ಬೆಳಗಾವಿ | ನ್ಯಾಯಾಲಯದ ಆವರಣದಲ್ಲೇ ಪಾಕ್ ಪರ ಘೋಷಣೆ: ಕೈದಿಗೆ ಬಿತ್ತು ಧರ್ಮದೇಟು
ವಿಚಾರಣೆಗಾಗಿ ಕರೆತಂದಿದ್ದ ಕೈದಿಯೊಬ್ಬ ಬೆಳಗಾವಿ ನ್ಯಾಯಾಲಯದ ಆವರಣದಲ್ಲಿ ಪಾಕಿಸ್ತಾನ ಪರ ಘೋಷಣೆ ಕೂಗಿರುವ ಘಟನೆ ಬುಧವಾರ (ಜೂ.12) ಬೆಳಿಗ್ಗೆ ನಡೆದಿದೆ.;
ವಿಚಾರಣೆಗಾಗಿ ಕರೆತಂದಿದ್ದ ಕೈದಿಯೊಬ್ಬ ನ್ಯಾಯಾಲಯ ಆವರಣದಲ್ಲಿಯೇ ಪಾಕಿಸ್ತಾನ ಪರ ಘೋಷಣೆ ಕೂಗಿರುವ ಘಟನೆ ಬೆಳಗಾವಿಯಲ್ಲಿ ಬುಧವಾರ (ಜೂ.12) ಬೆಳಿಗ್ಗೆ ನಡೆದಿದೆ.
ವಿವಿಧ ಪ್ರಕರಣಗಳಲ್ಲಿ ಭಾಗಿಯಾಗಿ ಹಿಂಡಲಗಾ ಕೇಂದ್ರ ಕಾರಾಗೃಹದಲ್ಲಿರುವ ಕೈದಿ ಜಯೇಶ್ ಪೂಜಾರಿ ಎಂಬಾತನನ್ನು ವಿಚಾರಣೆಗಾಗಿ ನ್ಯಾಯಾಲಯಕ್ಕೆ ಕರೆತರಲಾಗಿತ್ತು. ಆಗ 'ನ್ಯಾಯಾಲಯದಲ್ಲಿ ನನ್ನ ಅಹವಾಲು ಸ್ವೀಕರಿಸುತ್ತಿಲ್ಲ' ಎಂದು ಪಾಕಿಸ್ತಾನ ಪರ ಘೋಷಣೆ ಕೂಗಿದ್ದಾನೆ. ಆಗ ವಕೀಲರು ಮತ್ತು ಜನರು ಕೈದಿಯ ಮೇಲೆ ಮುಗಿಬಿದ್ದು ಹೊಡೆದಿದ್ದಾರೆ. ಈ ವೇಳೆ ಕೈದಿಯನ್ನು ರಕ್ಷಿಸಿದ ಪೊಲೀಸರು ಎಪಿಎಂಸಿ ಠಾಣೆಗೆ ಕರೆದೊಯ್ದ ವಿಚಾರಣೆ ನಡೆಸುತ್ತಿದ್ದಾರೆ.
ಮಂಗಳೂರಿನ ಡಬಲ್ ಮರ್ಡರ್ ಆರೋಪಿ ಹಾಗೂ ವಿವಿಧ ಪ್ರಕರಣಗಳ ಪ್ರಮುಖ ಆರೋಪಿಯಾಗಿರುವ ಜಯೇಶ್ ಪೂಜಾರಿ ಅಲಿಯಾಸ್ ಜಯೇಶ್ ಕಾಂತ್, ಕಳೆದ ವರ್ಷ ಜನವರಿಯಲ್ಲಿ ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿಗಳ ಸಚಿವ ನಿತಿನ್ ಗಡ್ಕರಿ ಅವರಿಗೆ ಜೀವ ಬೆದರಿಕೆ ಕರೆ ಮಾಡಿದ್ದನು.
'ತಾನು ದಾವೂದ್ ಇಬ್ರಾಹಿಂ ತಂಡದಲ್ಲಿದ್ದೇನೆ' ಎಂದು ಹೇಳಿಕೊಂಡಿದ್ದ ಜಯೇಶ್ ಪೂಜಾರಿ ಜೈಲಿನಲ್ಲಿ ಇದ್ದುಕೊಂಡೇ, ಕೇಂದ್ರ ಸಚಿವ ನಿತಿನ್ ಗಡ್ಕರಿ ಹಾಗೂ ಐಪಿಎಸ್ ಅಧಿಕಾರಿ ಅಲೋಕ್ ಕುಮಾರ್ ಅವರಿಗೆ ಬೆದರಿಕೆ ಕರೆ ಹಾಕಿದ್ದ ಎಂದು ತಿಳಿದು ಬಂದಿದೆ.