ʻಮನೆಗೊಂದು ಕಲಾಕೃತಿʼ ಸಾಮಾನ್ಯ ಜನರತ್ತ ಕಲೆಯ ನಡೆಯ ಮುನ್ನುಡಿ

ಜನರಿಗಾಗಿ ಕಲೆ, ಜನರಿಂದಾಗಿಯೇ ಕಲೆ ಎನ್ನುವ ಕಲ್ಪನೆಗೆ ಕರ್ನಾಟಕದಲ್ಲಿ ಇತ್ತೀಚಿನ ದಿನಗಳಲ್ಲಿ ಮರುಜೀವ ದೊರೆತಂತೆ ಕಾಣುತ್ತಿದೆ. ಕೆಲವು ದಿನಗಳ ಹಿಂದೆ ನಡೆದ ಚಿತ್ರಸಂತೆಯ 22ನೇ ಆವೃತ್ತಿಗೆ ಸಿಕ್ಕಿರುವ ಪ್ರತಿಕ್ರಿಯೆ ಇದಕ್ಕೆ ಸಾಕ್ಷ್ಯ ಒದಗಿಸಿದೆ. ಈ ಹಿನ್ನೆಲೆಯಲ್ಲಿ ಕರ್ನಾಟಕ ಲಲಿತಕಲಾ ಅಕಾಡೆಮಿ ಈಗ ʻಮನೆಗೊಂದು ಕಲಾಕೃತಿʼ ಎಂಬ ಹೊಸ ಕಲ್ಪನೆಯನ್ನು ಹುಟ್ಟುಹಾಕಿದೆ. ಜನವರಿ 18ರಿಂದ 21ರ ವರೆಗೆ ನಡೆಯಲಿರುವ ನಾಲ್ಕು ದಿನಗಳ ಈ ಕಾರ್ಯಕ್ರಮ ಕಲೆಯನ್ನು ಪ್ರಜಾತಾಂತ್ರಿಕಗೊಳಿಸುವ ಯತ್ನ ಎಂದೇ ಅರ್ಥೈಸಲಾಗಿದೆ.;

Update: 2025-01-18 10:44 GMT

ಕಲೆ ಅದರಲ್ಲೂ ಚಿತ್ರಕಲೆ ಎನ್ನುವುದು ಉಳ್ಳವರ ಸ್ವತ್ತು. ಅದು ಜನಸಾಮನ್ಯರಿಗೆ ಎಟಕುವಂಥದಲ್ಲ ಎಂಬ ನಂಬಿಕೆಯನ್ನು ಮುರಿದು ಕಲೆ ಜನಸಾಮಾನ್ಯರಿಗೂ ಕಲೆ ತಲುಪಬೇಕು ಎಂಬ ಕಲ್ಪನೆ ಕರ್ನಾಟಕದಲ್ಲಿ ಇತ್ತೀಚಿನ ದಿನಗಳಲ್ಲಿ ನಿಧಾನವಾಗಿ ಬೇರೂರುತ್ತಿರುವಂತೆ ತೋರುತ್ತಿದೆ. ಹಾಗಾಗಿ ಸಾಮಾನ್ಯರೂ ಕೂಡ ಕಲಾಭಿರುಚಿಯನ್ನು ಬೆಳೆಸಿಕೊಳ್ಳಬಹುದು. ಇದ್ದುದರಲ್ಲೇ ತಮ್ಮ ಮನೆಯನ್ನೂ ಕೂಡ ಕೈಗೆಟಕುವ ದರದಲ್ಲಿ ಕಲಾಕೃತಿಗಳನ್ನು ಕೊಂಡು, ತಮ್ಮ ಅಭಿರುಚಿಗೆ ತಕ್ಕಂತೆ ರೂಪಿಸಿಕೊಳ್ಳಬಹುದು ಎಂಬುದನ್ನು ಜನರಿಗೆ ಮನವರಿಕೆ ಮಾಡಿಕೊಡುವ ಯತ್ನದಲ್ಲಿ ಈಗ ಕರ್ನಾಟಕದ ಕಲಾ ಜಗತ್ತು ತನ್ನನ್ನು ತಾನು ತೊಡಗಿಸಿಕೊಂಡು, ಜನರತ್ತ ಕಲೆಯನ್ನು ಕೊಂಡೊಯ್ಯುವ ಹಲವು ಪ್ರಯತ್ನಗಳನ್ನು ಮಾಡುತ್ತಿದೆ.

ಈ ಪ್ರಯತ್ನದ ಒಂದು ಭಾಗವಾಗಿ ಶನಿವಾರದಿಂದ (ಜನವರಿ 18) ಮಂಗಳವಾರದವರೆಗೂ (ಜನವರಿ 21) ಕರ್ನಾಟಕ ಲಲಿತಕಲಾ ಆಕಾಡೆಮಿ ʻಮನೆಗೊಂದು ಕಲಾಕೃತಿʼ ಎಂಬ ಪ್ರದರ್ಶನ ಮತ್ತು ಮಾರಾಟದ ಕಾರ್ಯಕ್ರಮವನ್ನು ಹಮ್ಮಿಕೊಂಡಿದೆ. ‌ಈ ಪ್ರದರ್ಶನ ಶಿವಾನಂದ ವೃತ್ತದ ಸಮೀಪದ ಕರ್ನಾಟಕ ಚಿತ್ರಕಲಾ ಪರಿಷತ್ತಿನಲ್ಲಿ ನಡೆಯಲಿದೆ.

ಇತ್ತೀಚೆಗೆ ಕರ್ನಾಟಕ ಚಿತ್ರಕಲಾ ಪರಿಷತ್ತು ಏರ್ಪಡಿಸಿದ ಚಿತ್ರಸಂತೆಯಲ್ಲಿ ದೇಶದ ವಿವಿಧ ಭಾಗಗಳಿಂದ ಕಲಾವಿದರು ತಮ್ಮ ಕೃತಿಗಳನ್ನು ಪ್ರದರ್ಶಿಸಿದ್ದರು. ಅವರ ಕೃತಿಗಳು ರೂ.100 ರಿಂದ ಆರಂಭವಾಗಿ ಲಕ್ಷಾಂತರ ರೂಪಾಯಿಗಳ ಬೆಲೆಬಾಳುವಂಥಾಗಿದ್ದು ಅವು ಸಂತೆಯಲ್ಲಿನ ವಸ್ತುಗಳಂತೆ ಬಿಕರಿಯಾದ ನೆನಪು ಇನ್ನೂ ಹಸಿರಾಗಿದೆ.

ಸಾವಿರ ರೂಪಾಯಿಗೂ ಒಂದು ಕಲಾಕೃತಿ

“ಅಕಾಡೆಮಿಯ ಕಲಾ ಶಿಬಿರಗಳು ಮತ್ತು ಕಾರ್ಯಾಗಾರಗಳಲ್ಲಿ ರಚಿತವಾದ ಕಲಾಕೃತಿಗಳನ್ನು ಈ ನಾಲ್ಕು ದಿನವೂ ಪ್ರದರ್ಶಿಸಲಾಗುತ್ತದೆ. ಇಲ್ಲಿ ಕೃತಿಗಳನ್ನು ರೂ.1000 ದಿಂದ ರೂ. 30000ದ ಒಳಗಿನ ಕೈಗೆಟಕುವ ಬೆಲೆಯಲ್ಲಿ ಖರೀದಿಸಬಹುದು. ಕೊಂಡುಕೊಳ್ಳಲಾಗದಿದ್ದವರು ಕನಿಷ್ಠ ಕರ್ನಾಟಕದ ಚಿತ್ರ ಕಲಾವಿದರು ರಚಿಸಿದ ಅತ್ಯುತ್ತಮ ಕಲಾಕೃತಿಗಳನ್ನು ನೋಡಿ, ಆರಾಧಿಸಿ, ಪ್ರೀತಿಸಿ, ಕೃತಿಯ ಬಗ್ಗೆ , ಅದರ ಹಿನ್ನೆಲೆಯ ಬಗ್ಗೆ ಪ್ರಾಥಮಿಕ ತಿಳುವಳಿಕೆ ಪಡೆದುಕೊಳ್ಳಬಹುದು” ಎನ್ನುತ್ತಾರೆ ಕರ್ನಾಟಕ ಲಲಿತಕಲಾ ಅಕಾಡೆಮಿಯ ಅಧ್ಯಕ್ಷರಾದ ಕಲಾವಿದ ಪ.ಸ. ಕುಮಾರ್.

ʻಮನೆಗೊಂದು ಕಲಾಕೃತಿʼ ಪ್ರದರ್ಶನದಲ್ಲಿ ನೂರಾರು ಕಲಾವಿದರ ಆರುನೂರಕ್ಕೂ ಹೆಚ್ಚು ಕೃತಿಗಳ ಪ್ರದರ್ಶನ ಮತ್ತು ಮಾರಾಟದ ಸೌಲಭ್ಯವಿರುತ್ತದೆ. ಈ ಕಲಾಕೃತಿಗಳು ಕರ್ನಾಟಕ ಸಾಂಸ್ಕೃತಿಕ ಪರಂಪರೆಯ ಪ್ರತಿರೂಪವೆಂದೇ ಹೇಳಬಹುದು. ಇದು ಕಲೆಯನ್ನು ಜನರತ್ತ ಕೊಂಡೊಯ್ಯುವ ಒಂದು ನಮ್ರ ಪ್ರಯತ್ನ ಎನ್ನುವುದು ಪ.ಸ. ಕುಮಾರ್‌ ಅವರ ಅಭಿಪ್ರಾಯ.

ಜನರತ್ತ ಕಲೆಯನ್ನು ಕೊಂಡೊಯ್ಯುವ ಯತ್ನ

ಕಲೆಯನ್ನು ಜನರತ್ತ ಕೊಂಡೊಯ್ಯುತ್ತಿರುವ ಹಲವು ಪ್ರಯತ್ನಗಳನ್ನು ಕರ್ನಾಟಕ ಲಲಿತಕಲಾ ಅಕಾಡೆಮಿ ಈಗಾಗಲೇ ಮಾಡಿದೆ. ರಾಜ್ಯದಾದ್ಯಂತ ಕಲಾಶಾಲೆಗಳಲ್ಲಿ ಚಿತ್ರಕಲಿಕೆಯ ಶಿಬಿರ ಹಾಗೂ ಕಾರ್ಯಾಗಾರಗಳನ್ನು ನಡೆಸಿದೆ. ಆಯಾ ಪ್ರಾಂತ್ಯದ ಸಾಂಸ್ಕೃತಿಕ ಪರಂಪರೆಯ ಎಲ್ಲ ತಿರುಳನ್ನು ಬಿಂಬಿಸುವ ಕಲಾಕೃತಿಗಳ ರಚನೆಗೆ ಪ್ರೋತ್ಸಾಹ ನೀಡಿದೆ. ಅಷ್ಟೇ ಅಲ್ಲದೇ ರಾಜ್ಯಮಟ್ಟದ ಕಲಾ ಸ್ಪರ್ಧೆಗಳನ್ನು ನಡೆಸಿ, ಕಲಾವಿದರನ್ನು ಪುರಸ್ಕರಿಸಿ ಅಭಿನಂದಿಸಿ, ಪ್ರೋತ್ಸಾಹಿಸುತ್ತಿದೆ. ಇದರಿಂದಾಗಿ ಕಲಾವಿದರ ಸಮುದಾಯ ದಿನದಿಂದ ದಿನಕ್ಕೆ ಬೆಳೆಯುತ್ತಿದೆ. “ಈ ಎಲ್ಲ ಪ್ರಯತ್ನಗಳೂ ಕಲೆಯನ್ನು ಜನರತ್ತ ತೆಗೆದುಕೊಂಡು ಹೋಗುವ ಮತ್ತು ತರತಮವಿಲ್ಲದ ಕಲೆ ಪ್ರಜಾತಾಂತ್ರೀಕರಣಕ್ಕೆ ಪೂರಕವಾಗುವ ಹಾದಿಯ ಆರಂಭ ಬಿಂದುಗಳು..” ಎನ್ನುತ್ತಾರೆ ಕುಮಾರ್.‌

ಅಕಾಡೆಮಿ ಪ್ರತಿವರ್ಷ ನಾಲ್ಕು ರಾಜ್ಯಮಟ್ಟದ ಕಲಾ ಶಿಬಿರ ಹಾಗೂ ಕಾರ್ಯಾಗಾರಗಳನ್ನು ನಡೆಸುತ್ತದೆ. ಕಲಾವಿದರ ಸಮಿತಿಯೊಂದು ಈ ಶಿಬಿರಗಳಲ್ಲಿ ರಚಿತವಾದ ಕೃತಿಗಳಲ್ಲಿ ಆರುನೂರು ಕೃತಿಗಳನ್ನು ಅವುಗಳ ಗುಣಮಟ್ಟದ ಆಧಾರದ ಮೇಲೆ ಆಯ್ಕೆ ಮಾಡಿ, ಬೆಲೆಗಳನ್ನು ನಿಗದಿಪಡಿಸಿದೆ. ಹಾಗಾಗಿ ಇಲ್ಲಿ ಪ್ರದರ್ಶನಕ್ಕಿರುವ ಕೃತಿಗಳು ತನ್ನ ಶ್ರೇಷ್ಠತೆಯ ಕಾರಣದಿಂದ ಪ್ರದರ್ಶನಗೊಳ್ಳಲಿದೆ. ನೂರೈವತ್ತಕ್ಕೂ ಹೆಚ್ಚು ವೃತ್ತಿಪರ ಕಲಾವಿದರು, ಕಲಾ ಉಪಾಸಕ-ಉಪನ್ಯಾಸಕರು, ಕಲಾವಿದ್ಯಾರ್ಥಿಗಳ ಕೃತಿಗಳು ಈ ಪ್ರದರ್ಶನದಲ್ಲಿ ಕಾಣಸಿಗುತ್ತವೆ. ಕಲೆಯ ಎಲ್ಲ ಪ್ರಕಾರಗಳ ಕೃತಿಗಳು; ಅಂದರೆ, ಪೆನ್‌-ಪೆನ್ಸಿಲ್‌ನಿಂದ ರಚಿಸಿದ ರೇಖಾ ಚಿತ್ರಗಳು, ಅಕ್ರಿಲಿಕ್‌ ತೈಲವರ್ಣ ಚಿತ್ರಗಳು, ಜಲವರ್ಣ ಕೃತಿಗಳು, ಕ್ಯಾನ್ವಾಸ್‌ ಮೇಲೆ ಕೆತ್ತಿದಂಥ ಚಿತ್ರಗಳು ಇಲ್ಲಿ ಲಭ್ಯ.

"ಇವೇ ರೇಖಾಚಿತ್ರಗಳನ್ನು ಗ್ಯಾಲರಿಗಳಲ್ಲಿ ಕೊಂಡುಕೊಳ್ಳಲು ಜನಸಾಮಾನ್ಯರು ಪ್ರಯತ್ನಿಸಿದರೆ ಅವರು ನಾಲ್ಕು ಸಾವಿರ ರೂಪಾಯಿ ಕೊಡಬೇಕಾಗುತ್ತದೆ. ಅಂಥ ಚಿತ್ರಗಳು ಇಲ್ಲಿ ಸಾವಿರ ರೂಪಾಯಿಗೆ ಜನರಿಗೆ ದಕ್ಕಲಿದೆ. ಇದೇ ಮಾದರಿಯನ್ನು ಇತರ ಕಲಾಕೃತಿಗಳಿಗೂ ಅನ್ವಯಿಸಲಾಗಿದೆ” ಎಂದು ಕುಮಾರ್‌ ದ ಫೆಡರಲ್-ಕರ್ನಾಟಕದೊಂದಿಗಿನ ಮಾತುಕತೆಯ ಸಂದರ್ಭದಲ್ಲಿ ವಿವರಿಸಿದರು.

ಎಲ್ಲ ಶೈಲಿಯ ಚಿತ್ರಗಳು ಲಭ್ಯ

ಈ ಪ್ರದರ್ಶನ ಕರ್ನಾಟಕದ ಕಲಾ ಪರಂಪರೆಗೆ ಹಿಡಿದ ಕನ್ನಡಿಯಾಗಲಿದೆ. ಇದರಲ್ಲಿ ಮೈಸೂರು ಶೈಲಿಯ ಚಿತ್ರಗಳು ಸುರಪುರದ ಮಿನಿಯೇಚರ್‌ ಕಲಾಕೃತಿಗಳು, ವಿಜಯನಗರ ಶೈಲಿಯ ಕಲಾಕೃತಿಗಳು ಕಾಣ ಸಿಗುತ್ತವೆ. ಅಷ್ಟೇ ಅಲ್ಲ. ಈ ಪ್ರದರ್ಶನದ ಪ್ರಮುಖ ಆಕರ್ಷಣೆಯೆಂದರೆ; ಕಲಬುರಗಿಯ ನಾರಾಯಣ ಬಾಬುರಾವ್‌ ಮತ್ತು ಕೊಪ್ಪಳದ ರಾಜು ತೇರದಾಳರಂಥ ಕಲಾವಿದರ ಚಿತ್ರಗಳ ಪ್ರದರ್ಶನವೂ ಇರುತ್ತದೆ.

ಯಾಕೆ ಈ ಮನೆಗೊಂದು ಕಲಾಕೃತಿ ಪ್ರಯತ್ನ?

ದೇಶದ ಆರ್ಥಿಕ, ಸಾಮಾಜಿಕ ಮತ್ತು ಸಾಂಸ್ಕೃತಿಕ ಸಂದರ್ಭದಲ್ಲಿ ಒಂದು ತಪ್ಪು ಕಲ್ಪನೆ ಇದೆ. ಅಂದರೆ ಚಿತ್ರಕಲೆ ಎಂದರೆ ಅದು ಉಳ್ಳವರ ಲೋಕ. ಅಲ್ಲಿ ಜನಸಾಮಾನ್ಯರಿಗೆ ಮತ್ತು ಮಧ್ಯಮವರ್ಗದ ಕಲಾರಸಿಕರಿಗೆ ಎಟಕುವಂಥದಲ್ಲ. ಎಲ್ಲ ಕಲಾಕೃತಿಗಳಿಗೂ, ಲಕ್ಷಾಂತರ ರೂಪಾಯಿ ಮೌಲ್ಯ ಅದನ್ನು ಕೊಳ್ಳುವುದಿರಲಿ ನೋಡಲೂ ಸಿಗದಂಥ ವಾತಾವರಣ ನಿರ್ಮಾಣವಾಗಿದೆ. ಗ್ಯಾಲರಿ ಸಂಸ್ಕೃತಿ ಒಂದು ರೀತಿಯಲ್ಲಿ ಜನಸಾಮಾನ್ಯರನ್ನು ಕಲೆಯ ವಾತಾವರಣದಿಂದ ದೂರವಿಟ್ಟಿದೆ. “ಚಿತ್ರಕಲೆಯನ್ನು ಗ್ಯಾಲರಿ ಸಂಸ್ಕೃತಿಯಿಂದ ಬಿಡುಗಡೆಗೊಳಿಸಿ, ಜನರ ಸಂಸ್ಕೃತಿಯಾಗಿಸುವ ಹಾಗೂ ಆ ಮೂಲಕ ಕಲೆಯನ್ನು ಪ್ರಜಾತಾಂತ್ರೀಕರಣಗೊಳಿಸುವ ಪ್ರಯತ್ನ ಅಕಾಡೆಮಿಯದು” ಎಂದು ಕುಮಾರ್‌ ಸ್ಪಷ್ಟಪಡಿಸುತ್ತಾರೆ.

ಪ್ರಜಾತಾಂತ್ರೀಕರಣದ ಕಲ್ಪನೆಯನ್ನು ಮತ್ತಷ್ಟು ವಿಸ್ತರಿಸುವ ಕುಮಾರ್.‌ “ಈ ಮೂಲಕ, ಜನಸಾಮಾನ್ಯರಲ್ಲಿ ವಿವಿಧತೆಯಲ್ಲಿ ಏಕತೆಯ ನೆಲದ ಸಂಸ್ಕೃತಿಯ ಬಗ್ಗೆ ತಿಳಿವು ಮೂಡಿಸುವುದು, ಅವರಲ್ಲಿ ಕಲೆಯ ಬಗ್ಗೆ ವಿಸ್ತೃತವಾಗಿ ಅಲ್ಲದಿದ್ದರೂ, ಪ್ರಾಥಮಿಕ ತಿಳುವಳಿಕೆಯನ್ನು ಮೂಡಿಸಿ, ಜಗದ ಸಂಗತಿಗಳನ್ನು ತೆರೆದ ಮನಸ್ಸಿನಿಂದ ಗಮನಿಸುವಂತೆ ಮಾಡುವುದು, ಸರಳವಾಗಿಯಾದರೂ ತಮ್ಮ ಸುಸಂಸ್ಕೃತ ಬದುಕನ್ನು ಕಟ್ಟಿಕೊಂಡು ಆನಂದಿಸುವ ಮತ್ತು ಸಂತೋಷ ಮತ್ತು ನೆಮ್ಮದಿಯ ನಿಜ ಅರ್ಥವನ್ನು ಮನದಟ್ಟು ಮಾಡಿಸುವುದು…ಇವೆಲ್ಲ ಸಂಗತಿಗಳು ಅಡಕವಾಗಿದೆ” ಎಂದು ಅವರು ವಿವರಿಸುತ್ತಾರೆ.

ಸವ್ಯಸಾಚಿ ಕಲಾವಿದ

ಪ.ಸ.ಕುಮಾರ್‌ ಅವರು ನಿಜಾರ್ಥದಲ್ಲಿ ಕೂಡ ಜನರ ನಡುವಿನ ಕಲಾವಿದರು. ಕೆನ್‌ ಕಲಾಶಾಲೆಯಲ್ಲಿ ಚಿತ್ರಕಲೆಯನ್ನು ಅಭ್ಯಾಸಮಾಡಿ, ಖ್ಯಾತ ಕಲಾವಿದ ಆರ್.‌ ಎಂ. ಹಡಪದ್‌ ಅವರಲ್ಲಿ ಶಿಷ್ಯವೃತ್ತಿಯನ್ನು ಮಾಡಿ, ಬದುಕು ಕಟ್ಟಿಕೊಳ್ಳಲು ಮುದ್ರಣ ಮಾಧ್ಯಮದಲ್ಲಿ ಕಲಾವಿದರಾಗಿ ದುಡಿದವರು. ಪ್ರಜಾಮತ, ಕನ್ನಡಪ್ರಭ ಪತ್ರಿಕೆಗಳ ಮುಖ್ಯ ಚಿತ್ರಕಾರರಾಗಿ ವಿನ್ಯಾಸಕಾರರಾಗಿ ಹಲವು ಪುರವಣಿಗಳಿಗೆ ಗೌರವವನ್ನು ತಂದುಕೊಟ್ಟವರು. ಕಥೆಗಳಿಗೆ ಅರ್ಥಪೂರ್ಣ ಚಿತ್ರಗಳನ್ನು ರಚಿಸಿ, ಸಾಮಾನ್ಯ ಜನರ ಪ್ರೀತಿಯ ಚಿತ್ರಕಾರರಲ್ಲಿ ಒಬ್ಬರಾದವರು. ಇಲ್ಲಿ ಮತ್ತೊಂದು ಸಂಗತಿಯನ್ನು ಹೇಳಬೇಕು. ಇವರು ಎರಡೂ ಕೈಗಳಲ್ಲಿ ಚಿತ್ರಗಳನ್ನು ಬರೆಯಬಲ್ಲ ಸವ್ಯಸಾಚಿ. ಹಾಗೆಂದು ಇದು ಹುಟ್ಟಿನಿಂದ ರೂಢಿಸಿಕೊಂಡದ್ದಲ್ಲ. 1998ರಲ್ಲಿ ಘಟಿಸಿದ ಅಪಘಾತವೊಂದರಲ್ಲಿ ಇವರ ಬಲಗೈಗೆ ಪೆಟ್ಟಾಯಿತು. ವೈದ್ಯರು ಸದ್ಯಕ್ಕೆ ಬಲಗೈ ಬಳಸಲು ಸಾಧ್ಯವೇ ಇಲ್ಲ ಎಂದು ಬಿಟ್ಟರು. “ಮೆದುಳು ಆಜ್ಞೆ ಮಾಡಿದಂತೆ ನಡೆಯುವುದು ಬಲಗೈ ಕೆಲಸ. ಆದರೆ ಅದು ಎಡಗೈಗೆ ಅಭ್ಯಾಸವೇ ಇಲ್ಲ. ಎಡಗೈನಲ್ಲಿ ಒಂದು ವೃತ್ತವನ್ನು ರಚಿಸುವುದೂ ಕೂಡ ಅಸಾಧ್ಯ. ಇಂಥ ಸಂದರ್ಭದಲ್ಲಿ ಪ್ರಯತ್ನಿಸಿ ಎಡಗೈ ಅನ್ನು ಪಳಗಿಸಿಕೊಂಡೆ. ಚಿತ್ರಗಳನ್ನೂ ಬರೆದೆ” ಎಂದು ಕುಮಾರ್‌ ಮುಗುಳ್ನಗುತ್ತಾರೆ. ಇವರು ಎಡಗೈನಲ್ಲಿ ರಚಿಸಿದ ಕೃತಿಗಳ Markings of a Hand’- a collection of sketches by left hand ಚಿತ್ರಗಳ ಪ್ರದರ್ಶನ ನಡೆದಾಗ ಅದನ್ನು ನೋಡಲು ಬಂದ ಜನರ ಆಶ್ಚರ್ಯ ಇನ್ನೂ ಕಣ್ಣಿಗೆ ಕಟ್ಟಿದಂತಿದೆ.

Tags:    

Similar News