಿ ಕಚೇರಿಯಲ್ಲಿಯೇ ಗುತ್ತಿಗೆಯೊಂದರ ಸಂಬಂಧ ಪರ್ಸಂಟೇಜ್‌ ಕಮಿಷನ್‌ ಬಗ್ಗೆ ಮಾತನಾಡಿರುವ ಅಂಶಗಳಿವೆ ಎನ್ನಲಾಗಿದೆ.

ಬಳಿಕ ಪರ್ಸಂಟೇಜ್‌  ಕಮಿಷನ್‌  ಹಣವನ್ನು ವಿಧಾನಸೌಧ ಕೂಗಳತೆಯಲ್ಲಿರುವ  ಕುಮಾರಕೃಪಾ ಗೆಸ್ಟ್ ಹೌಸ್ ನಲ್ಲಿ ತೆಗೆದುಕೊಳ್ಳುವುದನ್ನೂ ವಿಡಿಯೋದಲ್ಲಿ ರೆಕಾರ್ಡ್‌ ಮಾಡಿಕೊಳ್ಳಲಾಗಿದೆ ಎಂದು ಹೇಳಲಾಗಿದೆ.

"ಕಾಂಗ್ರೆಸ್ ಸರ್ಕಾರದಲ್ಲಿ. ಪ್ರತಿಷ್ಠಿತ ಹುದ್ದೆಯಲ್ಲಿ ಇರುವ ವ್ಯಕ್ತಿಯೊಬ್ಬ ತನ್ನ ಸರಕಾರಿ ಕಚೇರಿಯಲ್ಲಿ ಪರ್ಸೆಂಟೇಜ್ ವ್ಯವಹಾರ ಮಾತನಾಡುವ ಹಾಗೂ ಲಂಚ ಸ್ವೀಕರಿಸುವ ವಿಡಿಯೋ ಬಿಡುಗಡೆ ಮಾಡಲಾಗುವುದು," ಎಂದು  ಭಾರತೀಯ ಭೋವಿ ಸಮಾಜ ಸೇವಾ ಸಂಘದ ಅಧ್ಯಕ್ಷ  ಡಾ:ವೆಂಕಟೇಶ್ ಮೌರ್ಯ  ಎಂಬವರು ಸಾಮಾಜಿಕ ಜಾಲತಾಣದಲ್ಲಿ ಮಾಹಿತಿ ನೀಡಿದ್ದಾರೆ. ಅವರು ಬಿಜೆಪಿಯ ನಾಯಕರೂ ಆಗಿದ್ದಾರೆ ಎಂದು ಹೇಳಲಾಗಿದೆ.

ಕಮಿಷನ್‌ ಆರೋಪದ ಸಂಬಂಧ ವಿಡಿಯೋ ಬಿಡುಗಡೆಯಾದರೆ ರಾಜ್ಯ ಸರ್ಕಾರಕ್ಕೆ ಮುಜುಗರ ಸೃಷ್ಟಿಸುವ ಸಾಧ್ಯತೆಯಿದೆ. ಈ ಹಿಂದೆ ಆಡಳಿತ ನಡೆಸಿದ ಬಿಜೆಪಿ ಸರ್ಕಾರದ ವಿರುದ್ಧ 40 ಪರ್ಸೆಂಟ್‌ ಕಮಿಷನ್‌ ಆರೋಪ ಹೊರಿಸಿದ್ದ ಆಗಿನ ವಿರೋಧ ಪಕ್ಷ ಕಾಂಗ್ರೆಸ್‌ , ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ವಿರುದ್ಧ ʼಪೇ ಸಿಎಂʼ ಅಭಿಯಾನವನ್ನೂ ಕೈಗೊಂಡು ರಾಷ್ಟ್ರಮಟ್ಟದಲ್ಲಿ ಬಿಜೆಪಿಗೆ ಮುಜುಗರ ಸೃಷ್ಟಿಸುವಂತೆ ಮಾಡಿತ್ತು. 

ಎಸ್‌ಐಟಿ ತನಿಖೆ

ಹಿಂದಿನ ಬಿಜೆಪಿ ಸರ್ಕಾರದಲ್ಲಿ ಕೇಳಿ ಬಂದಿದ್ದ ಗುತ್ತಿಗೆದಾರರಿಂದ 40 ಪರ್ಸೆಂಟ್ ಕಮಿಷನ್ ಪಡೆದಿರುವ ಹಗರಣದ ಕುರಿತು ಎಸ್​ಐಟಿ ತನಿಖೆ ನಡೆಸಲು ರಾಜ್ಯ ಸರ್ಕಾರ ನಿರ್ಧರಿಸಿತ್ತು. ಏಪ್ರಿಲ್​ 11ರಂದು ನಡೆದ ಸಚಿವ ಸಂಪುಟ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿತ್ತು.

ಬಿಜೆಪಿ ಸರ್ಕಾರವಿದ್ದ ವೇಳೆ ನಡೆದಿದೆ ಎನ್ನಲಾದ ಅಕ್ರಮಗಳ ಆರೋಪಗಳ ಬಗ್ಗೆ ನಾಗಮೋಹನ್ ದಾಸ್ ನೇತೃತ್ವದ ವಿಚಾರಣಾ ಆಯೋಗ ತನಿಖೆ ನಡೆಸಿ ವರದಿ ನೀಡಿತ್ತು. ಅದರಲ್ಲಿ ಹಲವಾರು ಶಿಫಾರಸುಗಳನ್ನು ಮಾಡಲಾಗಿದೆ. 1729 ಕಾಮಗಾರಿಗಳಲ್ಲಿ ಅಕ್ರಮಗಳ ಬಗ್ಗೆ ವಿಚಾರಣೆ ಮಾಡಿದ್ದಾರೆ. ಕಾಮಗಾರಿಗಳಿಗೆ ಬಿಡುಗಡೆಯಾದ ಅನುದಾನ, ಕಾಮಗಾರಿ ಪ್ರಗತಿ, ತಾರತಮ್ಯ, ಟೆಂಡರ್ ಪ್ರೊಸೆಸ್ ಬಗ್ಗೆ ವಿವರವಾಗಿ ವರದಿ ನೀಡಿದೆ. ಹೀಗಾಗಿ ಹೆಚ್ಚಿನ ತನಿಖೆಗಾಗಿ ಎಸ್​​ಐಟಿ ಮಾಡಲು ನಿರ್ಧಾರ ಮಾಡಲಾಗಿದೆ ಎಂದು ವಿವರ ನೀಡಿಲಾಗಿತ್ತು.

ಕಾಂಗ್ರೆಸ್‌ಗೆ ಮುಜುಗರ

ಒಂದು ವೇಳೆ ʼವಿಡಿಯೋ ಬಾಂಬ್‌ʼನಲ್ಲಿ ಕಾಂಗ್ರೆಸ್‌ ಮುಖಂಡನ ಅಥವಾ ಅಧಿಕಾರಿಯ ಲಂಚ ಸ್ವೀಕಾರ ಘಟನೆ ಸಾಬೀತಾದರೆ, ಇದು ಕಾಂಗ್ರೆಸ್‌ ಪಕ್ಷಕ್ಕೆ ಹಾಗೂ ಬಿಜೆಪಿ ವಿರುದ್ಧ ಆರೋಪಗಳನ್ನು ಮಾಡಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಇತರ ನಾಯಕರಿಗೆ ಇದು ತೀರಾ ಮುಜುಗರ ಸೃಷ್ಟಿಯಾಗಲಿದೆ ಎನ್ನಲಾಗಿದೆ.

ಈಗಾಗಲೇ ಸಾಕಷ್ಟು ಭ್ರಷ್ಟಾಚಾರ ಆರೋಪಗಳನ್ನು ಎದುರಿಸುತ್ತಿರುವ ಕಾಂಗ್ರೆಸ್‌ ಸರ್ಕಾರದ ವಿರುದ್ಧ ಬಿಜೆಪಿಗೆ ಇನ್ನೊಂದು ಅಸ್ತ್ರ ಸಿಗಲಿದೆಯೇ ಎಂಬ ಬಗ್ಗೆ ವಿಡಿಯೋ ಬಿಡುಗಡೆಯಾದ ಬಳಿಕವಷ್ಟೇ ಖಚಿತವಾಗಿ ಗೊತ್ತಾಗಲಿದೆ.

Tags:    

Similar News