TCS 10K : ಟಿಸಿಎಸ್ 10ಕೆ ಓಟಕ್ಕೆ ಬರೋಬ್ಬರಿ 30 ಸಾವಿರ ನೋಂದಣಿ
ಈ ವರ್ಷದ ತಾರಾ ಓಟಗಾರರ ಪಟ್ಟಿಯಲ್ಲಿ 5,000 ಮೀ. ಮತ್ತು 10,000 ಮೀ. ವಿಶ್ವ ದಾಖಲೆ ಹೊಂದಿರುವ ಜೋಶುವಾ ಕಿಪ್ರುಯಿ ಚೆಪ್ಟೆಗಿ ಮುಂಚೂಣಿಯಲ್ಲಿದ್ದಾರೆ.;
ಟಾಟಾ ಕನ್ಸಲ್ಟೆನ್ಸಿ ಸರ್ವೀಸಸ್ ವರ್ಲ್ಡ್ 10ಕೆ (TCS World 10K) ಬೆಂಗಳೂರು 17ನೇ ಆವೃತ್ತಿಯು 2025ರ ಏಪ್ರಿಲ್ 27ರಂದು ನಡೆಯಲಿದ್ದು, ವಿಭಾಗದ ನೋಂದಣಿ ಮುಗಿದಿದ್ದು, ಬರೊಬ್ಬರಿ 30 ಸಾವಿರ ಮಂದಿ ನೋಂದಣಿ ಮಾಡಿಕೊಂಡಿದ್ದಾರೆ. ಅದೇ ರೀತಿ ಇತರ ವಿಭಾಗಗಳು ವೇಗವಾಗಿ ಭರ್ತಿಯಾಗುತ್ತಿವೆ. 210,000 ಯುಎಸ್ ಡಾಲರ್ ಬಹುಮಾನದೊಂದಿಗೆ 'ವಿಶ್ವ ಅಥ್ಲೆಟಿಕ್ಸ್ ಗೋಲ್ಡ್ ಲೇಬಲ್ ರೋಡ್ ರೇಸ್' ಮಾನ್ಯತೆ ಹೊಂದಿರುವ ಈ ಸ್ಪರ್ಧೆಯಲ್ಲಿ ವಿಶ್ವದ ಶ್ರೇಷ್ಠ ಕ್ರೀಡಾಪಟುಗಳು, ಉತ್ಸಾಹಿ ಓಟಗಾರರು ಪಾಲ್ಗೊಳ್ಳಲಿದ್ದಾರೆ.
ಈ ವರ್ಷದ ತಾರಾ ಓಟಗಾರರ ಪಟ್ಟಿಯಲ್ಲಿ 5,000 ಮೀ. ಮತ್ತು 10,000 ಮೀ. ವಿಶ್ವ ದಾಖಲೆ ಹೊಂದಿರುವ ಜೋಶುವಾ ಕಿಪ್ರುಯಿ ಚೆಪ್ಟೆಗಿ ಮುಂಚೂಣಿಯಲ್ಲಿದ್ದಾರೆ. 11 ವರ್ಷಗಳ ಬಳಿಕ ಬೆಂಗಳೂರಿಗೆ ಮರಳಿರುವ ಈ ಮೂರು ಬಾರಿಯ ಒಲಿಂಪಿಯನ್, 2024ರ ಪ್ಯಾರಿಸ್ ಒಲಿಂಪಿಕ್ಸ್‌ನಲ್ಲಿ 10,000 ಮೀ. ಚಿನ್ನ ಗೆದ್ದಿದ್ದು, ಕೋರ್ಸ್ ದಾಖಲೆಗೆ ಗುರಿಯಿಟ್ಟಿದ್ದಾರೆ. ಭಾರತ ವಿಭಾಗದ ಸವಾಲುಗಳನ್ನು ಹಾಲಿ ಚಾಂಪಿಯನ್ ಮತ್ತು ಕೂಟ ದಾಖಲೆ ವೀರರಾದ ಕಿರಣ್ ಮಾತ್ರೆ ಹಾಗೂ ಸಂಜೀವನಿ ಜಾಧವ್ ಮುನ್ನಡೆಸಲಿದ್ದಾರೆ. ಸಾವನ್ ಬರ್ವಾಲ್ ಮತ್ತು ಲಿಲಿ ದಾಸ್ ಅವರಿಂದ ತೀವ್ರ ಪೈಪೋಟಿ ಎದುರಾಗಲಿದೆ.
ಟಿಸಿಎಸ್ ಬೆಂಗಳೂರು ಪ್ರಾದೇಶಿಕ ಮುಖ್ಯಸ್ಥ ಸುನಿಲ್ ದೇಶಪಾಂಡೆ ಸ್ಪರ್ಧೆಯ ಕುರಿತು ಮಾತನಾಡಿ, “ಟಿಸಿಎಸ್ ವರ್ಲ್ಡ್ 10ಕೆ ಕೇವಲ ಓಟವಲ್ಲ. ಇದು ಫಿಟ್‌ನೆಸ್, ಯೋಗಕ್ಷೇಮ ಮತ್ತು ಸಮುದಾಯಕ್ಕೆ ಬದ್ಧತೆಯಾಗಿದೆ. ಆರೋಗ್ಯಕರ ಜೀವನಕ್ಕೆ ಪ್ರೇರಣೆ ನೀಡುವ ಓಟದಲ್ಲಿ ಜನರನ್ನು ಒಗ್ಗೂಡಿಸಲು ನಾವು ಹೆಮ್ಮೆಪಡುತ್ತೇವೆ,'' ಎಂದು ಹೇಳಿದ್ದಾರೆ.
ಚೆಪ್ಟೆಗಿ ತಮ್ಮ ಭಾಗವಹಿಸುವಿಕೆಯ ಬಗ್ಗೆ ಮಾತನಾಡಿ ''“ಪ್ರತಿಷ್ಠಿತ ಟಿಸಿಎಸ್ ವರ್ಲ್ಡ್ 10ಕೆಯಲ್ಲಿ ಓಡಲು ಉತ್ಸುಕನಾಗಿದ್ದೇನೆ. ಭಾರತದ ಓಟಗಾರರ ಮುಂದೆ ಅತ್ಯುತ್ತಮ ಪ್ರದರ್ಶನ ನೀಡುವ ಭರವಸೆಯಿದೆ.” ಎಂದು ಹೇಳಿದ್ದಾರೆ.
ಟಿಶರ್ಟ್ ಅನಾವರಣ
ಕಾರ್ಯಕ್ರಮದಲ್ಲಿ ಎಸಿಕ್ಸ್ ಫಿನಿಶರ್ ಟೀಶರ್ಟ್ ಅನ್ನು ಭಾರತೀಯ ಹಾಕಿ ತಾರೆ ಮನ್‌ಪ್ರೀತ್ ಸಿಂಗ್ ಅನಾವರಣಗೊಳಿಸಿದರು. ಇದನ್ನು ಪ್ರತಿ ಓಪನ್ 10ಕೆ ವಿಭಾಗದ ಟಾಪ್ 1000 ಫಿನಿಶರ್‌ಗಳಿಗೆ ನೀಡಲಾಗುತ್ತದೆ. ಬಿಸ್ಲೆರಿ ಸೀಮಿತ ಆವೃತ್ತಿಯ ಬಾಟಲಿಗಳನ್ನು ಬಿಡುಗಡೆ ಮಾಡಿತು. ಈ ಬಾರಿ ಓಪನ್ 10ಕೆಯಲ್ಲಿ ‘ರನ್ ಇನ್ ಕಾಸ್ಟ್ಯೂಮ್’ ಸ್ಪರ್ಧೆಯೂ ಗಮನ ಸೆಳೆಯಲಿದೆ.