Virat Kohli: ಟೆಸ್ಟ್ ಕ್ರಿಕೆಟ್‌ನಿಂದ ವಿರಾಟ್ ಕೊಹ್ಲಿ ನಿವೃತ್ತಿ; ಭಾರತೀಯ ಕ್ರಿಕೆಟ್‌ನಲ್ಲಿ ಒಂದು ಯುಗದ ಭಾವನಾತ್ಮಕ ಅಂತ್ಯ

ವಿರಾಟ್ ಕೊಹ್ಲಿ ತಮ್ಮ ನಿವೃತ್ತಿ ಸಂದೇಶದಲ್ಲಿ, ಟೆಸ್ಟ್ ಕ್ರಿಕೆಟ್‌ನಲ್ಲಿ ಕಳೆದ 14 ವರ್ಷಗಳ ತಮ್ಮ ಪ್ರಯಾಣವನ್ನು ಸ್ಮರಿಸಿಕೊಂಡಿದ್ದಾರೆ. ಈ ಫಾರ್ಮ್ಯಾಟ್ ತಮ್ಮ ವೃತ್ತಿಜೀವನವನ್ನು ರೂಪಿಸಿದೆ ಮತ್ತು ಜೀವನದ ಅನೇಕ ಪಾಠಗಳನ್ನು ಕಲಿಸಿದೆ ಎಂದು ಹೇಳಿದ್ದಾರೆ.;

Update: 2025-05-12 06:56 GMT

ಆರ್​ಸಿಬಿಯ ಎಕ್ಸ್​ ಖಾತೆಯಿಂದ.

ಭಾರತೀಯ ಕ್ರಿಕೆಟ್ ತಂಡದ ಸ್ಟಾರ್​ ಆಟಗಾರ ಮತ್ತು ಮಾಜಿ ನಾಯಕ ವಿರಾಟ್ ಕೊಹ್ಲಿ ಅವರು ಟೆಸ್ಟ್ ಕ್ರಿಕೆಟ್‌ನಿಂದ ನಿವೃತ್ತಿ ಘೋಷಿಸಿದ್ದಾರೆ. 14 ವರ್ಷಗಳ ಕಾಲ ಟೆಸ್ಟ್ ಮಾದರಿಯಲ್ಲಿ ತಮ್ಮ ಅದ್ಭುತ ಪ್ರದರ್ಶನದ ಮೂಲಕ ವಿಶ್ವದಾದ್ಯಂತ ಅಭಿಮಾನಿಗಳನ್ನು ಗಳಿಸಿದ್ದ ಕೊಹ್ಲಿ, ತಮ್ಮ ಈ ತೀರ್ಮಾನವನ್ನು ಸಾಮಾಜಿಕ ಮಾಧ್ಯಮದ ಮೂಲಕ ಭಾವನಾತ್ಮಕವಾಗಿ ಹಂಚಿಕೊಂಡಿದ್ದಾರೆ. ಅವರ ಈ ನಿರ್ಧಾರವು ಭಾರತೀಯ ಕ್ರಿಕೆಟ್ ವಲಯದಲ್ಲಿ ಆಘಾತ ಮೂಡಿಸಿದ್ದು, ಟೆಸ್ಟ್ ಕ್ರಿಕೆಟ್‌ನಲ್ಲಿ ಒಂದು ಮಹತ್ವದ ಯುಗದ ಅಂತ್ಯ ಎಂದೇ ಹೇಳಬಹುದು.

ವಿರಾಟ್ ಕೊಹ್ಲಿ ತಮ್ಮ ನಿವೃತ್ತಿ ಸಂದೇಶದಲ್ಲಿ, ಟೆಸ್ಟ್ ಕ್ರಿಕೆಟ್‌ನಲ್ಲಿ ಕಳೆದ 14 ವರ್ಷಗಳ ತಮ್ಮ ಪ್ರಯಾಣವನ್ನು ಸ್ಮರಿಸಿಕೊಂಡಿದ್ದಾರೆ. ಈ ಫಾರ್ಮ್ಯಾಟ್ ತಮ್ಮ ವೃತ್ತಿಜೀವನವನ್ನು ರೂಪಿಸಿದೆ ಮತ್ತು ಜೀವನದ ಅನೇಕ ಪಾಠಗಳನ್ನು ಕಲಿಸಿದೆ ಎಂದು ಹೇಳಿದ ಅವರು, ಟೆಸ್ಟ್​ ಕ್ರಿಕೆಟ್​ ತಮ್ಮ ಆಪ್ತವಾಗಿರುವ ಕ್ರಿಕೆಟ್​ ಮಾದರಿ ಎಂದೂ ಅವರು ಹೇಳಿಕೊಂಡಿದ್ದಾರೆ. ಸಾಕಷ್ಟು ಸಮಯಗಳ ಕಾಲ ಯೋಚನೆ ಮಾಡಿದ ನಂತರ ಈ ಕಠಿಣ ನಿರ್ಧಾರ ತೆಗೆದುಕೊಂಡಿರುವುದಾಗಿ ಅವರು ತಿಳಿಸಿದ್ದು, ಟೆಸ್ಟ್ ಕ್ರಿಕೆಟ್‌ನ ಸವಾಲುಗಳು, ಶಾಂತ ಕ್ಷಣಗಳು ಮತ್ತು ಸಾಧನೆಯ ತೃಪ್ತಿ ಯಾವಾಗಲೂ ನೆನಪಿನಲ್ಲಿ ಉಳಿಯುತ್ತದೆ ಎಂದು ಬರೆದುಕೊಂಡಿದ್ದಾರೆ. ತಮ್ಮ ಪ್ರಯಾಣದುದ್ದಕ್ಕೂ ಬೆಂಬಲಿಸಿದ ತಂಡದ ಸದಸ್ಯರು, ಕೋಚ್‌ಗಳು, ಅಭಿಮಾನಿಗಳು ಮತ್ತು ಬಿಸಿಸಿಐಗೆ ಕೃತಜ್ಞತೆ ಸಲ್ಲಿಸಿದ್ದಾರೆ.

ಭಾರತ ತಂಡದಲ್ಲಿ ಬದಲಾವಣೆ

ವಿರಾಟ್ ಕೊಹ್ಲಿ ಅವರ ಈ ನಿವೃತ್ತಿಯಿಂದಾಗಿ ಭಾರತೀಯ ಟೆಸ್ಟ್ ಕ್ರಿಕೆಟ್ ತಂಡದಲ್ಲಿ ದೊಡ್ಡ ಪರಿವರ್ತನೆ ಆಗಲಿದೆ. ಇತ್ತೀಚೆಗಷ್ಟೇ ತಂಡದ ನಾಯಕ ರೋಹಿತ್ ಶರ್ಮಾ ಮತ್ತು ಆರ್. ಅಶ್ವಿನ್ ಕೂಡ ಟೆಸ್ಟ್ ಕ್ರಿಕೆಟ್‌ನಿಂದ ದೂರ ಸರಿದಿದ್ದರು. ಈ ಮೂವರು ದಿಗ್ಗಜರ ನಿರ್ಗಮನದೊಂದಿಗೆ ಭಾರತೀಯ ಟೆಸ್ಟ್ ತಂಡವು ಇದೀಗ ಯುವ ಆಟಗಾರರೊಂದಿಗೆ ಹೊಸ ಅಧ್ಯಾಯ ಆರಂಭಿಸಲಿದೆ. ಜೂನ್ 20ರಿಂದ ಇಂಗ್ಲೆಂಡ್ ವಿರುದ್ಧ ಆರಂಭವಾಗಲಿರುವ ಟೆಸ್ಟ್ ಸರಣಿಯಲ್ಲಿ ಕೊಹ್ಲಿ ಮತ್ತು ರೋಹಿತ್ ಇಬ್ಬರೂ ಇಲ್ಲದಿರುವುದು ತಂಡಕ್ಕೆ ದೊಡ್ಡ ಸವಾಲಾಗಬಹುದು.

ಕೊಹ್ಲಿಯ ಟೆಸ್ಟ್​ ಸಾಧನೆಗಳು

ವಿರಾಟ್ ಕೊಹ್ಲಿ ಟೆಸ್ಟ್ ಕ್ರಿಕೆಟ್‌ನಲ್ಲಿ ಭಾರತದ ಪರ ನಾಲ್ಕನೇ ಅತಿ ಹೆಚ್ಚು ರನ್ ಗಳಿಸಿದ ಆಟಗಾರ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಅವರಿಗಿಂತ ಮುಂದೆ ಸಚಿನ್ ತೆಂಡೂಲ್ಕರ್, ರಾಹುಲ್ ದ್ರಾವಿಡ್ ಮತ್ತು ಸುನಿಲ್ ಗವಾಸ್ಕರ್ ಮಾತ್ರ ಇದ್ದಾರೆ. ಕೊಹ್ಲಿ ಅವರು 2011 ರಲ್ಲಿ, ಭಾರತ ಏಕದಿನ ವಿಶ್ವಕಪ್ ಗೆದ್ದ ಕೇವಲ ಎರಡು ತಿಂಗಳ ನಂತರ, ಜಮೈಕಾದಲ್ಲಿ ವೆಸ್ಟ್ ಇಂಡೀಸ್ ವಿರುದ್ಧ ಟೆಸ್ಟ್ ಕ್ರಿಕೆಟ್‌ಗೆ ಪಾದಾರ್ಪಣೆ ಮಾಡಿದ್ದರು.

ವರ್ಷದ ಜನವರಿಯಲ್ಲಿ ಸಿಡ್ನಿ ಕ್ರಿಕೆಟ್ ಮೈದಾನದಲ್ಲಿ ಆಸ್ಟ್ರೇಲಿಯಾ ವಿರುದ್ಧ ಅವರು ಕೊನೇ ಟೆಸ್ಟ್​ ಆಡಿದ್ದರು. ಒಟ್ಟು 123 ಟೆಸ್ಟ್ ಪಂದ್ಯಗಳನ್ನು ಆಡಿರುವ ವಿರಾಟ್ ಕೊಹ್ಲಿ, 46.85 ರ ಗಮನಾರ್ಹ ಸರಾಸರಿಯಲ್ಲಿ 9,230 ರನ್‌ಗಳನ್ನು ಗಳಿಸಿದ್ದಾರೆ. ಈ ಬೃಹತ್ ರನ್ ಪಟ್ಟಿಯಲ್ಲಿ 30 ಶತಕಗಳು ಮತ್ತು 31 ಅರ್ಧಶತಕಗಳು ಸೇರಿವೆ. ಅವರ ಅತ್ಯುತ್ತಮ ವೈಯಕ್ತಿಕ ಸ್ಕೋರ್ 254 ರನ್ (ಅಜೇಯ), 2019ರಲ್ಲಿ ಪುಣೆಯಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ಈ ಸಾಧನೆ ಮಾಡಿದ್ದರು.

ವರದಿಗಳ ಪ್ರಕಾರ, ವಿರಾಟ್ ಕೊಹ್ಲಿ ಅವರು ತಮ್ಮ ನಿವೃತ್ತಿ ಘೋಷಣೆಗೆ ಒಂದು ದಿನ ಮೊದಲು, ಅಂದರೆ ಶನಿವಾರ (ಮೇ 10) ರಂದು ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಗೆ ತಮ್ಮ ನಿರ್ಧಾರದ ಕುರಿತು ತಿಳಿಸಿದ್ದರು. ಬಿಸಿಸಿಐನ ಹಿರಿಯ ಅಧಿಕಾರಿಯೊಬ್ಬರು ಅವರ ನಿರ್ಧಾರವನ್ನು ಪುನರ್​ಪರಿಶೀಲನೆ ಮಾಡುವಂತೆ ಮನವಿ ಮಾಡಿದ್ದರೂ, ಕೊಹ್ಲಿ ತಮ್ಮ ನಿಲುವಿನಲ್ಲಿ ದೃಢವಾಗಿ ಉಳಿದರು ಎನ್ನಲಾಗಿದೆ.

ಅಭಿಮಾನಿಗಳಿಗೆ ಬೇಸರ

ಕೊಹ್ಲಿ ಅವರ ನಿವೃತ್ತಿ ಘೋಷಣೆಯ ನಂತರ ಸಾಮಾಜಿಕ ಮಾಧ್ಯಮಗಳಲ್ಲಿ ಅಭಿಮಾನಿಗಳು ತೀವ್ರ ಬೇಸರ ವ್ಯಕ್ತಪಡಿಸಿದ್ದಾರೆ. ವಿರಾಟ್​ ಇಲ್ಲದ ಟೆಸ್ಟ್ ಕ್ರಿಕೆಟ್ ಅವರ ಸಪ್ಪೆಯಾಗಿರುತ್ತದೆ ಎಂದು ಅಭಿಪ್ರಾಯಪಟ್ಟಿದ್ದಾರೆ. ಆದಾಗ್ಯೂ, ಕೆಲವರು ಅವರ ನಿರ್ಧಾರವನ್ನು ಗೌರವಿಸಿ ಶುಭ ಕೋರಿದ್ದಾರೆ.

ವಿರಾಟ್ ಕೊಹ್ಲಿ ಟೆಸ್ಟ್ ಕ್ರಿಕೆಟ್‌ನಿಂದ ನಿವೃತ್ತರಾಗಿದ್ದರೂ, ಅವರು ಏಕದಿನ ಕ್ರಿಕೆಟ್‌ನಲ್ಲಿ ಮುಂದುವರಿಯಲಿದ್ದಾರೆ ಎಂಬುದು ಅಭಿಮಾನಿಗಳಿಗೆ ಸಮಾಧಾನದ ಸಂಗತಿ. ಅವರ ಟೆಸ್ಟ್ ವೃತ್ತಿಜೀವನವು ಯುವ ಆಟಗಾರರಿಗೆ ಯಾವಾಗಲೂ ಸ್ಫೂರ್ತಿಯಾಗಿ ಉಳಿಯಲಿದೆ. ಅವರು 2024ರ ಟಿ20 ವಿಶ್ವಕಪ್ ಗೆಲುವಿನ ಬಳಿಕ ಆ ಮಾದರಿಗೂ ನಿವೃತ್ತಿ ಘೋಷಿಸಿದ್ದರು. 

Tags:    

Similar News