ವಿರಾಟ್ ಕೊಹ್ಲಿಯ ಟೆಸ್ಟ್ ವೃತ್ತಿಜೀವನದ ಪ್ರಮುಖ ಮೈಲಿಗಲ್ಲುಗಳು ಮತ್ತು ಸ್ಮರಣೀಯ ಕ್ಷಣಗಳು

ಕೊಹ್ಲಿ 68 ಟೆಸ್ಟ್ ಪಂದ್ಯಗಳಲ್ಲಿ ಭಾರತವನ್ನು ಮುನ್ನಡೆಸಿ, 40 ಗೆಲುವುಗಳೊಂದಿಗೆ ಅತ್ಯಂತ ಯಶಸ್ವಿ ನಾಯಕರಾಗಿ ಹೊರಹೊಮ್ಮಿದ್ದಾರೆ. ಇದು ಹಿಂದಿನ ಸಾಧನೆಗಳಿಗೆ ಹೋಲಿಸಿದರೆ ಅತ್ಯುತ್ತಮ ಪ್ರದರ್ಶನವಾಗಿದೆ.;

Update: 2025-05-12 14:33 GMT
ವಿರಾಟ್ ಕೊಹ್ಲಿ

ಭಾರತೀಯ ಕ್ರಿಕೆಟ್‌ನ ದಿಗ್ಗಜ ವಿರಾಟ್ ಕೊಹ್ಲಿ ಅವರು ಟೆಸ್ಟ್ ಕ್ರಿಕೆಟ್‌ಗೆ ವಿದಾಯ ಹೇಳಿದ್ದಾರೆ. ಕ್ರಿಕೆಟ್ ಜಗತ್ತಿಗೆ ಇದು ಅಚ್ಚರಿಯ ಸಂಗತಿಯಾಗಿದೆ. ಅವರ 14 ವರ್ಷಗಳ ಸುದೀರ್ಘ ಮತ್ತು ರೋಚಕ ವೃತ್ತಿಜೀವನದ ಕೆಲವು ಪ್ರಮುಖ ಕ್ಷಣಗಳನ್ನು ಸ್ಮರಿಸಲಾಗಿದೆ. ಯುವ ಉತ್ಸಾಹ ಮತ್ತು ಆಕ್ರಮಣಕಾರಿ ಮನೋಭಾವದೊಂದಿಗೆ ಟೆಸ್ಟ್ ಕ್ರಿಕೆಟ್‌ಗೆ ಕಾಲಿಟ್ಟ ಕೊಹ್ಲಿ, ಭಾರತ ತಂಡವನ್ನು ಹೊಸ ಎತ್ತರಕ್ಕೆ ಕೊಂಡೊಯ್ದರು ಮತ್ತು ಈ ಫಾರ್ಮ್ಯಾಟ್‌ಗೆ ವಿಶ್ವಾದ್ಯಂತ ಹೊಸ ಆಯಾಮವನ್ನು ನೀಡಿದವರಾಗಿದ್ದಾರೆ.


ಕೊಹ್ಲಿ 68 ಟೆಸ್ಟ್ ಪಂದ್ಯಗಳಲ್ಲಿ ಭಾರತವನ್ನು ಮುನ್ನಡೆಸಿ, 40 ಗೆಲುವುಗಳೊಂದಿಗೆ ಅತ್ಯಂತ ಯಶಸ್ವಿ ನಾಯಕರಾಗಿ ಹೊರಹೊಮ್ಮಿದ್ದಾರೆ. ಇದು ಹಿಂದಿನ ಸಾಧನೆಗಳಿಗೆ ಹೋಲಿಸಿದರೆ ಅತ್ಯುತ್ತಮ ಪ್ರದರ್ಶನವಾಗಿದೆ.  

ಪ್ರಮುಖ ಸ್ಮರಣೀಯ ಕ್ಷಣಗಳು ಇಲ್ಲಿವೆ

ಟೆಸ್ಟ್ ಚೊಚ್ಚಲ ಪಂದ್ಯ (2011): 2011 ರ ಏಕದಿನ ವಿಶ್ವಕಪ್ ಗೆಲುವಿನ ನಂತರ, ಕೊಹ್ಲಿ ಜೂನ್ 20ರಂದು ವೆಸ್ಟ್ ಇಂಡೀಸ್ ವಿರುದ್ಧ ಟೆಸ್ಟ್‌ಗೆ ಪಾದಾರ್ಪಣೆ ಮಾಡಿದರು. ಆರಂಭದಲ್ಲಿ ಅಷ್ಟೇನೂ ಯಶಸ್ಸು ಕಾಣದಿದ್ದರೂ, ಅವರ ಭವಿಷ್ಯದ ಸಾಧನೆಗಳಿಗೆ ಇದು ನಾಂದಿ ಹಾಡಿತು.

ಸಿಡ್ನಿಯಲ್ಲಿ ಅಭಿಮಾನಿಗಳೊಂದಿಗೆ ಗಲಾಟೆ (2011): ಆಸ್ಟ್ರೇಲಿಯಾ ಪ್ರವಾಸದಲ್ಲಿ ಅಭಿಮಾನಿಗಳ ಟೀಕೆಗೆ ಪ್ರತಿಕ್ರಿಯೆಯಾಗಿ ಅಸಭ್ಯ ಗೆಸ್ಚರ್ ಮಾಡಿ ದಂಡನಗೆ ಒಳಗಾಗಿದ್ದರು. ಇದು ಅವರ ಆಕ್ರಮಣಕಾರಿ ಮನೋಭಾವದ ಆರಂಭಿಕ ಸೂಚನೆಯಾಗಿತ್ತು.

ಆಸ್ಟ್ರೇಲಿಯಾದಲ್ಲಿ ಮೊದಲ ಟೆಸ್ಟ್ ಶತಕ (2012): ಅಡಿಲೇಡ್‌ನಲ್ಲಿ ತಮ್ಮ ಮೊದಲ ಟೆಸ್ಟ್ ಶತಕ ಬಾರಿಸಿ, ಭಾರತದ ಭವಿಷ್ಯದ ಬ್ಯಾಟಿಂಗ್ ಭರವಸೆಯಾಗಿ ಹೊರಹೊಮ್ಮಿದ್ದರು..

ದಕ್ಷಿಣ ಆಫ್ರಿಕಾದಲ್ಲಿ ಭರವಸೆಯ ಪ್ರದರ್ಶನ (2013): ದಕ್ಷಿಣ ಆಫ್ರಿಕಾ ವಿರುದ್ಧ ಜೋಹಾನ್ಸ್‌ಬರ್ಗ್‌ನಲ್ಲಿ 119 ಮತ್ತು 96 ರನ್‌ಗಳ ಕೊಡುಗೆ ನೀಡಿ ತಮ್ಮ ಸಾಮರ್ಥ್ಯವನ್ನು ಸಾಬೀತುಪಡಿಸಿದ್ದರು.

ಇಂಗ್ಲೆಂಡ್‌ನಲ್ಲಿನ ವೈಫಲ್ಯ ಮತ್ತು ಕಂಬ್ಯಾಕ್ (2014 & 2018): 2014 ರಲ್ಲಿ ಇಂಗ್ಲೆಂಡ್‌ನಲ್ಲಿ ಕಳಪೆ ಪ್ರದರ್ಶನ ನೀಡಿದ ನಂತರ, 2018 ರ ಪ್ರವಾಸದಲ್ಲಿ ಅದ್ಭುತವಾಗಿ ಚೇತರಿಸಿಕೊಂಡು 593 ರನ್ ಗಳಿಸಿ ಪ್ರಾಬಲ್ಯ ಮೆರೆದಿದ್ದರು.

ಆಸ್ಟ್ರೇಲಿಯಾದಲ್ಲಿ ಉತ್ತುಂಗ ಮತ್ತು ಇತಿಹಾಸ ಸೃಷ್ಟಿ (2014-15 & 2018-19): 2014-15 ರ ಆಸ್ಟ್ರೇಲಿಯಾ ಪ್ರವಾಸದಲ್ಲಿ ಭರ್ಜರಿ ಪ್ರದರ್ಶನ ನೀಡಿ, 692 ರನ್ ಗಳಿಸಿದ್ದರು. ಅವರ ನಾಯಕತ್ವದಲ್ಲಿ 2018-19 ರಲ್ಲಿ ಆಸ್ಟ್ರೇಲಿಯಾದಲ್ಲಿ ಟೆಸ್ಟ್ ಸರಣಿ ಗೆದ್ದ ಮೊದಲ ಏಷ್ಯಾದ ತಂಡ ಎಂಬ ಇತಿಹಾಸವನ್ನು ಭಾರತ ಸೃಷ್ಟಿಸಿತ್ತು.

ಅತ್ಯಧಿಕ ಟೆಸ್ಟ್ ಸ್ಕೋರ್ (2019): ಪುಣೆಯಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ 254* ರನ್ ಗಳಿಸಿ ತಮ್ಮ ವೈಯಕ್ತಿಕ ಅತ್ಯಧಿಕ ಟೆಸ್ಟ್ ಸ್ಕೋರ್ ದಾಖಲಿಸಿದ್ದರು.

ಲಾರ್ಡ್ಸ್‌ನಲ್ಲಿ ಸ್ಮರಣೀಯ ಗೆಲುವು (2021): ಇಂಗ್ಲೆಂಡ್ ವಿರುದ್ಧ ಲಾರ್ಡ್ಸ್‌ನಲ್ಲಿ ಐತಿಹಾಸಿಕ 151 ರನ್‌ಗಳ ಗೆಲುವನ್ನು ಸಾಧಿಸಿದರು, ಇದು ಕೊಹ್ಲಿಯ ನಾಯಕತ್ವದ ಪ್ರಮುಖ ಗೆಲುವುಗಳಲ್ಲಿ ಒಂದಾಗಿದೆ.

ಸ್ಟಂಪ್-ಮೈಕ್ ಘಟನೆ (2022): ದಕ್ಷಿಣ ಆಫ್ರಿಕಾ ವಿರುದ್ಧ ಕೇಪ್ ಟೌನ್‌ನಲ್ಲಿ ಅಂಪೈರ್​ ನಿರ್ಣಯವೊಂದರ ಬಗ್ಗೆ ಅಸಮಾಧಾನಗೊಂಡು ಸ್ಟಂಪ್ ಮೈಕ್ ಬಳಿ ನೀಡಿದ ಹೇಳಿಕೆ ವಿವಾದಕ್ಕೆ ಕಾರಣವಾಗಿತ್ತು.

ಕೊನೆಯ ಹಂತದ ಹೋರಾಟ: ವೃತ್ತಿಜೀವನದ ಕೊನೆಯ ಹಂತದಲ್ಲಿ ಬ್ಯಾಟಿಂಗ್‌ನಲ್ಲಿ ಕೆಲವು ಏರಿಳಿತಗಳನ್ನು ಕಂಡರೂ, ಅವರ ಹೋರಾಟದ ಮನೋಭಾವ ಎಂದಿಗೂ ಕಡಿಮೆಯಾಗಲಿಲ್ಲ.

ವಿರಾಟ್ ಕೊಹ್ಲಿ ಅವರ ಟೆಸ್ಟ್ ವೃತ್ತಿಜೀವನವು ಭಾರತೀಯ ಕ್ರಿಕೆಟ್‌ಗೆ ಹೊಸ ಯುಗ ಸೃಷ್ಟಿಸಿದೆ. ಅವರ ಆಕ್ರಮಣಕಾರಿ ನಾಯಕತ್ವ, ಕಠಿಣ ಪರಿಶ್ರಮ, ಮತ್ತು ಬ್ಯಾಟಿಂಗ್ ಸಾಧನೆಗಳು ಅವರನ್ನು ಆಧುನಿಕ ಟೆಸ್ಟ್ ಕ್ರಿಕೆಟ್‌ನ ಶ್ರೇಷ್ಠರಲ್ಲಿ ಒಬ್ಬರನ್ನಾಗಿ ಮಾಡಿವೆ. ಅವರ ದಾಖಲೆಗಳು ಮತ್ತು ಮರೆಯಲಾಗದ ಕ್ಷಣಗಳು ಭಾರತೀಯ ಕ್ರಿಕೆಟ್ ಇತಿಹಾಸದಲ್ಲಿ ಸದಾ ಹಸಿರಾಗಿ ಉಳಿಯಲಿವೆ.  

Tags:    

Similar News