Honey Trap | 'ಹನಿ ಟ್ರ್ಯಾಪ್'ನಲ್ಲಿ ನ್ಯಾಯಾಧೀಶ: ವಕೀಲರ ಸಂಘದ ತುರ್ತು ಸಭೆ

ನ್ಯಾಯಾಂಗ ವ್ಯವಸ್ಥೆಯ ಕೆಲವು ಗಂಭೀರ ವಿಚಾರಗಳನ್ನು ಚರ್ಚಿಸುವ ಜರೂರು ಹಿನ್ನೆಲೆಯಲ್ಲಿ ಬೆಂಗಳೂರು ವಕೀಲರ ಸಂಘದ ಸರ್ವಸದಸ್ಯರ ತುರ್ತು ಸಭೆ ಕರೆಯಲಾಗಿದೆ.;

Update: 2025-03-22 06:31 GMT

ಎಎಬಿ

ರಾಜ್ಯದಲ್ಲಿ ಹನಿಟ್ರ್ಯಾಪ್‌ ಬಹಳಷ್ಟು ಸುದ್ದಿ ಮಾಡುತ್ತಿದ್ದು,ಇದೀಗ ನ್ಯಾಯಾಧೀಶರೊಬ್ಬರು ಹನಿ ಟ್ರ್ಯಾಪ್‌ನಲ್ಲಿ ಸಿಲುಕಿದ್ದಾರೆ ಮತ್ತು ದೆಹಲಿ ಹೈಕೋರ್ಟ್ ನ್ಯಾಯಮೂರ್ತಿ ಯಶವಂತ ವರ್ಮಾ ಅವರ ನಿವಾಸದಲ್ಲಿ ಅಪಾರ ಪ್ರಮಾಣದ ನಗದು ಪತ್ತೆಯಾಗಿದೆ ಎಂಬ ಮಾಧ್ಯಮ ವರದಿಗಳ ಬೆನ್ನಲ್ಲೇ; 'ಉನ್ನತ ನ್ಯಾಯಾಂಗ ವ್ಯವಸ್ಥೆಯಲ್ಲಿ ಭಾರಿ ಭ್ರಷ್ಟಾಚಾರ ತಾಂಡವವಾಡುತ್ತಿದೆ' ಎಂದು ಕಳವಳ ವ್ಯಕ್ತಪಡಿಸಿರುವ, ಬೆಂಗಳೂರು ವಕೀಲರ ಸಂಘ (ಎಎಬಿ) ಆ ಕುರಿತು ಚರ್ಚಿಸಲು ಮಾ.24ರಂದು ಸರ್ವಸದಸ್ಯರ ತುರ್ತು ಸಭೆ ಕರೆದಿದೆ.

'ನ್ಯಾಯಾಂಗ ವ್ಯವಸ್ಥೆಯ ಕೆಲವು ಗಂಭೀರ ವಿಚಾರಗಳನ್ನು ಚರ್ಚಿಸುವ ಜರೂರು ಇದ್ದು, ಬೆಂಗಳೂರು ವಕೀಲರ ಸಂಘದ ಬೈ-ಲಾದ (ಉಪ ನಿಯಮ) ಕಲಂ 17ಎ ಅಡಿಯಲ್ಲಿ ಸರ್ವಸದಸ್ಯರ ತುರ್ತು ಸಭೆ ಕರೆಯಲಾಗಿದೆ' ಎಂದು ಸಂಘದ ಅಧ್ಯಕ್ಷ ವಿವೇಕ್ ಸುಬ್ಬಾರೆಡ್ಡಿ ಶುಕ್ರವಾರ ನೋಟಿಸ್‌ ಹೊರಡಿಸಿದ್ದಾರೆ.

ಸಭೆಯಲ್ಲಿ ಚರ್ಚಿಸುವ ಪ್ರಮುಖ ವಿಷಯಗಳು

'ನನ್ನನ್ನು ಹನಿಟ್ರ್ಯಾಪ್‌ನಲ್ಲಿ ಸಿಲುಕಿಸಲಾಗಿದೆ' ಎಂದು ಮಂತ್ರಿಯೊಬ್ಬರು ವಿಧಾನಸಭೆಯಲ್ಲಿ ಹೇಳಿಕೆ ನೀಡುವ ವೇಳೆ, 'ಒಟ್ಟು 48 ಜನರ ಸಿ.ಡಿ ಇದ್ದು, ಅದರಲ್ಲಿ ರಾಜಕಾರಣಿಗಳು, ನ್ಯಾಯಾಧೀಶರೂ ಇದ್ದಾರೆ' ಎಂದು ಹೇಳಿರುವುದು ದುರದೃಷ್ಟಕರ. 'ಇತ್ತೀಚಿನ ದಿನಗಳಲ್ಲಿ ನ್ಯಾಯಾಂಗ ವ್ಯವಸ್ಥೆಯಲ್ಲಿ ಭಾರಿ ಭ್ರಷ್ಟಾಚಾರ ತಾಂಡವವಾಡುತ್ತಿದ್ದು, ತೀರಾ ಕಳವಳಕಾರಿ. ವಿಚಾರಣಾ ಹಂತದ ನ್ಯಾಯಾಲಯಗಳಲ್ಲಿಯೂ ಭ್ರಷ್ಟಾಚಾರದ ಆರೋಪಗಳು ಮೇರೆ ಮೀರಿದ್ದು, ಇದನ್ನು ತಡೆಗಟ್ಟಲು ಸೂಕ್ತ ಕ್ರಮಗಳ ಅಗತ್ಯದ ಬಗ್ಗೆ ಚರ್ಚಿಸಬೇಕಿದೆ. ಸುಪ್ರೀಂ ಕೋರ್ಟ್ ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಿ ಕ್ರಮ ಕೈಗೊಳ್ಳಬೇಕಿದೆ' ಎಂದು ಅವರು ಹೇಳಿದ್ದಾರೆ.

ಕರ್ನಾಟಕ ಹೈಕೋರ್ಟ್ ನ್ಯಾಯಮೂರ್ತಿಯೊಬ್ಬರು ಕಳೆದ ರೋಸ್ಟರ್ ವೇಳೆ ಆರ್‌ಎಸ್‌ಎ ವಿಭಾಗದಲ್ಲಿ ನಿಯುಕ್ತಿಗೊಂಡು ಪ್ರಕರಣಗಳ ವಿಚಾರಣೆ ನಡೆಸಿದಾಗ ನೂರಾರು ಪ್ರಕರಣಗಳನ್ನು ಅರ್ಧಂಬರ್ಧ ವಿಚಾರಣೆ ನಡೆಸಿ ಅವುಗಳನ್ನು ಮುಂದಿನ ವಿಚಾರಣೆಗಾಗಿ ತಮ್ಮ ಬಳಿಯೇ ಇರಿಸಿಕೊಳ್ಳುವ ಮೂಲಕ 'ಪಾರ್ಟ್ ಹರ್ಡ್' ಪ್ರಕ್ರಿಯೆ ನಡೆಸಿರುವುದು ಆಘಾತಕಾರಿಯಾಗಿದೆ. ಈ ಬಗ್ಗೆ ಮುಖ್ಯ ನ್ಯಾಯಮೂರ್ತಿಗಳು ಗಮನ ಸೆಳೆಯುವ ಬಗ್ಗೆಯೂ ಸಭೆಯಲ್ಲಿ ಚರ್ಚಿಸಬೇಕಿದೆ ಎಂದೂ ಅವರು ಹೇಳಿದ್ದಾರೆ.

Tags:    

Similar News