Actor Darshan: ವಿದೇಶಕ್ಕೆ ತೆರಳಲು ಅನುಮತಿ ನೀಡುವಂತೆ ಕೋರಿ ಕೋರ್ಟ್‌ಗೆ ನಟ ದರ್ಶನ್ ಅರ್ಜಿ
ವಿದೇಶದಲ್ಲಿ ಡೆವಿಲ್ ಸಿನಿಮಾದ ಹಾಡುಗಳ ಚಿತ್ರೀಕರಣ ಮಾಡುವ ಅಗತ್ಯವಿರುವ ಕಾರಣ ಜೂನ್ 1 ರಿಂದ 25ರವರೆಗೂ ದುಬೈ ಹಾಗೂ ಯೂರೋಪ್‌ಗೆ ತೆರಳಲು ಅನುಮತಿ ನೀಡಬೇಕು ಎಂದು ನಟ ದರ್ಶನ್ ಪರ ವಕೀಲ ಸುನೀಲ್ ಕುಮಾರ್ ಮನವಿ ಮಾಡಿದ್ದಾರೆ.;
ನಟ ದರ್ಶನ್
ಡೆವಿಲ್ ಸಿನಿಮಾ ಚಿತ್ರೀಕರಣ ಮಾಡಲು ವಿದೇಶಕ್ಕೆ ಪ್ರಯಾಣಿಸಲು ಅನುಮತಿ ನೀಡಬೇಕೆಂದು ರೇಣುಕಾಸ್ವಾಮಿ ಕೊಲೆ ಪ್ರಕರಣದ ಆರೋಪಿ ನಟ ದರ್ಶನ್ ನಗರದ 57ನೇ ಸಿಸಿಹೆಚ್ ಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿದ್ದಾರೆ.
ವಿದೇಶದಲ್ಲಿ ಡೆವಿಲ್ ಸಿನಿಮಾದ ಹಾಡುಗಳ ಚಿತ್ರೀಕರಣ ಮಾಡುವ ಅಗತ್ಯವಿರುವ ಕಾರಣ ಜೂನ್ 1ರಿಂದ 25ರವರೆಗೂ ದುಬೈ ಹಾಗೂ ಯೂರೋಪ್‌ಗೆ ತೆರಳಲು ಅನುಮತಿ ನೀಡಬೇಕು ಎಂದು ಸಿಆರ್ಪಿಸಿ ಸೆಕ್ಷನ್ 439(1) (b) ಅಡಿಯಲ್ಲಿ ನಟ ದರ್ಶನ್ ಪರ ವಕೀಲ ಸುನೀಲ್ ಕುಮಾರ್ ನ್ಯಾಯಾಲಯಕ್ಕೆ ಮನವಿ ಮಾಡಿದ್ದು ಬುಧವಾರ(ಮೇ28) ದಂದು ಅರ್ಜಿ ವಿಚಾರಣೆಗೆ ಬರುವ ಸಾಧ್ಯತೆ ಇದೆ.
ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಆರೋಪಿಯಾಗಿರುವ ನಟ ದರ್ಶನ್‌ಗೆ ದೇಶದೊಳಗೆ ಪ್ರಯಾಣ ಮಾಡಲು ಹೈಕೋರ್ಟ್ ಅನುಮತಿ ನೀಡಿತ್ತು. ಆದರೆ ಇದೀಗ ವಿದೇಶಗಳಲ್ಲಿ ಚಿತ್ರೀಕರಣ ಮಾಡಲು ಅನುಮತಿ ಕೇಳಿ ಅರ್ಜಿ ಸಲ್ಲಿಸಲಾಗಿದೆ.
ಕೊಲೆ ಪ್ರಕರಣದ ಆರೋಪಿಗಳಿಗೆ ಹೈಕೋರ್ಟ್ ಜಾಮೀನು ನೀಡಿರುವುದನ್ನು ಪ್ರಶ್ನಿಸಿ ರಾಜ್ಯ ಪೊಲೀಸ್ ಇಲಾಖೆ ಸುಪ್ರೀಂ ಕೋರ್ಟ್‌ಗೆ ಮನವಿ ಸಲ್ಲಿಸಿತ್ತು. ವಿಚಾರಣೆ ನಡೆಸಿದ ಕೋರ್ಟ್ ಬೇಸಿಗೆ ರಜೆ ಇರುವ ಕಾರಣ ಜುಲೈ 14ರ ನಂತರ ವಿಚಾರಣೆ ನಡೆಸಲಾಗುವುದು ಎಂದು ತಿಳಿಸಿತ್ತು. ಇದರಿಂದ ನಟ ದರ್ಶನ್ ಸೇರಿದಂತೆ 17 ಮಂದಿ ನಿಟ್ಟುಸಿರು ಬಿಡುವಂತಾಗಿತ್ತು.
ಹೆಚ್ಚವರಿ ಸಾಕ್ಷ್ಯ ಲಭ್ಯ
ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ತನಿಖಾಧಿಕಾರಿ ಸಹಾಯಕ ಪೊಲೀಸ್ ಆಯುಕ್ತ ಚಂದನ್ ಕುಮಾರ್ 132 ಪುಟಗಳ ಹೆಚ್ಚುವರಿ ದೋಷಾರೋಪ ಪಟ್ಟಿ ಸಲ್ಲಿಸಿದ್ದು ರಾಜ್ಯ ಪೊಲೀಸರು ಸುಪ್ರೀಂ ಕೋರ್ಟ್‌ನಲ್ಲಿ ವಾದಿಸುವ ಸಾಧ್ಯತೆ ಇದೆ. ಕೊಲೆ ಬಳಿಕ ಶೆಡ್‌ನಲ್ಲಿ ದರ್ಶನ್ ಪೋಟೋ ತೆಗೆಸಿಕೊಂಡಿದ್ದರು. ಆದರೆ ಗೊತ್ತಾಗಬಾರದು ಎಂದು ಪೋಟೋ ಅಳಿಸಿ ಹಾಕಲಾಗಿತ್ತು. ತನಿಖಾಧಿಕಾರಿಗಳು ಮೊಬೈಲ್‌ನ್ನು ಸೈಬರ್ ಪ್ರಯೋಗಾಲಯಕ್ಕೆ ಕಳಿಸಿದ್ದರು. ಅಳಿಸಿ ಹೋಗಿದ್ದ ಫೋಟೋ, ಡೇಟಾ, ಎಲ್ಲವನ್ನು ಮರಳಿಪಡೆಯಲಾಗಿದ್ದು ದರ್ಶನ್ ಶೆಡ್‌ನಲ್ಲಿ ಇದ್ದರು ಎನ್ನುವುದಕ್ಕೆ ಪೂರಕ ಸಾಕ್ಷ್ಯ ಸಿಕ್ಕಂತಾಗಿದೆ.