500 ವಿಕೆಟ್ ಪಡೆದ ಸ್ಪಿನ್ ಮಾಂತ್ರಿಕ ಆರ್. ಅಶ್ವಿನ್!
ಟೆಸ್ಟ್ ಕ್ರಿಕೆಟ್‌ನಲ್ಲಿ ಹೆಚ್ಚು ವಿಕೆಟ್ ಪಡೆದು ಸಾಧನೆ ಮಾಡಿದ ಎರಡನೇ ಬೌಲರ್
ಭಾರತದ ಸ್ಪಿನ್ ಮಾಂತ್ರಿಕ ರವಿಚಂದ್ರನ್ ಅಶ್ವಿನ್,ಇದೀಗ 500 ವಿಕೆಟ್ ಪಡೆಯುವ ಮೂಲಕ ಹೊಸ ದಾಖಲೆ ಸೃಷ್ಟಿಸಿದ್ದಾರೆ.
ಶುಕ್ರವಾರ ಇಲ್ಲಿನ ರಾಜ್‌ಕೋಟ್ ಟೆಸ್ಟ್ ಪಂದ್ಯದಲ್ಲಿ ಈ ದಾಖಲೆಯನ್ನು ಆರ್. ಅಶ್ವಿನ್ ಸೃಷ್ಟಿಸಿದರು. ಇಂದಿನ ಟೆಸ್ಟ್ ಪಂದ್ಯಕ್ಕೆ ಮುಂಚೆ ಅವರು 97 ಪಂದ್ಯಗಳಲ್ಲಿ 499 ವಿಕೆಟ್ ಪಡೆದಿದ್ದರು. ಮೊದಲ ಇನಿಂಗ್ಸ್‌ನಲ್ಲಿ ಇಂಗ್ಲೆಂಡ್‌ನ ಆರಂಭಿಕ ಬ್ಯಾಟರ್ ಝಾಕ್ ಕ್ರಾಲಿ ಅವರ ವಿಕೆಟ್ ಉರುಳಿಸುವ ಮೂಲಕ ದಾಖಲೆಯ 500 ವಿಕೆಟ್ ಪಡೆದರು.
ಇಂಗ್ಲೆಂಡ್ ತಂಡವು ಭಾರತದ ತಂಡವನ್ನು 445 ರನ್‌ಗಳಿಗೆ ಆಲೌಟ್ ಮಾಡಿತು. 13.1 ಓವರ್‌ಗಳಲ್ಲಿ ಮೊದಲ ವಿಕೆಟ್‌ಗೆ ಬೆನ್ ಡಕೆಟ್ ಹಾಗೂ ಝಾಕ್ ಕ್ರಾಲಿ 89 ರನ್‌ಗಳ ಜತೆಯಾಟವಾಡಿದರು. ಇನಿಂಗ್ಸ್‌ನ ಎರಡನೇ ಓವರ್‌ನ ಮೊದಲ ಬಾಲ್‌ನಲ್ಲಿಯೇ ಅಶ್ವಿನ್ ಅವರು ಕ್ರಾಲಿ ಅವರ ವಿಕೆಟ್ ಪಡೆಯುವ ಮೂಲಕ ಹೊಸ ದಾಖಲೆ ಜೊತೆಗೆ ಇಂಗ್ಲೆಂಡ್‌ಗೆ ಆಘಾತ ನೀಡಿದರು.
ಅಪರೂಪದ ದಾಖಲೆ: 500 ವಿಕೆಟ್ ಜೊತೆಗೆ ಮತ್ತೊಂದು ವಿಶೇಷವೆಂದರೆ, ಟೆಸ್ಟ್ ಕ್ರಿಕೆಟ್‌ನಲ್ಲಿ ಎರಡನೇ ಅತಿ ಕಡಿಮೆ ಟೆಸ್ಟ್ ಪಂದ್ಯಗಳನ್ನಾಡಿ 500 ವಿಕೆಟ್ ಪಡೆದ ಬೌಲರ್ ಎನ್ನುವ ಖ್ಯಾತಿಗೂ ಪಾತ್ರರಾಗಿದ್ದಾರೆ. ಮುತ್ತಯ್ಯ ಮುರುಳೀಧರನ್ ಅವರು 87 ಟೆಸ್ಟ್ ಪಂದ್ಯಗಳನ್ನಾಡಿ 500 ವಿಕೆಟ್ ಪಡೆದಿದ್ದರು. ಅವರ ನಂತರದಲ್ಲಿ ಅತಿ ಕಡಿಮೆ ಟೆಸ್ಟ್ ಪಂದ್ಯಗಳಲ್ಲಿ 500 ವಿಕೆಟ್ ಪಡೆದ ವಿಶ್ವದ ಅಗ್ರಮಾನ್ಯ ಬೌಲರ್ ಎನ್ನುವ ಖ್ಯಾತಿಗೆ ಅಶ್ವಿನ್ ಪಾತ್ರರಾಗಿದ್ದಾರೆ.
ಎರಡನೇ ಅತಿ ಕಡಿಮೆ ಬೌಲಿಂಗ್ ದಾಖಲೆ:
ಟೆಸ್ಟ್ ಕ್ರಿಕೆಟ್‌ನಲ್ಲಿ ಅಶ್ವಿನ್ ಅವರು ದಾಖಲೆಗಳ ಮೇಲೆ ದಾಖಲೆ ಸೃಷ್ಟಿಸಿದ್ದಾರೆ. ಟೆಸ್ಟ್ ವೃತ್ತಿ ಜೀವನದಲ್ಲಿ 25,714 ಬಾಲ್ ಎಸೆದು 500 ವಿಕೆಟ್ ಉರುಳಿಸಿದ್ದಾರೆ. ಕಡಿಮೆ ಅವಧಿಯಲ್ಲಿ ಹಾಗೂ ಕಡಿಮೆ ಟೆಸ್ಟ್ ಪಂದ್ಯಗಳಲ್ಲಿ ಹೆಚ್ಚು ವಿಕೆಟ್ ಪಡೆದ ಎರಡನೆಯ ಸಾಧಕ ಎನ್ನುವ ಖ್ಯಾತಿಗೆ ಅಶ್ವಿನ್ ಪಾತ್ರರಾಗಿದ್ದಾರೆ. ಇಂಥ ಸಾಧನೆ ಮಾಡಿದವರಲ್ಲಿ ಆಸ್ಟ್ರೇಲಿಯಾದ ಬೌಲರ್ ಗ್ಲೆನ್ ಮೆಗ್ರಾಥ್ ಒಬ್ಬರು. 25,528 ಎಸೆತಗಳಲ್ಲಿ 500 ವಿಕೆಟ್ ಪಡೆದು ಅಗ್ರ ಸ್ಥಾನದಲ್ಲಿ ಇದ್ದಾರೆ.
ಟೆಸ್ಟ್ ಪಂದ್ಯಾವಳಿ; ಟಾಪ್ 5 ಬೌಲರ್‌ಗಳು
ಕಡಿಮೆ ಟೆಸ್ಟ್ ಪಂದ್ಯಗಳಲ್ಲಿ ಹೆಚ್ಚು ವಿಕೆಟ್ ಪಡೆದ ಬೌಲರ್‌ಗಳ ವಿವರ;
ವಿಕೆಟ್ ಪಡೆದವರು; ಪಂದ್ಯಗಳು
ಮುತ್ತಯ್ಯ ಮುರುಳೀಧರನ್ 87
ರವಿಚಂದ್ರನ್ ಅಶ್ವಿನ್ 98
ಅನಿಲ್ ಕುಂಬ್ಳೆ 105
ಶೇನ್ ವಾರ್ನ್ 108
ಗ್ಲೆನ್ ಮೆಗ್ರಾಥ್ 110