BiggBoss Kannada | ಸಾರ್ವಜನಿಕ ಸ್ಥಳದಲ್ಲಿ ಮಾರಕಾಸ್ತ್ರ ಪ್ರದರ್ಶನ: ಬಿಗ್ ಬಾಸ್ ಮಾಜಿ ಸ್ಪರ್ಧಿಗಳ ಮೇಲೆ ಎಫ್ಐಆರ್
ರಜತ್ ಹಾಗೂ ವಿನಯ್ ಇಬ್ಬರು ಸ್ನೇಹಿತರಾಗಿದ್ದು, ಬಿಗ್ ಬಾಸ್ ಸೀಸನ್ 10 ರಲ್ಲಿ ವಿನಯ್ ಸ್ಪರ್ಧಿಯಾಗಿದ್ದರು. 11ನೇ ಸೀಸನ್ನಲ್ಲಿ ರಜತ್ ಕಿಶನ್ ಸ್ಪರ್ಧಿಯಾಗಿದ್ದರು.;
ಬಿಗ್ ಬಾಸ್ ಮಾಜಿ ಸ್ಪರ್ಧಿಗಳಾದ ವಿನಯ್ ಗೌಡ ಹಾಗೂ ರಜತ್ ಕಿಶನ್ ವಿರುದ್ಧ ಎಫ್ಐಆರ್ ದಾಖಲಾಗಿದೆ.
ಬೆಂಗಳೂರಿನ ಬಸವೇಶ್ವರನಗರ ಠಾಣಾ ಪಿಎಸ್ ಐ ಭಾನು ಪ್ರಕಾಶ್ ನೀಡಿದ ದೂರಿನ ಅನ್ವಯ ಎಫ್ಐಆರ್ ದಾಖಲಾಗಿದೆ. ಆರ್ಮ್ ಆ್ಯಕ್ಟ್ ಅಡಿ ಬಸವೇಶ್ವರ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಆರಂಭಿಸಿದ್ದಾರೆ.
ರೀಲ್ಸ್ ಎಡವಟ್ಟಿನಿಂದ ಇಬ್ಬರ ಮೇಲೂ ಪ್ರಕರಣ ದಾಖಲಾಗಿದೆ. ಕೈಯಲ್ಲಿ ಲಾಂಗ್ ಹಿಡಿದುಕೊಂಡು ಪೋಸ್ ಕೊಟ್ಟಿರುವ ಬಿಗ್ ಬಾಸ್ ರಜತ್ ಇನ್ಟಾಗ್ರಾಂ ಅಕೌಂಟ್ನಲ್ಲಿ ರೀಲ್ಸ್ ಹಾಕಿದ್ದರು. ಜೊತೆಗೆ ಇಬ್ಬರೂ ಕೈಯಲ್ಲಿ ಲಾಂಗ್ ಹಿಡಿದುಕೊಂಡು, ಲಾಂಗ್ ಅನ್ನು ಒಬ್ಬರ ಕೈಯಿಂದ ಮತ್ತೊಬ್ಬರು ತೂರಾಡಿ ಹಿಡಿದಿದ್ದರು. ಮಾರಕಾಸ್ತ್ರ ಹಿಡಿದುಕೊಂಡು ಭಯದ ವಾತಾವರಣ ಸೃಷ್ಟಿಯಾಗುವಂತೆ ರೀಲ್ಸ್ ಮಾಡಿದ್ದಾರೆಂದು ಎಫ್ಐಆರ್ ದಾಖಲಾಗಿದೆ.
ಸಾರ್ವಜನಿಕ ಸ್ಥಳದಲ್ಲಿ, ಲಾಂಗ್ ಹಿಡಿಯುವ ಮೂಲಕ ಕಾನೂನುಬಾಹಿರವಾಗಿ ರೀಲ್ಸ್ ಮಾಡಿದ್ದರಿಂದ ಸಾರ್ವಜನಿಕರ ಶಾಂತಿ ನೆಮ್ಮದಿಗೆ ಭಂಗವಾಗಿದೆ ಎಂದು ದೂರಿನಲ್ಲಿ ಹೇಳಲಾಗಿದೆ. ಲಾಂಗ್ ಹಿಡಿದುಕೊಂಡು ವಿಡಿಯೋ ಮಾಡಿಕೊಂಡು ನಂತರ ಅದನ್ನು ʼbujjiʼ ಎಂಬ Instagram ಖಾತೆಯಲ್ಲಿ ಅಪ್ಲೋಡ್ ಮಾಡಲಾಗಿದೆ. ಇದು ಸಾರ್ವಜನಿಕ ಶಾಂತಿ ಮತ್ತು ನೆಮ್ಮದಿ ಹಾಳು ಮಾಡುವ ರೀತಿಯ ದುರ್ವರ್ತನೆ ಎಂದು ಆಪಾದಿಸಲಾಗಿದೆ.
ಒಟ್ಟು 18 ಸೆಕೆಂಡ್ ಗಳ ವಿಡಿಯೋ ಲಿಂಕ್ ಆಧರಿಸಿ ದೂರು ದಾಖಲಾಗಿದೆ. ಬಸವೇಶ್ವರನಗರ ಠಾಣೆಯ ಸೋಷಿಯಲ್ ಮೀಡಿಯಾ ಮಾನಿಟರಿಂಗ್ ಉಸ್ತುವಾರಿ ಆಗಿರುವ ಪಿಎಸ್ಐ ಪ್ರಕಾಶ್ ದೂರು ಸಲ್ಲಿಸಿದ್ದಾರೆ. ನಿಷೇಧಿತ ಮಾರಕಾಸ್ತ್ರ ಹಿಡಿದುಕೊಂಡು ರೀಲ್ಸ್ ಮಾಡಲಾಗಿದೆ. ನಂತರ ಅದನ್ನು ಸಾಮಾಜಿಕ ಜಾಲತಾಣದಲ್ಲಿ ಅಪ್ಲೋಡ್ ಮಾಡುವ ಮೂಲಕ ಮತ್ತಷ್ಟು ಸಾರ್ವಜನಿಕರ ಶಾಂತಿ ಮತ್ತು ನೆಮ್ಮದಿ ಹಾಳು ಮಾಡಿದ್ದಾರೆ. ಹೀಗಾಗಿ ರಜತ್ ಹಾಗೂ ವಿನಯ್ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ದೂರಿನಲ್ಲಿ ಆರೋಪಿಸಿದ್ದರು.
ಐದು ದಿನಗಳ ಹಿಂದೆ ಇನ್ಸ್ಟಾಗ್ರಾಮ್ ಖಾತೆಯಲ್ಲಿ ವಿನಯ್ ಗೌಡ ಹಾಗೂ ರಜತ್ ಕಿಶನ್ ಲಾಂಗ್ ಹಿಡಿದು ರೀಲ್ಸ್ ಮಾಡಿದ್ದಾರೆ ಎಂದು ತಿಳಿದುಬಂದಿದೆ. ಆ ರೀಲ್ಸ್ ಅನ್ನು ಇನ್ಸ್ಟಾಗ್ರಾಮ್ ಖಾತೆಯಲ್ಲಿ ಶೇರ್ ಮಾಡಿಕೊಂಡಿದ್ದರು. ಇದೀಗ ಅದೇ ವಿಡಿಯೋ ಕಾರಣದಿಂದಾಗಿ ಕಾನೂನು ಕ್ರಮಕ್ಕೆ ಒಳಗಾಗಿದ್ದಾರೆ.
ರಜತ್ ಹಾಗೂ ವಿನಯ್ ಇಬ್ಬರು ಸ್ನೇಹಿತರಾಗಿದ್ದು, ಬಿಗ್ ಬಾಸ್ ಸೀಸನ್ 10 ರಲ್ಲಿ ವಿನಯ್, ನಂತರ 11ನೇ ಸೀಸನ್ನಲ್ಲಿ ರಜತ್ ಕಿಶನ್ ಸ್ಪರ್ಧಿಯಾಗಿದ್ದರು. ಆದರೆ ವಿನಯ್ ಹಾಗೂ ರಜತ್ ನಕಲಿ ಲಾಂಗ್ ಹಿಡಿದು ರೀಲ್ಸ್ ಮಾಡಿದ್ದಾರೆ ಎನ್ನಲಾಗಿದೆ. ಸೋಶಿಯಲ್ ಮಿಡಿಯಾದಲ್ಲಿ ಲಾಂಗ್, ಮಚ್ಚು, ಗನ್ ಅಸಲಿ ಇರಲಿ ಅಥವಾ ನಕಲಿ ಇರಲಿ ಅಂತಹ ಮಾರಕಾಸ್ತ್ರಗಳನ್ನು ಹಿಡಿದುಕೊಂಡು ರೀಲ್ಸ್ ಮಾಡುವಂತಿಲ್ಲ. ಹೀಗಾಗಿ ಇಬ್ಬರೂ ಸಂಕಷ್ಟಕ್ಕೆ ಸಿಕ್ಕಿಕೊಂಡಿದ್ದಾರೆ.